ಅರ್ಚಕರ ಹತ್ಯೆ ಕೇಸ್‌: ಮೂವರು ಆರೋಪಿಗಳ ಶೂಟೌಟ್‌

By Kannadaprabha NewsFirst Published Sep 15, 2020, 7:43 AM IST
Highlights

 ಆರಕೇಶ್ವರ ಸ್ವಾಮಿ ದೇವಾಲಯದ ಅರ್ಚಕರ ಹತ್ಯೆ ಮತ್ತು ಹುಂಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆಗಿಳಿದಿರುವ ಮಂಡ್ಯ ಪೊಲೀಸರು ಮೂವರನ್ನು ಅರೆಸ್ಟ್ ಮಾಡಲಾಗಿದೆ. 

ಮಂಡ್ಯ (ಸೆ.15):  ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಡ್ಯದ ಆರಕೇಶ್ವರ ಸ್ವಾಮಿ ದೇವಾಲಯದ ಅರ್ಚಕರ ಹತ್ಯೆ ಮತ್ತು ಹುಂಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆಗಿಳಿದಿರುವ ಮಂಡ್ಯ ಪೊಲೀಸರು ಸೋಮವಾರ ಬೆಳ್ಳಂಬೆಳಗ್ಗೆ ಮೂವರು ಆರೋಪಿಗಳ ಮೇಲೆ ಸಿನಿಮೀಯ ಶೈಲಿಯಲ್ಲಿ ಶೂಟೌಟ್‌ ನಡೆಸಿ ಬಂಧಿಸಿದ್ದಾರೆ. ಇದೇ ವೇಳೆ ಆರೋಪಿಗಳು ನಡೆಸಿದ ಪ್ರತಿದಾಳಿಯಲ್ಲಿ ಒಬ್ಬರು ಪಿಎಸ್‌ಐ, ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.

ಸೆ.11ರಂದು ನಡೆದಿದ್ದ ಪೈಶಾಚಿಕ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣದ ಅಭಿ(22) ಮತ್ತು ರಘು(20) ಎಂಬಿಬ್ಬರನ್ನು ಭಾನುವಾರವೇ ಪೊಲೀಸರು ಬಂಧಿಸಿದ್ದರು. ಅವರು ನೀಡಿದ್ದ ಆಧಾರದ ಮೇಲೆ ಮದ್ದೂರು ಸಮೀಪದ ಸಾದೊಳಲು ಕ್ರಾಸ್‌ ಬಳಿ ದಾಳಿ ನಡೆಸಿದ ಪೊಲೀಸರು ಬಸ್‌ ಶೆಲ್ಟರ್‌ ಬಳಿ ಅಡಗಿ ಕುಳಿತಿದ್ದ ರಾಮನಗರ ಜಿಲ್ಲೆ ಕುಂಬಳಗೋಡಿನ ಸುಬ್ಬರಾಯನ ಪಾಳ್ಯದ ಮಂಜು(25), ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ರೆಡೇರಿಪಲ್ಲಿಯ ವಿಜಯ್‌ ಅಲಿಯಾಸ್‌ ವಿಜಿ ಅಲಿಯಾಸ್‌ ಅಜಯ್‌(28) ಮತ್ತು ರಾಮನಗರ ಜಿಲ್ಲೆ ಹುಗೆನಹಳ್ಳಿಯ ಚಂದ್ರ ಅಲಿಯಾಸ್‌ ಗಾಂಧಿ (22) ಎಂಬ ಮೂವರನ್ನು ಶೂಟೌಟ್‌ ಮಾಡಿ ಬಂಧಿಸಿದ್ದಾರೆ.

ಅರ್ಚಕರ ಕೊಲೆ : ದೇಗುಲ ಪ್ರವೇಶಕ್ಕೆ ಒಂದು ವಾರ ನಿರ್ಬಂಧ ...

ದಾಳಿ ವೇಳೆ ಆರೋಪಿಗಳು ಚಾಕು ಮತ್ತು ಕಲ್ಲುಗಳಿಂದ ಪ್ರತಿದಾಳಿ ನಡೆಸಿದ್ದರಿಂದ ಪಿಎಸ್‌ಐ ಶರತ್‌ ಕುಮಾರ್‌, ಕಾನ್‌ಸ್ಟೇಬಲ್‌ಗಳಾದ ಕೃಷ್ಣಕುಮಾರ್‌, ಅನಿಲ್‌ಕುಮಾರ್‌ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿದ್ದಾರೆ. ಈ ಪ್ರಕರಣದ ನಾಲ್ಕೈದು ಆರೋಪಿಗಳ ಪರಾರಿಯಾಗಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಪ್ರಕರಣದ ಆರೋಪಿಗಳು ದೇವಸ್ಥಾನಗಳಲ್ಲಿ ಹುಂಡಿ ಕಳವು ಮಾಡುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಇವರು ಈಗಾಗಲೇ ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ನಗರಗಳಲ್ಲಿ ಸುಮಾರು 4ರಿಂದ 5 ದೇವಾಲಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ.

-ವಿಫುಲ್‌ಕುಮಾರ್‌, ದಕ್ಷಿಣ ವಲಯ ಐಜಿಪಿ

click me!