ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆರಂಭವಾದ ಮೇಲೆ ಮುಚ್ಚಿದ ಶಾಲೆಗಳು| ಆನ್‌ಲೈನ್ ಕ್ಲಾಸ್‌ನಿಂದಾಗಿ ಹೆಚ್ಚಾದ ಬೇಡಿಕೆ| ಅಂಗಡಿಗಳಲ್ಲಿ ಇದ್ದಬಿದ್ದ ಹಳೆಯ ಸೆಟ್‌ಗಳೆಲ್ಲ ಖಾಲಿ| ಗರಿಗರಿ ದೋಸೆಯಂತೆ ಖಾಲಿಯಾಗುತ್ತಿರುವ ಹಳೆಯ ಮೊಬೈಲ್|
ಕಾರವಾರ(ನ.16): ಆನ್‌ಲೈನ್ ತರಗತಿಗಳು ಆರಂಭವಾದ ಮೇಲೆ ಸೆಕೆಂಡ್ ಹ್ಯಾಂಡ್ ಮೊಬೈಲ್ ಸೆಟ್‌ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಮೊಬೈಲ್ ರಿಪೇರಿ ಶಾಪ್‌ಗಳು ಹಾಗೂ ಮೊಬೈಲ್ ಮಳಿಗೆಗಳಲ್ಲಿ ಹಳೆಯ ಮೊಬೈಲ್‌ಗಳು ಒಂದೂ ಇಲ್ಲವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆರಂಭವಾದ ಮೇಲೆ ಶಾಲೆಗಳು ಮುಚ್ಚಿವೆ. ಇದಕ್ಕೆ ಬದಲಾಗಿ ಆನ್‌ಲೈನ್ ತರಗತಿಗಳು ತೆರೆದುಕೊಂಡಿವೆ.
ನರ್ಸರಿ, ಪ್ರಾಥಮಿಕ ಶಾಲೆ, ಹೈಸ್ಕೂಲು ಹೀಗೆ ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿಗಳು ಶುರುವಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳು ನೆಟ್‌ವರ್ಕ್‌ನಿಂದ ವಂಚಿತವಾಗಿಯೇ ಇವೆ. ಇಲ್ಲೆಲ್ಲ ಬಹುತೇಕ ಪಾಲಕರಲ್ಲೂ ಆ್ಯಂಡ್ರಾಯ್ಡ್ ಮೊಬೈಲ್ ಸೆಟ್‌ಗಳು ಇರಲಿಲ್ಲ. ನೆಟ್ವರ್ಕ್ ಇಲ್ಲದೆ ಇರುವುದರಿಂದ ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಇತರ ಸಾಮಾಜಿಕ ಜಾಲತಾಣಗಳ ಬಳಕೆಯೂ ಇರಲಿಲ್ಲ.
ಈಗ ಒಮ್ಮೆಲೇ ಆನ್‌ಲೈನ್ ತರಗತಿಗಳನ್ನು ಶಾಲೆಗಳು ಆರಂಭಿಸಿದ ಮೇಲೆ ಅನುಕೂಲ ಇದ್ದವರು ಹೊಸ ಮೊಬೈಲ್ ಸೆಟ್‌ಗಳನ್ನು ಖರೀದಿಸಿದರು. ಗ್ರಾಮೀಣ ಪ್ರದೇಶದ ಜನತೆ ಲಾಕ್ ಡೌನ್‌ನಲ್ಲಿ ಉದ್ಯೋಗವೇ ಇಲ್ಲದೆ ಆರ್ಥಿಕವಾಗಿ ತೊಂದರೆಗೊಳಗಾಗಿದ್ದರು. ಅದರಲ್ಲಿ ಹೊಸ ಮೊಬೈಲ್ ಸೆಟ್‌ಗಳಿಗೆ ಹಣ ಹೊಂದಿಸಲಾರದೆ ಹಳೆಯ ಸೆಟ್‌ಗಳತ್ತ ಮುಖ ಮಾಡಿದರು. ಹೀಗಾಗಿ ಅಂಗಡಿಗಳಲ್ಲಿ ಇದ್ದ ಬಿದ್ದ ಹಳೆಯ ಮೊಬೈಲ್ ಸೆಟ್‌ಗಳೆಲ್ಲ ಖಾಲಿಯಾದವು. ವಿದ್ಯಾರ್ಥಿಗಳು ಕೊಂಡ ಹಳೆಯ ಮೊಬೈಲ್ ಸೆಟ್‌ಗಳು ಹಾಳಾದಾಗ ಮತ್ತೆ ಅಂಗಡಿಗಳಿಗೆ ಎಡತಾಕಿದರೆ ಒಂದೂ ಇಲ್ಲ ಎಂದು ಕೈತಿರುಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ನಿರಾಶರಾಗಿ ಮರಳುತ್ತಿದ್ದಾರೆ. ಕಾರವಾರದ ಹತ್ತಾರು ಮೊಬೈಲ್ ಅಂಗಡಿಗಳನ್ನು ವಿದ್ಯಾರ್ಥಿಗಳು ಜಾಲಾಡುತ್ತಿದ್ದಾರೆ. ಆದರೆ, ಯಾವ ಶಾಪ್‌ಗೆ ಹೋದರೂ ಇಲ್ಲ ಎಂಬ ಉತ್ತರ ಬರುತ್ತಿದೆ.
'ಡಿ.ಕೆ. ಶಿವಕುಮಾರ ಕನಕಪುರ ಬಂಡೆಯಲ್ಲ, ಜಲ್ಲಿ'
ಗರಿಗರಿ ದೋಸೆಯಂತೆ ಖಾಲಿ...
ಪ್ರವಾಹ ಬಂದಿದ್ದರಿಂದ ಹಾಗೂ ಭಾರಿ ಮಳೆಯಿಂದ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ನೂರಾರು ಮೊಬೈಲ್ ಸೆಟ್‌ಗಳು ಹಾಳಾಗಿದ್ದವು. ಯಾವಾಗ ಆನ್‌ಲೈನ್ ಕ್ಲಾಸ್ ಆರಂಭವಾಯಿತೋ ಆಗ ಅವುಗಳಿಗೆಲ್ಲ ಡಿಮ್ಯಾಂಡೋ ಡಿಮ್ಯಾಂಡು. ಅರೆಬರೆ ರಿಪೇರಿ ಮಾಡಿಟ್ಟ ಹ್ಯಾಂಡ್ ಸೆಟ್‌ಗಳೆಲ್ಲ ಗರಿಗರಿ ದೋಸೆಯಂತೆ ಖಾಲಿಯಾಗಿವೆ.
ಹಳೆಯ ಮೊಬೈಲ್ ಸೆಟ್‌ಗಳಿಗೆ ವಿದ್ಯಾರ್ಥಿಗಳಿಂದ ಭಾರಿ ಬೇಡಿಕೆ ಬಂದಿದೆ. ಆದರೆ, ಆನ್‌ಲೈನ್ ತರಗತಿಗಳಿಂದಾಗಿ ಇರುವ ಸೆಟ್‌ಗಳೆಲ್ಲ ಖಾಲಿಯಾಗಿವೆ. ಹಳೆಯ ಸೆಟ್ ಬಂದರೆ ತಮಗೆ ಬೇಕು ಎಂದು ವಿದ್ಯಾರ್ಥಿಗಳು ಹೆಸರು ಬರೆಸಿಟ್ಟು ಹೋಗುತ್ತಿದ್ದಾರೆ ಎಂದು ಮೊಬೈಲ್ ಶಾಪ್ ಮಾಲೀಕ ಅಫ್ತಾಬ್ ಅವರು ತಿಳಿಸಿದ್ದಾರೆ.