ಡಿಸಿಎಂ, ಮಂತ್ರಿಗಿರಿ ಪಣಕ್ಕಿಟ್ಟು ಸೆಣಸಾಟ | ತನ್ನನ್ನು ಸೋಲಿಸಿದ್ದ ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ | ಸಕ್ಕರೆ ಲಾಬಿಯ ಕ್ಷೇತ್ರದಲ್ಲಿ ಪ್ರವಾಹದ ದುಃಖ, ಪ್ರತಿಷ್ಠೆಯ ಮೇಲಾಟ | ಕಾಂಗ್ರೆಸ್ಸಿಗೆ ‘ಆಪರೇಷನ್ ಕಮಲ’ವೇ ಪ್ರಧಾನ ಅಸ್ತ್ರ
ಬೆಳಗಾವಿ (ನ. 26): ಕೃಷ್ಣಾ ನದಿಯ ಪ್ರವಾಹದಬ್ಬರಕ್ಕೆ ಅಥಣಿಯ ಜನ ತತ್ತರಿಸಿ ಹೋಗಿದ್ದಾರೆ. ಪ್ರವಾಹ ಮತ್ತು ಉಪಚುನಾವಣೆ ಇಲ್ಲಿನ ಜನರಿಗೆ ಅನಿರೀಕ್ಷಿತ. ಇಲ್ಲಿ ಪ್ರವಾಹ ಎದುರಿಸುವುದು ಸ್ಥಳೀಯರಿಗೆ ಅನಿವಾರ್ಯತೆ ಇತ್ತು. ಆದರೆ, ಉಪಚುನಾವಣೆ ಬೇಕಿತ್ತಾ ಎಂಬ ಪ್ರಶ್ನೆಯ ನಡುವೆಯೇ ಈಗ ಅಖಾಡ ಸಜ್ಜುಗೊಂಡಿದೆ.
ನಾಡಿಗೆ ಸಿಹಿ ನೀಡುವ ಕಬ್ಬು ಇಲ್ಲಿನ ಪ್ರಧಾನ ಬೆಳೆ. ಕೃಷ್ಣಾ ನದಿಯ ಪ್ರವಾಹ ಇಲ್ಲಿನ ಜನರ ಬಾಳಿನ ಸಿಹಿಯನ್ನು ನುಂಗಿ ಕಹಿಯಾಗಿ ಮಾಡಿಬಿಟ್ಟಿದೆ. ಈಗ ಸಂತ್ರಸ್ತರ ಸಂಕಟ, ಗೋಳಾಟವೊಂದೇ ಉಳಿದಿರುವುದು. ನೆರೆ ಬಾಧಿತರ ಕಣ್ಣೀರು ಇನ್ನೂ ಆರದಿರುವಾಗಲೇ ಉಪಚುನಾವಣೆಯ ಕಾವು ಏರತೊಡಗಿದೆ.
undefined
ಮೇಲ್ನೋಟಕ್ಕೆ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರುವಂತೆ ಕಂಡುಬರುತ್ತಿದೆ. ಆದರೆ, ರಾಜಕೀಯ ಒಳಹೊಡೆತಗಳು, ಉಭಯ ಪಕ್ಷಗಳ ಪ್ರಬಲ ಮುಖಂಡರ ತಂತ್ರಗಾರಿಕೆಗಳು ಯಾವ ರೀತಿಯ ಫಲಿತಾಂಶ ತೋರುತ್ತವೆ ಎಂಬುವುದನ್ನು ಊಹಿಸುವುದು ಕಷ್ಟಸಾಧ್ಯ. ಕಾಂಗ್ರೆಸ್ ಬಿಟ್ಟು ‘ಕಮಲ’ ಹಿಡಿದಿರುವ ಮಹೇಶ ಕುಮಟಳ್ಳಿ ಅವರು ಕೇವಲ ಇಲ್ಲಿ ಹೆಸರಿಗೆ ಮಾತ್ರ ಅಭ್ಯರ್ಥಿ. ಆದರೆ, ಕ್ಷೇತ್ರದಲ್ಲಿ ನೈಜ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನೇ ಬಿಂಬಿಸಲಾಗುತ್ತಿದೆ. ಇದರಿಂದ ಪಕ್ಷ ಮತ್ತು ಸವದಿ ಅವರ ವರ್ಚಸ್ಸು ಇಲ್ಲಿ ಕೆಲಸ ಮಾಡುವುದನ್ನು ಅಲ್ಲಗಳೆಯುವಂತಿಲ್ಲ. ಕ್ಷೇತ್ರದಾದ್ಯಂತ ಲಕ್ಷ್ಮಣ ಸವದಿ ಅವರೇ ಅಭ್ಯರ್ಥಿ ಮಹೇಶ ಅವರೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ.
ಬಿಜೆಪಿ ಗೆಲ್ಲದ ಕ್ಷೇತ್ರದಲ್ಲಿ ‘ಕಮಲ’ ಅರಳಿಸುತ್ತಾರಾ ಡಾಕ್ಟರ್?
ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನ ಮಹೇಶ ಕುಮಟಳ್ಳಿ ಆಯ್ಕೆಯಾಗಿದ್ದರು. ಈ ಮೂಲಕ 1999ರ ನಂತರ ಅಥಣಿ ಕ್ಷೇತ್ರವನ್ನು ‘ಕೈ’ ವಶ ಮಾಡಿಕೊಂಡಿತ್ತು. ಆದರೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದು ಕೇವಲ 14 ತಿಂಗಳಲ್ಲಿಯೇ ರಾಜೀನಾಮೆ ನೀಡಿದ ಪರಿಣಾಮ ಈಗ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವಂತಾಗಿದೆ.
ಅಥಣಿ ಕ್ಷೇತ್ರದಲ್ಲಿ ಇದುವರೆಗೆ ನಡೆದ ಚುನಾವಣೆಗಳಲ್ಲಿ ವೈಯಕ್ತಿಕ ವರ್ಚಸ್ಸು, ಸಕ್ಕರೆ ಲಾಬಿಯೇ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ, ಪ್ರಸಕ್ತ ಉಪಚುನಾವಣೆಯಲ್ಲಿ ಕದನ ಕಣ ಬದಲಾಗಿದೆ. ಮಾತ್ರವಲ್ಲ, ಪ್ರತಿಷ್ಠೆಯೇ ಪ್ರಮುಖವಾಗಿ ಕಾಣಿಸಿಕೊಳ್ಳಲು ಆರಂಭಿಸಿದೆ.
ಇನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಅಭ್ಯರ್ಥಿ ಗಜಾನನ ಮಂಗಸೂಳಿ ಮತದಾರರಿಗೆ ಹೊಸಮುಖ. ಆದರೆ, ಕಳೆದ ಬಾರಿ ಗೆದ್ದುಕೊಂಡಿದ್ದ ಈ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಎದುರಾಳಿಗೆ ಬಿಟ್ಟುಕೊಡದಂತೆ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.
ಎದುರಾಳಿಯ ಆಪರೇಷನ್ ಕಮಲದ ಅಂಶವನ್ನೇ ಪ್ರಧಾನವಾಗಿ ಮತದಾರರ ಮೇಲೆ ಬಿಂಬಿಸುವ ಯತ್ನ ನಡೆಯುತ್ತಿದೆ. ಆದರೆ, ಅದಕ್ಕೆ ಅಷ್ಟುಸುಲಭವಾಗಿ ಯಶಸ್ಸು ದೊರೆಯುವುದು ಕಷ್ಟಸಾಧ್ಯ. ಕಾರಣ ಎದುರಾಳಿಯಾಗಿ ಅವರು ಲಕ್ಷ್ಮಣ ಸವದಿ ಅವರನ್ನೇ ನೇರವಾಗಿ ಎದುರಿಸಬೇಕಾದ ಅನಿವಾರ್ಯತೆ ಇದೆ.
ಸವದಿಯೇ ಟ್ರಂಪ್‌ಕಾರ್ಡ್
2013ರಿಂದಲೂ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಬಿಜೆಪಿಯಿಂದ ಮತ್ತು ಮಹೇಶ ಕುಮಟಳ್ಳಿ ಕಾಂಗ್ರೆಸ್‌ನಿಂದ ಪರಸ್ಪರ ಎದುರಾಳಿಗಳಾಗಿದ್ದಾರೆ. 2013ರಲ್ಲಿ ಮಹೇಶ ಕುಮಟಳ್ಳಿ ಅವರನ್ನು ಸವದಿ 23 ಸಾವಿರಕ್ಕೂ ಅಧಿಕ ಮತಗಳಿಗಿಂತ ಸೋಲಿಸಿದ್ದರು. ಅದರಂತೆ 2018ರಲ್ಲಿಯೂ ಪರಸ್ಪರ ಎದುರಾಳಿಗಳಾಗಿದ್ದರು. ಈ ವೇಳೆ ಮಹೇಶ ಕುಮಟಳ್ಳಿ ಅವರು ಸತತ ಮೂರು ಬಾರಿ ಕ್ಷೇತ್ರವನ್ನು ಗೆದ್ದಿದ್ದ ಲಕ್ಷ್ಮಣ ಸವದಿ ಅವರನ್ನು ಪರಾಭವಗೊಳಿಸಿದ್ದರು. ಅದು ಕೇವಲ 2331 ಮತಗಳಿಂದ ಮಾತ್ರ.
ಪಂಪನ ನಾಡಿನ ಮರಿದುಂಬಿ ಯಾರು? ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ
ಆದರೆ, ಈಗಿನ ರಾಜಕೀಯ ಸ್ಥಿತ್ಯಂತರ ಮತ್ತು ಅನಿವಾರ್ಯ ಪರಿಸ್ಥಿತಿಯಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿರುವ ಅದೇ ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಲಕ್ಷ್ಮಣ ಸವದಿ ಅವರ ಹೆಗಲ ಮೇಲಿದೆ.
ಪಕ್ಷದ ಹೈಕಮಾಂಡ್ ಡಿಸಿಎಂ ಹುದ್ದೆಯನ್ನು ಅನಿರೀಕ್ಷಿತವಾಗಿ ದಯಪಾಲಿಸಿದ ಪರಿಣಾಮ, ಸವದಿ ಅವರು ಶತಾಯಗತಾಯ ಹೋರಾಟ ಮಾಡಲೇಬೇಕಿದೆ. ಇದರ ನಡುವೆ ಸಿಎಂ ಯಡಿಯೂರಪ್ಪ ಕೂಡ ಮುಂದಿನ ಮೂರೂವರೆ ವರ್ಷಗಳ ಕಾಲ ಡಿಸಿಎಂ ಆಗಿ ಲಕ್ಷ್ಮಣ ಸವದಿ ಅವರೇ ಮುಂದುವರೆಯಲಿದ್ದಾರೆ ಎಂದು ಹೇಳಿರುವುದು ಕ್ಷೇತ್ರದ ಮತದಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಅಥಣಿಗೆ ಇದು ಮೊದಲ ಉಪಸಮರ
1957ರಿಂದ ಆರಂಭವಾದ ಅಥಣಿ ಕ್ಷೇತ್ರಕ್ಕೆ ಇದುವರೆಗೆ 14 ವಿಧಾನಸಭೆ ಚುನಾವಣೆಗಳು ನಡೆದಿವೆ. ಈ ಪೈಕಿ ಎಂಟು ಬಾರಿ ಕಾಂಗ್ರೆಸ್, ಎರಡು ಬಾರಿ ಜನತಾ ಪರಿವಾರ, ಮೂರು ಬಾರಿ ಬಿಜೆಪಿ ಮತ್ತು ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕ್ಷೇತ್ರ ಆರಂಭವಾದಾಗಿನಿಂದಲೂ ಉಪಚುನಾವಣೆಯನ್ನೇ ಕಾಣದ ಇಲ್ಲಿ ಇದೇ ಮೊದಲ ಬಾರಿಗೆ ಉಪಚುನಾವಣೆ ನಡೆಯುತ್ತಿದೆ. ಜನತಾದಳದಿಂದ 1985ರಲ್ಲಿ ಲೀಲಾದೇವಿ ಆರ್. ಪ್ರಸಾದ್ ಅವರನ್ನು ಕ್ಷೇತ್ರದ ಜನರು ಆಯ್ಕೆ ಮಾಡಿದ್ದರು.
ತನ್ಮೂಲಕ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದರು. ಇದಾದ ನಂತರ 1994ರಲ್ಲಿ ಮತ್ತೊಮ್ಮೆ ಜನತಾದಳದಿಂದ ಆಯ್ಕೆಯಾದ ಲೀಲಾದೇವಿ ಅವರು ಸಚಿವೆಯಾದರು. ತದನಂತರ 2004ರಿಂದ ಸತತ ಮೂರು ಬಾರಿ ಲಕ್ಷ್ಮಣ ಸವದಿ ಅವರೇ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ಬೈ ಎಲೆಕ್ಷನ್ ಕಣ: ಬಿಜೆಪಿ ನಾಯಕರ ಮುಖದಲ್ಲಿ ಮಂದಹಾಸಕ್ಕೆ 10 ಕಾರಣ
ಲಿಂಗಾಯತರ ಮತ ನಿರ್ಣಾಯಕ
ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಮಹೇಶ ಕುಮಟಳ್ಳಿ ಅವರು ಕ್ಷೇತ್ರವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರಕ್ಕೆ ಪೂರ್ಣಾವಧಿ ಸೇವೆ ಮಾಡಬೇಕಿತ್ತು. ಜತೆಗೆ ಪ್ರವಾಹ ಸಂದರ್ಭದಲ್ಲಿ ಕೇಂದ್ರದಿಂದ ಮತ್ತಷ್ಟುಅನುದಾನ ತರಬೇಕಿತ್ತು ಎಂಬುದೇ ಅಭ್ಯರ್ಥಿಯ ಮೈನಸ್ ಪಾಯಿಂಟ್‌ಗಳು.
ಆದರೆ, ಕುಮಟಳ್ಳಿ ಅವರನ್ನು ಸಚಿವರನ್ನಾಗಿ ಮಾಡುವುದು ಮತ್ತು ಡಿಸಿಎಂ ಲಕ್ಷ್ಮಣ ಸವದಿ ಅವರನ್ನೇ ಮುಂದುವರಿಸುವುದಾಗಿ ಸಿಎಂ ಘೋಷಣೆ ಮಾಡಿರುವುದು ಕ್ಷೇತ್ರದ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗಿದೆ. ಜತೆಗೆ ಇವರಿಬ್ಬರೂ ಸಚಿವರಾಗಿ ಇರುವುದರಿಂದ ಕ್ಷೇತ್ರಕ್ಕೆ ಮತ್ತಷ್ಟುಅನುದಾನ ಬಂದು ಅಭಿವೃದ್ಧಿ ಕಾರ್ಯಗಳು ಹೆಚ್ಚಲಿವೆ ಎಂಬುವುದು ಮತದಾರರ ಲೆಕ್ಕಾಚಾರ.
ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಅವರ ಮತಗಳೇ ಇಲ್ಲಿ ನಿರ್ಣಾಯಕವಾಗಿವೆ. ಹೀಗಾಗಿ ಸಿಎಂ ಯಡಿಯೂರಪ್ಪ ಕೂಡ ಲಿಂಗಾಯತ ಮತಗಳು ಆ ಕಡೆ ಈ ಕಡೆ ವಾಲದಂತೆ ನೋಡಿಕೊಳ್ಳುವಂತೆ ನೀಡಿರುವ ಕರೆ ಕೂಡ ಕುಮಟಳ್ಳಿಗೆ ವರದಾನವಾಗಲಿದೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಕ್ಷೇತ್ರದಲ್ಲಿ ಹೊಸಮುಖ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದಲೇ ಅವರನ್ನು ಮತದಾರರು ಗುರುತಿಸಬೇಕಿದೆ. ಸದ್ಯ ಇವರನ್ನು ಗೆಲ್ಲಿಸಲು ಮಾಜಿ ಸಚಿವ ಎಂ.ಬಿ. ಪಾಟೀಲ ಅವರು ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದರಿಂದ ಮುಂದೆ ಕಾರ್ಯಕರ್ತರನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ಮತದಾರರ ಮನದಲ್ಲಿ ಮೂಡಿದರೆ ವರವಾಗಲಿದೆ. ಆದರೆ, ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಅವರಿಗೆ ಟಿಕೆಟ್ ಕೈತಪ್ಪಿರುವುದರಿಂದ ಅಲ್ಪಸಂಖ್ಯಾತರು ಮುನಿಸಿಕೊಂಡರೂ ಕಷ್ಟಸಾಧ್ಯವಾಗಲಿದೆ. ಆದರೆ, ಈ ಅಲ್ಪಸಂಖ್ಯಾತರ ಮತಗಳನ್ನು ಕಟ್ಟಿಹಾಕುವಲ್ಲಿ ಎಂ.ಬಿ.ಪಾಟೀಲರು ನಡೆಸುತ್ತಿರುವ ಕಾರ್ಯತಂತ್ರ ಮಂಗಸೂಳಿಗೆ ಲಾಭವಾಗಲಿದೆ.
ಕ್ಷೇತ್ರದಲ್ಲಿ ಜನತಾ ಪರಿವಾರ ಸೃಷ್ಟಿಸಿದ್ದ ನೆಲೆ ಈಗ ಸಂಪೂರ್ಣ ನಿರ್ನಾಮವಾಗಿದೆ. ಹೀಗಾಗಿ ಇಲ್ಲಿ ಉಳಿದಿರುವುದು ಕಾಂಗ್ರೆಸ್ ಮತ್ತು ಬಿಜೆಪಿಯ ಅಸ್ತಿತ್ವ ಮಾತ್ರ. ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ನಂತರ ಒತ್ತಾಯಪೂರ್ವಕವಾಗಿ ಹಿಂದೆ ಸರಿದಿದ್ದರಿಂದ ಇಲ್ಲಿ ಜೆಡಿಎಸ್‌ಗೆ ಅಧಿಕೃತ ಅಭ್ಯರ್ಥಿಯೇ ಇಲ್ಲ. ಹಾಗಾದರೆ ಜೆಡಿಎಸ್ ಒಳಗಡೆಯಿಂದ ಯಾವ ಪಕ್ಷಕ್ಕೆ ಬೆಂಬಲ ಸೂಚಿಸುತ್ತದೆಯೋ ಆ ಪಕ್ಷಗಳಿದೆ ಇಲ್ಲಿ ಲಾಭ ಖಚಿತ.
- ಬ್ರಹ್ಮಾನಂದ ಹಡಗಲಿ