ಶ್ರಾವಣ ಮಾಸದಲ್ಲಿ ಉತ್ತಮ ಬೆಲೆ ನಿರೀಕ್ಷೆಯಿಂದ ಹೆಚ್ಚಿನ ರೈತರು ಚೆಂಡು ಹೂವು ಮತ್ತು ಸೇವಂತಿ ಹೂ ಬೆಳೆದಿದ್ದರು. ಆದರೆ ಉತ್ತಮ ಬೆಲೆ ಸಿಗದೆ ಕೈಸುಟ್ಟುಕೊಂಡಿದ್ದ ರೈತರಿಗೆ ದಸರಾ ಹಬ್ಬದ ವೇಳೆಗಾದರೂ ಬಂಪರ್ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಬಂಗಾರಪೇಟೆ : ಶ್ರಾವಣ ಮಾಸದಲ್ಲಿ ಉತ್ತಮ ಬೆಲೆ ನಿರೀಕ್ಷೆಯಿಂದ ಹೆಚ್ಚಿನ ರೈತರು ಚೆಂಡು ಹೂವು ಮತ್ತು ಸೇವಂತಿ ಹೂ ಬೆಳೆದಿದ್ದರು. ಆದರೆ ಉತ್ತಮ ಬೆಲೆ ಸಿಗದೆ ಕೈಸುಟ್ಟುಕೊಂಡಿದ್ದ ರೈತರಿಗೆ ದಸರಾ ಹಬ್ಬದ ವೇಳೆಗಾದರೂ ಬಂಪರ್ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ತಾಲೂಕಿನಲ್ಲಿ ರೈತರು ಹೆಚ್ಚಾಗಿ ತರಕಾರಿ ಜೊತೆ ಚೆಂಡೂವು ಹಾಗೂ ಸೇವಂತಿ ಹೂವನ್ನು ಬೆಳೆಯುತ್ತಾರೆ, ಆದರೆ ಶ್ರಾವಣ ಮಾಸದಲ್ಲಿ ಸಾಲು ಹಬ್ಬಗಳು ಬಂದರೂ ಬೆಲೆ ಕುಸಿತದಿಂದ ಹೂ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಸಿಗದೆ ಆತಂಕಕ್ಕೊಳಗಾಗಿದ್ದರು. ನಂತರ ಗಣೇಶ ಹಬ್ಬ ಬಂದು ಹೋಗಿದೆ ಆಗಲೂ ಬೆಲೆ ಸಿಗಲಿಲ್ಲ.
ನೂರಾರು ಎಕರೆಯಲ್ಲಿ ಚೆಂಡು ಹೂ
ತಾಲೂಕುನಾದ್ಯಂತ ನೂರಾರು ಎಕರೆಯಲ್ಲಿ ಬೆಳೆದಿರುವ ಚೆಂಡು ಹೂ ಹಾಗೂ ಸೇವಂತಿ ಹೂವಿಗೆ ಈಗ ಬೇಡಿಕೆ ಇಲ್ಲದೆ ತೋಟಗಳಲ್ಲೆ ಕೊಳೆಯುತ್ತಿದೆ. ಇದರಿಂದ ಹೂ ಬೆಳೆಯಲು ಮಾಡಿದ ವೆಚ್ಚ ಸಹ ಕೈಗೆ ಸಿಗದೆ ಅನ್ನದಾತರು ನಷ್ಟಕ್ಕೊಳಗಾಗಿದ್ದಾರೆ. ಬೂದಿಕೋಟೆ, ಕಾಮಸಮುದ್ರ, ಕಸಬಾ ಹೋಬಳಿಗಳಲ್ಲಿ ರೈತರ ತೋಟಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರ ಚೆಂಡು ಹೂವುಗಳು ಕಾಣುತ್ತದೆ. ಆದರೆ ತೋಟಗಳಲ್ಲೆ ಹೂವುಗಳನ್ನು ಕೀಳದೆ ಬಿಟ್ಟಿರುವುದರಿಂದ ಬಾಡಿ ಹೋಗುತ್ತಿದೆ.
ಆಷಾಡ ಮಾಸದಲ್ಲಿ ಹೂವುಗಳ ಬೆಲೆ ಕುಸಿತ ಸಾಮಾನ್ಯ, ಆದರೆ ಶ್ರಾವಣದಲ್ಲೂ ಅದೇ ಸ್ಥಿತಿ ಮುಂದುವರೆದರೆ ಹೇಗೆ ಎಂದು ರೈತರಲ್ಲಿ ನಿರಾಸೆ ಮೂಡಿಸಿದೆ. ಈಗ ಸೋಮವಾರದಿಂದ ನವರಾತ್ರಿ ಆರಂಭವಾಗಲಿದ್ದು ಈ ಹಬ್ಬಕ್ಕಾದರೂ ಉತ್ತಮ ಬೆಲೆ ಸಿಗುವುದೇ ಎಂಬ ಆಶಾದಾಯಕವಾಗಿದ್ದಾರೆ.
ಮೂಲ ಬಂಡವಾಳಕ್ಕೆ ಧಕ್ಕೆ
ಕಳೆದ ವರ್ಷ ಚೆಂಡು ಹೂವಿಗೆ ಉತ್ತಮ ಬೇಡಿಕೆಯಿದ್ದರಿಂದ ರೈತರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಹೂ ಬೆಳೆದಿದ್ದರು. ಉತ್ತಮ ಫಸಲೂ ಬಂದಿದೆ, ಆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಬೆಲೆ ಇಲ್ಲದೆ ಹಾಕಿದ ಬಂಡವಾಳ ಸಹ ವಾಪಸ್ ಬರುವುದು ಅನುಮಾನವಾಗಿರುವುದರಿಂದ ರೈತರನ್ನು ಆತಂಕಗೊಳಿಸಿದೆ. ಕಳೆದ ವರ್ಷ ಕೆಜಿ ಹೂವಿಗೆ 80ವರೆಗೆ ಮಾರಾಟವಾಗಿತ್ತು. ಈ ವರ್ಷ ಕೇವಲ 5 ರು.ಗಳಿಗೆ ಇಳಿದಿದೆ.
ಪ್ರತಿ ವರ್ಷ ತಾಲೂಕಿನ ಚೆಂಡೂವಿಗೆ ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಕೇರಳದಲ್ಲಿ ಬೇಡಿಕೆ ಇತ್ತು, ಅಲ್ಲಿನ ವ್ಯಾಪಾರಸ್ಥರು ಬಂದು ಹೂ ಖರೀದಿ ಮಾಡುತ್ತಿದ್ದರು, ಈ ವರ್ಷ ದಿಢೀರನೆ ಹೊರ ರಾಜ್ಯಗಳಲ್ಲಿ ಬೇಡಿಕೆ ಕುಸಿದಿರುವುದರಿಂದ ಅಲ್ಲಿ ವ್ಯಾಪಾರಸ್ಥರು ಇತ್ತ ಮುಖ ಮಾಡಿಲ್ಲ, ಇದರಿಂದ ಸ್ಥಳಿಯ ಮಾರುಕಟ್ಟೆಗಳಲ್ಲಿ ಡಿಮ್ಯಾಂಡು ಇಲ್ಲ, ಇದರಿಂದ ರೈತರಿಗೆ ಲಕ್ಷಾಂತ ರು.ಗಳ ನಷ್ಟವಾಗಿದೆ. ಶ್ರಾವಣ ಮಾಸದಲ್ಲಿ ಉಂಟಾದ ನಷ್ಟ ದಸರಾ ಹಬ್ಬದಲ್ಲದರೂ ಲಾಭ ತರುವುದೇ ಎಂಬ ಆಸೆ ಕಣ್ಣಿನಿಂದ ಹೂ ಬೆಳೆಗಾರರು ಎದುರು ನೋಡುವಂತಾಗಿದೆ.