Asianet Suvarna News Asianet Suvarna News

ಅರ್ಚಕರ ಕೊಲೆ : ದೇಗುಲ ಪ್ರವೇಶಕ್ಕೆ ಒಂದು ವಾರ ನಿರ್ಬಂಧ

ದೇಗುಲ ಪ್ರವೇಶಕ್ಕೆ ಒಂದು ವಾರಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಅರ್ಚಕರ ಹತ್ಯೆ ಹಿನ್ನೆಲೆಯಲ್ಲಿ ಇಲ್ಲಿಗೆ ಭಕ್ತರಿಗೆ ನಿಷೇಧ ವಿಧಿಸಲಾಗಿದೆ. 

One Week  No Entry For Arakeshwara Temple Mandya
Author
Bengaluru, First Published Sep 13, 2020, 2:44 PM IST

ಮಂಡ್ಯ (ಸೆ.13):  ಹುಂಡಿ ಹಣ ದರೋಡೆಗೆ ಬಂದ ದುಷ್ಕರ್ಮಿಗಳಿಂದ ಮೂವರು ಹತ್ಯೆಗೊಳಗಾದ ಶ್ರೀಅರಕೇಶ್ವರ ಸ್ವಾಮಿ ದೇಗುಲಕ್ಕೆ ಒಂದು ವಾರಗಳ ಕಾಲ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

ದುಷ್ಕರ್ಮಿಗಳು ನಡೆಸಿದ ಕಗ್ಗೊಲೆಯಿಂದ ದೇವಾಲಯದ ಒಳಾವರಣ ರಕ್ತಸಿಕ್ತಗೊಂಡಿದೆ. ಅಪವಿತ್ರಗೊಂಡಿರುವ ದೇವಾಲಯವನ್ನು ಸಂಪೂರ್ಣವಾಗಿ ಶುಚಿಗೊಳಿಸಬೇಕಿದೆ. ಇಡೀ ದೇವಾಲಯವನ್ನು ಸುಣ್ಣ-ಬಣ್ಣ ಮಾಡಿಸುವುದು ಅಗತ್ಯವಾಗಿದೆ. ಆನಂತರದಲ್ಲಿ ದೇವಾಲಯದಲ್ಲಿ ಶೈವಾಗಮ ಪದ್ಧತಿಯಂತೆ ಕುಂಭಾಭಿಷೇಕ, ಹೋಮ-ಹವನ, ಪುಣ್ಯಾಹದೊಂದಿಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಬೇಕಿರುವುದರಿಂದ ದೇಗುಲ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದೆ.

ಮೂವರು ಹತ್ಯೆಗೊಳಗಾದ ಜಾಗದಲ್ಲಿ ಇನ್ನೂ ರಕ್ತ ಹೆಪ್ಪುಗಟ್ಟಿತ್ತು. ಪೊಲೀಸರು ಮಹಜರು ನಡೆಸಬೇಕಿರುವ ಕಾರಣದಿಂದ ಶನಿವಾರ ದೇವಾಲಯ ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರಲಿಲ್ಲ. ಭಾನುವಾರದಿಂದ ದೇವಾಲಯ ಸ್ವಚ್ಛಗೊಳಿಸುವ ಕೆಲಸಗಳು ಆರಂಭವಾಗುವ ಸಾಧ್ಯತೆಗಳಿವೆ.

ಮಂಡ್ಯದಲ್ಲಿ ಮೂವರು ಅರ್ಚಕರ ಭೀಕರ ಕೊಲೆ : ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ...

ಶಿವಾಚಾರ್ಯ ಸಮುದಾಯದವರು ದೇಗುಲದ ಸ್ವಚ್ಛತಾ ಕಾರ್ಯಗಳು ಹೇಗೆ ನಡೆಯಬೇಕು, ದೋಷ ನಿವಾರಣೆಗೆ ಮಾಡಬೇಕಾದ ಧಾರ್ಮಿಕ ವಿಧಿಗಳ ಕುರಿತು ಚರ್ಚೆ ನಡೆಸಿದ್ದಾರೆ. ಅದಕ್ಕೆ ಬೇಕಾಗಿರುವ ಹಣಕಾಸಿನ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ ಅವರು ದೇವಾಲಯದ ನಿಧಿಯಿಂದ ಹಣ ಬಿಡುಗಡೆ ಮಾಡಿಕೊಡುವುದಾದಿ ಅರ್ಚಕರಿಗೆ ಭರವಸೆ ನೀಡಿದ್ದಾರೆ.

25 ಕುಟುಂಬಗಳಿಂದ ಪೂಜೆ:  ಶಿವಾರ್ಚಕ ಸಮುದಾಯಕ್ಕೆ ಸೇರಿದ 25 ಕುಟುಂಬಗಳು ದೇವಸ್ಥಾನದ ಆರಂಭದಿಂದಲೂ ದೇವರಿಗೆ ಪೂಜಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿವೆ. ಇದರಲ್ಲಿ ಗಿರೀಶ ಹಾಗೂ ಮಲ್ಲಿಕಾರ್ಜುನ ಅವರಿಗೆ 45 ದಿನಗಳು ದೊರಕಿದರೆ ಉಳಿದವರಿಗೆ 22 ದಿನ, 10 ದಿನ, 4 ದಿನ ಕೊನೆಗೆ 1 ದಿನದ ಪೂಜೆಯನ್ನು ಮಾಡುವವರೂ ಇದ್ದಾರೆ. ಮಂಗಳಾರತಿ ತಟ್ಟೆಗೆ ಬೀಳುವ ಹಣವನ್ನೇ ನಂಬಿ ಈ ಸಮುದಾಯದವರು ಜೀವನ ನಡೆಸುತ್ತಿದ್ದಾರೆ. ದೇವರ ಪೂಜೆ ನಡೆಸುವವರಿಗೆ ಮುಜರಾಯಿ ಇಲಾಖೆಯವರು ತಸ್ತಿಕ್‌ ರೂಪದಲ್ಲಿ ವರ್ಷಕ್ಕೊಮ್ಮೆ ಹಣ ಹಂಚಿಕೆ ಮಾಡುತ್ತಿದ್ದಾರೆ.

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮೂವರು ಕುಟುಂಬದವರಿಗೆ ತಲಾ 5 ಲಕ್ಷ ರು. ಪರಿಹಾರ ಹಾಗೂ 10 ಸಾವಿರ ರು. ಅಂತ್ಯಕ್ರಿಯೆ ಹಣವನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಪರಿಹಾರ ದೊರಕಿಸುವ ಅವಕಾಶವಿದ್ದಲ್ಲಿ ಸರ್ಕಾರದ ಗಮನಸೆಳೆದು ಕೊಡಿಸಲಾಗುವುದು. ಇಬ್ಬರು ಮಹಿಳೆಯರಿಗೆ ವಿಧವಾ ವೇತನ ಮಂಜೂರು ಮಾಡಿಸಿಕೊಡುತ್ತೇವೆ. ಸ್ವಚ್ಛತಾ ಕಾರ್ಯ, ಪೂಜಾ ವಿಧಿ-ವಿಧಾನಗಳಿಗೆ ದೇವಾಲಯದ ನಿಧಿಯಿಂದ ಹಣ ಬಿಡುಗಡೆ ಮಾಡಿಸಿಕೊಡಲು ಕ್ರಮ ವಹಿಸಿದ್ದೇವೆ. 

Follow Us:
Download App:
  • android
  • ios