ವರ್ಕ್ ಫ್ರಂ ಹೋಂ ಹೋಯ್ತು, ಮಲೆನಾಡಲ್ಲೀಗ ವರ್ಕ್ ಫ್ರಂ ತೋಟ, ಗುಡ್ಡ !

By Kannadaprabha NewsFirst Published May 16, 2020, 5:09 PM IST
Highlights

ಲಾಕ್‌ಡೌನ್‌ನಿಂದಾಗಿ ನಗರದಲ್ಲಿದ್ದ ಸಾಕಷ್ಟು ಉದ್ಯೋಗಿಗಳು ಊರು ಸೇರಿದ್ದು, ವರ್ಕ್‌ ಫ್ರಂ ಹೋಂಗೆ ಮೊರೆ ಹೋಗಿದ್ದಾರೆ. ಆದರೆ ಮಲೆನಾಡಿನಲ್ಲಿ ನೆಟ್‌ವರ್ಕ್‌ಗಾಗಿ ತೋಟ, ಗುಡ್ಡ ಹುಡುಕಿಕೊಂಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

- ಎಸ್‌.ಶಾಂತಾರಾಮ

ಹೊಸನಗರ(ಮೇ.16): ಕೊರೋನಾ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ಹಾಸ್ಟೆಲ್‌, ಪಿಜಿ ಬಂದ್‌ ಆಗಿ ಮಲೆನಾಡಿಗೆ ವರ್ಕ್ ಫ್ರಂ ಹೋಮ್‌, ಆನ್‌ಲೈನ್‌ ಕ್ಲಾಸ್‌ ಎಂದು ಗುಳೆ ಹೊರಟವರಿಗೆ ನೆಟ್‌ವರ್ಕ್ ಸರಿಯಾಗಿ ದೊರಕದ ಕಾರಣ ವರ್ಕ್ ಫ್ರಂ ಗುಡ್ಡ, ಅಂಗಳ, ಕೊಟ್ಟಿಗೆ ಎನ್ನುವಂತಾಗಿದೆ.

ಹೌದು, ಮಲೆನಾಡಿನಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಎಲ್ಲಾ ಖಾಸಗಿ ನೆಟ್‌ವರ್ಕ್ ಸಂಪರ್ಕ ಸರಿಯಾಗಿ ದೊರೆಯುವುದಿಲ್ಲ. ಈ ಕಾರಣದಿಂದಾಗಿ ಬಹುತೇಕರು ಸಂಪರ್ಕ ಎಲ್ಲಿ ದೊರೆಯುತ್ತದೆಯೋ ಅಲ್ಲಿಗೆ ತಮ್ಮ ಲ್ಯಾಪ್‌ ಟ್ಯಾಪ್‌ ಹೊತ್ತುಕೊಂಡು ಹೋಗುವ ಪ್ರಸಂಗ ಬಂದಿದೆ.

ತಮ್ಮ ಕಂಪನಿಗಳಿಗೆ ಇಲ್ಲಿನ ವೀಕ್‌ ನೆಟ್‌ವರ್ಕ್ ಜಾಲದ ಬಗ್ಗೆ ಮಾಹಿತಿ ನೀಡಲಾಗಿದೆ. ಮನೆಯಲ್ಲಿ ಯಾವುದೇ ಸಂಪರ್ಕ ದೊರೆಯುವುದಿಲ್ಲ. ತೋಟದ ಮೇಲಿನ ಗುಡ್ಡಕ್ಕೆ ಹೋದರೆ ಮಾತ್ರ ಲಭ್ಯ. ಊಟ, ತಿಂಡಿ ಸಹ ಅಲ್ಲಿಗೆ ತರುವಂತೆ ಮನೆಯವರಿಗೆ ತಿಳಿಸಿ ‘ವರ್ಕ್ ಗುಡ್ಡ’ ಆಗಿದೆ ಎಂಬುದು ಐಟಿ ಉದ್ಯೋಗಿ ಕಾಡುವಳ್ಳಿ ಗಿರೀಶ್‌ ಅವರ ಅನಿಸಿಕೆ.

ನಾನೆಷ್ಟು ಹಣ ವ್ಯರ್ಥ ಮಾಡುತ್ತಿದ್ದೇನೆಂದು ತಿಳಿಯಲು ಲಾಕ್‌ಡೌನ್ ಹೇರಬೇಕಾಯ್ತು!

ಇದೇ ರೀತಿ ತೋಟದ ತುದಿಗೋ, ಮರದ ನೆರಳು, ಹೊಳೆ ತೀರದಲ್ಲಿ ಹೆಚ್ಚು ತರಂಗ ಇರುವ ಕಡೆಗಳಲ್ಲಿ ಲ್ಯಾಪ್‌ಟ್ಯಾಪ್‌, ಕುರ್ಚಿ ಹೊತ್ತುಕೊಂಡು ಹೋಗಬೇಕು ಎಂದು ಹೆಸರು ಬಹಿರಂಗ ಪಡಿಸದ ಹೆಬೈಲಿನ ಯುವತಿಯ ಅನಿಸಿಕೆ.

ಆನ್‌ಲೈನ್‌ ಕ್ಲಾಸ್‌ ಎಂಬ ಮರೀಚಿಕೆ:

ಮಲೆನಾಡಿನ ಹಳ್ಳಿಗಳಲ್ಲಿ ದಿನದಲ್ಲಿ 8 ಗಂಟೆ ವಿದ್ಯುತ್‌ ಇಲ್ಲ. ಇಂತಹ ಸಮಯದಲ್ಲಿ ಮೊಬೈಲ್‌ ಆಪ್‌ ಮೂಲಕ ಆನ್‌ ಕ್ಲಾಸ್‌ ನೋಡಿ ಎಂಬುದು ಕನಸಿನ ಮಾತು. ವಿದ್ಯುತ್‌ ಇಲ್ಲ ಎಂದರೆ ಬಿಎಸ್‌ಎನ್‌ಎಲ್‌ ಮೊಬೈಲ್‌ ತರಂಗ ಬಂದ್‌. ಇದನ್ನು ನಂಬಿದ ವಿದ್ಯಾರ್ಥಿಗಳ ಪಾಡು ಹೇಳ ತೀರದು. ಜನೇರಟರ್‌ಗಳಿಗೆ ಡೀಸೆಲ್‌ ಇಲ್ಲ. ಹಾಗಾಗಿ ಹಳ್ಳಿಗಳಲ್ಲಿ ಹೆಚ್ಚಾಗಿರುವ ಬಿಎಸ್‌ಎನ್‌ಎಲ್‌ ಟವರ್‌ ಸಹ ಸ್ಥಗಿತಗೊಳ್ಳುತ್ತದೆ.

ಇದರಿಂದ ಸಿಇಟಿ, ನೀಟ್‌, ಪಿಯುಸಿ, ಎಸ್ಸೆಸೆಲ್ಸಿ ಆನ್‌ ಲೈನ್‌ ಕ್ಲಾಸ್‌ ಸಹ ಹಳ್ಳಿ ಮಕ್ಕಳ ಪಾಲಿಗೆ ಗಗನ ಕುಸುಮವೇ ಸೈ. ನೆಟ್‌ವರ್ಕ್ ಹಾಸ್ಟೆಲ್‌ ತೊರೆದು ಬಂದ ನಮ್ಮ ಹಳ್ಳಿಯ ಮಕ್ಕಳು ಈಗ ಅತಂತ್ರರಾಗಿದ್ದಾರೆ ಎಂಬುದು ತಾಲೂಕು ಪಂಚಾಯ್ತಿ ಸದಸ್ಯ ಚಂದ್ರಮೌಳಿ ಗೌಡ ಇವರ ಆಕ್ರೋಶದ ಮಾತು.

ಗದ್ದೆಯ, ತೋಟದ ಮಧ್ಯದಲ್ಲಿ ಒಂಟಿ ಮನೆಗಳಿರುವ ಮಲೆನಾಡಿನಲ್ಲಿ ವರ್ಕ್ ಫ್ರಂ ಹೋಂ, ಆನ್‌ ಕ್ಲಾಸ್‌ಗಳ ನಾಮಫಲಕಗಳನ್ನು ಬದಲಾಯಿಸುವ ಕಾಲ ಬಂದಿದೆ. ನೆಟ್‌ ವರ್ಕ್ ಸಿಕ್ಕಲ್ಲೆ ಕೆಲಸ, ಓದು ಎಂಬಂತೆ ಆಗಿದೆ ಎನ್ನುವುದು ಬೇಸರದ ಸಂಗತಿ.
 

click me!