‘ಚಿಲುಮೆ’ ಸಂಸ್ಥೆ ಬೆಂಗಳೂರಿನಲ್ಲಿ ನಡೆಸಿದೆ ಎನ್ನಲಾದ ‘ವೋಟರ್ ಗೇಟ್’ ಹಗರಣದ ಮಾದರಿಯಲ್ಲೇ ಹುಬ್ಬಳ್ಳಿಯಲ್ಲೂ ಖಾಸಗಿ ಸಂಸ್ಥೆಯು ಮತದಾರರ ಮಾಹಿತಿ ಕದಿಯುತ್ತಿದೆ ಮತ್ತು ಮತ ಪಟ್ಟಿಯಲ್ಲಿನ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ ಎಂಬ ಶಂಕೆ ಬಲು ಜೋರಾಗಿದೆ!
ಶಿವಾನಂದ ಗೊಂಬಿ
ಹುಬ್ಬಳ್ಳಿ (ಡಿ..4) :\ ‘ಚಿಲುಮೆ’ ಸಂಸ್ಥೆ ಬೆಂಗಳೂರಿನಲ್ಲಿ ನಡೆಸಿದೆ ಎನ್ನಲಾದ ‘ವೋಟರ್ ಗೇಟ್’ ಹಗರಣದ ಮಾದರಿಯಲ್ಲೇ ಹುಬ್ಬಳ್ಳಿಯಲ್ಲೂ ಖಾಸಗಿ ಸಂಸ್ಥೆಯು ಮತದಾರರ ಮಾಹಿತಿ ಕದಿಯುತ್ತಿದೆ ಮತ್ತು ಮತ ಪಟ್ಟಿಯಲ್ಲಿನ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ ಎಂಬ ಶಂಕೆ ಬಲು ಜೋರಾಗಿದೆ!
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಬಹುಚರ್ಚಿತ ವಿಷಯವಾಗಿದ್ದು, ರಾಜಕೀಯದಲ್ಲೂ ತೀವ್ರ ಸಂಚಲನವನ್ನುಂಟು ಮಾಡಿದೆ. ಈ ಪ್ರಕರಣದ ತನಿಖೆ ಇದೀಗ ಚುರುಕಾಗಿದೆ. ಜತೆಗೆ ಕಳೆದ ಆರೇಳು ತಿಂಗಳಿನಿಂದಲೇ ಬೇರೆ ಬೇರೆ ಖಾಸಗಿ ಕಂಪನಿಗಳು ಮತದಾರರ ಮಾಹಿತಿ ಕದಿಯುವ ಕೆಲಸ ಮಾಡುತ್ತಿವೆ ಎಂಬ ಆರೋಪ ಸಹ ಕೇಳಿ ಬರುತ್ತಿದೆ.
ಹುಬ್ಬಳ್ಳಿಯಲ್ಲಿ VoterGate Scam : ಡಿಸಿ ತನಿಖೆ ಚುರುಕು
ಈ ನಡುವೆ ಜಿಲ್ಲೆಯಲ್ಲಿ 1.40 ಲಕ್ಷ ಜನರ ಹೆಸರನ್ನು ಅನಧಿಕೃತವಾಗಿ ಡಿಲಿಟ್ ಮಾಡಲಾಗಿದೆ ಎಂಬ ಆರೋಪ ಕಾಂಗ್ರೆಸ್ ಮಾಡುತ್ತಿದ್ದರೆ, ಅನಧಿಕೃತ ಡಿಲಿಟ್ ಮಾಡಲಾಗಿದೆ ಎಂಬುದನ್ನು ತಳ್ಳಿಹಾಕುವ ಜಿಲ್ಲಾಡಳಿತ 1.46 ಲಕ್ಷಕ್ಕೂ ಅಧಿಕ ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮತಗಳು ಡಿಲಿಟ್ ಆಗುತ್ತಿರುವುದು ನಿಜ ಎಂದಿರುವದು ಪ್ರತಿಪಕ್ಷಗಳ ಶಂಕೆಯನ್ನು ಬಲಗೊಳಿಸಿದೆ.
ಏನಿದು ವಿವಾದ?
ಬೆಂಗಳೂರಲ್ಲಿ ವೋಟರ್ ಗೇಟ್ ನಡೆಸಲಾಗುತ್ತಿದೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಹುಬ್ಬಳ್ಳಿಯಲ್ಲೂ ನಡೆಯುತ್ತಿದೆ ಎಂಬ ಆರೋಪ ಕಾಂಗ್ರೆಸ್ ಮಾಡುತ್ತಿತ್ತು. ಇದಕ್ಕೆ ಪುಷ್ಟಿನೀಡುವಂತೆ ಹರ್ಯಾಣ ಮೂಲದ ಎಎಸ್‌ಆರ್ ಸಂಸ್ಥೆಯು ‘ಚುನಾವಣಾ ಪೂರ್ವ ಸಮೀಕ್ಷೆ’ ನಡೆಸುವಾಗಲೇ ಮೂವರು ಸಿಬ್ಬಂದಿಯನ್ನು ಕೈ ಮುಖಂಡರು ರೆಡ್ ಹ್ಯಾಂಡ್ ಹಿಡಿದಿದ್ದರು. ಈ ವೇಳೆ ಇಬ್ಬರು ಸಿಬ್ಬಂದಿ ಪರಾರಿಯಾಗಿದ್ದುಂಟು. ಇದು ಸಂಶಯಕ್ಕೇ ಈಡುಮಾಡಿಕೊಟ್ಟಿತು. ಸಿಕ್ಕು ಬಿದ್ದಿರುವ ಸಿಬ್ಬಂದಿಗಳನ್ನು ಪೊಲೀಸರ ವಶಕ್ಕೆ ಕಾಂಗ್ರೆಸ್ ಒಪ್ಪಿಸಿದೆ. ಇದೀಗ ಈ ಬಗ್ಗೆ ತನಿಖೆ ಚುರುಕಿನಿಂದ ಸಾಗಿದೆ.
ಎಎಸ್‌ಆರ್ ಸಂಸ್ಥೆ ಯಾವುದು? ಅದೇಕೆ ಸಮೀಕ್ಷೆ ನಡೆಸುತ್ತಿದೆ? ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ. ಸಂಸ್ಥೆ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸುತ್ತಿದ್ದರೆ, ಕಾಂಗ್ರೆಸ್ ಮುಖಂಡರನ್ನು ಕಂಡು ಇಬ್ಬರು ಸಿಬ್ಬಂದಿಗಳು ಪರಾರಿಯಾಗಿದ್ದೇಕೆ? ಎಂಬ ಪ್ರಶ್ನೆ ಕಾಡುತ್ತಿದೆ.
ಆರೇಳು ತಿಂಗಳಿಂದ:
ಈ ನಡುವೆ ನಾಲ್ಕು ದಿನದ ಹಿಂದೆ ಪತ್ತೆಯಾಗಿರುವ ಎಎಸ್‌ಆರ್ ಸಂಸ್ಥೆಯೊಂದೇ ಈ ರೀತಿ ಸಮೀಕ್ಷೆ ನಡೆಸಿಲ್ಲ. ಬದಲಿಗೆ ಜೂನ್ ತಿಂಗಳಲ್ಲಿ ಐಐಎಂಟಿ ಹಾಗೂ ಜಿಎಸ್‌ಆರ್ ಎಂಬ ಸಂಸ್ಥೆಗಳು ಇದೇ ರೀತಿ ಸಮೀಕ್ಷೆ ನಡೆಸಿದ್ದವು. ಅಲ್ಪಸಂಖ್ಯಾತರು, ದಲಿತರು ಹೆಚ್ಚಿರುವ ವಾರ್ಡ್‌ಗಳಲ್ಲೇ ಆ್ಯಪ್ ಮೂಲಕ ಸಮೀಕ್ಷೆ ನಡೆಸುತ್ತಿವೆ. ಈ ಮೂಲಕ ಅಕ್ರಮ ಮತದಾರರ ಪಟ್ಟಿಪರಿಷ್ಕರಣೆ ನಡೆಯುತ್ತಿದೆ ಎಂಬ ಆರೋಪ ಕಾಂಗ್ರೆಸ್ಸಿನದು. ಹಾಗಾದರೆ ಈ ಜಿಎಸ್‌ಆರ್, ಐಐಎಂಟಿ ಕಂಪನಿಗಳು ಯಾವ್ಯಾವು? ಇವು ಯಾವ ಬಗೆಯ ಸಮೀಕ್ಷೆ ನಡೆಸಿದ್ದವು? ಎಂಬ ಬಗ್ಗೆ ಜಿಲ್ಲಾಡಳಿತದ ಬಳಿಯೂ ಮಾಹಿತಿ ಇಲ್ಲ. ಈ ಬಗ್ಗೆ ಆಗ ದೂರು ಕೂಡ ದಾಖಲಾಗಿರಲಿಲ್ಲ.
ಡಿಲೀಟ್ ಆಗಿದ್ದು ನಿಜನಾ?
ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬರೋಬ್ಬರಿ 14,67,658 ಮತದಾರರಿದ್ದಾರೆ. ಆದರೆ 2018ರ ಚುನಾವಣೆ ವೇಳೆ ಮತದಾರರ ಸಂಖ್ಯೆ 14,48,748 ಇತ್ತು. ಅಂದರೆ ಈಗ 18910 ಜನ ಹೆಸರು ಡಿಲಿಟ್ ಆಗಿದ್ದು ಕಂಡು ಬರುತ್ತದೆ. ಇದಕ್ಕೆ ಜಿಲ್ಲಾಡಳಿತ, ಜನವರಿಯಿಂದ ಮತದಾರರ ಪಟ್ಟಿಪರಿಷ್ಕರಣೆ ಮಾಡಲಾಗುತ್ತಿದೆ. ಬರೀ 18,910 ಜನರ ಹೆಸರು ಮಾತ್ರ ಡಿಲಿಟ್ ಆಗಿಲ್ಲ. ಬರೋಬ್ಬರಿ 1,43,316 ಜನರನ್ನು ಮತದಾರರ ಪಟ್ಟಿಯಿಂದ ಕಡಿತಗೊಳಿಸಲಾಗಿದೆ. ಮೃತಪಟ್ಟವರು 22,344 ಜನರಿದ್ದರೆ, ಸ್ಥಳಾಂತರಗೊಂಡವರೇ 30466, 46 ಸಾವಿರಕ್ಕೂ ಅಧಿಕ ಜನ ನಕಲಿ ಮತದಾರರು (ಬೇರೆ ಬೇರೆ ಜಿಲ್ಲೆ, ಕ್ಷೇತ್ರಗಳಲ್ಲಿದ್ದವರು), ಒಂದೇ ಬಗೆಯ ಫೋಟೋ ಇದ್ದ ಎರಡ್ಮೂರು ಎಪಿಕ್ ಕಾರ್ಡ್ ಹೊಂದಿರುವವರು ಹೀಗೆ 1,46,316 ಜನರನ್ನು ಡಿಲಿಟ್ ಮಾಡಲಾಗಿದೆ. ಇದರೊಂದಿಗೆ 1ಲಕ್ಷಕ್ಕೂ ಅಧಿಕ ಜನರನ್ನು ಸೇರ್ಪಡೆ ಮಾಡಲಾಗಿದೆ. ಹೀಗಾಗಿ 14.67 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಮತದಾರರ ಪಟ್ಟಿವಿವರಣೆ ರಾಜಕೀಯ ಪಕ್ಷಗಳಿಗೆ ಆಗಾಗ ನೀಡಲಾಗುತ್ತಿದೆ. ಅಂತಿಮ ಪಟ್ಟಿಬಂದಾಗ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ ಜಿಲ್ಲಾಡಳಿತ.
ಧಾರವಾಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್!
ಆದರೆ ಪ್ರತಿ ಕ್ಷೇತ್ರದಿಂದ 10ರಿಂದ 20 ಸಾವಿರ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗುತ್ತಿದೆ. ಅರ್ಹ ಮತದಾರರ ಹೆಸರೇ ಡಿಲೀಟ್ ಆಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ಚುನಾವಣಾ ಆಯೋಗ ಹೆಚ್ಚಿನ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
ಎಎಸ್‌ಆರ್ ಕಂಪನಿಗೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು. ಮತದಾರರ ಪಟ್ಟಿಪರಿಷ್ಕರಣೆ ವೇಳೆ 1.46 ಲಕ್ಷಕ್ಕೂ ಅಧಿಕ ಜನರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರಲ್ಲಿ 46 ಸಾವಿರಕ್ಕೂ ಹೆಚ್ಚು ನಕಲಿ ಮತದಾರರಿದ್ದರು. ಉಳಿದವರಲ್ಲಿ ಕೆಲವರು ಮೃತಪಟ್ಟಿದ್ದರೆ, ಹಲವರು ಸ್ಥಳಾಂತರಗೊಂಡಿದ್ದರು.
- ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ, ಧಾರವಾಡ
ಸಮೀಕ್ಷೆಗಳನ್ನು ಖಾಸಗಿ ಸಂಸ್ಥೆಗಳು ಮೊದಲಿನಿಂದಲೇ ನಡೆಸುತ್ತಲೇ ಇವೆ. ಅದನ್ನು ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಮತದಾರರ ಪರಿಷ್ಕರಣೆ ವೇಳೆ ನೈಜ ಮತದಾರರ ಹೆಸರು ಡಿಲೀಟ್ ಆಗಿದ್ದರೆ ಅದನ್ನು ಸೇರಿಸುವ ಕೆಲಸವಾಗಲಿ. ಇದರಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ.
ಜಗದೀಶ ಶೆಟ್ಟರ್, ಮಾಜಿ ಸಿಎಂ
ಮತದಾರರ ಪಟ್ಟಿಯಿಂದ ಕೆಲವರ ಹೆಸರು ಡಿಲೀಟ್ ಆಗಿದ್ದು ನಿಜ. ಈ ಬಗ್ಗೆ ನಮ್ಮ ಕಾರ್ಯಕರ್ತರು ಪರಿಶೀಲನೆ ನಡೆಸುತ್ತಿದ್ದಾರೆ. ನೈಜ ಮತದಾರರ ಹೆಸರು ಡಿಲೀಟ್ ಆಗಿದ್ದರೆ, ಅವುಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸೇರಿಸುವ ಕೆಲಸ ಮಾಡಲಾಗುವುದು.
ಅರವಿಂದ ಬೆಲ್ಲದ, ಬಿಜೆಪಿ ಶಾಸಕ
ಮತದಾರರ ಪಟ್ಟಿಯಿಂದ ಅರ್ಹರ ಹೆಸರು ಡಿಲೀಟ್ ಮಾಡಿಸುವ ಕೆಲಸವಾಗುತ್ತಿದೆ. ಆರು ತಿಂಗಳ ಹಿಂದೆ ಜಿಎಸ್‌ಆರ್, ಐಐಎಂಟಿ ಎಂಬ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದವು. ಆಗ ಈ ಬಗ್ಗೆ ನಮಗೆ ಗೊತ್ತಿರಲಿಲ್ಲ. ಹೀಗಾಗಿ ದೂರು ನೀಡಿರಲಿಲ್ಲ. ಮತದಾರರನನ್ನು ಕಡಿತಗೊಳಿಸುವ ಮೂಲಕ ಬಿಜೆಪಿ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದೆ.
ಅಲ್ತಾಫ್ ಹಳ್ಳೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ