* ಡಿಸೆಂಬರ್‌ನಲ್ಲಿ ಕಾಯಿಕಟ್ಟಬೇಕಾದ ಮರಗಳಲ್ಲಿ ಈಗಷ್ಟೇ ಹೂವು
* ಅಕಾಲಿಕವಾಗಿ ಸುರಿದ ಮಳೆಯಿಂದ ಮಾವಿನ ಮರಗಳಲ್ಲಿ ಹೂವು, ಕಾಯಿ ಭಾರಿ ವಿಳಂಬ
* ಹೂವು, ಕಾಯಿಕಟ್ಟದ ತೋಟದಲ್ಲಿ ಗುತ್ತಿಗೆ ಹಿಡಿಯಲು ದಲ್ಲಾಳಿಗಳ ಹಿಂದೇಟು
ಬಸವರಾಜ ಹಿರೇಮಠ
ಧಾರವಾಡ(ಜ.23): ಈ ಬಾರಿ ರಾಜ್ಯದಲ್ಲಿ ಹಣ್ಣುಗಳ ರಾಜ ಮಾವಿನ(Mango) ಹಂಗಾಮು ಬಹುತೇಕ ಒಂದೂವರೆ, ಎರಡು ತಿಂಗಳು ವಿಳಂಬವಾಗಲಿದೆ! ಕಾರಣ, ನವೆಂಬರ್‌ನಲ್ಲಿ ಸುರಿದ ಮಳೆ! ಸಾಮಾನ್ಯವಾಗಿ ರಾಜ್ಯದಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಮಾವು ಕಾಯಿಕಟ್ಟುತ್ತದೆ. ಫೆಬ್ರವರಿ ಅಂತ್ಯ, ಮಾರ್ಚ್ ವೇಳೆ ಫಸಲು ಬೆಳೆಗಾರರ ಕೈಸೇರುತ್ತದೆ. ಆದರೆ, ಈ ಬಾರಿ ಜನವರಿ ಮುಗಿಯುತ್ತಾ ಬಂದರೂ ಇನ್ನೂ ಕಾಯಿಕಟ್ಟಿಲ್ಲ. ಹೀಗಾಗಿ ಮೇ ತಿಂಗಳಿಂದ ಫಸಲು ಕೈಸೇರುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಇದು ರಾಜ್ಯದ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಾದ ಧಾರವಾಡ(Dharwad), ಕೋಲಾರ(Kolar), ಚಿಕ್ಕಬಳ್ಳಾಪುರ(Chikkaballapur) ಮತ್ತು ರಾಮನಗರದ(Ramanagara) ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಅಲ್ಫಾನ್ಸೋಗೆ ಕಂಟಕ:
ಧಾರವಾಡ ಜಿಲ್ಲೆ ಅಲ್ಫಾನ್ಸೋ ಮಾವಿನ ತಳಿಗೆ ಪ್ರಸಿದ್ಧ. ಇಲ್ಲಿ ಬೆಳೆಯುವ ಹಣ್ಣಿಗೆ ವಿದೇಶಗಳಲ್ಲೂ(Foreign) ಉತ್ತಮ ಬೇಡಿಕೆ ಇದೆ. ಕಳೆದ ಬಾರಿ ಕೋವಿಡ್‌ನಿಂದಾಗಿ(Covid-19) ನಷ್ಟಮಾಡಿಕೊಂಡಿದ್ದ ಇಲ್ಲಿನ ಬೆಳೆಗಾರರು(Growers) ಈ ಬಾರಿ ಉತ್ತಮ ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿ ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆಯಿಂದಾಗಿ(Untimely Rain) ಮಾವು ಹೂ ಕಟ್ಟುವುದು ಒಂದೂವರೆಯಿಂದ ಎರಡು ತಿಂಗಳು ವಿಳಂಬವಾಗಿದೆ. ಇನ್ನೂ ಕಾಯಿಯನ್ನೇ ಕಾಣದ ಮಾವಿನ ಮರಗಳಿಂದಾಗಿ ಮಾವಿನ ತೋಟಗಳನ್ನು ಗುತ್ತಿಗೆ ಹಿಡಿಯಲು ದಲ್ಲಾಳಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ಕೆಲ ಗಿಡಗಳಂತೂ ಈಗ ಹೂ ಬಿಡುತ್ತಿದ್ದು, ಅದರೊಂದಿಗೆ ಕೀಟ ಬಾಧೆಯನ್ನೂ ಎದುರಿಸುತ್ತಿರುವುದು ಬೆಳೆಗಾರರ ಸಂಕಷ್ಟಕ್ಕೆ ಮತ್ತಷ್ಟುಬರೆ ಎಳೆದಿದೆ.
Untimely Rain Effect: ಡಬಲ್ ಸೆಂಚುರಿ ಬಾರಿಸಿದ ಬದನೆಕಾಯಿ ದರ: ಕಂಗಾಲಾದ ಗ್ರಾಹಕ..!
ಧಾರವಾಡ ಜಿಲ್ಲೆಯಲ್ಲಿ ಸುಮಾರು 12,500 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಕೆಲಗೇರಿ, ತೇಗೂರು, ದೇವರ ಹುಬ್ಬಳ್ಳಿ, ನಿಗದಿ ಸೇರಿ ಧಾರವಾಡದ ಮಲೆನಾಡು ಪ್ರದೇಶ, ಕಲಘಟಗಿ ಹಾಗೂ ಹುಬ್ಬಳ್ಳಿ(Hubballi) ತಾಲೂಕಿನಲ್ಲಿ ಮಾವು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಒಂದು ಲಕ್ಷ ಟನ್ ಮಾವು ಇಲ್ಲಿಂದ ಉತ್ಪಾದನೆಯಾಗುತ್ತದೆ. ಗೋವಾ, ಮುಂಬೈ, ಅಹಮದಾಬಾದ್‌ನಿಂದ ಸಂಕ್ರಾಂತಿ ವೇಳೆ ಬರುವ ಮಾವು ಗುತ್ತಿಗೆದಾರರು ಹೂವನ್ನು ಆಧರಿಸಿ ಬೆಲೆ ಕಟ್ಟುತ್ತಾರೆ. ಅರ್ಧ ಹಣವನ್ನು ಆರಂಭದಲ್ಲಿ ನೀಡಿ, ಉಳಿದ ಹಣವನ್ನು ಕಟಾವು ಮಾಡಿಕೊಂಡು ಹೋಗುವಾಗ ನೀಡುತ್ತಾರೆ. ಆದರೆ ಈ ಬಾರಿ ಸಂಕ್ರಾಂತಿ ಮುಗಿದರೂ ಹೂವು ಕಾಣಿಸಿಕೊಂಡಿಲ್ಲ. ಗುತ್ತಿಗೆದಾರರೂ ಗುತ್ತಿಗೆ ಹಿಡಿಯಲು ಆಸಕ್ತಿ ತೋರುತ್ತಿಲ್ಲ.
ಇದು ಧಾರವಾಡದ ರೈತರ(Farmers) ಕಥೆಯಾದರೆ ಕೋಲಾರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕೋಲಾರದ ಶ್ರೀನಿವಾಸಪುರ ತಾಲೂಕು ಕೂಡ ಮಾವು ಬೆಳೆಗೆ ರಾಜ್ಯದಲ್ಲೇ(Karnataka) ಹೆಸರುವಾಸಿ. ಈ ತಾಲೂಕಲ್ಲಿ ಸುಮಾರು 22 ಸಾವಿರ ಹೆಕ್ಟೇರ್‌ನಷ್ಟುಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ, ಅಕಾಲಿಕ ಮಳೆಯಿಂದಾಗಿ ಸಾಮಾನ್ಯವಾಗಿ ಜನವರಿ ಆರಂಭದಲ್ಲೇ ಫಸಲು ಬಿಡಬೇಕಿದ್ದ ಮಾವು ಇನ್ನೂ ಸರಿಯಾಗಿ ಕಾಯಿಕಟ್ಟಿಲ್ಲ ಎಂದು ಇಲ್ಲಿನ ಅನೇಕ ರೈತರು ಆತಂಕ ತೋಡಿಕೊಳ್ಳುತ್ತಿದ್ದಾರೆ. ಮಾವಿನ ಬೆಳೆ ಕೈಸೇರುವುದು ಒಂದೂವರೆ ಎರಡು ತಿಂಗಳು ವಿಳಂಬವಾದರೆ ಜೂನ್ ವೇಳೆಗೆ ದರ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ. ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಈ ಭಾಗದ ಬೆಳೆಗಾರರಲ್ಲೂ ಇದೇ ಆತಂಕ ಮನೆ ಮಾಡಿದೆ.
ಕಳೆದೆರಡು ವರ್ಷಗಳಿಂದ ಕೋವಿಡ್ ಹಾವಳಿಯಿಂದ ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಈ ಬಾರಿಯಾದರೂ ಮಾವು ಕೈಗೆ ಬರುತ್ತೆ ಅಂದುಕೊಂಡಿದ್ದೆವು. ಆದರೆ ನವೆಂಬರ್ ತಿಂಗಳಲ್ಲಿ ಸುರಿದ ಮಳೆ ಇದೀಗ ಮಾವಿನ ಸುಗ್ಗಿಯನ್ನು ಒಂದೂವರೆ, ಎರಡು ತಿಂಗಳ ಕಾಲ ಮುಂದೂಡಿದೆ. ಮಾವು ತೋಟ ಗುತ್ತಿಗೆ ಪಡೆಯಲು ದಲ್ಲಾಳಿಗಳೂ ಮುಂದೆ ಬರುತ್ತಿಲ್ಲ ಅಂತ ಧಾರವಾಡ ಜಿಲ್ಲೆ ಕೆಲಗೇರಿಯ ಮಾವು ಬೆಳೆಗಾರ ದೇವೇಂದ್ರ ಜೈನರ್ ತಿಳಿಸಿದ್ದಾರೆ.