ಮಂಗಳೂರು: ಅನಾಮಿಕ ಡ್ರೋಣ್ ನಿಷೇಧಿತ ವಲಯದಲ್ಲಿ ಹಾರಿದ್ದು ಹೇಗೆ..?

By Kannadaprabha NewsFirst Published Jan 9, 2020, 12:43 PM IST
Highlights

ಮಂಗಳೂರಿನಲ್ಲಿ ಹಾರಿದ ಅನಾಮಿಕ ಡ್ರೋಣ್‌ನಿಂದ ಆತಂಕ ಹೆಚ್ಚಿದೆ. ಯಾರ ಡ್ರೋಣ್‌, ಯಾಕೆ ಹಾರಿತು ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು ನಾಲ್ಕು ಕಿ.ಮೀ. ವ್ಯಾಪ್ತಿಯ ಮೇಲ್ಮೈನಲ್ಲಿ ‘ನೋ ಫ್ಲೈ ಝೋನ್‌’ ವಲಯ ರೂಪುಗೊಂಡಿರುತ್ತದೆ. ಹಾಗಿರುವಾಗ ನಿಷೇಧ ವಲಯದಲ್ಲಿ ಡ್ರೋಣ್ ಹಾರಿದ್ದು ಹೇಗೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಮಂಗಳೂರು(ಜ.09): ದೇಶದ ಪ್ರತಿಷ್ಠಿತ ಸಂಸ್ಥೆ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌(ಎಂಆರ್‌ಪಿಎಲ್‌) ಮತ್ತು ವಿಶೇಷ ಆರ್ಥಿಕ ವಲಯ(ಎಸ್‌ಇಝಡ್‌) ಭದ್ರತೆಯನ್ನು ಮೀರಿ ಡ್ರೋಣ್‌ ಚಿತ್ರೀಕರಣ ನಡೆಸಿರುವ ವದಂತಿ ಕುರಿತಂತೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಡಿ. 19 ಹಾಗೂ 20ರಂದು ಸಂಜೆ ವೇಳೆಗೆ ಡ್ರೋಣ್‌ ಮೂಲಕ ಇಲ್ಲಿನ ನಿಷೇಧಿತ ಪ್ರದೇಶಗಳ ಚಿತ್ರೀಕರಣವನ್ನು ಅನಾಮಿಕರು ನಡೆಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಇದನ್ನು ಎಂಆರ್‌ಪಿಎಲ್‌ ಆಡಳಿತ ಪುಷ್ಟೀಕರಿಸಿಲ್ಲ ಹಾಗೂ ನಿರಾಕರಿಸಲೂ ಇಲ್ಲ. ಇದರಿಂದಾಗಿ ಡ್ರೋಣ್‌ ಚಿತ್ರೀಕರಣ ನಡೆದಿರುವ ವಿಚಾರ ಇನ್ನೂ ಗೊಂದಲಕ್ಕೆ ಕಾರಣವಾಗಿದೆ. ಎರಡು ದಿನಗಳ ಕಾಲ ಡ್ರೋಣ್‌ ಚಿತ್ರೀಕರಣ ನಡೆದಿರುವ ಬಗ್ಗೆ ಎಂಎಸ್‌ಇಝಡ್‌ ಕಡೆಯಿಂದ ಎಂಆರ್‌ಪಿಎಲ್‌ಗೆ ಮಾಹಿತಿ ನೀಡಲಾಗಿದೆ. ಆದರೆ ಎಂಆರ್‌ಪಿಎಲ್‌ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ಇನ್ನೂ ಸಿಗದ ನಿಖರತೆ:

ಎಂಆರ್‌ಪಿಎಲ್‌ ಪ್ರದೇಶ ಸುಮಾರು ಮೂರು ಸಾವಿರ ಎಕರೆ ಪ್ರದೇಶವನ್ನು ಹೊಂದಿದೆ. ಇದರಲ್ಲಿ ಎಂಆರ್‌ಪಿಎಲ್‌ನ ತುಸು ಒಳಭಾಗದಲ್ಲಿ ಮಾತ್ರ ಡ್ರೋಣ್‌ ಹಾರಾಟ ನಡೆದಿದೆ ಎಂದು ಹೇಳಲಾಗಿದೆ. ಇದು ದುರುದ್ದೇಶಪೂರ್ವಕವಾಗಿ ಶೂಟಿಂಗ್‌ ಮಾಡಿರಲು ಸಾಧ್ಯವಿಲ್ಲ. ಯಾರೋ ಡ್ರೋಣ್‌ ಶೂಟಿಂಗ್‌ ಕಲಿಯುತ್ತಿರುವ ವೇಳೆ ತಪ್ಪಾಗಿ ನಿಷೇಧಿತ ಪ್ರದೇಶ ಪ್ರವೇಶಿಸಿರುವ ಸಾಧ್ಯತೆ ಇದೆ ಎಂಬ ತರ್ಕಕ್ಕೆ ಎಂಆರ್‌ಪಿಎಲ್‌ ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರದಲ್ಲಿ ಬುಧವಾರ ಆಡಳಿತ ಮಂಡಳಿ ಸಭೆ ನಡೆದಿದೆ. ಡ್ರೋಣ್‌ ವಿಚಾರದಲ್ಲಿ ಕೂಲಂಕಷ ತನಿಖೆ ನಡೆಸಿ ನೈಜಾಂಶವನ್ನು ಪತ್ತೆ ಮಾಡುವಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಮಂಗಳೂರಿನಲ್ಲಿ ಹಾರಿದ ಡ್ರೋನ್ ಕ್ಯಾಮೆರಾ : ಮತ್ತೆ ಹೆಚ್ಚಿದ ಆತಂಕ

ವಿಶ್ವಸನೀಯ ಮೂಲಗಳ ಪ್ರಕಾರ, ಜೋಕಟ್ಟೆಕಡೆಯಿಂದ ಡ್ರೋಣ್‌ ಹಾರಾಟವನ್ನು ಕೆಲವು ಕಂಡಿದ್ದಾರೆ. ಎಸ್‌ಇಝಡ್‌ನಿಂದ ಎಂಆರ್‌ಪಿಎಲ್‌ ಪ್ರದೇಶಗಳಲ್ಲೂ ಡ್ರೋಣ್‌ ಶೂಟಿಂಗ್‌ ನಡೆಸಿದೆ ಎಂದು ಹೇಳಲಾಗಿದೆ. ಇದನ್ನು ಯಾರು, ಯಾಕಾಗಿ ನಡೆಸಿದರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇದರ ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು, ಡ್ರೋಣ್‌ನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಕುರಿತು ಸ್ಪಷ್ಟನೆಗೆ ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ನಿಷೇಧಿತ ವಲಯ ಪ್ರವೇಶ ಹೇಗಾಯ್ತು?

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು ನಾಲ್ಕು ಕಿ.ಮೀ. ವ್ಯಾಪ್ತಿಯ ಮೇಲ್ಮೈನಲ್ಲಿ ‘ನೋ ಫ್ಲೈ ಝೋನ್‌’ ವಲಯ ರೂಪುಗೊಂಡಿರುತ್ತದೆ. ಮಂಗಳೂರಿನ ಮೇರಿಹಿಲ್‌, ಕಾವೂರು, ಬೊಂದೇಲ್‌, ಬಜಪೆ ವ್ಯಾಪ್ತಿಯಲ್ಲಿ ಡ್ರೋಣ್‌ ಹಾರಾಟಕ್ಕೆ ಅವಕಾಶ ಇರುವುದಿಲ್ಲ. ಒಂದು ವೇಳೆ ಇಲ್ಲಿ ಡ್ರೋಣ್‌ ಹಾರಾಟ ನಡೆದರೆ, ನಿಷೇಧಿತ ಪ್ರದೇಶ ಸಮೀಪಿಸುವಾಗಲೇ ಡ್ರೋಣ್‌ ನೆಟ್‌ವರ್ಕ್ ಕಾರ್ಯಾಚರಿಸುವುದಿಲ್ಲ ಎನ್ನುತ್ತಾರೆ ಡ್ರೋಣ್‌ ತಜ್ಞರು. ಅಲ್ಲದೆ ಈ ಬಗ್ಗೆ ಅಧಿಕೃತ ಸೂಚನೆ ಸಂಬಂಧಿತರಿಗೆ ರವಾನೆಯಾಗುತ್ತದೆ.

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆಯೂ ಕ್ಯಾಶ್‌ಲೆಸ್‌

ಇದೇ ರೀತಿ ತೈಲಾಗಾರ, ಎಸ್‌ಇಝಡ್‌ ವ್ಯಾಪ್ತಿಯಲ್ಲೂ ನಿಷೇಧಿತ ವಲಯ ಇದೆ. ಹಾಗಾದರೆ ನಿಷೇಧಿತ ವಲಯ ಬೇಧಿಸಿಕೊಂಡು ಡ್ರೋಣ್‌ ಕಾರ್ಯ ನಡೆಸಿದ್ದಾದರೂ ಹೇಗೆ ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಮೂಲಗಳ ಪ್ರಕಾರ, ನಿಷೇಧಿತ ವಲಯ ಇದ್ದರೂ ಅಲ್ಲಿ ಜಾಮರ್‌ ಅಳವಡಿಸಿರಲಿಲ್ಲ. ಆದ್ದರಿಂದ ನಿರಾತಂಕವಾಗಿ ಡ್ರೋಣ್‌ ಹಾರಾಟ ನಡೆಸಿರಬಹುದು ಎಂಬ ಅಧಿಕಾರಿಗಳು ಊಹೆಗೆ ಬಂದಿದ್ದಾರೆ. ಆದ್ದರಿಂದಲೇ ಇನ್ನು ಮುಂದೆ ಅಂತಹ ಎಡವಟ್ಟುಗಳಿಗೆ ಅವಕಾಶ ನೀಡದಂತೆ ಅತ್ಯಂತ ಹೆಚ್ಚಿನ ಕಣ್ಗಾವಲು ಇರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

click me!