Karwar floods:; ಚರಂಡಿ ಅವ್ಯವಸ್ಥೆ, ನಗರದಲ್ಲಿ ಕೃತಕ ನೆರೆ!

By Kannadaprabha News  |  First Published Jul 7, 2023, 6:44 AM IST

ಚರಂಡಿ ವ್ಯವಸ್ಥೆ ಇಲ್ಲದಿರುವುದು, ನೀರು ಹರಿದುಹೋಗುವ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಆಗಿರುವುದು, ಖಾಲಿ ನಿವೇಶನಗಳಿಂದ ಜಿಲ್ಲೆಯ ಗ್ರಾಮೀಣ ಹಾಗೂ ನಗರ, ಪಟ್ಟಣ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಆಗುವಂತೆ ಮಾಡುತ್ತಿದೆ.


ಜಿ.ಡಿ.ಹೆಗಡೆ

ಕಾರವಾರ (ಜು.7) :  ಚರಂಡಿ ವ್ಯವಸ್ಥೆ ಇಲ್ಲದಿರುವುದು, ನೀರು ಹರಿದುಹೋಗುವ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಆಗಿರುವುದು, ಖಾಲಿ ನಿವೇಶನಗಳಿಂದ ಜಿಲ್ಲೆಯ ಗ್ರಾಮೀಣ ಹಾಗೂ ನಗರ, ಪಟ್ಟಣ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಆಗುವಂತೆ ಮಾಡುತ್ತಿದೆ.

Tap to resize

Latest Videos

undefined

ಜಿಲ್ಲೆಯಲ್ಲಿ ಕಳೆದ 3-4 ದಿನಗಳಿಂದ ಸತತ ಮಳೆಯಾಗುತ್ತಿದ್ದು, ಬಹುತೇಕ ನಗರ, ಪಟ್ಟಣ ಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದೇ, ಇದ್ದರೂ ಸ್ವಚ್ಛ ಮಾಡದೇ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ನಗರ, ಪಟ್ಟಣ ಪ್ರದೇಶದಲ್ಲಿ ಚರಂಡಿ ವ್ಯವಸ್ಥೆ ಸರಿಯಲ್ಲದೇ ರಸ್ತೆ, ಮನೆಗಳಿಗೆ ಮಳೆ ನೀರು ನುಗ್ಗಿದರೆ, ಮತ್ತೊಂದೆಡೆ ಖಾಸಗಿ ನಿವೇಶನದಲ್ಲಿ ಗಿಡಗಂಟಿಗಳು, ತ್ಯಾಜ್ಯಗಳು ತುಂಬಿರುವುದು, ಮಳೆಯ ನೀರು ಹರಿದುಹೋಗುವ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಆಗಿರುವುದರಿಂದ ಕೃತಕ ನೆರೆ ಉಂಟಾಗುತ್ತಿದೆ.

Uttara kannada rains: ಭಾರೀ ಮಳೆಗೆ ತತ್ತರಿಸಿದ ಭಟ್ಕಳ, ಎಲ್ಲಿ ನೋಡಿದರೂ ನೀರೇ ನೀರು!

ಕಾರವಾರ ತಾಲೂಕಿನ ಅರಗಾ, ಬಿಣಗಾ ಬಳಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ, ಭಟ್ಕಳದ ರಂಗಿನಕಟ್ಟೆ, ಶಂಶುದ್ಧೀನ್‌ ಸರ್ಕಲ್‌ ಒಳಗೊಂಡು ಜಿಲ್ಲೆಯ ಹಲವು ಕಡೆ ರಸ್ತೆಗಳ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಭಾರಿ ಮಳೆಯಾದಾಗ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ. ಚರಂಡಿಯ ಜತೆಗೆ ಖಾಲಿ ನಿವೇಶನಗಳು, ಕಟ್ಟಡಗಳು ಕೂಡಾ ನೀರು ತುಂಬಲು ಕಾರಣವಾಗುತ್ತಿವೆ.

ಮನೆಗೆ ನುಗ್ಗುವ ನೀರು:

ಕಾರವಾರ ನಗರದ ಹಲವಾರು ಕಡೆ ಗಿಡಗಂಟಿಗಳು ಬೆಳೆದ ಖಾಸಗಿ ನಿವೇಶನಗಳಿದ್ದು, ರಭಸದಿಂದ ಮಳೆಯಾದಾಗ ಆ ನಿವೇಶನದಲ್ಲಿ ನೀರು ತುಂಬಿಕೊಂಡು ರಸ್ತೆಯ ಮೇಲೆ ಹರಿಯುತ್ತಿದೆ. ಜತೆಗೆ ಕೆಲವು ಕಡೆ ಅಕ್ಕಪಕ್ಕದ ಮನೆಗಳ ಆವಾರದೊಳಗೂ ನೀರು ಪ್ರವೇಶಿಸುವಂತಾಗಿದೆ. ಚರಂಡಿ ನೀರು ಇದರೊಂದಿಗೆ ಸೇರುವುದರಿಂದ ಅಸಹ್ಯ ಹುಟ್ಟಿಸುತ್ತಿದೆ.

ನಗರಸಭೆಯಿಂದ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಡುವಂತೆ ಸೂಚನೆಗಳನ್ನು ನೀಡುತ್ತಿದ್ದರೂ ಹಲವು ಮಾಲಿಕರು ಈ ಬಗ್ಗೆ ಗಮನ ನೀಡುತ್ತಿಲ್ಲ. ತ್ಯಾಜ್ಯಗಳನ್ನು ಎಸೆಯದಂತೆ, ಗಿಡಗಂಟಿಗಳು ಬೆಳೆಯದಂತೆ ನೋಡಿಕೊಳ್ಳುವುದು, ಮುಂಗಾರಿಗೂ ಪೂರ್ವ ಸ್ವಚ್ಛತೆ ಮಾಡಿ ಮಳೆಯ ನೀರು ಸರಾಗವಾಗಿ ಹರಿದುಹೋಗಲು ಅವಕಾಶ ಮಾಡಿಕೊಟ್ಟರೆ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಲಿದೆ.

ಚರಂಡಿಯಲ್ಲಿ ತ್ಯಾಜ್ಯ:

ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ 200 ಕಿಮೀ ಚರಂಡಿ, 2 ಕಿಮೀ ಕೋಣೆನಾಲಾವಿದ್ದು, 2022 ಡಿಸೆಂಬರ್‌ ತಿಂಗಳಲ್ಲೇ ಸ್ವಚ್ಛತೆ ಆರಂಭಿಸಲಾಗಿತ್ತು. ಆದರೆ ನಗರಸಭೆಯಿಂದ ಸ್ವಚ್ಛತೆ ಮಾಡಿದ ಕಡೆಯೇ ಪುನಃ ಘನ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಹೀಗಾಗಿ ಚರಂಡಿ ಸ್ವಚ್ಛ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಈ ರೀತಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ವಿವಿಧ ರೋಗರುಜಿನೆಗಳೂ ಕೂಡಾ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ನಗರಸಭೆಯ ಜತೆಗೆ ಸಾರ್ವಜನಿಕರು ಮಳೆ ನೀರು ಸರಾಗವಾಗಿ ಹರಿದುಹೋಗಲು ಕೈ ಜೋಡಿಸಿ ಕೃತಕ ನೆರೆ ಉಂಟಾಗದಂತೆ ಆದ್ಯತೆ ನೀಡುವ ಅವಶ್ಯಕತೆಯಿದೆ.

 

Mangaluru rains: ಮುಂಗಾರು ಮಳೆ ಪ್ರವಾಹಕ್ಕೆ ಸುಳ್ಯದಲ್ಲಿ ವ್ಯಕ್ತಿ ನೀರುಪಾಲು!

ಖಾಸಗಿ ನಿವೇಶನಗಳಲ್ಲಿ ಮನೆ, ಕಟ್ಟಡ ಇಲ್ಲದೇ ಇದ್ದರೆ ಸ್ವಚ್ಛವಾಗಿ ಇಡಬೇಕು. ಗಿಡಗಂಟಿ ಬೆಳೆಯಲು ಮಾಲಿಕರು ಅವಕಾಶ ನೀಡಕೂಡದು. ತ್ಯಾಜ್ಯಗಳನ್ನು ಎಸೆಯುವ ಸ್ಥಳಗಳಾಗಬಾರದು. ಖಾಲಿ ನಿವೇಶನದಲ್ಲಿ ಗಿಡಗಂಟಿ ಬೆಳೆದಿದ್ದರೆ, ತ್ಯಾಜ್ಯಗಳು ತುಂಬಿದ್ದರೆ ಕಾನೂನಾತ್ಮಕವಾಗಿ ನೋಟಿಸ್‌ ನೀಡಲು, ಕ್ರಮವಹಿಸಲು ನಗರಸಭೆಗೆ ಅವಕಾಶವಿದೆ.

ಡಾ. ಉದಯ ಶೆಟ್ಟಿ, ಕಾರವಾರ ಸಿಎಂಸಿ, ಪೌರಾಯುಕ್ತ

ನಮ್ಮ ಮನೆಯ ಎದುರೇ ಖಾಲಿ ಇರುವ ನಿವೇಶನವಿದೆ. ಗಿಡಗಂಟಿಗಳು ಬೆಳೆದು ನಿಂತಿವೆ. ರಾತ್ರಿ ವೇಳೆ ಅಲ್ಲಿ ಕಸ ಎಸೆಯಲಾಗುತ್ತದೆ. ಭಾರಿ ಮಳೆಯಾದರೆ ಆ ಖಾಲಿ ಜಾಗದಲ್ಲಿ ನೀರು ತುಂಬಿ ನಮ್ಮ ಮನೆಯ ಆವಾರದೊಳಗೆ ಪ್ರವೇಶಿಸುತ್ತದೆ. ತ್ಯಾಜ್ಯವೆಲ್ಲಾ ಮನೆಯ ಆವಾರದೊಳಗೆ ಸೇರಿಕೊಳ್ಳುತ್ತದೆ.

ರಾಘವೇಂದ್ರ ನಾಯ್ಕ, ಖಾಲಿ ನಿವೇಶನದ ಎದುರಿನ ನಿವಾಸಿ

click me!