ಕಾಫಿ ನಾಡಿಗೂ ಮಾಫಿ ನೀಡಲಿಲ್ಲ ಮಳೆರಾಯ!

By Kannadaprabha News  |  First Published Aug 11, 2019, 2:05 PM IST

ಕೊಡಗಿನಲ್ಲಿ ಕಳೆದ 45 ವರ್ಷದಲ್ಲಿ 6 ದಿನದ ಅವಧಿಯಲ್ಲಿ 30 ರಿಂದ 80 ಇಂಚು ಮಳೆ ಇದೇ ಮೊದಲು |  ಹವಾಮಾನ ಇಲಾಖೆಯನ್ನು ಹೊರತುಪಡಿಸಿದರೆ ಕಾಫಿ ಬೆಳೆಗಾರರು ಕಳೆದ ನೂರು ವರ್ಷಗಳ ದಿನವಾರು ಮಳೆಯ ದಾಖಲೆಯನ್ನು ಇಟ್ಟಿರುವುದನ್ನು ಪರಿಶೀಲಿಸಿದಾಗಲೂ ಇಂತಹ ಘಟನೆ ಹಿಂದೆ ಆಗಿಲ್ಲ |


ಕೊಡಗು (ಆ. 11): ಅಸಲೆ ಮಳೆಗೆ ಸಸಲು ಬೆಟ್ಟ ಹತ್ತಿದ್ವು’ ಈ ಗಾದೆ ನಮ್ಮಲ್ಲಿ ಬಹಳ ಚಾಲ್ತಿಯಲ್ಲಿದೆ. ಅದರಲ್ಲೂ ಸಕಲೇಶಪುರ, ಆಲೂರು, ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಆಶ್ಲೇಷ ಮಳೆ ವಾಡಿಕೆಗಿಂತಲೂ ಜಾಸ್ತಿ ಸುರಿದರೆ, ಕೆರೆ ಮತ್ತು ಹೊಳೆಯ ಪುಟ್ಟಪುಟ್ಟ ಮೀನುಗಳು ಕೋಡಿಯ ಜೊತೆಗೆ ಹರಿದು ಬರುವುದನ್ನು ಬಹುತೇಕ ಎಲ್ಲರೂ ನೋಡಿದ್ದೇವೆ.

'ನಿಮ್ಮ ರಕ್ಷಣೆ ನನ್ನ ಕರ್ತವ್ಯ' : ಪುಟ್ಟ ಮಕ್ಕಳಿಗಾಗಿ ಜೀವ ಪಣಕ್ಕಿಟ್ಟ ಈ 'ಹೀರೋ' ಯಾರು?

Tap to resize

Latest Videos

ಇದೇ ಆಶ್ಲೇಷ ಮಳೆ ಈ ಬಾರಿ ನಮ್ಮ ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ರಾಕ್ಷಸರೂಪಿಯಾಗಿದೆ. ವಾಯುಭಾರ ಕುಸಿತದ ಕಾರಣಗಳು ಏನೇ ಇದ್ದರೂ ಕಾಫಿ ನಾಡಿನಲ್ಲಿ ಈ ರೀತಿಯ ಮಳೆಸುರಿದದ್ದು ನೋಡೇ
ಇಲ್ಲ ಅನ್ನುತ್ತಾರೆ ಬಾಳ್ಳುಪೇಟೆಯ ಹಿರಿಯ ಕಾಫಿಬೆಳೆಗಾರರಾದ ಹಸುಗವಳ್ಳಿ ಮೋಹನ್ ಕುಮಾರರವರು.

ಕಳೆದ ನಲವತ್ತೈದು ವರ್ಷಗಳಲ್ಲಿ ಆರು ದಿನದ ಅವಧಿಯಲ್ಲಿ ಸುಮಾರು ಮುವ್ವತ್ತರಿಂದ ಎಂಬತ್ತು ಇಂಚು ಮಳೆಯಾಗಿರುವುದು ಇದೇ ಮೊದಲ ಬಾರಿ. ಹವಾಮಾನ ಇಲಾಖೆಯನ್ನು ಹೊರತುಪಡಿಸಿದರೆ ಕಾಫಿ ಬೆಳೆಗಾರರು ಕಳೆದ ನೂರು ವರ್ಷಗಳ ದಿನವಾರು ಮಳೆಯ ದಾಖಲೆಯನ್ನು ಇಟ್ಟಿರುವುದನ್ನು ಪರಿಶೀಲಿಸಿದಾಗಲೂ ಇಂತಹ ಘಟನೆ ಹಿಂದೆ ಆಗಿಲ್ಲ. ಸಕಲೇಶಪುರದಲ್ಲಿ ಹರಿಯುವ ಜೀವನದಿ ಹೇಮಾವತಿ ನಾಲ್ಕು ದಿನಗಳಲ್ಲಿ ತನ್ನ ಮಟ್ಟ ಏರಿಸಿಕೊಂಡ ಬಗೆಯಂತೂ ಪ್ರಕೃತಿಯ ರೌದ್ರತೆಗೆ ಸಾಕ್ಷಿ.

ನೇತ್ರಾವತಿ ಪ್ರವಾಹಕ್ಕೆ ಕೊಚ್ಚಿಹೋದ ಧರ್ಮಸ್ಥಳದ ಸ್ನಾನಘಟ್ಟ

ಒಂದು ಸಮಾಧಾನದ ಸಂಗತಿ ಅಂದರೆ ಹೇಮೆ ಸಕಲೇಶಪುರವನ್ನು ಪೂರ್ಣ ಸುತ್ತುವರೆದಿದ್ದರೂ, ಪ್ರಳಯರೂಪಿ ಮಳೆ ಸುರಿಯುತ್ತಿದ್ದರೂ ಜೀವಹಾನಿಯಾದ ದಾಖಲೆಯಾಗಿಲ್ಲ. ಈ ವಿಚಾರಕ್ಕೆ ನಾವು ಪ್ರಕೃತಿಗೆ ಋಣಿಯಾಗಿರಲೇಬೇಕು. ಆದರೆ ಇಲ್ಲಿನ ಜನಜೀವನ, ಕೃಷಿ ಬದುಕು ಸಂಪೂರ್ಣ ಬುಡಮೇಲಾಗಿದೆ. ರಸ್ತೆ, ಸೇತುವೆಗಳು ಮತ್ತೆ ಸರಿಪಡಿಸಲಾಗದ ಬಗೆಯಲ್ಲಿ ಹಾಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಐದಾರು ಅಡಿ ಆಳದ ಗುಂಡಿಗಳು ಇನ್ನೇನು ರಸ್ತೆ ಕುಸಿಯಬಹುದೆನ್ನುವ ಭಯಾನಕ ಸನ್ನಿವೇಶವನ್ನು ಎದುರು ನೋಡುತ್ತಿವೆ.

ಸಕಲೇಶಪುರದಿಂದ ಮಂಗಳೂರು ತಲುಪುವ ಎಲ್ಲಾ ಘಾಟಿ ದಾರಿಗಳು ಭಾಗಶಃ ಗುಡ್ಡ ಕುಸಿದು ಬಂದ್ ಆಗಿವೆ. ಈ ರೀತಿಯ ಕುಸಿಯುವಿಕೆಗೆ ಯೋಜನೆಗಳ ಅವೈಜ್ಞಾನಿಕತೆಯೇ ಕಾರಣ ಎನ್ನುತ್ತಾ ಇಲ್ಲಿನ ಸ್ಥಳೀಯರು ಸರ್ಕಾರದ ಮೇಲೆ ಆಕ್ರೋಶಗೊಂಡಿದ್ದಾರೆ. ಬಹುತೇಕ ಕೆರೆಕಟ್ಟೆಗಳು ಒಡೆದು ಗದ್ದೆಗಳು ನಿರ್ನಾಮವಾಗಿವೆ. ಬಹುಶಃ ಕಳೆದ ವರ್ಷದ ಕೊಡಗಿನ ಹಾನಿಯ ಸ್ವರೂಪದಲ್ಲೇ ಇಲ್ಲೂ ಕಾಫಿತೋಟಗಳು, ಹರೆಗಳು,ಬಯಲೂ ಕುಸಿದು, ಜರಿದು ಸ್ಥಳ ಬದಲಾವಣೆಯಾಗಿವೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಕ್ಕೆ ಹಾದಿಮಾಡುತ್ತದೆ ಎನ್ನುವ ಆತಂಕದಲ್ಲಿದ್ದಾರೆ ಇಲ್ಲಿನ ಸ್ಥಳೀಯರು.

ಬೆಳಿಗ್ಗೆ ಎದ್ದು ಬಾಗಿಲು ತೆರೆದರೆ ಕೆಳಮನೆಯಲ್ಲಿ ನೀರೋ ನೀರು!

ಕಳೆದ ವರ್ಷವೇ ಮಹಾಮಳೆ ಎಂದುಕೊಂಡಿದ್ದರೆ ಈ ಭಾರಿಯ ಮಳೆ ಅತೀ ಭೀಕರ. ಈ ಬಾರಿ ಮಳೆಯ ವಿಚಿತ್ರವೆಂದರೆ ‘ಮಳೆ ಕಡಿಮೆ ಸುರಿಯುವ’(ಅರೆಮಲೆನಾಡು) ಪ್ರದೇಶಗಳಲ್ಲಿ ದಾಖಲೆಯ ಅತ್ಯಧಿಕ ಮಳೆಯಾಗಿದೆ. ಉದಾಹರಣೆಗೆ ಆಲೂರು, ಬೇಲೂರು, ಚಿಕ್ಕಮಗಳೂರಿನ ಕೆಲಭಾಗಗಳು ಬಾರ್ಡರ್ ಏರಿಯಾಗಳೆಂದೇ ಶತಮಾನಗಳಿಂದಲೂ ಗುರುತಿಸಿಕೊಂಡಿವೆ. ಆದರೆ ಇದೇ ಜಾಗಗಳು ಈ ಬಾರಿ ಶತಮಾನದ ಅತ್ಯಧಿಕ ಮಳೆಯನ್ನು ದಾಖಲಿಸಿವೆ.

2005 ರಲ್ಲಿ ಒಂದೇ ದಿನದಲ್ಲಿ ಸುರಿದ ಐದು ಇಂಚುಮಳೆಯೇ ಅತೀ ಎನಿಸಿದರೆ ಈ ಭಾರಿ ಇಪ್ಪತ್ನಾಲ್ಕು  ತಾಸಿನಲ್ಲಿ ಒಂಬತ್ತು ಇಂಚು ಮಳೆಯಾಗಿದೆ. ಅಲ್ಲಿಗೆ ನಾಲ್ಕು ದಿನದಲ್ಲಿ ಸುರಿದಮಳೆ ಇಡೀ ಅರ್ಧ ವರ್ಷ ಸುರಿವ ಮಳೆಗೆ ಸಮವಾಗಿದೆ. ಭೂಮಿ ತನ್ನ ಸ್ಯಾಚೇರೇಷನ್ ಮಟ್ಟವನ್ನು ತಲುಪಿ ಅಥವಾ ಮೀರಿ ಇಲ್ಲಿಯ ಬೋರವೆಲ್ಲುಗಳು, ಬಾವಿಗಳು ಉಕ್ಕಿ ಹರಿಯುತ್ತಿವೆ.

ಹತ್ತು ದಿನದ ಹಿಂದೆ ನೀರನ್ನು ಕಡಿಮೆ ಬಳಸಿ ಎನ್ನುತ್ತಿದ್ದ ಮನೆಗಳು ಈಗ ನೀರಿನ ಯಮ ರೂಪಕ್ಕೆ ತತ್ತರಿಸಿಹೋಗಿವೆ. ಅನುಭವಿ ಬೆಳೆಗಾರ ಮೋಹನ್ ಕುಮಾರ್ ಎಚ್ ಎನ್ ಅವರ ಪ್ರಕಾರ ಇದು ಜಾಗತಿಕ ತಾಪಮಾನ ಏರಿಕೆಯ ನೇರ ಪರಿಣಾಮ. ಇನ್ನು ಕಾಫಿ ವಲಯದಲ್ಲಂತೂ ವ್ಯವಸ್ಥೆ ಬುಡಮೇಲಾಗಿದೆ.

ಬೇಲಿ, ಗೆರೆ, ಕಣ, ಗೋದಾಮು, ಗೇಟುಗಳು ಸಂಪೂರ್ಣ ಜಖಂಗೊಂಡಿವೆ.ಸಮತಟ್ಟಿನ ತೋಟಗಳಿಗೆ ಒಂದು ಬಗೆಯ ಸಮಸ್ಯೆಯಾದರೆ ಸಾಂಪ್ರದಾಯಿಕ ಇಳಿಜಾರು ತೋಟಗಳು ಪೂರ್ಣ ಕೊಚ್ಚಿಹೋಗಿವೆ. ಕಾಫಿಯಲ್ಲಿ ’ವೆಟ್ ಫೂಟ್’ರೋಗ ಈಗಾಗಲೇ ಶುರುವಾಗಿದ್ದು ಇದು ಬೇರುಗಳ ಉಸಿರಾಟ ಕ್ರಿಯೆ ನಿಂತು,ಬೇರು ಸತ್ತು ಗಿಡ ನಾಶವಾಗುವ ರೋಗ.ಕೆಲವೇ ದಿನಗಳಲ್ಲಿ ತೋಟವೇ ಪೂರ್ಣ ಹಾಳಾಗುವ ರೋಗ ಇದಾಗಿದೆ.

ಕಾಯಿ ಉದುರುವುದು,ಕಾಂಡ ಕೊಳೆ,ಎಲೆಕೊಳೆ ಯ ರೋಗಗಳಿಂದಾದ ಹೊಡೆತಕ್ಕೆ ಚೇತರಿಸಿಕೊಳ್ಳಲು ಬೆಳೆಗಾರ ಎರಡು ವರ್ಷ ಹೋರಾಟ ಮಾಡಬೇಕಾಗುತ್ತದೆ. ವೆಟ್ಫೂಟಿನಿಂದ ತೋಟಕ್ಕೆ ತೋಟವೇ ನಾಶವಾಗುವ ಸಾಧ್ಯತೆಯಿದೆ.
ಇನ್ನೂ ಈ ಭಾಗದ ಪ್ರಮುಖ ಬೆಳೆ ಕರಿಮೆಣಸಿನ ಹಾನಿ ನೋಡಲು ಯಮ ಮಳೆ ನಿಂತು ವಾರ ಕಳೆಯಬೇಕು. ಇಡೀ ಬೀಳು ಸೊರಗಿ ನೆಲ ಕಾಣುತ್ತವೆ.ಕೊಳೆ ರೋಗ ಅತ್ಯಂತ ಸಾಮಾನ್ಯ. ಸೂಕ್ಷ್ಮ ಬೆಳೆ ಏಲಕ್ಕಿಯೂ ಕೊಳೆಗೆ ಪೂರ್ಣ ನಾಶವಾಗುತ್ತವೆ.

ಬೇರು ತೊಳೆದ ಅಡಿಕೆಯನ್ನು ಉಳಿಸಿಕೊಳ್ಳುವುದೇ ಕಷ್ಟ. ಆದಾಯವಿರದ ಬತ್ತದ ಬೆಳೆ ಈ ಬಾರಿ ರೈತನನ್ನ ಮುಳುಗಿಸಿದೆ. ದೇಶದ ಬೆನ್ನೆಲುಬು ರೈತ ಎಲುಬಿನ ಹಂದರವಾಗುವುದಂತೂ ಶತಸಿದ್ದ. ಕೃಷಿಯನ್ನೇ ನೆಚ್ಚಿ ಬದುಕುತ್ತಿರುವ ಈ  ಭಾಗದ ಜನರು ಮತ್ತೆ ಸಹಜ ಸ್ತಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಗಬಹುದು.

ಕೃಷಿ ಆಧಾರಿತ ಅರ್ಥಿಕ ವ್ಯವಸ್ಥೆ ನಮ್ಮದಾಗಿರುವುದರಿಂದ ಒಟ್ಟು ವ್ಯವಸ್ಥೆಯೇ ಏರುಪೇರಾಗುವ ಸಂಭವವೂ ಇದೆ. ಆದರೆ ಇದೆಲ್ಲದರ ನಡುವೆಯೂ ಪ್ರತಿ ಊರಿನ ಯುವ ಪಡೆ ಯಾವುದೇ ವಿಪತ್ತುಗಳನ್ನುಎದುರಿಸಲು ಸಂಪೂರ್ಣ ಸನ್ನದ್ದವಾಗಿ ರುವುದು,ಸರ್ಕಾರವನ್ನೇ ಕಾಯದೇ ಸ್ವತಃ ನಿರ್ವಹಣೆಯಲ್ಲಿ ತೊಡಗಿರುವುದು ಮಾನವೀಯತೆ ಉಳಿದಿರುವುದಕ್ಕೆ ಸಾಕ್ಷಿಯಾಗಿ ತುಸು ಸಮಾಧಾನವೂ ಎನಿಸುತ್ತಿದೆ.

- ನಂದಿನಿ ಹೆದ್ದುರ್ಗ 

 

click me!