ಬರಡು ಜಿಲ್ಲೆಗೆ ನೀರಿನ ದಾಹ ನೀಗುವುದೆಂದು?

By Kannadaprabha News  |  First Published Mar 22, 2021, 4:23 PM IST

ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಹಿನ್ನೆಲೆಯಲ್ಲಿ ರೂಪಿಸಿದ ಎತ್ತಿನಹೊಳೆ ಬರೀ ಕನಸಾಗಿಯೆ ಉಳಿದಿದ್ದು, ಯೋಜನೆ ಸಂಪೂರ್ಣ ಹಣದ ಹೊಳೆಯಾಗಿ ರಾಜಕಾರಣಗಳ ಹಾಗೂ ಗುತ್ತಿಗೆದಾರರ ಜೇಬು ತುಂಬುವುದರ ಬಿಟ್ಟರೆ ಜಿಲ್ಲೆಗೂ ಹನಿ ನೀರು ಹರಿದಿಲ್ಲ.


ವರದಿ :  ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಮಾ.22):  
ಇಂದು ವಿಶ್ವ ಜಲ ದಿನಾಚರಣೆ, ಆದರೆ ರಾಜ್ಯದಲ್ಲಿಯೆ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿ ಹನಿ ಹನಿ ನೀರಿಗೂ ಪರದಾಡುವ ಬಯಲು ಸೀಮೆ ಜಿಲ್ಲೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಮಾತ್ರ ನಿತ್ಯ ಶಾಶ್ವತ ನೀರಾವರಿಗೆ ಧ್ಯಾನ ಮಾಡುವಂತಾಗಿದ್ದು, ಆಳುವ ಸರ್ಕಾರಗಳ ನಿರ್ಲಕ್ಷ್ಯ, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಪರಿಣಾಮ ಜಿಲ್ಲೆಯ ನೀರಾವರಿ ಸಮಸ್ಯೆ ರಾಜಕಾರಣಕ್ಕೆ ಸೀಮಿತವಾಗಿದೆ.

ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಹಿನ್ನೆಲೆಯಲ್ಲಿ ರೂಪಿಸಿದ ಎತ್ತಿನಹೊಳೆ ಬರೀ ಕನಸಾಗಿಯೆ ಉಳಿದಿದ್ದು, ಯೋಜನೆ ಸಂಪೂರ್ಣ ಹಣದ ಹೊಳೆಯಾಗಿ ರಾಜಕಾರಣಗಳ ಹಾಗೂ ಗುತ್ತಿಗೆದಾರರ ಜೇಬು ತುಂಬುವುದರ ಬಿಟ್ಟರೆ ಜಿಲ್ಲೆಗೂ ಹನಿ ನೀರು ಹರಿದಿಲ್ಲ. ಭೂ ಸ್ವಾಧೀನದ ಅಡ್ಡಿ, ಅತಂಕಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಇನ್ನೂ ಎಚ್‌ಎನ್‌ ವ್ಯಾಲಿ ನೀರು ಕೂಡ ಬರೀ ಕೆರೆಗಳಿಗೆ ಹರಿಸಲು ಸೀಮಿತವಾಗಿದ್ದು, ಜಿಲ್ಲೆಗೆ ಕೃಷಿಗೂ ಸೇರಿದಂತೆ ಸಮಗ್ರ ಶಾಶ್ವತ ನೀರಾವರಿ ಯಾವಾಗ ಸಿಗುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.

Tap to resize

Latest Videos

ಜಿಲ್ಲೆಗೆ ಸರ್ಕಾರ ರೂಪಿಸಿ ಅನುಷ್ಠಾನಗೊಳ್ಳುತ್ತಿರುವ ಯಾವ ನೀರಾವರಿ ಯೋಜನೆಯು ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸದ ಯೋಜನೆಗಳಾಗಿದ್ದು, ತಾತ್ಕಲಿಕ ಯೋಜನೆಗಳಿಗೆ ಸೀಮಿತವಾಗಿದೆ. ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಇನ್ನೂ ಅನುಷ್ಠಾನವಾಗುತ್ತಿಲ್ಲ. 210 ಎಂಎಲ್‌ಡಿ ನೀರಿಗೆ ಈಗ ಕೇವಲ 70 ಎಂಎಲ್‌ಡಿ ನೀರು ಹರಿಯುತ್ತಿದ್ದು ಇನ್ನೂ 140 ಎಂಎಲ್‌ಡಿ ನೀರು ಹರಿಯುತ್ತಿಲ್ಲ. ಇದರ ನಡುವೆ ವೃಷಭಾವತಿಯಿಂದ ಜಿಲ್ಲೆಗೂ ನೀರು ಹರಿಸಲಾಗುವುದೆಂದು ಸರ್ಕಾರ ಇತ್ತೀಚೆಗೆ ಬಜೆಟ್‌ನಲ್ಲಿ ಹೇಳಿರುವುದು ಸಮಾನಧಾನ ತಂದಿಲ್ಲ. ಎಚ್‌ಎನ್‌ ವ್ಯಾಲಿ ಯೋಜನೆಯಡಿ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರಿಗೆ ನೀರು ಹರಿದಿಲ್ಲ.

ಶಿರಸಿ: ಲಾಕ್‌ಡೌನ್‌ದಲ್ಲಿ ಮತ್ತೊಂದು ಬಾವಿ ತೋಡಿದ ಗೌರಿ..! ..

ಜಿಲ್ಲೆಗೆ ಯಾವ ಕೈಗಾರಿಕೆಗಳು ಕಾಲಿಡುತ್ತಿಲ್ಲ:

ಸರ್ಕಾರ ಜಿಲ್ಲೆಗೆ ನೀರು ಒದಗಿಸುವ ಅವಕಾಶ ಇರುವ ಯೋಜನೆಗಳಿಗೆ ಒತ್ತು ಕೊಡದ ಪರಿಣಾಮ ಬಯಲು ಸೀಮೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ವರ್ಷ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗೆ ನೀರಿನ ದಾಹ ನೀಗುತ್ತಿಲ್ಲ. ಇದರ ಪರಿಣಾಮವೇ ಜಿಲ್ಲೆಗೆ ಯಾವ ಕೈಗಾರಿಕೆಗಳು ಕಾಲಿಡುತ್ತಿಲ್ಲ. ನೀರಾವರಿ ಕೊರತೆಯಿಂದಲೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಜನರ ಆರ್ಥಿಕ, ಶೈಕ್ಷಣಿಕ ಮಟ್ಟಸುಧಾರಣೆ ಕಂಡಿಲ್ಲ. ಬೇಸಿಗೆ ಬಂದರೆ ನೂರಾರು ಗ್ರಾಮಗಳು ಜೀವ ಜಲಕ್ಕೆ ಪರದಾಡಬೇಕಿದೆ. ಆದರೆ ಸರ್ಕಾರಗಳು ಮೇಕೆದಾಟು, ಜಿಲ್ಲೆಯ ಆಂಧ್ರದ ಗಡಿಗೆ ಹರಿದಿರುವ ಕೃಷ್ಣ ನದಿ ನೀರು ಯೋಜನೆಗಳ ಅನುಷ್ಠಾನದ ಮೂಲಕ ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಲು ದಿಟ್ಟಹೆಜ್ಜೆ ಇರಿಸುವಲ್ಲಿ ವಿಫಲವಾಗಿರುವುದು ಜಿಲ್ಲೆಯ ಜನರ ಸಿಟ್ಟು, ಅಸಮಾಧಾನಕ್ಕೆ ಕಾರಣವಾಗಿದೆ.

ಅಂತರ್ಜಲ ಅತಿ ಬಳಕೆ ಜಿಲ್ಲೆ

ಈಗಾಗಲೇ ಅಂತರ್ಜಲ ಪಾತಳಕ್ಕೆ ಕುಸಿದಿರುವ ಜಿಲ್ಲೆಯಲ್ಲಿ ಕೊಳವೆ ಬಾವಿಗಳ ಅರ್ಭಟದ ಪರಿಣಾಮ ಸದ್ಯ ಅಂತರ್ಜಲ 1,500, 2000 ಅಡಿ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ರಾಜ್ಯ ಅಂತರ್ಜಲ ಪ್ರಾಧಿಕಾರ ಕೂಡ ಜಿಲ್ಲೆಯನ್ನು ಅತಿ ಹೆಚ್ಚು ಅಂತರ್ಜಲ ಬಳಕೆ ಪ್ರದೇಶ ಎಂದು ಗುರುತಿಸಿ ಕೊಳವೆ ಬಾವಿಗಳ ಕೊರೆಯಲು ಕಡಿವಾಣದ ಜೊತೆಗೆ ಕೊಳವೆ ಬಾವಿ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಮಾಡಿರುವುದು ಜಿಲ್ಲೆಯ ಜಲಕ್ಷಾಮದ ಸಂಕಷ್ಟವನ್ನು ಆನಾವರಣಗೊಳಿಸುತ್ತಿವೆ. ಆದರೂ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳ ಕನಸು ಮಾತ್ರ ನನಸಾಗದೇ ಕನಸಾಗಿಯೆ ಉಳಿದಿವೆ.

2500ಕ್ಕೂ ಹೆಚ್ಚು ನೀರಿಲ್ಲದ ಬೋರ್‌ಗಳಲ್ಲಿ ನೀರುಕ್ಕಿಸಿದ ಸಿಕಂದರ್ ..

 ಶಾಶ್ವತ ನೀರಾವರಿ ಹೋರಾಟ ಮರೆತರೆ?

ಹಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಉತ್ತುಂಗಕ್ಕೆ ಏರಿತ್ತು. 168 ದಿನಗಳ ಅನಿರ್ದಿಷ್ಟಾವಧಿ ಧರಣಿ ಕೂಡ ನಡೆಸಿದರು. ಬೆಂಗಳೂರಿಗೆ ಟ್ರ್ಯಾಕ್ಟರ್‌ ರಾರ‍ಯಲಿ ನಡೆಸಿ ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ನೀರಾವರಿ ಹೋರಾಟಗಾರರು ಬಿಸಿ ಮುಟ್ಟಿಸಿದ್ದರು. ಆದರೆ ಜಿಲ್ಲೆಯಲ್ಲಿ ಪ್ರಬಲವಾಗಿದ್ದ ಶಾಶ್ವತ ನೀರಾವರಿ ಹೋರಾಟ ಕೂಡ ಇತ್ತೀಚೆಗೆ ಸದ್ದಿಲ್ಲದಂತಾಗಿದೆ. ಡಾ.ಜಿ.ಎಸ್‌.ಪರಮಶಿವಯಯ್ಯ ಆಧಾರಿತ ನೀರಾವರಿ ಯೋಜನೆಯಿಂದ ಈ ಭಾಗಕ್ಕೆ ಸಮಗ್ರ ನೀರಾವರಿ ಹೋರಾಟ ಸಾಧ್ಯವಿದ್ದರೂ ಸರ್ಕಾರಗಳು ಈ ನಿಟ್ಟಿನಲ್ಲಿ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಅತ್ತ ಸರ್ಕಾರಗಳ ಮೇಲೆ ಹೋರಾಟದ ಮೂಲಕ ಒತ್ತಡ ಹಾಕುವ ಕೆಲಸ ನೀರಾವರಿ ಹೋರಾಟ ಸಮಿತಿಯಿಂದ ಇತ್ತೀಚೆಗೆ ನಡೆಯದಿರುವುದು ಎದ್ದು ಕಾಣುತ್ತಿದೆ.

click me!