* ಮೀನುಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ TEBMA ಶಿಪ್ ಯಾರ್ಡ್
* ವರ್ಷವಿಡೀ ಈ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸಬಹುದು
* ಈ ಬಂದರು ಕರಾವಳಿಯ ಮೀನುಗಾರರಿಗೆ ಪ್ರಕೃತಿ ಕೊಟ್ಟ ವರ
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಜೂ.25): TEBMA ಶಿಪ್ ಯಾರ್ಡ್ ಮೀನುಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೀನುಗಾರಿಕೆಗೆ ಮೀಸಲಿಟ್ಟ ಸ್ಥಳದಲ್ಲಿ ಕಳೆದ ಒಂದೂವರೆ ದಶಕದಿಂದ ಖಾಸಗಿ ಕಂಪನಿ ಕಾರ್ಯಾಚರಿಸುತ್ತಿದೆ. ಲೀಸ್ ಅವಧಿ ಮುಗಿಯುತ್ತಾ ಬಂದರೂ ಮೀನುಗಾರಿಕೆಗೆ ಮೀಸಲಿಟ್ಟ ಭೂಮಿಯನ್ನು ಮರಳಿ ಪಡೆಯಲು ಮೀನುಗಾರರು ಹೋರಾಟ ನಡೆಸುವಂತಾಗಿದೆ.
ಉಡುಪಿಯ ಮಲ್ಪೆ ಬಂದರನ್ನು ಏಷ್ಯಾದ ಅತಿದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎಂದು ಕರೆಯಲಾಗುತ್ತದೆ. ವರ್ಷವಿಡೀ ಈ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸಬಹುದು. ಆದರೆ ವರ್ಷದಿಂದ ವರ್ಷಕ್ಕೆ ಆಳ ಸಮುದ್ರ ಮೀನುಗಾರಿಕೆ ನಡೆಸುವ ದೊಡ್ಡಗಾತ್ರದ ಬೋಟುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೋಟ್ ನಿಲ್ಲಿಸಲು ಮೀಸಲಿಟ್ಟ ಸ್ಥಳದಲ್ಲಿ ಖಾಸಗಿ ಕಂಪನಿ ಕಾರ್ಯಾಚರಿಸುತ್ತಿದೆ. ಈ ಕಂಪನಿ ಆರಂಭವಾದ ಸಂದರ್ಭದಲ್ಲಿ 30 ವರ್ಷಗಳ ಲೀಸ್ ಗೆ ಬಂದರಿನಲ್ಲಿ ಭೂಮಿ ನೀಡಲಾಗಿತ್ತು. ಆದರೆ ಈ ಸ್ಥಳವನ್ನು ಮೀನುಗಾರಿಕಾ ಚಟುವಟಿಕೆಗೆ ಮಾತ್ರ ಉಪಯೋಗಿಸಬೇಕು ಅನ್ನೋದು ಮೀನುಗಾರರ ಸಂಘದ ಒತ್ತಾಯವಾಗಿತ್ತು. ಸತತ ಒಂದು ತಿಂಗಳ ಕಾಲ ಪ್ರತಿಭಟನೆ ನಡೆದ ನಂತರ, ಲೀಸ್ ಅವಧಿಯನ್ನು 15 ವರ್ಷಗಳಿಗೆ ಸೀಮಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು.
ಹಳೇ ಕಥೆ ಸಾಕು.. ಮುಂದೇನು ಮಾಡ್ಬೇಕು ಹೇಳಿ: ಮೊಯ್ಲಿ ಮಾತಿಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ
ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸಹಿತ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ, ಸಹಿಯ ಜೊತೆ ಕರಾರುಪತ್ರ ಮಾಡಲಾಗಿತ್ತು. ಇದೀಗ ಲೀಸ್ ಅವಧಿ ಮುಗಿಯುತ್ತ ಬಂದಿದೆ. ಇನ್ನೊಂದು ವರ್ಷದಲ್ಲಿ ಟೆಬ್ಮಾ ಕಂಪನಿ ಇಲ್ಲಿಂದ ಜಾಗ ಖಾಲಿ ಮಾಡಬೇಕು. ಆದರೆ ಕಂಪನಿಯು ಹೆಸರು ಬದಲಾಯಿಸಿ, ಮತ್ತೆ ಲೀಸ್ ಅವಧಿಯನ್ನು ವಿಸ್ತರಿಸಿಕೊಳ್ಳುವ ಹಿಂಬಾಗಿಲ ಪ್ರಯತ್ನ ನಡೆಸುತ್ತಿದೆ ಅನ್ನೋದು ಮೀನುಗಾರರ ಆರೋಪ.
ಉಡುಪಿಯ ಮಲ್ಪೆ ಬಂದರಿನಲ್ಲಿ ಬೋಟುಗಳ ಸಂಖ್ಯೆ ಹೆಚ್ಚುತ್ತಿದೆ. ಕೇವಲ 900 ಬೋಟುಗಳು ನಿಲ್ಲುವ ಸ್ಥಳದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಬೋಟುಗಳು ಲಂಗರು ಹಾಕುತ್ತಿವೆ. ಬೋಟು ನಿಲ್ಲಿಸಲು ಸ್ಥಳ ಸಾಲದೆ ನದಿ ಪ್ರದೇಶ ಹಾಗೂ ಪಕ್ಕದ ಗಂಗೊಳ್ಳಿ ಹಂಗಾರಕಟ್ಟೆ ಪರಿಸರಕ್ಕೂ ಮಾಲಕರು ತಮ್ಮ ಬೊಟ್ಟುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಸಾವಿರಾರು ಬೋಟುಗಳು ನಿಲ್ಲಿಸಲು ಸ್ಥಳ ಬೇಕಾದ ಕಾರಣ, ಟೆಬ್ಮಾ ಶಿಪ್ ಯಾರ್ಡ್‌ಗೆ ಸೇರಿದ ಭೂಮಿಯನ್ನು ಮತ್ತೆ ಮೀನುಗಾರರಿಗೆ ವಾಪಸು ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಉಡುಪಿ: ಮೊಳೆಗಳನ್ನು ಬಳಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಶಶಾಂಕ್..!
ಮಳೆಗಾಲದಲ್ಲಿ ತೂಫಾನು ಬರುವ ವೇಳೆ ಬೋಟುಗಳು ಪರಸ್ಪರ ಡಿಕ್ಕಿಯಾಗಿ ಹಾನಿ ಸಂಭವಿಸುವ ಅಪಾಯ ಹೆಚ್ಚು. ನಿಲುಗಡೆಯ ಜೊತೆಗೆ ಬೋಟು ರಿಪೇರಿಗೆ ಸ್ಥಳಾವಕಾಶ ಬೇಕಾಗಿದೆ. ಕರಾರಿನಂತೆ ಇನ್ನು ಕೆಲವೇ ತಿಂಗಳಲ್ಲಿ ಈ ಕಂಪೆನಿ ಜಾಗ ಖಾಲಿ ಮಾಡಬೇಕು, ಆದರೆ ಈ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಯಾವುದೇ ಉತ್ಸುಕತೆ ತೋರುತ್ತಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ. ತಮ್ಮ ಭೂಮಿಯನ್ನು ಮರಳಿ ಪಡೆಯಲು ಹೋರಾಟ ನಡೆಸುವ ಚಿಂತನೆಯಲ್ಲಿದ್ದಾರೆ.
ಈ ಬಂದರು ಕರಾವಳಿಯ ಮೀನುಗಾರರಿಗೆ ಪ್ರಕೃತಿ ಕೊಟ್ಟ ವರ. ಸರ್ವ ಋತುಗಳಲ್ಲಿ ಬಳಸಬಹುದಾದ ಈ ಪ್ರದೇಶವನ್ನು, ಖಾಸಗಿಯವರಿಗೆ ಕೊಟ್ಟಿರುವುದು ಸರಿಯಲ್ಲ. ಒಮ್ಮೆ ಮಾಡಿದ ತಪ್ಪನ್ನು ಇದೀಗ ತಿದ್ದಿಕೊಳ್ಳಲು ಅವಕಾಶ ಸಿಕ್ಕಿದೆ. ಇನ್ನಾದರೂ ಮೀನುಗಾರರ ಹಿತಕಾಯುವ ದೃಷ್ಟಿಯಿಂದ ಸರಕಾರ ಕಡಲತಡಿಯ ಭೂಮಿಯನ್ನು ಬಂದರು ಅಭಿವೃದ್ಧಿಗೆ ಬಳಸಬೇಕಾಗಿದೆ.