ಒಂದು ಗ್ರಾಮದ ಶೇ.20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವಿವೈವಿಧ್ಯ ಪರಿಸರ ಸೂಕ್ಷ್ಮವಾಗಿರುವ ಮಾನದಂಡದ ಅಡಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು ಅವೈಜ್ಞಾನಿಕವಾಗಿದೆ.
ಕಾರವಾರ(ಜು.15): ಕಸ್ತೂರಿರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಮೂಲಕ ತಯಾರಿಸಿದ ವರದಿಯೂ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ ಎಂದು ನ್ಯಾಯವಾದಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆರೋಪಿಸಿದ್ದಾರೆ. ಈ ಬಗ್ಗೆ ಹೇಳಿಕೆಯಲ್ಲಿ ತಿಳಿಸಿರುವ ಅವರು, ಒಂದು ಗ್ರಾಮದ ಶೇ.20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವಿವೈವಿಧ್ಯ ಪರಿಸರ ಸೂಕ್ಷ್ಮವಾಗಿರುವ ಮಾನದಂಡದ ಅಡಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು ಅವೈಜ್ಞಾನಿಕವಾಗಿದೆ. ಇತ್ತೀಚಿನ ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆಯಂತೆ ಪರಿಸರ ಅತಿಸೂಕ್ಷ್ಮ ಪ್ರದೇಶ ನಿಗದಿಗೊಳಿಸುವ ಅಂಶವು ಜನಜೀವನದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ, ವರದಿ ಅನುಷ್ಠಾನದ ಪೂರ್ವದಲ್ಲಿ ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಅಗ್ರಹಿಸಿದ್ದಾರೆ.
ಗುಜರಾರತ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ರಾಜ್ಯ ಒಳಗೊಂಡ ಸುಮಾರು 59,940 ಚ.ಕಿ.ಮೀ. ಪ್ರದೇಶವನ್ನು ಡಾ. ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಅತಿಸೂಕ್ಷ್ಮ ಪ್ರದೇಶವೆಂದು ಘೋಷಿಸಿತು. ಕರ್ನಾಟಕದಲ್ಲಿ 20,668 ಚ.ಕಿ.ಮೀ. ಪ್ರದೇಶವು 1,576 ಹಳ್ಳಿಗಳಿಗೆ ವಿಸ್ತರಿಸಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ: ನದಿಯಲ್ಲಿ ಪ್ರವಾಹ ಏರಿಕೆ, ವರದೆಗೆ ಬಾಗೀನ ಅರ್ಪಿಸಿದ ಸಚಿವ ಹೆಬ್ಬಾರ
ಪಶ್ಚಿಮಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಈಗಾಗಲೇ ಸಾಕಷ್ಟುಕಾನೂನು, ನೀತಿ, ನಿಯಮ ಅಳವಡಿಸಲಾಗಿದೆ. ವಿನಾಕಾರಣ ಹೆಚ್ಚಿನ ಕಾನೂನಿನ ಬಲ ಪ್ರಯೋಗದ ಮೂಲಕ ನಿಯಂತ್ರಿಸಲು ಪ್ರಯತ್ನಿಸದಿದ್ದಲ್ಲಿ ಜನಸಾಮಾನ್ಯರ ನೈಜ ಜೀವನಕ್ಕೆ ಮಾರಕವಾಗುವುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ ಹಳ್ಳಿಗಳು
ಉತ್ತರ ಕನ್ನಡ 704
ಬೆಳಗಾವಿ 28
ಚಾಮರಾಜನಗರ 21
ಚಿಕ್ಕಮಗಳೂರು 142
ಕೊಡಗು 54
ಹಾಸನ 35
ಮಂಗಳೂರು 46
ಮೈಸೂರು 56
ಶಿವಮೊಗ್ಗ 474
ಉಡುಪಿ 37
ಒಟ್ಟು 1597