Silver Jubilee Celebration: ಕೊಪ್ಪಳ ಜಿಲ್ಲೆಗೆ 25ನೇ ವರ್ಷದ ರಜತ ವೈಭವ

By Kannadaprabha News  |  First Published Mar 10, 2023, 12:25 PM IST

ಕೊಪ್ಪಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾವಿರಾರು ವರ್ಷಗಳುದ್ದಕ್ಕೂ ತನ್ನದೇ ಛಾಪು ಮೂಡಿಸುತ್ತಲೇ ಬಂದಿರುವ ಕೊಪ್ಪಳ ಈಗ ಜಿಲ್ಲಾ ಕೇಂದ್ರವಾಗಿ ಬೆಳೆದು ಹೆಮ್ಮರವಾಗುತ್ತಿದೆ. ರಾಯಚೂರ ಜಿಲ್ಲೆ ವ್ಯಾಪ್ತಿಯಲ್ಲಿ ಇದ್ದ ಕೊಪ್ಪಳ 1997ರ ಆ. 24 ರಂದು ನೂತನ ಜಿಲ್ಲೆಯಾಗಿ ರಚನೆಯಾಯಿತು. ಜಿಲ್ಲಾ ರಚನಾ ಹೋರಾಟ ಸಮಿತಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ಬಳಿಕ ಜಿಲ್ಲೆ ಘೋಷಣೆಯಾಯಿತು. ಆಗಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ ಘೋಷಣೆ ಮಾಡುವ ಮೂಲಕ ಇಲ್ಲಿನ ಜನದನಿಗೆ ಗೌರವ ನೀಡಿದರು.


ಸೋಮರಡ್ಡಿ ಅಳವಂಡಿ

 ಕೊಪ್ಪಳ (ಮಾ.10) : ಕೊಪ್ಪಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾವಿರಾರು ವರ್ಷಗಳುದ್ದಕ್ಕೂ ತನ್ನದೇ ಛಾಪು ಮೂಡಿಸುತ್ತಲೇ ಬಂದಿರುವ ಕೊಪ್ಪಳ ಈಗ ಜಿಲ್ಲಾ ಕೇಂದ್ರವಾಗಿ ಬೆಳೆದು ಹೆಮ್ಮರವಾಗುತ್ತಿದೆ.

Tap to resize

Latest Videos

undefined

ವ್ಯಾಪಾರದಿಂದ ಹಿಡಿದು ಧರ್ಮದ ಕಾರಣಕ್ಕಾಗಿ, ಅಶೋಕ ಶಿಲಾಶಾಸನದ ಹಿರಿಮೆಯಿಂದ ಹಿಡಿದು ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮೂಲಕ ತನ್ನ ಖ್ಯಾತಿ ಮತ್ತು ಛಾಪನ್ನು ವಿಶ್ವದಾದ್ಯಂತ ಪಸರಿಸುತ್ತಿದೆ.

ಫೆಬ್ರವರಿಯಲ್ಲಿ ಕೊಪ್ಪಳ ರಜತ ಸಂಭ್ರಮ, ಆನೆಗೊಂದಿ ಉತ್ಸವ: ಸಚಿವ ಆನಂದ ಸಿಂಗ್

ಸ್ವಾತಂತ್ರ್ಯ ಪೂರ್ವದಲ್ಲಿಯೂ ಕೊಪ್ಪಳ ಜಿಲ್ಲೆಯಾಗಿತ್ತು. ಸ್ವಾತಂತ್ರ್ಯ ನಂತರ ಕೊಪ್ಪಳ ರಾಯಚೂರು(Raichur) ಜಿಲ್ಲೆಯ ಭಾಗವಾಗಿತ್ತು. ಸುಮಾರು 200 ಕಿಮೀ ದೂರದ ರಾಯಚೂರು ಜಿಲ್ಲಾ ಕೇಂದ್ರಕ್ಕೆ ಅಲೆದು ಕೊಪ್ಪಳ(Koppal) ಭಾಗದ ಜನರು ಸುಸ್ತಾಗಿದ್ದರು. ಇದು ಕ್ರಮೇಣ ಹೋರಾಟಕ್ಕೆ ಅಣಿಯಾಗುವಂತೆ ಮಾಡಿತು. ಪ್ರತ್ಯೇಕವಾಗಿ ಕೊಪ್ಪಳ ಜಿಲ್ಲೆಯಾಗಬೇಕು ಎನ್ನುವ ಕೂಗು ಮೊದ ಮೊದಲು ನಿಧಾನಕ್ಕೆ ಕೇಳಿದ್ದು, ನಂತರ ಜೋರಾಗ ತೊಡಗಿತು. ಕೂಗು ಗಂಭೀರ ಸ್ವರೂಪ ಪಡೆದು ದೊಡ್ಡ ಹೋರಾಟಗಳೇ ಕೊಪ್ಪಳದಲ್ಲಿ ನಡೆಯ ತೊಡಗಿದವು. ಸಾಲು ಸಾಲು ಧರಣಿಗಳು, ಪ್ರತಿಭಟನೆ, ರಸ್ತಾ ರೋಖೋ ಸೇರಿದಂತೆ ಹತ್ತಾರು ಹೋರಾಟಗಳು ನಡೆದವು.

ನೂತನ ಜಿಲ್ಲೆ ಉದಯ:

ರಾಯಚೂರ ಜಿಲ್ಲೆ ವ್ಯಾಪ್ತಿಯಲ್ಲಿ ಇದ್ದ ಕೊಪ್ಪಳ 1997ರ ಆ. 24 ರಂದು ನೂತನ ಜಿಲ್ಲೆಯಾಗಿ ರಚನೆಯಾಯಿತು. ಜಿಲ್ಲಾ ರಚನಾ ಹೋರಾಟ ಸಮಿತಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ಬಳಿಕ ಜಿಲ್ಲೆ ಘೋಷಣೆಯಾಯಿತು. ಆಗಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ ಘೋಷಣೆ ಮಾಡುವ ಮೂಲಕ ಇಲ್ಲಿನ ಜನದನಿಗೆ ಗೌರವ ನೀಡಿದರು.

4 ತಾಲೂಕು ಕೇಂದ್ರಗಳನ್ನು ಒಳಗೊಂಡು ರಚನೆಯಾದ ಜಿಲ್ಲೆಯಲ್ಲಿ ಈಗ ಮತ್ತೆ ಮೂರು ನೂತನ ತಾಲೂಕು ಸೇರಿ 7ಕ್ಕೇರಿದೆ. ತುಂಗಭದ್ರಾ ಜಲಾಶಯ, ಹಿರೇಹಳ್ಳ ಜಲಾಶಯಗಳಿಂದಾಗಿ ಜಿಲ್ಲೆ ನೀರಾವರಿ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಸಮೃದ್ಧವಾಗಿದೆ. ಅರ್ಧ ನೀರಾವರಿ ಮತ್ತು ಇನ್ನರ್ಧ ಮಳೆಯಾಶ್ರಿತ ಪ್ರದೇಶ ಹೊಂದಿದೆ. ಅಭಿವೃದ್ಧಿಯ ವೇಗ ಹೇಳಿಕೊಳ್ಳುವಷ್ಟುಇಲ್ಲ. ಆದರೂ ಪ್ರಗತಿ ಪಥದಲ್ಲಿ ಸಾಗುತ್ತಿರುವುದು ದಿಟ.

ನೀರಾವರಿಗೆ ವಿಪುಲ ಅವಕಾಶ ಇದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದ ನೀರಾವರಿಯಾಗಿಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದರೂ ನೀರಾವರಿ ಆಗಿಲ್ಲ. ಕೊಪ್ಪಳ ಏತ ನೀರಾವರಿ ಯೋಜನೆ ಈಗೀಗ ವೇಗ ಪಡೆದುಕೊಂಡಿದ್ದು, ಇನ್ನೂ ರೈತರ ಭೂಮಿಗೆ ನೀರು ಬರಬೇಕಾಗಿದೆ.

ಗವಿಸಿದ್ಧೇಶ್ವರ ಸ್ವಾಮಿಗಳು ಜಲದೀಕ್ಷೆ ಕಾರ್ಯಕ್ರಮದ ಮೂಲಕ ಜಲಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಹಲವು ಕೆರೆಗಳ ಪುನಶ್ಚೇತನ ಮಾಡಲಾಗಿದೆ. ಹಿರೇಹಳ್ಳವನ್ನು ಪುನಶ್ಚೇತನ ಮಾಡುವಲ್ಲಿ ಶ್ರೀಗಳು ವಹಿಸಿದ ಮುತುವರ್ಜಿ ಮಾದರಿಯಾಗಿದೆ. ನಟ ಯಶ್‌ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯನ್ನು ಅಭಿವೃದ್ಧಿ ಮಾಡಿರುವುದು ದಾಖಲಾರ್ಹ ಸಂಗತಿ.

ಮೆಡಿಕಲ್‌ ಕಾಲೇಜು, ತಳಕಲ್‌ ಬಳಿ ಎಂಜಿನಿಯರಿಂಗ್‌ ಕಾಲೇಜು, ಮುನಿರಾಬಾದ್‌ ಬಳಿ ತೋಟಗಾರಿಕಾ ಕಾಲೇಜು ಜಿಲ್ಲೆಯಲ್ಲಿನ ಶೈಕ್ಷಣಿಕ ಪ್ರಗತಿಗೆ ಸಾಕ್ಷಿಯಾಗಿವೆ. ಈಗಾಗಲೇ ಖಾಸಗಿಯಾಗಿ ಇರುವ ಏರೋಡ್ರೋಮ್‌ ಜತೆಗೆ ಸರ್ಕಾರದಿಂದಲೂ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕಾರ್ಯಕ್ಕೆ ಸರ್ಕಾರÜ ಅಸ್ತು ಎಂದಿದ್ದು, ಕಾರ್ಯಗತವಾಗಬೇಕಿದೆ.

ಪ್ರಗತಿಯಲ್ಲಿ ಪ್ರವಾಸೋದ್ಯಮ

ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಕ್ಷಿಪ್ರಕ್ರಾಂತಿಯಾಗುತ್ತಿದೆ.ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದರಿಂದ ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಬೆಳವಣಿಗೆಯಾಗಲಿದೆ. ಅಂಜನಾದ್ರಿ ಬೆಟ್ಟಕ್ಕೆ ಹಂಪಿಯಷ್ಟೇ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎನ್ನುವುದು ಗಮನಾರ್ಹ. ಆನೆಗೊಂದಿ, ಪಂಪಾಸರೋವರ, ವಾಲಿ ಸುಗ್ರೀವ ಬೆಟ್ಟ, ಶ್ರೀರಾಮನಿಗಾಗಿ ಕಾದಿರುವ ಶಬರಿ ಸ್ಥಳಗಳು ಅಭಿವೃದ್ಧಿಯಾಗಬೇಕಿದೆ.

ಹುಲಿಗೆಮ್ಮಾ ದೇವಿ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯಂದು ಲಕ್ಷಾಂತರ ಜನರು ಆಗಮಿಸುತ್ತಾರೆ. ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಹಾಗೂ ಅನೇಕ ಜನಮುಖಿ ಕಾರ್ಯಗಳಿಂದ ಬೆಳೆಯುತ್ತಿರುವ ಗವಿಮಠದಿಂದಾಗಿ ಪ್ರವಾಸೋದ್ಯಮದಲ್ಲಿ ಕ್ಷಿಪ್ರಕ್ರಾಂತಿ ಆಗುತ್ತಿದೆ.

ಕೊಪ್ಪಳ ಕುರಿತು ಒಂದಷ್ಟು

ಕೊಪ್ಪಳ ಜಿಲ್ಲೆಯು ರಾಯಚೂರು ಜಿಲ್ಲೆಯಿಂದ ಬೇರ್ಪಟ್ಟು ನೂತನ ಜಿಲ್ಲೆಯಾಗಿ ರಚನೆಯಾಗಿದೆ.

ಇದು 30 03 * 16 00 ’09 * 15 ನಡುವೆ ಉತ್ತರ ಅಕ್ಷಾಂಶ ಹಾಗೂ ಪೂರ್ವ ರೇಖಾಂಶದಲ್ಲಿ’ 10 76 * 48 30 ’75 * 47 ಇದೆ. ಕೊಪ್ಪಳ,ಗಂಗಾವತಿ, ಕುಷ್ಟಗಿ ಯಲಬುರ್ಗಾ ಹಾಗೂ ಹೊಸದಾಗಿ ರೂಪುಗೊಂಡ ಕನಕಗಿರಿ, ಕಾರಟಗಿ, ಕುಕನೂರು ತಾಲೂಕುಗಳು ಒಳಗೊಂಡಿದೆ. ದಕ್ಷಿಣದಲ್ಲಿ ಬಳ್ಳಾರಿ ಜಿಲ್ಲೆ, ಉತ್ತರ ದಿಕ್ಕಿನಲ್ಲಿ ಬಾಗಲಕೋಟೆ, ಪಶ್ಚಿಮದಲ್ಲಿ ಗದಗ, ಪೂರ್ವದಲ್ಲಿ ರಾಯಚೂರು ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯು ಸುತ್ತುವರೆದಿದೆ. ಕೊಪ್ಪಳ ಜಿಲ್ಲೆಯು ಕೇಂದ್ರ ವಿಶ್ವ ಪರಂಪರೆಯಾದ ಹಂಪಿಯಿಂದ ಹತ್ತಿರವಾಗಿದೆ.

ಕೊಪ್ಪಳದ ಮೂಲ:

ಕೊಪ್ಪಳವನ್ನು ಶಾತವಾಹನರು, ಗಂಗರು, ಹೊಯ್ಸಳರು ಮತ್ತು ಚಾಲುಕ್ಯ ರಾಜವಂಶಗಳ ರಾಜ್ಯಕ್ಕಿಂತ ಮೊದಲು ಪತ್ತೆ ಹಚ್ಚಲಾಗಿದೆ. ಕೊಪ್ಪಳ ಎಂಬ ಹೆಸರು ವಿದಿತ ಮಹಾ ಕೊಪಣ ನಗರ ಎಂದು (814-878 ಕ್ರಿಶ ರಾಜ ನೃಪತುಂಗರ ಕಾಲದಲ್ಲಿ) ಮಹಾನ್‌ ಕವಿ ಕವಿರಾಜಮಾರ್ಗ ಕಾವ್ಯದಿಂದ ಆಯ್ಕೆ ಮಾಡಲಾಗಿದೆ. ಅಶೋಕನ ಕಾಲದಲ್ಲಿ ಜೈನ ಧರ್ಮವು ಈ ಪ್ರದೇಶದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿತು. ಆದ್ದರಿಂದ ಇದನ್ನು ಜೈನಕಾಶಿ ಎಂದು ಕರೆಯಲಾಗುತ್ತದೆ. ಪ್ರಸ್ತುತ ಕೊಪ್ಪಳದ ಗವಿ ಮಠವು ಪ್ರಮುಖ ಆಕರ್ಷಣೆ ಹೊಂದಿದೆ.

ಗಂಗಾವತಿ ತಾಲೂಕಿನ ಆನೆಗೊಂದಿಯು ವಿಜಯನಗರ ರಾಜವಂಶದ ಮೊದಲ ರಾಜಧಾನಿಯಾಗಿತ್ತು. ಹಳೆಯ ಅರಮನೆ ಮತ್ತು ಕೋಟೆ ಆನೆಗೂಂದಿಯಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಕೊಪ್ಪಳ ಜಿಲ್ಲೆಯ ಇತರ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಹುಲಿಗಿ, ಕನಕಗಿರಿ, ಇಟಗಿ, ಕುಕನೂರ, ಇಂದ್ರಕೀಲ ಪರ್ವತ, ಪುರ, ಚಿಕ್ಕಬೇನಕಲ್‌ ಮತ್ತು ಹಿರೆಬೇನಕಲ್‌ ಇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೊಪ್ಪಳವು ಹೈದರಾಬಾದ್‌ ನಿಜಾಮರ ಅಡಿಯಲ್ಲಿತ್ತು ಹಾಗೂ ಹೈದರಾಬಾದ್‌ ಪ್ರದೇಶದ ಭಾಗವಾಗಿತ್ತು. ಭಾರತಕ್ಕೆ 15ನೇ ಆಗಸ್ಟ್‌ 1947 ರಂದು ಸ್ವಾತಂತ್ರ್ಯ ಸಿಕ್ಕರೂ, ಈ ಪ್ರದೇಶದ ಜನರು ಹೈದರಾಬಾದ್‌ ನಿಜಾಮರ ಹಿಡಿತದಿಂದ ಸ್ವಾತಂತ್ರ್ಯವನ್ನು ಗಳಿಸಲು ಮತ್ತಷ್ಟುಹರಸಾಹಸ ಮಾಡಿ 17ನೇ ಸೆ 1948 ರಲ್ಲಿ ಹೈದರಾಬಾದ್‌ ಕರ್ನಾಟಕ ನಿಜಾಮರಿಂದ ಬಿಡುಗಡೆಗೊಂಡಿತು.

ಕೊಪ್ಪಳ ತಾಲೂಕು, ಹೋಬಳಿ, ಗ್ರಾಪಂ ಮಾಹಿತಿ

  • ತಾಲೂಕುಗಳ ಸಂಖ್ಯೆ: 4,
  • ಹೊಸದಾಗಿ ರೂಪುಗೊಂಡ ತಾಲೂಕುಗಳು 3 ಸೇರಿ 7 ತಾಲೂಕು ಕೇಂದ್ರಗಳು
  • ಹೋಬಳಿ ಸಂಖ್ಯೆ: 20
  • ಜನವಸತಿ ಇರುವ ಹಳ್ಳಿಗಳ ಸಂಖ್ಯೆ:594
  • ಜನವಸತಿ ಇಲ್ಲದ ಹಳ್ಳಿಗಳ ಸಂಖ್ಯೆ:35
  • ನಗರಸಭೆ, ಪುರಸಭೆ, ಪಪಂ: 9
  • ಗ್ರಾಮ ಪಂಚಾಯತ್‌ ಸಂಖ್ಯೆ:153

ಸಿಂಗಾರಗೊಂಡ ಕೊಪ್ಪಳ

  • ನಗರಸಭೆಯಿಂದ ಗಲ್ಲಿಗಲ್ಲಿಯಲ್ಲಿಯೂ ದೀಪಾಲಂಕಾರ
  • ವಿಜಯಪ್ರಕಾಶ ಸೇರಿ ಖ್ಯಾತಗಾಯಕರಿಂದÜ ಗಾನಸುಧೆ
  • ಸ್ಥಳೀಯ ಕಲಾವಿದರಿಂದಲೂ ವಿವಿಧ ಸಂಗೀತ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಗೆ 25 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಜತ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಿದ್ದು,ಇಡೀ ಕೊಪ್ಪಳವನ್ನು ಸಿಂಗಾರಗೊಳಿಸಲಾಗಿದೆ. ಆದರೆ, ರಾಜಕೀಯ ನಾಯಕರ ಪ್ಲೆಕ್ಸ್‌ಗಳ ಅಬ್ಬರವೇ ಜೋರಾಗಿದೆ. ವಿದ್ಯುತ ದೀಪಗಳ ಅಲಂಕಾರ ಮಾಡಲಾಗಿದೆ.

ಕೊಪ್ಪಳ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿ ಪ್ರಾಣೇಶ

ಕೊಪ್ಪಳ ಸಾಹಿತ್ಯ ಭವನದಲ್ಲಿ ವಿವಿಧ ಗೋಷ್ಠಿಗಳು ನಡೆದರೆ, ಬೆಳಗ್ಗೆಯೇ ಮೆರವಣಿಗೆ ತಾಲೂಕು ಕ್ರೀಡಾಂಗಣದಲ್ಲಿ ಪ್ರಾರಂಭವಾಗುತ್ತದೆ. ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಸ್ಟಾಲ್‌ಗಳನ್ನು ಹಾಕಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ಹಾಗೂ ರಾತ್ರಿ 9.40 ರಿಂದ ಅನನ್ಯಭಟ್‌ ತಂಡದವರಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ಹಾಕಲಾಗಿದೆ.

click me!