ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ| ಆರೋಪಿ ಚಂದಾಪುರ ತಾಂಡಾದ ಸುಭಾಸ ಬಸವಣ್ಣೆಪ್ಪ ಅಗಸಿಮನಿ ಎಂಬಾತನಿಗೆ ಜೀವಾವಧಿ ಶಿಕ್ಷೆ| ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಂದ ತೀರ್ಪು ಪ್ರಕಟ|
ಹಾವೇರಿ(ಜ.08): ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಆತನನ್ನು ಕೊಲೆ ಮಾಡಿದ ಆರೋಪಿ ಚಂದಾಪುರ ತಾಂಡಾದ ಸುಭಾಸ ಬಸವಣ್ಣೆಪ್ಪ ಅಗಸಿಮನಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿಯ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲನಾಕನಕೊಪ್ಪ ಗ್ರಾಮದಲ್ಲಿ 2017 ಮೇ 16 ರಂದು ಚಂದಾಪುರ ತಾಂಡಾದ ಸುಭಾಸ ಬಸವಣ್ಣೆಪ್ಪ ಅಗಸಿಮನಿ ಎಂಬಾತ ಬಾಲಕನನ್ನು ಪುಸಲಾಯಿಸಿ ಬೈಕ್‌ನಲ್ಲಿ ಅಪಹರಿಸಿಕೊಂಡು ಮುಂಡಗೋಡ ಮಾರ್ಗದ ರಾಜೀವ ಗ್ರಾಮದ ಹತ್ತಿರ ಕೋಣನಕೇರೆ ಗ್ರಾಮದ ಕಾಡಿನಲ್ಲಿ ಬಾಲಕನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿ ಅದೇ ಕಾಡಿನಲ್ಲಿ ಬಾಲಕನ ಶವವನ್ನು ಬಚ್ಚಿಟ್ಟಿದ್ದ.
ಈ ಕುರಿತಂತೆ ಬಂಕಾಪುರ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ ಆರೋಪ ರುಜುವಾತ ಆದ ಕಾರಣ 2020 ರ ಜ. 6ರಂದು ತೀರ್ಪು ಪ್ರಕಟಿಸಿ ಅಪರಾಧಿ ಸುಭಾಸ ಬಸವಣ್ಣೆಪ್ಪ ಅಗಸಿಮನಿಗೆ ಕಲಂ 302 ಐಪಿಸಿ ಅಡಿ ಜೀವಾವಧಿ ಕಾರಾಗೃಹ ವಾಸ ಮತ್ತು 50 ಸಾವಿರ ದಂಡ,ದಂಡ ಪಾವತಿಸಲು ವಿಫಲವಾದರೆ ಐದು ತಿಂಗಳ ವಿಸ್ತರಿಸಬಹುದಾದ ಸಜೆಯನ್ನು ಪ್ರಕಟಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
363 ಐಪಿಸಿ ಅಡಿ 7 ವರ್ಷ ಸಜೆ ಮತ್ತು 10 ಸಾವಿರ ದಂಡ, ಕಲಂ 201 ಐಪಿಸಿ ನೇದ್ದರಡಿ 7 ತಿಂಗಳ ಸಜೆ ಮತ್ತು ಎರಡು ಸಾವಿರ ರು., ಕಲಂ 12 ಪೋಕ್ಸೋ ಕಾಯ್ದೆಯಡಿ 3 ವರ್ಷ ಸಜೆ ಮತ್ತು ಐದು ಸಾವಿರ ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ ಮೃತ ಬಾಲಕನ ಪಾಲಕರಿಗೆ ಪರಿಹಾರವಾಗಿ 20 ಸಾವಿರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ವಿನಾಯಕ ಎಸ್. ಪಾಟೀಲ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.