Bengaluru: ಬಿಎಂಟಿಸಿ ಪಾಲಿಗೆ ಬಿಳಿಯಾನೆಯಾದ ಎಲೆಕ್ಟ್ರಿಕ್‌ ಬಸ್‌!

By Kannadaprabha News  |  First Published Feb 15, 2022, 4:59 AM IST

*  ಒಮ್ಮೆ ಚಾರ್ಜ್‌ ಮಾಡಿದರೆ 80 ಕಿ.ಮೀ.ಗೆ ನಿಂತು ಹೋಗುತ್ತಿರುವ ಎಲೆಕ್ಟ್ರಿಕ್‌ ಬಸ್‌ಗಳು
*  ಚಾರ್ಜಿಂಗ್‌ ಘಟಕಗಳ ಕೊರತೆಯಿಂದ ಸಮಸ್ಯೆ ಉಲ್ಬಣ
*  ಬಸ್‌ 1 ಕಿ.ಮೀ. ಓಡಿದರೂ ಒಪ್ಪಂದದಂತೆ 180 ಕಿ.ಮೀ.ಗೂ ತಲಾ 51.67 ಪಾವತಿಸಲೇಬೇಕಾದ ಬಿಎಂಟಿಸಿ


ಬೆಂಗಳೂರು(ಫೆ.15):  ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ನಷ್ಟಕ್ಕೆ ಸಿಲುಕಿ ಸಿಬ್ಬಂದಿಗೆ ವೇತನ ಪಾವತಿಗೂ ಸರ್ಕಾರದ ಮೊರೆ ಹೋಗಿದ್ದ ಬಿಎಂಟಿಸಿಗೆ(BMTC) ನೂತನವಾಗಿ ಆಗಮಿಸಿರುವ ಎಲೆಕ್ಟ್ರಿಕ್‌ ಬಸ್‌ಗಳು ಬಿಳಿಯಾನೆಯಾಗಿ ಪರಿಣಮಿಸಿದೆ.

ನಗರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಷನ್‌(NTPCL)ನಿಂದ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದೆ. ಆದರೆ, ಈ ಬಸ್‌ಗಳ ಚಾರ್ಜಿಂಗ್‌ ಮಾಡುವುದಕ್ಕಾಗಿ ನಗರದಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಪರಿಣಾಮ ಬಸ್‌ಗಳು ಸಂಚರಿಸದಿದ್ದರೂ ಒಪ್ಪಂದದಂತೆ ನಿಗದಿತ ಮೊತ್ತ ಪಾವತಿ ಮಾಡಬೇಕಾಗಿದೆ. ಇದು ಬಿಎಂಟಿಸಿಗೆ ನಷ್ಟದ ಬಾಬ್ತು ಆಗಿದೆ.

Tap to resize

Latest Videos

Electric Bus ಶೀಘ್ರದಲ್ಲೇ KSRTCಗೆ 50 ಎಲೆಕ್ಟ್ರಿಕ್ ಬಸ್, ಜಿಲ್ಲೆ ಜಿಲ್ಲೆಗೆ ಸಂಚಾರ ಆರಂಭ!

ಪ್ರತಿ ಕಿ.ಮೀ.ಗೆ .51.67:

ಸುಮಾರು 1.5 ಕೋಟಿ ಬೆಲೆಯ ಈ ಬಸ್‌ಗಳಿಗೆ ಸ್ಮಾರ್ಟ್‌ಸಿಟಿ(Smartcity) ಯೋಜನೆ ಅಡಿ ಪ್ರತಿ ಬಸ್‌ಗೆ ತಲಾ 50 ಲಕ್ಷ ರು. ನೀಡಲಾಗಿದೆ. ಇನ್ನುಳಿದ ಮೊತ್ತವನ್ನು ಎನ್‌ಟಿಪಿಸಿಎಲ್‌ ವಿನಿಯೋಗಿಸಿದೆ. ಆದರೆ, ಈ ಬಸ್‌ಗಳು ದಿನವೊಂದಕ್ಕೆ 180 ಕಿ.ಮೀ. ಸಂಚರಿಸಬೇಕು. ಇದಕ್ಕಾಗಿ ಕಿ.ಮೀ.ಗೆ 51.67 ರು. ಎನ್‌ಟಿಪಿಸಿಎಲ್‌ಗೆ ಪಾವತಿಸಬೇಕು ಎಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಜತೆಗೆ, ದಿನವೊಂದರಲ್ಲಿ ಒಂದು ಕಿಲೋ ಮೀಟರ್‌ ಸಂಚರಿಸಿದರೂ 180 ಕಿ.ಮೀ.ನ ಸಂಪೂರ್ಣ ಮೊತ್ತ ಪಾವತಿಸಬೇಕು ಎಂಬುದಾಗಿ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೇವಲ 80 ಕಿ.ಮೀ. ದೂರ ಸಂಚರಿಸಿ ನಿಂತು ಹೋಗುತ್ತಿರುವ ಬಸ್‌ಗಳಿಗೂ ಸಂಪೂರ್ಣ ಮೊತ್ತ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಎಲೆಕ್ಟ್ರಿಕ್‌ ಬಸ್‌ಗಳು(Electric Bus) ಸರಾಗವಾಗಿ ಹಾದು ಹೋಗುವ ರಸ್ತೆಗಳಲ್ಲಿ ಹೆಚ್ಚು ಕಿಲೋ ಮೀಟರ್‌ ಸಂಚರಿಸಲಿವೆ. ಆದರೆ, ಬೆಂಗಳೂರು(Bengaluru) ನಗರದ ರಸ್ತೆಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ ಎರಡು ರಸ್ತೆ ಉಬ್ಬುಗಳು ಇರಲಿದ್ದು, ರಸ್ತೆ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಜತೆಗೆ, ಹೊಸ ಬಸ್‌ಗಳನ್ನು ಚಾಲನೆ ಮಾಡಲು ಬಿಎಂಟಿಸಿ ಚಾಲಕರಿಗೆ ಅನುಭವದ ಕೊರತೆಯಿದೆ. ಇದರಿಂದ ನಿಗದಿತ ಪ್ರಮಾಣದ ಕಿಲೋ ಮೀಟರ್‌ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಸ್ತೆಗಿಳಿಯದ 62 ಬಸ್‌ಗಳು

ಎನ್‌ಪಿಸಿಎಲ್‌ನಿಂದ ಈವರೆಗೂ 90 ಬಸ್‌ಗಳನ್ನು ಒದಗಿಸಲಾಗಿದೆ. ಅವುಗಳಲ್ಲಿ ಪ್ರಸ್ತುತ 28 ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಲಾಗಿದೆ. ಇನ್ನುಳಿದ ಬಸ್‌ಗಳಿಗೆ ಸೂಕ್ತ ಮೂಲ ಸೌಕರ್ಯಗಳು ಇಲ್ಲದ ಪರಿಣಾಮ ಕೆಂಗೇರಿಯ ಕಾರ್ಯಾಗಾರದಲ್ಲಿ ನಿಲ್ಲಿಸಲಾಗಿದೆ. ಅವುಗಳಲ್ಲಿ 30 ಬಸ್‌ಗಳನ್ನು ಯಶವಂತಪುರ ಮತ್ತು 30 ಬಸ್‌ಗಳನ್ನು ಕೆ.ಆರ್‌.ಪುರ ಡಿಪೋಗಳಿಗೆ ರವಾನಿಸಲು ತೀರ್ಮಾನಿಸಲಾಗಿದೆ. ಈ ಘಟಕಗಳಲ್ಲಿ ಚಾರ್ಜಿಂಗ್‌ ಕೇಂದ್ರ ನಿರ್ಮಿಸಿದ ಬಳಿಕ ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Bengaluru| 300 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ BMTC ಹಸಿರು ನಿಶಾನೆ

ಎಲೆಕ್ಟ್ರಿಕ್‌ ಬಸ್‌ಗಳಿಗೆ 120 ಕಿ.ಮೀ. ಸಂಚಾರದ ಬಳಿಕ ಒಮ್ಮೆ ಚಾರ್ಜಿಂಗ್‌ ಮಾಡಬೇಕು. ನಗರದಲ್ಲಿ ಚಾರ್ಜಿಂಗ್‌ ಘಟಕಗಳ ಕೊರತೆಯಿದ್ದು, ಸಣ್ಣ ಪುಟ್ಟ ಗೊಂದಲಗಳಾಗುತ್ತಿದೆ. ಇದೀಗ ಚಾರ್ಜಿಂಗ್‌ ಘಟಕಗಳನ್ನು(Charging Unit) ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈರೀತಿಯ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಅಂತ ಬಿಎಂಟಿಸಿ ಎಂಡಿ ಅನ್ಬುಕುಮಾರ್‌ ತಿಳಿಸಿದ್ದಾರೆ. 

ಬೆಂಗ್ಳೂರಿಂದ 6 ನಗರಕ್ಕೆ ಎಲೆಕ್ಟ್ರಿಕ್‌ ಬಸ್‌ ಸಂಚಾರ

ರಾಜಧಾನಿ ಬೆಂಗಳೂರು(Bengaluru) ನಗರದಿಂದ ರಾಜ್ಯದ ವಿವಿಧ ನಗರಗಳಿಗೆ (ಅಂತರ್‌ ನಗರ) ಪರಿಸರ ಸ್ನೇಹಿ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ (ಇ-ಬಸ್‌) ಸೇವೆ(Electric Bus) ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ(KSRTC) ಗುತ್ತಿಗೆ ಮಾದರಿಯಡಿ 50 ಇ-ಬಸ್‌(E-Bus) ಪಡೆಯಲು ಮೂರನೇ ಬಾರಿ ಕರೆದಿದ್ದ ಟೆಂಡರ್‌ ಅಂತಿಮಗೊಂಡಿದೆ.

ಹೈದರಾಬಾದ್‌(Hyderabad) ಮೂಲಕ ‘ಒಲೆಕ್ಟ್ರಾ ಗ್ರೀನ್‌ ಟೆಕ್‌’ (Olectra Greentech Limited) ಕಂಪನಿ ಟೆಂಡರ್‌ ಪಡೆದುಕೊಂಡಿದೆ. ದಿನಕ್ಕೆ 500 ಕಿ.ಮೀ. ಸಂಚರಿಸುವ ಸಾಮರ್ಥ್ಯದ ಇ-ಬಸ್‌ ಉತ್ಪಾದಿಸುತ್ತಿರುವ ದೇಶದ(India) ಏಕೈಕ ಕಂಪನಿ ಇದಾಗಿದೆ. ಟೆಂಡರ್‌ನಲ್ಲಿ(Tender) ಭಾಗವಹಿಸಿದ್ದ ಏಕೈಕ ಕಂಪನಿ ಇದಾಗಿದ್ದು, ಪ್ರತಿ ಕಿ.ಮೀ.ಗೆ 55 ಪಡೆದು ಬಸ್‌ ಸೇವೆ ನೀಡಲು ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ನಡೆಯಲಿರುವ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ಟೆಂಡರ್‌ ಚರ್ಚೆಗೆ ಬರಲಿದೆ. ಸಭೆಯಲ್ಲಿ ಟೆಂಡರ್‌ಗೆ ಅನುಮೋದನೆ ಸಿಕ್ಕರೆ ಆರು ತಿಂಗಳೊಳಗೆ ಹವಾನಿಯಂತ್ರಿತ ಇ-ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸೇರ್ಪಡೆಯಾಗಲಿದೆ.
 

click me!