ಆಟೋರಿಕ್ಷಾಗಳಿಗೆ ಅ. 1ರೊಳಗೆ ಮೀಟರ್ ಕಡ್ಡಾಯಗೊಳಿಸುವಂತೆ ಜಿಲ್ಲಾಡಳಿತ ಸೂಚನೆ. ಇನ್ನೊಂದೆಡೆ ದರ ನಿಗದಿ ಬೇಡಿಕೆ ಇಟ್ಟುಕೊಂಡು ಚಾಲಕರು, ಮಾಲೀಕರು ಚೌಕಾಸಿಯಲ್ಲಿ ನಿರತರಾಗಿದ್ದಾರೆ.
ವರದಿ: ಮಯೂರ ಹೆಗಡೆ
ಹುಬ್ಬಳ್ಳಿ (ಜು.28) : ಆಟೋರಿಕ್ಷಾಗಳಿಗೆ ಅ. 1ರೊಳಗೆ ಮೀಟರ್ ಕಡ್ಡಾಯಗೊಳಿಸುವಂತೆ ಒಂದೆಡೆ ಜಿಲ್ಲಾಡಳಿತ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ದರ ನಿಗದಿ ಬೇಡಿಕೆ ಇಟ್ಟುಕೊಂಡು ಚಾಲಕರು, ಮಾಲೀಕರು ಚೌಕಾಸಿಯಲ್ಲಿ ನಿರತರಾಗಿದ್ದಾರೆ. ಇವರಿಬ್ಬರ ನಡುವೆ ಪ್ರಯಾಣಿಕರ ಗೊಣಗಾಟ ಮುಂದುವರಿದಿದೆ. ಮಹಾನಗರದಲ್ಲಿ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆ ಚರ್ಚೆ ಪುನಃ ಮುನ್ನೆಲೆಗೆ ಬಂದಿದೆ. ಕಳೆದ ನಾಲ್ಕು ವರ್ಷಗಳೀಚೆಗೆ ಹಲವು ಬಾರಿ ಪ್ರಯತ್ನವಾದರೂ ಮೀಟರ್ ಲೆಕ್ಕಾಚಾರ ನಗರದಲ್ಲಿ ತಪ್ಪಿದೆ. ವಿಶೇಷವಾಗಿ ರಾತ್ರಿ ಸಂಚಾರ, ಮಳೆ ವೇಳೆ ರಿಕ್ಷಾ ಅವಲಂಭಿಸುವವರು ನಿಗದಿಯಿಲ್ಲದ ದರ ಕೇಳುವುದರಿಂದ ಹೈರಾಣಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ(Hubballia Dharwad)ದಲ್ಲಿ ಒಟ್ಟೂ24 ಸಾವಿರ ಆಟೋರಿಕ್ಷಾ(Autorikshaw)ಗಳಿವೆ. ನಾಲ್ಕಾರು ಸಂಘಟನೆಗಳಡಿ ಚಾಲಕರು, ಮಾಲೀಕರು ಸಂಘಟಿತರಾಗಿದ್ದಾರೆ. ಇವರನ್ನು ವಿಶ್ವಾಸಕ್ಕೆ ತಗೆದುಕೊಂಡು ದರ ನಿಗದಿಗೊಳಿಸಿ ಮೀಟರ್ ಕಡ್ಡಾಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
Bengaluru Auto Fare: ಬೆಲೆ ಏರಿಕೆ ಮಧ್ಯೆ ಇಂದಿನಿಂದ ಆಟೋ ದರ ಹೆಚ್ಚಳ
ನೇಮಗೌಡ(Nemagowda) ಅವರು ಡಿಸಿಪಿ(DCP) ಆಗಿದ್ದ ವೇಳೆ ಈ ಹಿಂದೆ 2018ರಲ್ಲಿ 1.6 ಕಿಮೀಗೆ . 28, ಅದಕ್ಕೂ ಹೆಚ್ಚಿನ 1ಕಿಮೀ ಪ್ರಯಾಣಕ್ಕೆ . 10ರಂತೆ ನಿಗದಿಸಲಾಗಿತ್ತು. ಆದರೆ, ಬಳಿಕ ದರ ಪರಿಷ್ಕರಣೆಗೊಂಡಿರಲಿಲ್ಲ. ಆದರೆ, ಪ್ರತಿ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಿಸುವ ಚಾಲಕರ ಬೇಡಿಕೆ ಈಡೇರಿರಲಿಲ್ಲ. ಶೇರಿಂಗ್ ಆಟೋ ಪದ್ಧತಿ ಕಾರಣಕ್ಕೆ ಆಟೋಗಳ ಮೀಟರ್ ಆನ್ ಆಗಿರಲಿಲ್ಲ.
ಈಚೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಟೋಮೀಟರ್ ದರ(Autometer rate) ಪರಿಷ್ಕರಣೆಯಾಗಿದೆ. 1.6 ಕಿಮೀ . 28 ಬದಲಾಗಿ . 30 ಹಾಗೂ ಬಳಿಕದ ಪ್ರಯಾಣಕ್ಕೆ . 15 ದರ ನಿಗದಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ, ಈ ದರವನ್ನು ಬಹುತೇಕ ಆಟೋಚಾಲಕರು, ಮಾಲೀಕರು ಒಪ್ಪಿಲ್ಲ. 2 ಕಿಮೀ ಪ್ರಯಾಣಕ್ಕೆ . 50 ಹಾಗೂ 1ಕಿಮೀ ಪ್ರಯಾಣಕ್ಕೆ . 30 ಎಂದು ಪರಿಗಣಿಸುವಂತೆ ಪಟ್ಟು ಹಿಡಿದಿದ್ದಾರೆ. ಅದರ ಜತೆಗೆ ಮಹಾನಗರದಲ್ಲಿ 155 ಆಟೋರಿಕ್ಷಾ ನಿಲ್ದಾಣಕ್ಕೆ ಜಾಗ ಗುರುತಿಸಿ ಚಾಲಕರಿಗೆ ನೀಡÜಬೇಕು. ಅಲ್ಲಿ ಚಾಲಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಪಟ್ಟು ಹಿಡಿದ್ದಾರೆ.
ಜನಸಾಮಾನ್ಯರಿಗೆ ಮತ್ತೊಂದು ಬಿಸಿ : ಆಟೋ ದರ ಏರಿಕೆಗೆ ಮನವಿ
ಮೀಟರ್ ಸಮಸ್ಯೆ:
ನಾಲ್ಕು ವರ್ಷದ ಹಿಂದೆ ಆಟೋಮೀಟರ್ ಕಡ್ಡಾಯಗೊಳಿಸಿದ್ದಾಗ ನಗರದ ಬಹುತೇಕ ಎಲ್ಲ ಆಟೋಗಳಿಗೆ ಮೀಟರ್ ಅಳವಡಿಕೆ ಆಗಿದೆ. ಆದರೆ ಅದನ್ನು ಒಂದೆ ಒಂದು ದಿನವೂ ಬಳಸದ ಚಾಲಕರು ಇದ್ದಾರೆ. ಅವೀಗ ಬಹುತೇಕ ಕೆಟ್ಟಿವೆ. ದರ ಪರಿಷ್ಕರಣೆಗಾಗಿ ಮೀಟರ್‌ನಲ್ಲಿ ತಾಂತ್ರಿಕ ಬದಲಾವಣೆ ಮಾಡಬೇಕಾಗಿದೆ. ಇದನ್ನು ನಿಗದಿತ 3 ತಿಂಗಳ ಅವಧಿಯಲ್ಲಿ ಸರಿಪಡಿಸಿಕೊಳ್ಳದ ಚಾಲಕರಿಗೆ ತೂಕ ಮತ್ತು ಅಳತೆ ಮಾಪನ ಇಲಾಖೆ . 75ರಂತೆ ದಂಡ ವಿಧಿಸುತ್ತಿದೆ. ಇದಕ್ಕೂ ಚಾಲಕರು ಆಕ್ಷೇಪಿಸಿದ್ದಾರೆ.
ತೂಕ ಮತ್ತು ಅಳತೆ ಇಲಾಖೆ ಆಟೋಮೀಟರ್ ತಾಂತ್ರಿಕ ಮಾರ್ಪಾಡಿಗೆ ಶುಲ್ಕ ನಿಗದಿಪಡಿಸಿದ್ದರೂ ಮಹಾನಗರಲ್ಲಿನ ಪರವಾನಗಿ ಹೊಂದಿರುವ ಮೀಟರ್ ದುರಸ್ತಿದಾರರು ಅದನ್ನು ಪಾಲಿಸುತ್ತಿಲ್ಲ ಎಂದು ಆಟೋಚಾಲಕರು ದೂರಿದ್ದಾರೆ. ದುರಸ್ತಿಗೆ . 800ರಿಂದ ಹಿಡಿದು ಹೊಸ ಮೀಟರ್‌ಗೆ . 4 ಸಾವಿರ ವರೆಗೆ ಬಿಲ್ ವಿಧಿಸಲಾಗುತ್ತಿದೆ ಎಂಬುದು ಆಟೋ ಚಾಲಕರ ಆರೋಪ. ಹೀಗಾಗಿ ತಮ್ಮದೆ ಆದ ಬೇಡಿಕೆ ಮುಂದಿಟ್ಟು ಮೀಟರ್ ಅಳವಡಿಕೆಗೆ ಶರತ್ತು ಹಾಕುತ್ತಿದ್ದಾರೆ.
ಈಚೆಗಷ್ಟೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದು ಆಟೋದಲ್ಲಿ ಮೀಟರ್ ಕಡ್ಡಾಯ ಮಾಡಬೇಕು ಎಂದು ತೀರ್ಮಾನವಾಗಿತ್ತು. ಆದರೆ ಹಗ್ಗಜಗ್ಗಾಟ ಕಾರಣಕ್ಕೆ ಪುನಃ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಟೋ ಚಾಲಕರು ಸಭೆಗೆ ಒತ್ತಾಯಿಸಿದ್ದಾರೆ.
ಪೆಟ್ರೋಲ್ ಹೆಚ್ಚಾದಂತೆ ನಮ್ಮ ದರವೂ ಹೆಚ್ಚಿಸಬೇಕು. ಅದಕ್ಕಾಗಿ ಆಗ್ಗಿಂದಾಗೆ ಸಭೆ ಕರೆಯಬೇಕು. ಹೆಚ್ಚಿನ ಜನ ಸೇರುವಲ್ಲಿ ಅನುಕೂಲ ಆಗುವಂತೆ ಸ್ಥಳ ನಿಗದಿಸಿ ನಮಗೆ ನೀಡಬೇಕು ಎಂದು ಆಟೋರಿಕ್ಷಾ ಚಾಲಕರು ಬೇಡಿಕೆ ಮುಂದಿಟ್ಟಿದ್ದಾರೆ.
ತಕ್ಷಣ ಆಟೋಮೀಟರ್ ಅಳವಡಿಕೆ ಸಾಧ್ಯವಿಲ್ಲ. ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಪ್ರಯತ್ನವಾದರೆ ನಾವೂ ಮೀಟರ್ ಪ್ರಕಾರ ಬಾಡಿಗೆ ಪಡೆಯಲು ಸಿದ್ಧ. ಅದಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ ಪುನಃ ಸಭೆ ನಡೆಸಲು ನಿರ್ಧರಿಸಿದ್ದೇವೆ.
ಶೇಖರಪ್ಪ ಮಠಪತಿ ಅಧ್ಯಕ್ಷ, ಹುಬ್ಬಳ್ಳಿ ಆಟೋರಿಕ್ಷಾ ಚಾಲಕರು, ಮಾಲೀಕರ ಸಂಘ
ಅಕ್ಟೋಬರ್ 1ರೊಳಗೆ ಎಲ್ಲ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮೀರಿದರೆ ಆಟೋ ಜಪ್ತು ಸೇರಿ ಇತರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಡಾ. ಗೋಪಾಲ ಬ್ಯಾಕೋಡ ಡಿಸಿಪಿ (ಸಂಚಾರ ಮತ್ತು ಅಪರಾಧ)