ಜಾನಪದ ವೇದಗಳಿಗಿಂತ ಪುರಾತನ: ಡಾ. ರಾಜೇಶ್ವರಿದೇವಿ

By Kannadaprabha News  |  First Published Feb 3, 2023, 7:34 AM IST

ಜಾನಪದ ಸೊಗಡಿನ ಕಲಾಸಂಸ್ಕೃತಿಗಳು ಸಾವಿರಾರು ವರ್ಷಗಳ ಇತಿಹಾಸ ಹಾಗೂ ವೇದಗಳಿಗಿಂತ ಪುರಾತನ ಹಿನ್ನೆಲೆ ಹೊಂದಿವೆ. ಜಾನಪದದಲ್ಲಿ ತಾಳ, ಲಯ, ರಾಗ ಇವುಗಳು ಮುಖ್ಯ ಸೊಗಡಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮೈಸೂರು ವಿಭಾಗೀಯ ಸಹ ನಿರ್ದೇಶಕಿ ಡಾ. ಹೆಚ್‌.ಆರ್‌.ರಾಜೇಶ್ವರಿದೇವಿ ಹೇಳಿದರು.


ಚಿಕ್ಕಮಗಳೂರು (ಫೆ.3) : ಜಾನಪದ ಸೊಗಡಿನ ಕಲಾಸಂಸ್ಕೃತಿಗಳು ಸಾವಿರಾರು ವರ್ಷಗಳ ಇತಿಹಾಸ ಹಾಗೂ ವೇದಗಳಿಗಿಂತ ಪುರಾತನ ಹಿನ್ನೆಲೆ ಹೊಂದಿವೆ. ಜಾನಪದದಲ್ಲಿ ತಾಳ, ಲಯ, ರಾಗ ಇವುಗಳು ಮುಖ್ಯ ಸೊಗಡಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮೈಸೂರು ವಿಭಾಗೀಯ ಸಹ ನಿರ್ದೇಶಕಿ ಡಾ. ಹೆಚ್‌.ಆರ್‌.ರಾಜೇಶ್ವರಿದೇವಿ ಹೇಳಿದರು.

ತಾಲ್ಲೂಕಿನ ತೇಗೂರು ಗ್ರಾಮದ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ವಸತಿ ಶಾಲೆಯ ಮೌಲಾನ ಆಜಾದ್‌ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೈಸೂರು ವಿಭಾಗ ಮಟ್ಟದ ಜಾನಪದ ಕಲಾತಂಡಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾನಪದ ಕಲೆ ಮುಖಾಂತರ ಸಮಾಜದಲ್ಲಿ ಕಥೆ, ಪುರಾಣ ಹಾಗೂ ಸಂಸ್ಕೃತಿಯನ್ನು ತಿಳಿಸುವ, ಹಿಂದಿನ ಕಾಲಘಟ್ಟದ ಜಾನಪದ ಕಲೆಗಳನ್ನು ಪ್ರಸ್ತುತ ಕಾಲಘಟ್ಟದವರೆಗೆ ತಲುಪಿಸುವ ಕಾರ್ಯದಲ್ಲಿ ನೂರಾರು ಕಲಾವಿದರು ಅಚ್ಚುಕಟ್ಟಾಗಿ ಭಾಗವಹಿಸಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

Tap to resize

Latest Videos

ಕೊಡಗಿನ ಜಾನಪದ ಕಲೆಗಾರ್ತಿ ಪದ್ಮಶ್ರೀ ರಾಣಿ ಮಾಚ್ಚಯ್ಯ ಜೊತೆ ಮಾತುಕತೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಎಂಟು ಜಿಲ್ಲೆಗಳು ಆಯಾ ವಿಶಿಷ್ಟಸಂಸ್ಕೃತಿಯ ಕಲಾಪ್ರಕಾರಗಳನ್ನು ಒಳಗೊಂಡಿವೆ. ಅದರಲ್ಲಿ ಮೈಸೂರು ಹಾಗೂ ಮಂಡ್ಯ ಅತ್ಯಂತ ಪುರಾತನ ಕಲಾಸಂಸ್ಕೃತಿಯ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅದೇ ರೀತಿ ಚಿಕ್ಕಮಗಳೂರು ತನ್ನದೇಯಾದ ವಿಶಿಷ್ಟಜಾನಪದ ಸಂಸ್ಕೃತಿಗೆ ಹೆಸರುವಾಸಿಯಾಗಿದೆ ಎಂದರು.

ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಜನರು ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಹಿಸಿ ಶಿಶು, ತಾಯಿ ಮರಣ ಪ್ರಮಾಣ ಕಡಿಮೆ ಮಾಡಲು ಬೀದಿನಾಟಕ, ಗಾಯನದ ಮೂಲಕ ಆರೋಗ್ಯ ಇಲಾಖೆ ಮಾಹಿತಿಯನ್ನು ಪ್ರತಿ ಹಳ್ಳಿಗಳಿಗೂ ತಲುಪಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.

ಮೈಸೂರು ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಪ್ರಕಾಶ್‌ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಥಮ ಬಾರಿಗೆ ಜಾನಪದ ತರಬೇತಿ ಕಾರ್ಯಾಗಾರವನ್ನು ಚಾಮರಾಜ ನಗರದ ಮಲೆ ಮಹದೇಶ್ವರಬೆಟ್ಟದಲ್ಲಿ ನಡೆಸಲಾಗಿದ್ದು, ಕಲಾವಿದರಿಗೆ ತರಬೇತಿ ನೀಡಿ ಪ್ರತಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಜಾನಪದ ಸಂಸ್ಕೃತಿ ಮೂಲಕ ಜನರಿಗೆ ಆರೋಗ್ಯ ಅರಿವು ಮೂಡಿಸಲಾಗುತ್ತಿದೆ ಎಂದರು.

ಮೈಸೂರು, ಮಂಡ್ಯ, ಚಾಮರಾಜನಗರ ನಂತರ ಇದೀಗ ನಾಲ್ಕನೇ ಕಾರ್ಯಕ್ರಮವನ್ನು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲೂ ಜಾನಪದ ಸಂಸ್ಕೃತಿಯ ಕಲೆಯ ಆಸಕ್ತಿ ಹೊಂದಿರುವವರು ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತಿಕೆ ಹೊಂದಿದೆ, ಆರೋಗ್ಯ ಇಲಾಖೆ ಸುಮಾರು 34 ಯೋಜನೆಗಳ ಅರಿವಿಲ್ಲದ ಹಳ್ಳಿಗಾಡಿನ ಪ್ರದೇಶದವರಿಗೆ ಜಾಗೃತಿ ಮೂಡಿಸುವ ಸಲುವಾಗಿ ಜಾನಪದ ಕಲಾವಿದರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಯಾವುದೇ ಒಂದು ವಿಷಯವನ್ನು ಅರಿಯಲು ಹೇಳಿಕೊಡುವುದಕ್ಕಿಂತ ನೋಡಿ ಕಲಿಯುವುದು ತುಂಬಾ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಜಾನಪದ ಕಲಾವಿದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಬೀದಿನಾಟಕ, ಹಾಡುಗಾರಿಕೆ ಮೂಲಕ ಆರೋಗ್ಯಕ್ಕೆ ಸಂಬಂಧಪಟ್ಟಯೋಜನೆಗಳ ಜಾಗೃತಿ ಜನಸಾಮಾನ್ಯರಲ್ಲಿ ಮೂಡಿಸಲಾಗುತ್ತಿದೆ ಎಂದರು.

Padma Awards 2023: ಕೊಡವ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯಗೆ ಒಲಿದ ಪದ್ಮಶ್ರೀ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್‌ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮೋಹನ್‌ಕುಮಾರ್‌, ರಾಜ್ಯ ಆರೋಗ್ಯ ಶಿಕ್ಷಣಾಧಿಕಾರಿ ಜ್ಞಾನೇಶ್ವರ, ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ ಬಾಬು, ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿ ಡಾ. ಭರತ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಜಿಲ್ಲಾ ಕ್ಷಯ ಅಧಿಕಾರಿ ಡಾ ಬಾಲಕೃಷ್ಣ ಉಪಸ್ಥಿತರಿದ್ದರು.ಕಲಾವಿದ ಲೋಕೇಶ್‌ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ಸ್ವಾಗತಿಸಿದರು. ದಿವಾಕರ್‌ ನಿರೂಪಿಸಿದರು. ಜಲಜಾಕ್ಷಿ ವಂದಿಸಿದರು.

click me!