
ಕಲಬುರಗಿ (ಸೆ.17) : ಮೂರು ವರ್ಷದ ಹಿಂದೆ (17 ಸೆಪ್ಟೆಂಬರ್ 2019) ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಬುರಗಿಯಲ್ಲಿ ವಿಮೋಚನಾ ಧ್ವಜಾರೋಹಣ ನೆರವೇರಿಸಿ ದಾಸ್ಯದ ಸಂಕೇತವಾದ ‘ಹೈದ್ರಾಬಾದ್’ ಹೆಸರನ್ನು ಕಿತ್ತೆಸೆದು ಬಸವಣ್ಣನವರು ಕಲ್ಯಾಣದಲ್ಲಿ 12ನೆಯ ಶತಮಾನದಲ್ಲಿ ನಡೆಸಿದ ಸಾಮಾಜಿಕ ಕ್ರಾಂತಿಯ ಸ್ಮರಣೆಗಾಗಿ ’ಕಲ್ಯಾಣ ಕರ್ನಾಟಕ’ ವೆಂದು ಮರುನಾಮಕರಣ ಮಾಡಿದಾಗ ಎಲ್ಲರೂ ಸಂಭ್ರಮಿಸಿದ್ದರು.
Bidar: ಕಲ್ಯಾಣ ಕರ್ನಾಟಕ ಉತ್ಸವ: ಬೀದರ್‌ನಲ್ಲಿ ಆಕ್ಷೇಪ
‘ಹೆಸರಾಯಿತು ಕಲ್ಯಾಣ, ಉಸಿರಾಗಲಿದೆ ಪ್ರಗತಿ’ ಎಂದು ಪ್ರಗತಿಯ ಎಲ್ಲಾ ಮಾನದಂಡಗಳಲ್ಲಿ ಅತ್ಯಂತ ಹಿಂದುಳಿದ ನೆಲದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಒಟ್ಟು 1.25 ಕೋಟಿ ಜನ ಅಭಿವೃದ್ಧಿಯ ಅಪಾರ ನಿರೀಕ್ಷೆಗಳೊಂದಿಗೆ ರಾಜ್ಯಸರ್ಕಾರದ ‘ಮರು ನಾಮಕರಣ’ವನ್ನು ಸ್ವಾಗತಿಸಿದ್ದರು. ಆದರæ ಪ್ರದೇಶ ಒಂದರ ಹೆಸರು ಬದಲಾಯಿತಷ್ಟೇ ಹೊರತು ವಾಸ್ತವದಲ್ಲಿ ಈ ಭಾಗದಲ್ಲಿ ವಾಸವಾಗಿರುವ ಬಹುಕೋಟಿ ಜನರ ಬೇಡಿಕೆಗಳ್ಯಾವುವೂ ಇಂದಿಗೂ ಈಡೇರಿಲ್ಲ.
ಅನುದಾನಕ್ಕೆ ಖೋತಾ:
ಕಲ್ಯಾಣವನ್ನು ಕಾಡುತ್ತಿರುವ ಪ್ರಾದೇಶಿಕ ಅಸಮಾನತೆಗೆ ಮದ್ದರೆಯಲು ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾದರೂ ಅದಕ್ಕೆ ಬಜೆಟ್ ಘೋಷಣೆಯಂತೆ ಹಣ ಬಿಡುಗಡೆಯಾಗಲಿಲ್ಲ. .3000 ಕೋಟಿ ಅನುದಾನದ ಘೋಷಣೆಯಾದರೂ ಪೂರ್ಣ ಬಿಡುಗಡೆಯಾಗುತ್ತಿಲ್ಲ.
ನೇಮಕಾತಿಯಲ್ಲೂ ಪಂಗನಾಮ:
ಸಂವಿಧಾನದ ಕಲಂ 371 (ಜೆ) ವಿಧಿಯಂತೆ ಉದ್ಯೋಗ ಹಾಗೂ ನೇಮಕಾತಿಯಲ್ಲಿ ಈ ಭಾಗಕ್ಕೆ ಮೀಸಲಾತಿ ಇಂದಿಗೂ ದಕ್ಕಿಲ್ಲ. ಸ್ಥಳೀಯ ನೇಮಕಾತಿಗಿಂತ ರಾಜ್ಯಮಟ್ಟದ ನೇಮಕಾತಿಯಲ್ಲಿ ಕಲ್ಯಾಣ ನಾಡವರಿಗೆ ನಿಯಮದಂತೆ ಮೀಸಲಾತಿ ಇಂದಿಗೂ ಗಗನ ಕುಸುಮ. ಶೇ.80ರಷ್ಟುಮೀಸಲಾತಿ ರಾಜ್ಯಮಟ್ಟದಲ್ಲಿ ದಕ್ಕುತ್ತಿಲ್ಲ. ನೇಮಕಾತಿಯಲ್ಲಿನ ಇಂತಹ ಮೀಸಲು ಲೋಪಗಳಿಂದಾಗಿ ಕಲ್ಯಾಣದ ಯುವಕರ ಪರದಾಟ ತಪ್ಪಿಲ್ಲ.
ಸ್ಥಾಪನೆಯಾಗದ ಪ್ರತ್ಯೇಕ ಸಚಿವಾಲಯ:
ಸಂವಿಧಾನದ 371ನೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ (ಸೆಕ್ರಟ್ರಿಯೇಟ್) ಸ್ಥಾಪನೆ ಆಗಬೇಕು, ಅದರ ಕೇಂದ್ರ ಕಚೇರಿ ’ಕಲ್ಯಾಣದ ಹೆಬ್ಬಾಗಿಲು’ ಕಲಬುರಗಿಯಲ್ಲಿರಬೇಕು. 371 ಅನುಷ್ಠಾನದ ಉಸ್ತುವಾರಿ ಕೋಶ ಬೆಂಗಳೂರಿನಿಂದ ಕಲಬುರಗಿಗೆ ಸ್ಥಳಾಂತರವಾಗಬೇಕೆಂಬ ಬೇಡಿಕೆಗಳ ದಶಮಾನೋತ್ಸವ ಆಚರಿಸಿದರೂ ಅವು ಇನ್ನೂ ಈಡೇರಿಲ್ಲ. ಕಲಂ 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆಂದೇ ಪ್ರತ್ಯೇಕವಾಗಿ ಸಚಿವಾಲಯ ಸ್ಥಾಪಿಸುವುದಾಗಿ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಕಲ್ಯಾಣದ ಮರುನಾಮಕರಣ ಸಂದರ್ಭದಲ್ಲಿ ನೀಡಿದ್ದ ವಾಗ್ದಾನ ಇನ್ನೂ ಅನುಷ್ಠಾನಗೊಂಡಿಲ್ಲ.
ರೈಲ್ವೇ ವಿಭಾಗೀಯ ಕಚೇರಿ ಯೋಜನೆಯೂ ನೆನೆಗುದಿಗೆ:
ರೈಲ್ವೇ ಇಲಾಖೆ 2013ರಲ್ಲೇ ಮಂಜೂರಾದ ಕಲಬುರಗಿ ಕೇಂದ್ರವಾಗಿರುವ ಪ್ರತ್ಯೇಕ ರೇಲ್ವೆ ವಿಭಾಗೀಯ ಕಚೇರಿ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ಎಚ್‌ಸಿ ಸರೀನ್ ಕಮೀಟಿ 1984ರಲ್ಲೇ ತನ್ನ ವರದಿಯಲ್ಲಿ 9 ರೇಲ್ವೆ ವಿಭಾಗವಾಗಲಿ ಎಂದು ನೀಡಿದ್ದ ಶಿಫಾರಸ್ಸಲ್ಲಿ ಕಲಬುರಗಿ ಹೊರತುಪಡಿಸಿ ಉಳಿದ ಎಲ್ಲಾ 8 ಈಡೇರಿವೆ. ಕಲ್ಯಾಣದ ಹೆಬ್ಬಾಗಿಲು ಕಲಬುರಗಿಯಲ್ಲಿರುವ ಇಎಸ್‌ಐಸಿಯನ್ನೇ ಏಮ್ಸ್ ಆಗಿ ಪರಿವರ್ತಿಸದೆ ಹುಬ್ಬಳ್ಳಿಗೆ ಇದನ್ನು ಎತ್ತಂಗಡಿ ಮಾಡಿರುವುದು, ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ತೋರುತ್ತಿರುವ ನಿರ್ಲಕ್ಷ್ಯತನ, ಮಂಜೂರಾಗಿ 9 ವರ್ಷ ಕಳೆದರೂ ಶೈತ್ಯಾಗರ ಸೇರಿರುವ ನಿಮ್‌್ಜ, ಕೇಂದ್ರ-ರಾಜ್ಯದ ಅನೇಕ ಕಚೇರಿಗಳು ಕಲ್ಯಾಣದಿಂದ ಸ್ಥಳಾಂತರಗೊಳ್ಳುತ್ತಿರುವುದರಿಂದ ‘ಏನೈತಿ ಏನೈತಿ ಕಲ್ಯಾಣ’ದಲ್ಲಿ? ಎನ್ನುವಂತಾಗಿದೆ.
'ಕ-ಕ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಲಿ'
ಇವೆಲ್ಲ ಬೆಳವಣಿಗೆಯಿಂದಾಗಿ ಕಲಂ 371(ಜೆ) ಈ ನೆಲಕ್ಕೆ ವಿಶೇಷ ಕವಚ ರೂಪದಲ್ಲಿ ದಕ್ಕಿದ ನಂತರ ತುಸು ಶಮನವಾಗಿದ್ದ ಪ್ರತ್ಯೇಕ ರಾಜ್ಯದ ಕೂಗು ಮತ್ತೀಗ ಮುನ್ನೆಲೆಗೆ ಬರುತ್ತಲಿದೆ. ಹಿಂದುಳಿದ ನೆಲದವರ ಅಸಮಾಧಾನ-ಬೇಗುದಿ ಒಳಗೊಳಗೆ ಕೊತಕೊತ ಕುದಿಯುತ್ತ ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ.