ಕೃಷ್ಣಾ ನದಿ ಪಾತ್ರದ ಹಳ್ಳಿಗಳಿಗೆ ನೀರಾವರಿ ಯೋಜನೆ ಜಾರಿಗೊಳಿಸಲು ಹೊಸ ಯೋಜನೆ ರೂಪಿಸಿರುವ ರಾಜ್ಯ ಸಚಿವ ಸಂಪುಟ ಅದಕ್ಕೆ ಅನುಮೋದನೆ ನೀಡಿ ಸುಮಾರು ರು.253 ಕೋಟಿ 94 ಲಕ್ಷ ಮಂಜೂರು ಮಾಡಿದೆ: ಶಿವನಗೌಡ ನಾಯಕ
ರಾಮಕೃಷ್ಣ ದಾಸರಿ
ರಾಯಚೂರು(ಡಿ.10): ಸಮೀಪದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿದ್ದರು, ಅದೇ ಭಾಗದಲ್ಲಿ ಬೃಹತ್ ನೀರಾವರಿ ಯೋಜನೆ ಜಾರಿಯಲ್ಲಿದ್ದರು ಸಮರ್ಪಕವಾಗಿ ಕೆಳಭಾಗಕ್ಕೆ ನೀರು ಬಾರದೇ ನೀರಾವರಿಯಿಂದ ವಂಚಿತಗೊಂಡಿದ್ದ ನದಿಪಾತ್ರದ ಹಳ್ಳಿಗಳಿಗೆ ನೀರಾವರಿ ಸವಲತ್ತು ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ಪಾತ್ರದ ಹಳ್ಳಿಗಳಿಗೆ ನೀರಾವರಿ ಯೋಜನೆ ಜಾರಿಗೊಳಿಸಲು ಹೊಸ ಯೋಜನೆ ರೂಪಿಸಿರುವ ರಾಜ್ಯ ಸಚಿವ ಸಂಪುಟ ಅದಕ್ಕೆ ಗುರುವಾರ ಅನುಮೋದನೆ ನೀಡಿ ಸುಮಾರು ರು.253 ಕೋಟಿ 94 ಲಕ್ಷ ಮಂಜೂರು ಮಾಡಿದೆ.
ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರವು ಈಗಾಗಲೇ ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿರುವ ಪ್ರವಾಹ ಪೀಡಿತ 42 ಹಳ್ಳಿಗಳ ಪೈಕಿ 33 ಗ್ರಾಮಗಳು ಈಗಾಗಲೇ ಎನ್‌ಆರ್‌ಬಿಸಿಗೆ ಒಳಪಟ್ಟಿದ್ದರೂ ಸಹ ಕೊನೆ ಭಾಗವಾಗಿರುವುದರಿಂದ ಹೆಸರಿಗಷ್ಟೇ ನೀರಾವರಿ ಪ್ರದೇಶವಾಗಿತ್ತು. ಇದೀಗ ಸರ್ಕಾರ ಅನುಮೋದನೆ ನೀಡಿರುವ ಆರು ಏತ ನೀರಾವತಿ ಯೋಜನೆಗಳಿಂದಾಗಿ ಕೆಳಭಾಗದ ರೈತರ ಜಮೀನುಗಳಿಗೆ ನೀರುಣಿಸಬಹುದಾಗಿದ್ದು, ಬಹುದಿನಗಳ ಹಳ್ಳಿಗರ ಕನಸು ಸಾಕಾರಗೊಳ್ಳುತ್ತಿದೆ.
ರಾಯಚೂರು: ಗಡಿ ಭಾಗದ ಅಭಿವೃದ್ಧಿಗೆ ಖರ್ಗೆ ಕೊಡುಗೆ ಅಪಾರ, ದದ್ದಲ್
ಕೃಷ್ಣಾ ನದಿ ಪಾತ್ರದಡಿಯಲ್ಲಿ ಬರುವ ದೇವದುರ್ಗ ತಾಲೂಕಿನ ಹಳ್ಳಿಗಳ ರೈತರು ನದಿ ನೀರನ್ನಾಧರಿಸಿಯೇ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹೆಸರಿಗಷ್ಟೇ ಎನ್‌ಆರ್‌ಬಿಸಿ ಕಾಲುವೆಯಿದ್ದರು ಸಹ ನೀರಾವರಿಯಿಂದ ವಂಚಿತಗೊಂಡಿರುವುದರಿಂದ ಕೆಳಭಾಗದ ರೈತರು ವರ್ಷ ಪೂರ್ತಿ ಬೆಳೆಗಳನ್ನು ಬೆಳೆಯಲು ಕಷ್ಟವಾಗುತ್ತಿದೆ.
ಕೃಷ್ಣಾ ನದಿಯಿಂದ ನೀರನ್ನು ಮೇಲೆತ್ತಿ ನಾರಾಯಣಪುರ ಬಲದಂಡೆ ಕಾಲುವೆ ಮುಖಾಂತರ ಉಪ ಕಾಲುವೆಗಳಾದ 9, 15, 16, 17 ಮತ್ತು 18 ರ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸುವುದಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ.
33 ಹಳ್ಳಿಗಳಿಗೆ ನೀರು ಸರಬರಾಜು ಉದ್ದೇಶ:
ನದಿಪಾತ್ರದ ಹಳ್ಳಿಗಳಾದ ಗೂಗಲ್, ಕೊಪ್ಪರ, ಕೋಳೂರು, ದೊಂಡಂಬಳಿ, ನವಿಲುಗುಡ್ಡ, ಬೆನಕಲ್, ಯಾತಗಲ್, ಚಿಕ್ಕರಾಯಕುಂಪಿ,ಹಿರೇರಾಯಕುಂಪಿ, ಹೇರುಂಡಿ, ಅಪ್ರಾಳ, ಮೇದನಾಪುರ, ಮೇಧಾರಗೋಳ, ಕೊಣಚಪ್ಪಲಿ, ಹೇಮನಾಳ, ಮದರಕಲ್, ಚಿಂಚೋಡಿ, ಬೊಮ್ಮನಾಳ ಸೇರಿದಂತೆ 33 ಗ್ರಾಮಗಳ ಅಚ್ಚುಕಟ್ಟು ಪ್ರದೇಶದ ಸುಮಾರು 15 ರಿಂದ 20 ಸಾವಿರ ಎಕರೆ ಜಮೀನು ಎನ್‌ಆರ್‌ಬಿಸಿ ಕೆಳಭಾಗಕ್ಕೆ ಬರುತ್ತಿದ್ದು ಆರು ಏತ ನೀರಾವತಿ ಯೋಜನೆಗಳಿಂದ ಈ ಭಾಗದ ರೈತರ ಬೆಳೆಗಳಿಗೆ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ.
ಎನ್‌ಆರ್‌ಬಿಸಿ ವ್ಯಾಪ್ತಿಗೆ ಬರುತ್ತಿದ್ದರು ಸಹ 9 ಹಾಗೂ 15 ರಿಂದ 18 ರ ನಾಲೆಯ ಕೊನೆ ಭಾಗಕ್ಕೆ ನೀರು ಅಭಾದಿತವಾಗಿತ್ತು. ಇದರಿಂದಾಗಿ ಹೆಸರಿಗಷ್ಟೇ ನೀರಾವರಿಯಾಗಿದ್ದ ಜಮೀನುಗಳಿಗೆ ಸಮೀಪದ ನದಿಯಿಂದ ಪಂಪ್‌ಸೆಟ್ ಮುಖಾಂತರ ನೀರು ಹರಿಸಿ ಪ್ರತಿ ವರ್ಷ ಪ್ರತಿ ಹಿಂಗಾರು ಹಾಗೂ ಮುಂಗಾರಿನಲ್ಲಿ ಒಂದು ಇಲ್ಲವೇ (ಭತ್ತ, ಹತ್ತಿ, ತೊಗರಿ, ಮೆಣಸಿನಕಾಯಿ)ಬೆಳೆಯನ್ನು ಬೆಳೆಯಲಾಗುತ್ತಿತ್ತು.
Karnataka Assembly Election: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕಾಗಿ ಮತಬೇಟೆ ಶುರು, ದಿಗ್ಗಜರಿಂದ
ದೂರದ ಜಮೀನುಗಳಿಗೆ ನೀರು ತಲುಪದ ಕಾರಣಕ್ಕೆ ನೀರಾವರಿಯಿಂದ ರೈತರು ವಂಚಿತಗೊಂಡಿದ್ದರು. ಇದೀಗ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನೀರಾವರಿ ಯೋಜನೆ ಜಾರಿಗೆ ಮುಂದಾಗಿದ್ದು, ಕೃಷ್ಣಾ ನದಿಯಿಂದ ನಾರಾಯಣಪುರ ಬಲದಂಡೆ ಕಾಲುವೆಯಗೆ ನೀರನ್ನು ಸರಬರಾಜು ಮಾಡಿಕೊಂಡು ಮುಖ್ಯ ನಾಲೆ ಮುಖಾಂತರ ಕಿರು-ಒಳಗಾಲುವೆಗಳನ್ನು ನಿರ್ಮಿಸಿ ರೈತರ ಜಮೀನುಗಳಿಗೆ ನೀರುಣಿಸುವ ಯೋಜನೆ ಇದಾಗಿದ್ದು, ಏತನೀರಾವರಿ ಮಾದರಿಯಲ್ಲಿ ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ, ಕೃಷ್ಣಾ ನದಿ ಪಾತ್ರದ 33 ಹಳ್ಳಿಗಳ ಎನ್‌ಆರ್‌ಬಿಸಿ ಕೊನೆಭಾಗದ ರೈತರ ಜಮೀನುಗಳಿಗೆ ನೀರಾವರಿ ಒದಗಿಸಿಕೊಡುವುದಕ್ಕಾಗಿ 6 ಏತನೀರಾವರಿ ಯೋಜನೆಗಳಿಗೆ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟವು ಒಪ್ಪಿಗೆ ಸೂಚಿಸಿದ್ದು, ವಿಸ್ತೃತ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುವುದಕ್ಕಾಗಿ 253.94 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ನದಿ ನೀರನ್ನು ಎನ್‌ಆರ್‌ಬಿಸಿ ಮುಖ್ಯಕಾಲುವೆಗೆ ಡಂಪ್ ಮಾಡಿ ಆಯ್ದ ಉಪಕಾಲುವೆಗಳ ಮೂಲಕ ಕೊನೆಭಾಗದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರನ್ನು ಸರಬರಾಜು ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಅಂತ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ತಿಳಿಸಿದ್ದಾರೆ.