ಕೊರೋನಾಗೆ ವೃದ್ಧ ಬಲಿ: ತುರ್ತು ಸಂದರ್ಭ ನಿಭಾಯಿಸುವಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯ?

By Kannadaprabha News  |  First Published Mar 14, 2020, 7:35 AM IST

ಕೊರೋನಾ ಸೋಂಕಿನ ಸಾವು | ಆತಂಕದ ಪ್ರಕರಣ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ ಜಿಲ್ಲಾಡಳಿತದ ಕ್ರಮ ವೈಫಲ್ಯದ ವಿಚಾರ | ಕಾನೂನು ಅನುಷ್ಠಾನದಲ್ಲಿ ಮುಗ್ಗರಿಸಿದ ಜಿಲ್ಲಾಡಳಿತ?| 


ಶೇಷಮೂರ್ತಿ ಅವಧಾನಿ 

ಕಲಬುರಗಿ[ಮಾ.14]: ಮಾರಣಾಂತಿಕ ಕೊರೋನಾ ಸೋಂಕಿನ ತುರ್ತು ಸಂದರ್ಭ ನಿಭಾಯಿಸುವಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯತನ ತೋರಿತೆ? ಸಾರ್ವಜನಿಕ ಹಿತಾಸಕ್ತಿಯಲ್ಲಿ ನೆಲದ ಕಾನೂನು ನಿಷ್ಠುರವಾಗಿ ಜಾರಿ ಮಾಡುವಲ್ಲಿ ಸಂಪೂರ್ಣ ಮುಗ್ಗರಿಸಿ ಬಿತ್ತೆ? ಕೊರೋನಾ ಸೋಂಕು, ಕಲಬುರಗಿ, ಹೈದ್ರಾಬಾದ್ ಅಲೆದಾಡಿದ ವಯೋವೃದ್ಧನ ಸಾವಿನ ಪ್ರಕರಣದ ಹಿನ್ನೆಲೆ ಮೇಲಿನ ಸಂಗತಿಗಳು ವ್ಯಾಪಕವಾಗಿ ಚರ್ಚೆಯಾಗುತ್ತಿವೆ. 

Latest Videos

undefined

ಇಡೀ ವಿಶ್ವವೇ ಕೊರೋನಾ ಸೋಂಕಿಗೆ ಬೆಚ್ಚಿ ಬಿದ್ದಿರುವಾಗ ಜಿಲ್ಲಾಡಳಿತ ಅದರ ಚಲ್ತೇ ಹೈ ನೀತಿಗೆ ಶರಣಾಯ್ತೋ? ಎಂದು ಹಲವರು ಕೇಳುತ್ತಿದ್ದರೆ, ಶಂಕಿತ ಕೊರೋನಾ ಸೋಂಕಿತನೆಂದು ಗೊತ್ತಿದ್ದರೂ ವಯೋವೃದ್ಧನನ್ನು ಹೈದ್ರಾಬಾದ್‌ಗೆ ಕೊಂಡೊಯ್ಯಲು ಅನುಮತಿಸುವ ಮೂಲಕ ಜಿಲ್ಲಾಡಳಿತ ಸೋಂಕಿಗೆ ಕಲಬುರಗಿಗೆ ಸ್ವಾಗತಿಸಿತೆ? ಎಂದು ಅನೇಕರು ಪರಿತರಿಸುತ್ತಿದ್ದಾರೆ. 

ಕಲಬುರಗಿ ಕೊರೋನಾ ಬಾಧಿತ ವ್ಯಕ್ತಿಯಿದ್ದ ಸ್ಥಳದಲ್ಲಿ ಪರಿಶೀಲನೆ

ವೈದ್ಯಕೀಯ ಪ್ರೋಟೋಕಾಲ್ ಪ್ರಕಾರ ಕೊರೋನಾ ಸೋಂಕಿತನೆಂದು ಶಂಕೆ ವ್ಯಕ್ತವಾದಾಗ ಅಂತಹವರನ್ನು ಯಾವುದೇ ಕಾರಣಕ್ಕೂ ಹೊರಗೆ ಹೋಗದಂತೆ ತಡೆಯಬೇಕಲ್ಲದೆ ಅವರು ಇರುವ ಊರಲ್ಲೇ ಅವರನ್ನು ಪ್ರತ್ಯೇಕಿಸಿ ಇಡಬೇಕು. ಆಸ್ಪತ್ರೆಯಲ್ಲಿ ಅದಕ್ಕಾಗಿ ಪ್ರತ್ಯೇಕ ಚಿಕಿತ್ಸಾ ವಾರ್ಡ್ ತೆರೆಯಬೇಕು. ಸೌದಿಯಿಂದ ಬಂದಿದ್ದ ವೃದ್ಧ ಕೆಮ್ಮು, ನೆಗಡಿ ತೊಂದರೆಯೊಂದಿಗೆ ಆಸ್ಪತ್ರೆಗೆ ಎಡತಾಕಿದ್ದಾನೆ. ಈತನ ಗಂಟಲು ಮಾದರಿ ಸಹ ಸಂಗ್ರಹಿಸಲಾಗುತ್ತದೆ. ಕೊನೆ ಗಳಿಗೆಯಲ್ಲಿ ಹೈದ್ರಾಬಾದ್ ಗೆ ಹೋಗಲು ಬಿಟ್ಟು ಬಿಡಲಾಗುತ್ತದೆ. ಜಿಲ್ಲಾಡಳಿತದ ಈ ನಡೆಯೇ ‘ಅಲಕ್ಷ್ಯತನದ್ದು’ ಎಂದು ತೀವ್ರ ಟೀಕೆಗೊಳಗಾಗುತ್ತಿದೆ. 

ಜಿಲ್ಲಾಡಳಿತ ಇಲ್ಯಾಕೆ ನಿಷ್ಠರವಾಗಲಿಲ್ಲ? ಯಾಕೆ ಅವರನ್ನು ಎಲ್ಲೂ ಹೋಗದಂತೆ ತಡೆದು ತಾವೇ ಸಿದ್ಧಪಡಿಸಿಟ್ಟಿದ್ದ ಜೆಮ್ಸ್ ವಾರ್ಡ್‌ನಲ್ಲಿ ಇಟ್ಟು ನಿಭಾಯಿಸಬಾರದಿತ್ತು? ಎಂಬುದಕ್ಕೆ ಜಿಲ್ಲಾಡಳಿತ ಬಳಿ ಸೂಕ್ತ ಸಮಜಾಯಿಷಿಗಳೇ ಇಲ್ಲ. ಶಂಕಿತ ಕೊರೋನಾ ಸೋಂಕಿತನನ್ನ ಕಲಬುರಗಿಯಿಂದ ಹೈದ್ರಾಬಾದ್‌ಗೆ ಸಾಗಿಸುವಾಗ, ಅಲ್ಲಿ ನಾಲ್ಕಾರು ಆಸ್ಪತ್ರೆ ಸುತ್ತಾಡಿ ಮರಳಿ ಕಲಬುರಗಿಗೆ ಆತನನ್ನು ಕರೆ ತರುವಾಗ ಯಾವ ಹಂತದಲ್ಲೂ ಪ್ರೋಟೋಕಾಲ್ ಪಾಲಿಸಿಲ್ಲ ಎಂಬುವುದು ರಟ್ಟಾದ ಗುಟ್ಟು. ವೃದ್ಧ ದಾರಿಯಲ್ಲೇ ಸಾವನ್ನಪ್ಪಿದಾಗ ಆತನ ಶವ ಸಾಮಾನ್ಯ ಶವದಂತೆ ಜಿಲ್ಲಾಸ್ಪತ್ರೆ ಶವಪರೀಕ್ಷೆ ಕೋಣೆ ಮುಂದೆ ಇಟ್ಟಿದ್ದನ್ನ ಕಂಡವರೇ ಬೆಚ್ಚಿದ್ದಾರೆ. ಶಂಕಿತ ಕೊರೋನಾ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಶವ ಇಡೋದು ಹೀಗಲ್ಲ ಎಂದು ಪರಿತಪಿಸಿ ಆಕ್ಷೇಪಿಸಿದ್ದರೂ ಯಾರೂ ಕಿವಿಗೆ ಹಾಕಿಕೊಂಡಿಲ್ಲ ಎಂಬುದು ಕಟು ವಾಸ್ತವ.

ಕರೋನಾ ವೈರಸ್‌ ಭೀತಿ: ಕಲಬರಗಿಯಲ್ಲಿ ಶಾಲಾ, ಕಾಲೇಜುಗಳಿಗೆ ಒಂದು ವಾರ ರಜೆ

ಕೊರೋನಾ ಭೀತಿ ಇದ್ದಾಗಲೂ ಶರಣಬಸಪ್ಪನ ಜಾತ್ರೆಗೆ ಸಾವಿರಾರು ಜನರು ಸೇರುವುದಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ ಕಲಬುರಗಿ ಜನರ ಆರೋಗ್ಯವನ್ನು ಘೋರ ಅಪಾಯದ ಮಡುವಿಗೆ ತಳ್ಳಿದೆ. ನೆಲದ ಕಾನೂನನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ನಿಷ್ಠುರವಾಗಿ ಜಾರಿ ಮಾಡಬೇಕೆಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕಿತ್ತು ಎಂದು ಕಲಬುರಗಿ ನಗರದ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಹೇಳಿದ್ದಾರೆ. 

ಸಂಸ್ಕಾರದಲ್ಲೂ ನಿಯಮಗಳ ಉಲ್ಲಂಘನೆಯಾಯ್ತೆ? 

ಶಂಕಿತನ ಶವ ಸಂಸ್ಕಾರದಲ್ಲೂ ವೈದ್ಯಕೀಯ ಪ್ರೋಟೋಕಾಲ್ ಉಲ್ಲಂಘನೆಯಾಯ್ತೆ? ಎಂಬ ಶಂಕೆ ಬಲವಾಗಿವೆ. ಸೋಂಕಿತನೆಂದು ಗೊತ್ತಿದ್ದರೂ ಶವ ಹೂಳಲು ಅನುಮತಿ ನೀಡಲಾಗತ್ತದೆ. ಶವ ಯಾತ್ರೆಯಲ್ಲಿಯೂ ನೂರಾರು ಜನ ಸೇರುತ್ತಾರೆ. ಕೇಳಿದರೆ ಶವ ಸೆನಿಟೈಜ್ ಮಾಡಿ ನೀಡಿದ್ದೇವೆ ಎಂಬ ಸಮಜಾಯಿಷಿ. ಆಳವಾಗಿ ಹೂಳಲು ಸೂಚಿಸಿದ್ದಾಗಿ ಹೇಳುವ ಜಿಲ್ಲಾಡಳಿತದ ಬಳಿ ಈ ಪ್ರಕರಣದಲ್ಲಿ ಅದೆಷ್ಟು ಆಳ ಅಗೆಯಲಾಯ್ತು ಎಂಬ ಪ್ರಶ್ನೆಗೆ ಸೂಕ್ತ ಉತ್ತರವಿಲ್ಲ. 

ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಮಾರ್ಚ್ 6 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾದ ಲಕ್ಷಣಗಳೆಲ್ಲವೂ ಗೋಚರಿಸಿದ್ದವು. ಇದೇ ಅನುಮಾನದಿಂದ ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು, ಆದ್ರೂ ರೋಗಿಯ ಮೇಲೆ ನಿಗಾ ಇಡುವಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಡಳಿತ ವಿಫಲವಾದದ್ದು ಈ ಪ್ರಕರಣದಲ್ಲಿ ಎದ್ದು ಕಾಣುವಂತಿದೆ. ರೋಗಿಯನ್ನು ಹೈದ್ರಾಬಾದಗೆ ಕರೆದೊಯ್ಯುವಾಗ ಕುಟುಂಬದವರು ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ. ಶವ ಕಲಬುರಗಿಗೆ ತಂದ ಮೇಲೂ ಬೇಜವಾವ್ದಾರಿತನ, ಸಾಮಾನ್ಯ ಶವದಂತೆ ಶವಾಗಾರದ ಮುಂದೆ ಹಲವು ಗಂಟೆ ಇಡಲಾಗಿದ್ದ ಶಂಕಿತ ಕೊರೋನಾ ಶವ, ಮಾಹಿತಿ ಕೊರತೆಯಿಂದ ಹಲವರು ಶವ ಮುಟ್ಟಿರುವ ಸಾಧ್ಯತೆ, ಚಾಲಕ, ಶವ ಹ್ಯಾಂಡಲ್ ಮಾಡಿದವರು ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಹೀಗೆ ಅನೇಕ ಲೋಪಗಳು ಕಲಬುರಗಿ ಕೊರೋನಾ ಸೋಂಕಿನ ಸುತ್ತಮುತ್ತ ಘಟಿಸಿದ್ದರಿಂದಲೇ ಸೋಂಕು ಈ ಪರಿ ಜನರನ್ನ ಬೆಚ್ಚಿ ಬೀಳಿಸಲು ಕಾರಣವಾಯ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ರಥೋತ್ಸವ ನಿಲ್ಲಿಸದೆ ಕೈ ಚೆಲ್ಲಿದ ಜಿಲ್ಲಾಡಳಿತ 

ಕೊರೋನಾ ಸೋಂಕು ಕಾಲಿಟ್ಟರೂ ಸಾವಿರಾರು ಜನ ಸೇರುವಂತಹ ಶರಣಬಸವೇಶ್ವರ ರಥೋತ್ಸವ ನಿಲ್ಲಿಸುವಲ್ಲಿ ಜಿಲ್ಲಾಡಳಿತ ಎಡವಿತು. ತಡರಾತ್ರಿ ಸಭೆ ಮಾಡಿದರೆ ಹೊರತು ಫಲಿತಾಂಶ ಮಾತ್ರ ನಿರೀಕ್ಷೆಯಂತೆ ಫಲ ಕೊಡಲಿಲ್ಲ. ಸಂಸ್ಥಾನ ಸಹಕರಿಸಲು ಮುಂದಾದರೂ ಜಿಲ್ಲಾಡಳಿತ ಈ ವಿಚಾರದಲ್ಲಿ ಏನೂ ಮಾಡಲಾಗದೆ ಕೈ ಹೊಸಕಿ ಕುಳಿತುಕೊಂಡಿತ್ತು. ಕೊರೋನಾ ಭೀತಿ ಇದ್ದಾಗಲೂ ಶರಣಬಸಪ್ಪನ ಜಾತ್ರೆಗೆ ಸಾವಿರಾರು ಜನರು ಸೇರುವುದಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ ಕಲಬುರಗಿ ಜನರ ಆರೋಗ್ಯವನ್ನು ಘೋರ ಅಪಾಯದ ಮಡುವಿಗೆ ತಳ್ಳಿಬಿಟ್ಟಿತ್ತು. ರಜೆ ಘೋಷಣೆಯಲ್ಲೂ ದ್ವಂದ್ವ, ಜಿಲ್ಲಾಧಿಕಾರಿ ವಾರಕಾಲ ರಜೆ ಎಂದರೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನಾಲಯ 15 ದಿನಗಳ ರಜೆ ಘೋಷಿಸಿ ಬಿಟ್ಟಿತು.

ಕೊರೋನಾ ಸೋಂಕಿನ ಸಂದರ್ಭ ನಿಯಂತ್ರಣ ದಲ್ಲಿ ಒಂದಾಗಿರಬೇಕಿದ್ದಂತಹ ವಿವಿಧ ಇಲಾಖೆಗಳ ನಡುವೆ ಸಮನ್ವಯ ಕೊರತೆ ಶಂಕೆ ಇದರಿಂದ ಕಾಡಿತು. ಹೀಗಾದಲ್ಲಿ ಭಯಾನಕ ರೋಗದ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುವುದು ಇನ್ನಾವಾಗಲೋ?. ಕೊರೋನಾ ಬಗ್ಗೆ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವಂತಿದೆ. ಗಂಭೀರ ಪ್ರಕರಣದಲ್ಲೂ ಅತ್ಯಂತ ಬೇವಾಬ್ದಾರಿತನ ಪ್ರದರ್ಶನ ಸಾಗಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬುದನ್ನ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್.

click me!