ಶಿರಹಟ್ಟಿ (ಸೆ.3) : ಗುರುವಾರ ತಡರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಶಿರಹಟ್ಟಿ(Shirahatti)ತಾಲೂಕು ವ್ಯಾಪ್ತಿಗೆ ಒಳಪಡುವ ಕಡಕೋಳ(Kadakola) ಭಾಗದ ಕಪ್ಪತ್ತಗುಡ್ಡದಲ್ಲಿ ಕುಸಿತವಾಗಿದೆ. ಇಲ್ಲಿಯ ಮಾಲಿಂಗೇಶ್ವರ ಮಠ(Malingeshwar mutt)ದ ಪಕ್ಕದಲ್ಲಿ ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಉರುಳಿಬಿದ್ದಿವೆ. ಗುಡ್ಡದ ಅಕ್ಕಪಕ್ಕದಲ್ಲಿರುವ ರೈತರು ಆತಂಕ ಪಡುವಂತಾಗಿದೆ. ಶಿರಹಟ್ಟಿತಾಲೂಕಿನಾದ್ಯಂತ ಗುರುವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಎಡೆಬಿಡದೆ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಪ್ಪತ್ತಗುಡ್ಡದ ಪಕ್ಕದ ರೈತರ ಜಮೀನುಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ.
ಗದಗ: ಕಪ್ಪತ್ತಗುಡ್ಡದಲ್ಲಿ ಚಿರತೆ ವಿಡಿಯೋ ವೈರಲ್
undefined
ಬಿಸಿಯೂಟದ ಆಹಾರಧಾನ್ಯ ನಾಶ ಕಡಕೋಳ ಗ್ರಾಪಂ ವ್ಯಾಪ್ತಿಯ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ಗ್ರಾಮದ ಸರ್ಕಾರಿ ಶಾಲೆಗೆ ಮತ್ತು ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿ ಬಿಸಿಯೂಟದ ಆಹಾರ ಧಾನ್ಯ ಮತ್ತು ಪುಸ್ತಕ, ಶಾಲೆಯ ದಾಖಲೆಗಳು ಮಳೆ ನೀರಿನಲ್ಲಿ ಸಿಲುಕಿವೆ. ರಭಸದ ಮಳೆ ಹಾಗೂ ಕಪ್ಪತ್ತಗುಡ್ಡದಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ಮನೆಯೊಳಗೆ ನುಗ್ಗಿದೆ. ಹೆಚ್ಚು ಪ್ರಮಾಣದ ನೀರು ಶಾಲೆ ಒಳಗೆ ಹರಿದು ಹೋಗುತ್ತಿರುವುದನ್ನು ಕಂಡ ಗ್ರಾಮಸ್ಥರು ತಡರಾತ್ರಿಯೇ ಶಾಲೆ ಕಾಂಪೌಂಡ್ ಗೋಡೆ ಒಡೆದು ನೀರನ್ನು ಹೊರಗೆ ಹರಿದುಬಿಟ್ಟಿದ್ದಾರೆ. ಮಳೆ ನಿಂತ ಮೇಲೆ ಬೆಳಗ್ಗೆ ಪುಸ್ತಕ, ಶಾಲೆ ದಾಖಲೆ ಹೊರ ತಂದು ಬಿಸಿಲಿಗೆ ಒಣ ಹಾಕಿದ್ದಾರೆ.
150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಮೆಕ್ಕೆಜೋಳ ಮಳೆ ನೀರಿನ ಸೆಳೆತಕ್ಕೆ ನೆಲಕ್ಕುರುಳಿದೆ. ಪ್ರವಾಹದ ರೀತಿಯಲ್ಲಿ ಹರಿದು ಬಂದ ಮಳೆ ನೀರಿಗೆ ಹೊಲದಲ್ಲಿಯ ಫಲವತ್ತಾದ ಮಣ್ಣು ಹರಿದು ಹೋಗಿದೆ. ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿದು ಅವಾಂತರವನ್ನು ಸೃಷ್ಟಿಸಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೆರೆ, ಹಳ್ಳಗಳು ತುಂಬಿ ಕೋಡಿ ಬಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೊಂದು ಗ್ರಾಮಗಳು ಜಲಾವೃತಗೊಂಡಿದ್ದು, ಮಕ್ಕಳು, ವೃದ್ಧರು ಮನೆಯಲ್ಲಿ ವಾಸಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ನೀರಿನಲ್ಲಿ ಕೊಚ್ಚಿಹೋದ ಎಮ್ಮೆ: ರಭಸದ ಮಳೆಗೆ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿಯ ಸೇತುವೆ ಮೇಲೆ ನೀರು ಹರಿದು ಎರಡು ಎಮ್ಮೆಗಳು ಕೊಚ್ಚಿಕೊಂಡು ಹೋಗಿದ್ದವು. ಅದರಲ್ಲಿ ಒಂದು ಎಮ್ಮೆ ಪ್ರಾಣ ಕಳೆದುಕೊಂಡಿದೆ. ಇನ್ನೊಂದು ಎಮ್ಮೆ ಹಾಗೂ ಓರ್ವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೇತುವೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಕಾರಣ ಅಪಾಯ ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಇನ್ನು ಮಜ್ಜೂರ ಕೆರೆ ಕೂಡ ಕೋಡಿ ಬಿದ್ದು, ರಭಸದಿಂದ ಹರಿಯುತ್ತಿದೆ. ಜಲ್ಲಿಗೇರಿ ಮಾರ್ಗವಾಗಿ ಕುಸ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ದುರಗಮ್ಮನ ಗುಡಿ ಹತ್ತಿರದ ಸೇತುವೆ ಸಂಪೂರ್ಣ ಕಿತ್ತು ಹೋಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಮಳೆ ನೀರಿನ ಸೆಳೆತಕ್ಕೆ ಹೊಟ್ಟಿನ ಬಣವೆ, ಸೊಪ್ಪಿ ಬಣವೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಜಾನುವಾರುಗಳಿಗೆ ಹೊಟ್ಟು ಸೊಪ್ಪೆ ಇಲ್ಲದಂತಾಗಿದೆ ಎಂದು ರೈತರು ಚಿಂತೆಗೀಡಾಗಿದ್ದಾರೆ.
ಗದಗ: ನಿಯಂತ್ರಣಕ್ಕೆ ಬಾರದ ಕಪ್ಪತ್ತಗುಡ್ಡ ಬೆಂಕಿ, ಅಪಾರ ಅರಣ್ಯ ಸಂಪತ್ತು ನಾಶ
ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕಪ್ಪತ್ತಗುಡ್ಡ ಕುಸಿದು ಬಂಡೆ ಕಲ್ಲುಗಳು ಉರುಳಿ ಬಿದ್ದಿವೆ. ಜಮೀನುಗಳಿಗೆ ನೀರು ಹರಿದು ಬಂದಿದ್ದು, ಭೂಮಿಗಳು ಜವುಳ ಬಿದ್ದಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು.
ತಿಪ್ಪಣ್ಣ ಕೊಂಚಿಗೇರಿ-ತಾಪಂ ಮಾಜಿ ಸದಸ್ಯ, ತೋಟಪ್ಪ ಸೊನ್ನದ-ಗ್ರಾಪಂ ಮಾಜಿ ಸದಸ್ಯ