ಕದ್ರಾ ನೆರೆ ಭೀತಿ: ಆತಂಕದಲ್ಲಿ ಜನರು

By Ravi Nayak  |  First Published Jul 20, 2022, 10:30 AM IST

ಮುಂಗಾರು ಪ್ರಾರಂಭದಿಂದಲೂ ವಿಪರೀತ ಮಳೆಯಾಗಿದ್ದು ಎಲ್ಲೆ ಹಳ್ಳ ಕೊಳ್ಳ ನದಿಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳು ಈಗಾಗಲೇ ಭರ್ತಿಯಾಗಿದ್ದು ಜಲಾಶಯದಿಂದ ನೀರು ಹೊರಬಿಡುತ್ತಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ


ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣನ್ಯೂಸ್ 

ಕಾರವಾರ (ಜು.20): ಮಳೆಗಾಲ ಪ್ರಾರಂಭವಾಯ್ತು ಅಂದ್ರೆ ಸಾಕು ಆ ಗ್ರಾಮಗಳ ಜನರು ಹೆದರಿಕೊಂಡು ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಕಳೆದ ಮೂರು ವರ್ಷಗಳಿಂದ ನಿರಂತರ ನೆರೆಗೆ ಜನರು ಸಾಕಷ್ಟು ಹಾನಿ ಅನುಭವಿಸಿ ಇಂದಿಗೂ ಪರದಾಡುತ್ತಿದ್ದು, ಈ ಬಾರಿಯೂ ಮಳೆಯ ಅಬ್ಬರದಿಂದಾಗಿ ಮತ್ತೆ ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದೆ. ಪ್ರತೀ ವರ್ಷ ನೆರೆಯಿಂದ ಪರದಾಡುವ ಬದಲು ಸರ್ಕಾರ ತಮಗೆ ಶಾಶ್ವತ ಪರಿಹಾರ ಒದಗಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ‌. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

Latest Videos

undefined

ಹೌದು, ಕಾಳಿ ನದಿ (Kali river) ಪಾತ್ರದ ಗ್ರಾಮಗಳ ಜನರಿಗೆ ನೆರೆ ಅನ್ನೋದು ಇದೀಗ ಆತಂಕವನ್ನು ಸೃಷ್ಟಿ ಮಾಡಿದೆ. ಕಳೆದ ಮೂರು ವರ್ಷಗಳಿಂದ ಹೆಚ್ಚಾಗಿ ಉತ್ತರಕನ್ನಡ(Uttara kannada) ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕಾಳಿ ನದಿ ಉಕ್ಕಿ ಹರಿಯುವ ಪರಿಣಾಮ ಕಾರವಾರ ತಾಲೂಕಿನ ಕದ್ರಾ ಜಲಾಶಯ(Kadra reservoir)ದಿಂದ ನೀರನ್ನು ಹೊರ ಬಿಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿದ ಜಲಾಶಯದಿಂದ ನೀರು ಹೊರಬಿಟ್ಟು, ಕದ್ರಾ, ಮಲ್ಲಾಪುರ, ಕುರ್ನಿಪೇಟೆ ಸೇರಿದಂತೆ ನದಿ ಪಾತ್ರದ ಹಲವು ಗ್ರಾಮಗಳಲ್ಲಿ ನೆರೆಯಿಂದ ಜನರಿಗೆ ಸಾಕಷ್ಟು ಹಾನಿಯಾಗಿತ್ತು. ಇತ್ತ ನೆರೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಸರ್ಕಾರ ಇನ್ನೂ ಕೂಡ ಸೂಕ್ತ ಪರಿಹಾರ ನೀಡಿಲ್ಲ. ಈ ಬಾರಿ ಸಹ ಮತ್ತೆ ಮಳೆಯಾಗುತ್ತಿದ್ದು, ಜಲಾಶಯದಿಂದ ಸುಮಾರು 40 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡುತ್ತಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಜಲಾಶಯದ ನೀರು ಭರ್ತಿಯಾಗಿ ಹೆಚ್ಚಿನ ನೀರು ಬಿಡುವುದರಿಂದ ನೆರೆ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿ ಜಲಾಶಯದಿಂದ ಆಗುತ್ತಿರುವ ಸಮಸ್ಯೆಯಿಂದ ತಮಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ. ಪದೇ ಪದೇ ನೆರೆಯಿಂದ ತಾವು ಸಮಸ್ಯೆಗೆ ಸಿಲುಕಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಗ್ರಾಮದ ಜನರು.

ಉತ್ತರ ಕನ್ನಡದಲ್ಲಿ ಮಳೆಯಿಂದ ಹಾನಿ: ಅಲ್ಪ ಪರಿಹಾರ ವಿತರಣೆಗೆ ಸಚಿವ ಕೋಟ ಆಕ್ಷೇಪ

ಮಳೆಯಿಂದ ನೆರೆ ಕಾಟ ಕಾಣಿಸಿಕೊಳ್ಳೋದಕ್ಕಿಂತ ಜಲಾಶಯದ ನೀರನ್ನು ಬಿಡುವುದರಿಂದಲೇ ಜನರಿಗೆ ಹೆಚ್ಚು ಸಮಸ್ಯೆ ಆಗುತ್ತಿದೆ‌‌. ಸರ್ಕಾರ ಈ ಬಗ್ಗೆ ಗಮನಹರಿಸಿ ನೆರೆ ಕಾಣಿಸಿಕೊಳ್ಳದಂತಹ ಪ್ರದೇಶದಲ್ಲಿ ಜಾಗಗಳನ್ನು ನೀಡಿ ಮನೆ ಕಟ್ಟಿಕೊಟ್ಟು ಶಾಶ್ವತ ಸಮಸ್ಯೆ ಬಗೆಹರಿಸಲಿ . ಇನ್ನು ಕಾಳಿ ನದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ನಾಲ್ಕು ಕಡೆ ಜಲಾಶಯಗಳನ್ನು ಕಟ್ಟಿ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಕದ್ರಾ ಜಲಾಶಯದಲ್ಲಿ ಸುಮಾರು 34.50 ಮೀಟರ್ ನಷ್ಟು ನೀರು ಸಂಗ್ರಹ ಮಾಡಬಹುದು. ಆದರೆ, ಇದರಲ್ಲಿ ಸುಮಾರು 17 ಮೀಟರ್ ನಷ್ಟು ಹೂಳು ತುಂಬಿದ್ದು ಇದನ್ನು ತೆಗೆಯುವ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ. ಈ ಹಿಂದೆ ನೆರೆ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಹೂಳು ತುಂಬಿ ಜಲಾಶಯ ಬೇಗ ಭರ್ತಿಯಾಗುತ್ತಿರುವುದೇ ನೆರೆಗೆ ಕಾರಣವಾಗಿದ್ದು, ಮೊದಲು ಹೂಳನ್ನು ತೆಗೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು.
 - ಉದಯ ನಾಯ್ಕ, ಕದ್ರಾ ಅಣೆಕಟ್ಟು ನೆರೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ


 ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯದಿಂದ ನೀರು ಹೊರ ಬಿಡುವ ಪ್ರಮಾಣ ಕೂಡಾ ಕಡಿಮೆ ಮಾಡಲಾಗಿದೆ. ಆದರೆ, ಮತ್ತೆ ಮಳೆ ಅಧಿಕವಾದರೆ ಜಲಾಶಯದಿಂದ ಹೆಚ್ಚಿನ ನೀರು ಹೊರಕ್ಕೆ ಬಿಡುವುದರಿಂದ ಹತ್ತಾರು ಗ್ರಾಮಗಳಲ್ಲಿ ನೆರೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಪದೇ ಪದೇ ನೆರೆಯಿಂದ ಸಂಕಷ್ಟಕ್ಕೆ ಸಿಲುಕುವ ಬದಲು ಒಮ್ಮೆಲೇ ಸರ್ಕಾರ ಶಾಶ್ವತ ಪರಿಹಾರ ಕೊಡಲಿ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಸಹ ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ಸರ್ಕಾರ ಜನರ ನೋವಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.

 ಅಶೋಕ್ ಗಾಜಿನಕರ್, ಗ್ರಾಮಸ್ಥ
 

click me!