ಶುಂಠಿ ಬೆಳೆಯನ್ನು ಅಡಕೆಯ ಅಂತರ ಬೆಳೆಯಾಗಿ ಮತ್ತು ಏಕಬೆಳೆಯಾಗಿ ಬೆಳೆಯುತ್ತಿದ್ದು, ಅಡಕೆಯಷ್ಟೇ ಆದಾಯವನ್ನು ತಂದುಕೊಡುವ ಬೆಳೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಂಠಿ ಬೆಳೆಗೆ ಗಡ್ಡೆಕೊಳೆ ರೋಗವು ಕಂಡುಬಂದಿರುತ್ತದೆ.
ಶಿವಮೊಗ್ಗ (ಸೆ.28): ಜಿಲ್ಲೆಯ ಸುಮಾರು 5,460 ಹೆಕ್ಟೇರ್‌ನಲ್ಲಿ ಶುಂಠಿ ಬೆಳೆಯನ್ನು ಅಡಕೆಯ ಅಂತರ ಬೆಳೆಯಾಗಿ ಮತ್ತು ಏಕಬೆಳೆಯಾಗಿ ಬೆಳೆಯುತ್ತಿದ್ದು, ಅಡಕೆಯಷ್ಟೇ ಆದಾಯವನ್ನು ತಂದುಕೊಡುವ ಬೆಳೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಂಠಿ ಬೆಳೆಗೆ ಗಡ್ಡೆಕೊಳೆ ರೋಗವು ಕಂಡುಬಂದಿರುತ್ತದೆ. ಶುಂಠಿ ಗಡ್ಡೆ ಕೊಳೆರೋಗವು ‘ಪೈಥಿಯಂ ಆಫಿನಿರ್ಡಮೆಟಂ’ ಎಂಬ ಶಿಲೀಂಧ್ರದಿಂದ ಬರುತ್ತದೆ. ಬೆಳೆಯು ಈ ರೋಗಕ್ಕೆ ತುತ್ತಾದ್ದಲ್ಲಿ ಗಿಡ ಸಂಪೂರ್ಣವಾಗಿ ಒಣಗಿ ಸಾಯಿವುದರಿಂದ ಅಧಿಕ ನಷ್ಟವನ್ನುಂಟುಮಡುತ್ತದೆ. ಈ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಬೊಜ್ಜು ಕರಗಿಸಿ ದೇಹ ಫಿಟ್ ಮಾಡುತ್ತೆ ಕರಿಮೆಣಸು..! ಸ್ಪೈಸಿ ರೆಸಿಪಿ ಇಲ್ಲಿದೆ .
ಇದರ ಹೊರತಾಗಿ ಬ್ಯಾಕ್ಟೀರಿಯಾದಿಂದ ಬರುವ ಗಡ್ಡೆ ಕೊಳೆರೋಗ ಅಥವಾ ಹಸಿರು ಕೊಳೆ ರೋಗವು ಕೆಲವು ಕಡೆ ಬಂದಿರುತ್ತದೆ. ಬಿಸಿಲು ಮತ್ತು ಮಳೆಯ ವಾತಾವರಣ ಈ ಹಸಿರು ಕೊಳೆ ರೋಗವು ಉಲ್ಬಣವಾಗಲು ಮುಖ್ಯ ಕಾರಣ. ರೋಗದ ಸಮಗ್ರ ನಿರ್ವಹಣೆ ಅತಿ ಅವಶ್ಯವಾಗಿರುತ್ತದೆ. ಆದ್ದರಿಂದ ಶುಂಠಿ ಬೆಳೆಯುತ್ತಿರುವಂತಹ ರೈತರು ರೋಗದ ನಿಯಂತ್ರಣಕ್ಕೆ, ನಿರ್ವಹಣಾ ಕ್ರಮ ಅನುಸರಿಸಿಸಲು ತೊಟಗಾರಿಕೆ ಇಲಾಖೆ ಕೋರಿದೆ.
ಹೀಗೆ ಮಾಡಿ:
1) ಶುಂಠಿ ಮಡಿಗಳಲ್ಲಿ ನೀರು ನಿಲ್ಲದ ಹಾಗೆ ಬಸಿಗಲುವೆಗಳನ್ನು ಸರಿಪಡಿಸುವುದು ಮತ್ತು ಶುಂಠಿ ಮಡಿಗಳಲ್ಲಿ ಮಣ್ಣು ಕೊಚ್ಚಿ ಹೊಗಿದ್ದಲ್ಲಿ ಮಡಿಗಳಿಗೆ ಮಣ್ಣನ್ನು ಏರಿಸುವುದು.
2) ತಾಕುಗಳಲ್ಲಿ ರೋಗದ ಮುನ್ಸೂಚನೆ ಕಂಡುಬಂದಲ್ಲಿ ಶೇ. 1 ರ ಬೋರ್ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
3) ಈಗಾಗಲೇ ತೀವ್ರವಾಗಿ ರೋಗಕ್ಕೆ ತುತ್ತಾಗಿರುವ ತಾಕುಗಳಲ್ಲಿ ಬಾಧಿತ ಗಿಡಗಳನ್ನು ಗಡ್ಡೆಗಳ ಸಮೇತ ತೆಗೆದು ಹಾಕಿ, ನಂತರ 1 ಗ್ರಾಂ ಮೆಟಲಾಕ್ಸಿಲ್ + 2 ಗ್ರಾಂ ಮ್ಯಾಂಕೊಜೆಬ್ (ರೆಡೊಮಿಲ್ ಎಂ.ಝಡ್) ಅಥವಾ 2 ಗ್ರಾಂ ಸೈಮಕ್ಸಿನ್+ 2 ಗ್ರಾಂ ಮ್ಯಾಂಕೊಜೆಬ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ರೋಗ ಬಂದಂತಹ ಮಡಿಗೆ ಹಾಗೂ ಸುತ್ತಮುತ್ತಲಿನ ಮಡಿಗಳಿಗೆ ಸಂಪೂರ್ಣವಾಗಿ ನೆನೆಯುವಂತೆ ಹಾಕುವುದು ಹಾಗೂ ಸಂಪೂರ್ಣ ಬೆಳೆಗೆ ಸಿಂಪರಣೆ ಮಡುವುದು.
ಹಸಿರು ಕೊಳೆ ರೋಗ:
1) ‘ರಾಲಸ್ಟೊನಿಯಾ ಸೊಲನೇಸಿಯಾರಂ ಬ್ಯಾಕ್ಟೀರಿಯಾದಿಂದ’ ಬರುವ ಕೊಳೆ ರೋಗಕ್ಕೆ (ಹಸಿರು ಕೊಳೆ ರೋಗ) ತುತ್ತಾದ ಗಿಡದ ಎಲೆಗಳು ಹಸಿರಿರುವಾಗಲೇ ಸುರುಳಿ ಸುತ್ತಿಕೊಂಡು ಬಾಡುತ್ತವೆ, ನಂತರ ಕೆಳಗಿನಿಂದ ಎಲೆಗಳು ಹಳದಿಯಾಗುತ್ತವೆ ಮತ್ತು 4-5 ದಿನಗಳಲ್ಲೇ ಬಾಡಿ ಸಾಯುತ್ತವೆ.
2) ಈ ರೋಗ ತಗುಲಿದ ಗಿಡಗಳು ಕೆಲವೇ ದಿನಗಳಲ್ಲಿ ಸಾಯುವುದರಿಂದ ಒಮ್ಮೆ ರೋಗ ತಗುಲಿದ ಗಿಡಗಳನ್ನು ಬದುಕಿಸಿವುದು ಕಷ್ಟ. ಆದ್ದರಿಂದ ಶುಂಠಿಯಲ್ಲಿ ಹಸಿರು ಕೊಳೆಯನ್ನು ನಿಯಂತ್ರಿಸಲು ಸ್ಟೆ್ರಪ್ಟೊಸೈಕ್ಲಿನ್ 0.5 ಗ್ರಾಂ ಮತ್ತು ಕಾಪರ್ ಆಕ್ಸಿ ಕ್ಲೋರೈಡ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ಗಿಡದ ಬುಡ ನೆನೆಯುವಂತೆ ಹಾಕಬೇಕು.
3) ತೋಟದಲ್ಲಿ ರೋಗ ಪೀಡಿತ ಗಿಡಗಳನ್ನು ಕಿತ್ತು ಆ ಜಾಗಕ್ಕೆ ಸುಣ್ಣವನ್ನು ಹಾಕಬೇಕು ಮತ್ತು ಆ ಜಾಗದ ನೀರು ಉಳಿದ ಪ್ರದೇಶಕ್ಕೆ ಹರಿದು ಹೊಗದಂತೆ ಎಚ್ಚರ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ವಿಷಯ ತಜ್ಞರಾದ ಗಾನ ಕೆ.ಆರ್. ಅವರನ್ನು ಸಂಪರ್ಕಿಸಲು ಸೂಚಿಸಲಾಗಿದೆ.