ಮಂಚನಬೆಲೆ, ಎತ್ತಿನಮನೆ ಗುಲಗಂಜಿ ಗುಡ್ಡ ಜಲಾಶಯಗಳಿಂದ ಕುಡಿವ ನೀರು, ಇಗ್ಗಲೂರು, ಕಣ್ವ ಬ್ಯಾರೇಜ್, ಹಾರೋಬೆಲೆ, ಬೈರಮಂಗಲ ಜಲಾಶಯ ನೀರು ಕೃಷಿಗೆ ಸೀಮಿತ, ರಾಮನಗರ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ.
ಎಂ.ಅಫ್ರೋಜ್ ಖಾನ್
ರಾಮನಗರ(ಜೂ.11): ಪೂರ್ವ ಮುಂಗಾರು ಮಳೆ ಸಮರ್ಪಕವಾಗಿ ಬೀಳದಿದ್ದರೆ ಕೃಷಿ ಚಟುವಟಿಕೆ ಮಾತ್ರವಲ್ಲದೆ ಜನರಿಗೆ ಕುಡಿಯುವ ನೀರಿನ ಪೂರೈಕೆಗೂ ಹಾಹಾಕಾರ ಎದುರಾಗುವ ಸಾಧ್ಯತೆಗಳಿವೆ. ಕಳೆದೆರಡು ತಿಂಗಳಿದ ಸುರಿದ ಮಳೆ ಎಲ್ಲ ಭಾಗದಲ್ಲೂ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಹೀಗಾಗಿ ಮುಂಗಾರು ಮಳೆ ಮೇಲೆ ರೈತರ ಚಿತ್ತ ಹರಿದಿದ್ದು, ಆ ಮಳೆ ಆಶಾದಾಯಕವಾಗಿ ಬಿದ್ದಲ್ಲಿ ರೈತರು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿಕೊಳ್ಳಲು ಅನುಕೂಲವಾಗಲಿದೆ.
ಮುಂಗಾರು ಕೊರತೆಯಿಂದ ಜಿಲ್ಲೆಯ ಹಲವೆಡೆ ರೈತರು ಭೂಮಿಯನ್ನು ಉಳುಮೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಬೀಜ, ಗೊಬ್ಬರವನ್ನು ಸಂಗ್ರಹಿಸಿಕೊಂಡು ಮುಂಗಾರು ಮಳೆಯತ್ತ ದೃಷ್ಟಿನೆಟ್ಟಿದ್ದಾರೆ. ಜಿಲ್ಲೆಯಲ್ಲಿ 98,425 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ ಮಳೆಯಾಶ್ರಿತ ಪ್ರದೇಶವೇ ಅಧಿಕವಾಗಿದೆ. ಈಗ 1062 ಹೆಕ್ಟೇರ್ ಪ್ರದೇಶದ ಪೈಕಿ 860 ಹೆಕ್ಟೇರ್‌ನಲ್ಲಿ ಎಳ್ಳು, 282ರ ಪೈಕಿ 138 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಭೀಕರ ಕಾರು ಅಪಘಾತ: ಚಾಲಕ ಸಾವು, ಮೂವರ ಸ್ಥಿತಿ ಗಂಭೀರ
ಏಪ್ರಿಲ್ ತಿಂಗಳಲ್ಲಿ 46.3 ಮಿಲಿ ಮೀಟರ್ ವಾಡಿಕೆ ಮಳೆಯಾಗಿದ್ದು, 20.9 ಮಿಲಿ ಮೀಟರ್ ವಾಸ್ತವ ಮಳೆಯಾಗಿದೆ. ಮೇ ತಿಂಗಳಲ್ಲಿ 108.9 ಮಿಲಿ ಮೀಟರ್ ವಾಡಿಕೆ ಮಳೆಯಾಗಿದ್ದು, 176.2 ಮಿಲಿ ಮೀಟರ್ ವಾಸ್ತವ ಮಳೆಯಾಗಿದೆ. ಜೂನ್ 1ರಿಂದ 8ರವರೆಗೆ 31 ಮಿಲಿ ಮೀಟರ್ ವಾಡಿಕೆ ಮಳೆಯಾಗಿದ್ದು, 8 ಮಿಲಿ ಮೀಟರ್ ಮಳೆಯಾಗಿದೆ. ಆದರೆ, ಈ ಮಳೆಯಿಂದ ರೈತರ ಬೆಳೆಗೆ ಅಷ್ಟೇನೂ ಪ್ರಯೋಜನವಾಗಿಲ್ಲ.
ಜಲಾಶಯಗಳ ನೀರು ಕೃಷಿಗೆ ಪೂರಕ :
ಮತ್ತೊಂದೆಡೆ ಜಿಲ್ಲೆಯಲ್ಲಿ ಪ್ರಮುಖವಾಗಿ ಆರು ಸಣ್ಣ ಜಲಾಶಯಗಳ ಪೈಕಿ ಮಂಚನಬೆಲೆ, ವೈಜಿ ಗುಡ್ಡ ( ಎತ್ತಿನಮನೆ ಗುಲಗಂಜಿ ಗುಡ್ಡ )ಜಲಾಶಯಗಳು ಮಾತ್ರ ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಣ್ವ ಜಲಾಶಯ, ಎತ್ತಿನಮನೆ ಗುಲಗಂಜಿ ಜಲಾಶಯ, ಎಚ್.ಡಿ.ದೇವೇಗೌಡ ಬ್ಯಾರೇಜ…, ಮಂಚನಬೆಲೆ ಡ್ಯಾಂ, ಬೈರಮಂಗಲ ಜಲಾಶಯ, ಹಾರೋಬೆಲೆ ಡ್ಯಾಂಗಳು ಜಿಲ್ಲೆಯ ಪ್ರಮುಖ ಜಲಾಶಯಗಳಾಗಿ ಗುರುತಿಸಿಕೊಂಡಿವೆ.
ಇವುಗಳ ಪೈಕಿ ಮಂಚನಬೆಲೆ ಮತ್ತು ಎತ್ತಿನಮನೆ ಗುಲಗಂಜಿ ಗುಡ್ಡ ಜಲಾಶಯಗಳು ಮಾತ್ರ ಕುಡಿಯುವ ನೀರನ್ನು ಪೂರೈಸುತ್ತಿವೆ. ಉಳಿದ ನಾಲ್ಕು ಜಲಾಶಯಗಳು ತುಂಬಿ ಹೊರ ಹೋಗುವ ನೀರು ಕೃಷಿಗೆ ಪೂರಕವಾಗಿ ನದಿ, ಹಳ್ಳಗಳ ರೂಪದಲ್ಲಿ ಹರಿದು ಗ್ರಾಮೀಣ ಭಾಗದ ಕುಡಿಯುವ ನೀರಿನ ಜೀವಸೆಲೆ ಅಂತರ್ಜಲ ವೃದ್ಧಿಸುವಲ್ಲಿ ಪೂರಕವಾಗಿವೆ. ಪ್ರತಿವರ್ಷ ಜೂನ್ ತಿಂಗಳು ಬಂತೆಂದರೆ ಜಲಾಶಯಗಳು ತುಂಬಿ ತುಳುಕುವುದನ್ನು ನೋಡಲು ಆನಂದವಾಗುತ್ತಿತ್ತು. ಆದರೆ, ಕಳೆದ ವರ್ಷ ಸುರಿದ ಅಕಾಲಿಕ ಮಳೆಯಿಂದ ಜಲಾಶಯಕ್ಕೆ ಹರಿದು ಬಂದಿದ್ದ ನೀರೆ ಈ ವರ್ಷದ ಬೇಸಿಗೆಯನ್ನು ತಣಿಸಲು ನೆರವಾಗಿದೆ.
ಜಿಲ್ಲೆಯಲ್ಲಿ ವಾಡಿಕೆ ಮಳೆ ಬೀಳದೆ ಜಲಾಶಯಗಳಲ್ಲಿ ನೀರಿನ ಮಟ್ಟದಿನೇದಿನೇ ಕುಸಿಯುತ್ತಿದೆ. ಇದೀಗ ಮಂಚನಬೆಲೆ ಜಲಾಶಯದಲ್ಲಿ ನೀರಿನ ಮಟ್ಟಕಡಿಮೆಯಾಗುತ್ತಿದೆ. ಸತ್ತೇಗಾಲದಿಂದ ಇಗ್ಗಲೂರು, ಕಣ್ವ ಜಲಾಶಯದ ಮೂಲಕ ಎತ್ತಿನಮನೆ ಗುಲಗಂಜಿ ಗುಡ್ಡ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ನಡೆದಿದ್ದು, ತುಸು ನೀರು ಜಲಾಶಯಕ್ಕೆ ಬಂದಿದೆ. ಆದರೂ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ನಿರ್ವಹಣೆಯಲ್ಲಿ ಅಧಿಕಾರಿಗಳು ಎಡವಿದ್ದಾರೆಂದು ಹೇಳಲಾಗುತ್ತಿದೆ.
ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವೇ ಮಂಚನಬೆಲೆ ಜಲಾಶಯವಾಗಿದೆ. ಈ ವ್ಯವಸ್ಥೆ ಇಲ್ಲದಿದ್ದರೆ ಬಯಲುಸೀಮೆ ಮಾಗಡಿ ಪಟ್ಟಣದ ಜನರ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಇದೀಗ ಪ್ರತಿನಿತ್ಯ ನೀರು ಪೂರೈಕೆಯಾಗುತ್ತಿದ್ದು, ಮಳೆಗಾಲದ ಕೊರತೆಯಾದರೆ ಜಲಾಶಯ ಬರಿದಾಗುವ ಆತಂಕ ಎದುರಾಗಿದೆ.
ಇನ್ನು ಮಾಗಡಿ ತಾಲೂಕಿನ 36 ಹಳ್ಳಿಗಳಿಗೆ ಎತ್ತಿನಮನೆ ಗುಲಗಂಜಿ ಗುಡ್ಡ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಆದರೆ ನಿರ್ವಹಣೆ ಕೊರತೆ ಕಾಣುತ್ತಿದ್ದು, ಕೆಲವಡೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಸಮಸ್ಯೆ ಇಂದಿಗೂ ಆ ಭಾಗದ ಜನರನ್ನು ಕಾಡುತ್ತಿದೆ.
Ramanagara: ಒಂದೇ ವಾರದ ಅಂತರ, ಒಂದೇ ಜಾಗದಲ್ಲಿ ಎರಡು ಚಿರತೆ ಸೆರೆ
ಮಳೆಯಾಗದ ಕಾರಣ ತೇವಾಂಶ ಕೊರತೆ
ಜೂನ್ - ಜುಲೈ ಮಾಹೆಯಲ್ಲಿ ಮತ್ತು ನಂತರ ಮುಂಗಾರು ಬೆಳೆಗಳಾದ ಬತ್ತ, ರಾಗಿ, ದ್ವಿದಳಧಾನ್ಯ, ಎಣ್ಣೆಕಾಳು ಹಾಗೂ ಇತರೆ ಬೆಳೆಗಳು ಬಿತ್ತನೆಯಾಗಲಿವೆ. ಪ್ರಸ್ತುತ ಜಿಲ್ಲೆಯಾದ್ಯಂತ ವಾಡಿಕೆಯಂತೆ ಮಳೆಯಾಗದ ಕಾರಣ ತೇವಾಂಶ ಕೊರತೆಯಿಂದ ಪೂರ್ವ ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆಯಾಗಿರುವ ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ಮಳೆ ನೀರಿನ ಅವಶ್ಯಕತೆ ಎದುರಾಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಮಳೆಯಾಗದಿದ್ದರೆ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿರುವ ಪೂರ್ವ ಮುಂಗಾರು ಬೆಳೆಗಳು ಕೈ ಸೇರದೆ ಹೋಗಬಹುದು. ರೈತರು ಸಾಲ ಮಾಡಿ ಬೆಳೆದ ಬೆಳೆಗಳಿಂದ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ.
ಜಲಾಶಯದ ಹೆಸರು ಗರಿಷ್ಠ ಮಟ್ಟ ಇಂದಿನ ಮಟ್ಟ ನೀರಿನ ಸಂಗ್ರಹ ಸಾಮರ್ಥ್ಯ ಇಂದಿನ ನೀರಿನ ಮಟ್ಟ
ಇಗ್ಗಲೂರು 18.5 ಅಡಿ 18 ಅಡಿ 0.18 ಟಿಎಂಸಿ 0.17 ಟಿಎಂಸಿ
ಕಣ್ವ 32.9 ಅಡಿ 26.1 ಅಡಿ 0.8 ಟಿಎಂಸಿ 0.5 ಟಿಎಂಸಿ
ಹಾರೋಬೆಲೆ 60 ಅಡಿ 59.04 ಅಡಿ 1.579 ಟಿಎಂಸಿ 1.487 ಟಿಎಂಸಿ
ಮಂಚನಬೆಲೆ 83 ಅಡಿ 76 ಅಡಿ 1.22 ಟಿಎಂಸಿ 0.931 ಟಿಎಂಸಿ
ವೈಜಿ ಗುಡ್ಡ 100 ಅಡಿ 96 ಅಡಿ .1 ಟಿಎಂಸಿ .05 ಟಿಎಂಸಿ