ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಕಲುಬುರಗಿ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಬೆಳೆ, ಆಸ್ತಿ ಪಾಸ್ತಿ ನಷ್ಟವಾಗಿದೆ. ಮಳೆಯಿಂದ ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.
ಚವಡಾಪುರ (ಆ.8) : ಅಫಜಲ್ಪುರ ತಾಲೂಕಿನಾದ್ಯಂತ ಮುಂಗಾರು ಮಳೆ ಆರಂಭದಲ್ಲಿ ಸಕಾಲಕ್ಕೆ ಮಳೆ ಬಾರದೆ ಬಿತ್ತನೆ ಕುಂಠಿತವಾಗಿತ್ತು. ಕ್ರಮೇಣ ಉತ್ತಮ ಮಳೆ ಬಂದು ಬಿತ್ತನೆ ಕಾರ್ಯ ನಡೆದು ಬೆಳೆ ಚಿಗುರೊಡೆಯುತ್ತಿರುವಾಗಲೇ ವ್ಯಾಪಕ ಮಳೆಯಾಗಿದ್ದರಿಂದ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ, ಆಸ್ತಿ ಪಾಸ್ತಿ ನಷ್ಟವಾಗಿದೆ. ಜನವರಿಯಿಂದ ಆ.5ರವೆಗೆ ಬರಬೇಕಾಗಿದ್ದ ವಾಡಿಕೆ ಮಳೆ 291.9 ಮಿ.ಮೀ. ಆದರೆ ಇದುವರೆಗೂ 440 ಮಿ.ಮೀ. ಮಳೆಯಾಗುವ ಮೂಲಕ ವಾಡಿಕೆಗಿಂತ 51 ಪ್ರತಿಶತದಷ್ಟುಹೆಚ್ಚಿನ ಮಳೆ ದಾಖಲಾಗಿದೆ. ಆದರೆ ಎಷ್ಟುಮಳೆ ಸಕಾಲಕ್ಕೆ ಮುಂಗಾರು ಬಿತ್ತನೆ ಸಮಯದಲ್ಲಿ ಬಾರದಿರುವುದು ರೈತರಿಗೆ ಇನ್ನಷ್ಟುಚಿಂತೆಗೀಡು ಮಾಡಿದೆ. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟುಜನರ ಮನೆಗಳು ಧರಾಶಾಯಿಯಾಗಿ ಆಸರೆ ಇಲ್ಲದಂತಾಗಿದೆ.
ಜುಲೈನಲ್ಲಿ ಶೇ.114 ಹೆಚ್ಚು ಮಳೆಯಿಂದ ಹಾನಿ: ಸಿಎಂ ಬೊಮ್ಮಾಯಿ
74 ಮನೆಗಳು ಧರಾಶಾಯಿ: ಸಕಾಲಕ್ಕೆ ಮಳೆ ಬಾರದಿದ್ದರು ಸಹ ಕಳೆದ ಕೆಲ ವಾರದಿಂದ ಬರುತ್ತಿರುವ ವ್ಯಾಪಕ ಮಳೆಯಿಂದಾಗಿ ಅಫಜಲ್ಪುರ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅದರಲ್ಲೂ ಮುಖ್ಯವಾಗಿ ತೊಗರಿ, ಹತ್ತಿ, ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗಳು ಹೆಚ್ಚು ಹಾನಿಯಾಗಿದ್ದು ರೈತರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಇದಲ್ಲದೆ ಅಫಜಲ್ಪುರ ತಾಲೂಕಿನ ಮಣೂರ, ಕೆರಕನಹಳ್ಳಿ ಸೇರಿದಂತೆ ಹೆಚ್ಚಿನ ಮಳೆಯಿಂದಾಗಿ ಇಲ್ಲಿಯವರೆಗೆ 74 ಮನೆಗಳು ಧರಾಶಾಯಿಯಾಗಿ ಜನಸಾಮಾನ್ಯರು ನಿರಾಶ್ರಿತರಾಗುವಂತೆ ಮಾಡಿದೆ. ಅಲ್ಲದೆ ಮನೆಯಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯ, ಬಟ್ಟೆ, ಬರೆಗಳೆಲ್ಲ ಮಳೆ ನೀರಲ್ಲಿ ನೆನೆದು ಹೊಟ್ಟೆಗೆ ಹಿಟ್ಟಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಬಿದ ಹಳ್ಳ, ಕೊಳ್ಳಗಳು: ಮಳೆ ಕೊರತೆಯಿಂದ ಬತ್ತಿ ಹೋಗಿದ್ದ ಹಳ್ಳ ಕೊಳ್ಳ, ಕೆರೆ ಕುಂಟೆಗಳಲ್ಲೀಗ ನೀರು ತುಂಬಿ ಹರಿಯುತ್ತಿದೆ. ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ಅಂತರ್ಜಲ ಮಟ್ಟಹೆಚ್ಚಳವಾಗುತ್ತಿದೆ. ಮಳೆಯಿಂದ ಸದ್ಯಕ್ಕೆ ಆಸ್ತಿಪಾಸ್ತಿ, ಬೆಳೆ ಹಾನಿಯಾಗುತ್ತಿರುವುದು ಸತ್ಯವಾಗಿದೆ. ಅದರ ಜೊತೆಗೆ ಬೇಸಿಗೆಯಲ್ಲಾಗುವ ನೀರಿನ ಕೊರತೆ ನಿವಾರಣೆಗೆ ಈಗ ಮಳೆ ಹೆಚ್ಚಾಗುತ್ತಿರುವುದು ಪರಿಹಾರದಂತಾಗಿದೆ. ಹೀಗಾಗಿ ಒಂದು ಕಹಿ, ಇನ್ನೊಂದು ಸಿಹಿ ಎನಿಸುವ ರೀತಿಯಲ್ಲಿ ಮಳೆ ಬೀಳುತ್ತಿದೆ.
Heavy Rain Fall : ಚೇರ್ ಮೇಲೆ ರಾತ್ರಿ ಕಳೆದ ಆಪರೇಷನ್ ಆದ ವ್ಯಕ್ತಿ!
ಸದ್ಯ ಮಳೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ತಡವಾಗಿ ಬಿತ್ತನೆಯಾಗಿರುವ ಮುಂಗಾರು ಬೆಳೆ ಫಲ ನೀಡುವ ಮುನ್ನ ಮಳೆಗೆ ಆಹುತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್ ಗಡಗಿಮನಿ, ತಹಸೀಲ್ದಾರ ಸಂಜೀವಕುಮಾರ ದಾಸರ್ ಕನ್ನಡಪ್ರಭದೊಂದಿಗೆ ಮಾತನಾಡಿ, ಎಲ್ಲೆಲ್ಲಿ ಸಮಸ್ಯೆ ಇದೆ, ಅಲ್ಲಿ ಜನರ ರಕ್ಷಣೆಗೆ ಬೇಕಾದ ಕ್ರಮಗಳನ್ನು ತಾಲೂಕು ಆಡಳಿತದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೆ ಬೆಳೆ ಹಾನಿಯೂ ವ್ಯಾಪಕ ಪ್ರಮಾಣದಲ್ಲಿ ಆಗಿದೆ. ಅದರ ಕುರಿತು ಸಂಪೂರ್ಣ ಸರ್ವೆ ಆದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.