ದಾಖಲೆ ಮಳೆ- 1997ರ ನಂತರ ಅಕ್ಟೋಬರಲ್ಲಿ ಇಷ್ಟೊಂದು ಮಳೆ ಆಗಿದ್ದು 3ನೇ ಸಲ| 1997ರ ಅ.1ರಂದು 178.9 ಮಿ.ಮೀ| 2019ರ ಅ.9ರಂದು 140.5 ಮಿ.ಮೀ| 2020ರ ಅ.20ರಂದು 124.5 ಮಿ.ಮೀ.| - ಉಕ್ಕಿ ಹರಿದ ರಾಜಕಾಲುವೆ, ಚರಂಡಿ, ಕೆರೆಗಳು| ಮನೆಗಳು, ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗೆ ನುಗ್ಗಿದ ಮಳೆ ನೀರು|
ಬೆಂಗಳೂರು(ಅ.22): ಮಂಗಳವಾರ ಸಂಜೆ ಹಾಗೂ ರಾತ್ರಿ ಸುರಿದ ಅಬ್ಬರದ ಮಳೆಗೆ ರಾಜಧಾನಿ ಅಕ್ಷರಶಃ ನಲುಗಿತು. ಕೆರೆ, ರಾಜಕಾಲುವೆ, ರಸ್ತೆಗಳು, ಅಂಡರ್ ಪಾಸ್ ಸೇರಿದಂತೆ ಅನೇಕ ಬಡಾವಣೆಗಳು ನೀರಿನಿಂದ ತುಂಬಿ ಕೆರೆಯಂತಾಗಿದ್ದವು. ನೂರಾರು ಮನೆಗಳು, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದ ಪರಿಣಾಮ ಇಡೀ ರಾತ್ರಿ ಜನರು ಪರದಾಡಿದರು.
ಭಾರೀ ಗಾಳಿ ಸಹಿತ ಸುರಿದ ಮಳೆಗೆ ನಗರದ ಮಲ್ಲೇಶ್ವರ, ಬನಶಂಕರಿ, ಜೆ.ಪಿ.ನಗರ, ಜಯನಗರ, ಜೆ.ಪಿ.ನಗರ ಸೇರಿದಂತೆ ವಿವಿಧೆಡೆ 12 ಮರಗಳು ಧರೆಗುರುಳಿದ್ದು, 53 ರಂಬೆಗಳು ಮುರಿದು ಬಿದ್ದಿವೆ. ಹೊಸಕೆರೆಹಳ್ಳಿ ಮುಖ್ಯರಸ್ತೆಯಲ್ಲಿ ಮರವೊಂದು ಬುಡಸಮೇತ ದ್ವಿಚಕ್ರವಾಹನವೊಂದರ ಮೇಲೆ ಬಿದ್ದು, ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋರಮಂಗಲ, ಹೊರಮಾವು, ಬಾಗಲೂರು ಸುತ್ತಮುತ್ತಲ ಪ್ರದೇಶಗಳ ರಸ್ತೆಗಳಲ್ಲಿ ನಾಲ್ಕೈದು ಅಡಿ ನೀರು ನಿಂತು ಕೆರೆಯಂತಾಗಿತ್ತು. ಬುಧವಾರ ಬೆಳಗ್ಗೆ ಕೆಲಸ ಕಾರ್ಯಗಳಿಗೆ ತೆರಳಬೇಕಿದ್ದ ಜನರು, ಮನೆಗಳಲ್ಲಿ ತುಂಬಿದ್ದ ನೀರನ್ನು ಹೊರಹಾಕುವಷ್ಟರಲ್ಲಿ ಹೈರಾಣಗಿದ್ದರು.
ಸಿಲಿಕಾನ್ ಸಿಟಿ ಜನರೇ ಎಚ್ಚರ... ಅಬ್ಬರಿಸಲಿದ್ದಾನೆ ವರುಣ
ನಗರದ 28 ವಾರ್ಡ್‌ಗಳಲ್ಲಿ 75 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ರಾಜರಾಜೇಶ್ವರಿನಗರ, ದತ್ತ ಲೇಔಟ್, ಕೋರಮಂಗಲ 1ನೇ ಬ್ಲಾಕ್, ರುಕ್ಮಿಣಿನಗರ, ಗುಂಡಪ್ಪ ಲೇಔಟ್, ರಾಯಲ್ ಎನ್‌ಕ್ಲೈವ್, ರಾಯಲ್ ಎನ್‌ಕ್ಲೈವ್, ಸಿಡೇದಹಳ್ಳಿ, ಬಾಗಲಗುಂಟೆ, ಉಲ್ಲಾಳ್ ಮತ್ತು ಸುತ್ತಮುತ್ತಲ ಪ್ರದೇಶ, ಬೊಮ್ಮನಹಳ್ಳಿ, ಮಹದೇವಪುರ, ದೊಡ್ಡಾನೆಕುಂದಿ, ನಿಸರ್ಗ ಲೇಔಟ್ ಯಲಹಂಕ, ವಿದ್ಯಾರಣ್ಯಪುರ 6ನೇ ಬ್ಲಾಕ್, ವಾರ್ಡ್ 8, ಭದ್ರಪ್ಪ ಲೇಔಟ್, ವಾರ್ಡ್ 7, ಕರಿಯಣ್ಣ ಲೇಔಟ್, ದಾಸರಹಳ್ಳಿ, ಹೊಸಕೆರೆಹಳ್ಳಿ, ಬೇಗೂರು, ಮಂಗಮ್ಮನಪಾಳ್ಯ, ಬೆಳ್ಳಂದೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.
ಬೇಸ್‌ಮೆಂಟ್‌ಗಳಿಗೆ ನುಗ್ಗಿದ ನೀರು:
ಕೋರಮಂಗಲದ 1ನೇ ಬ್ಲಾಕ್, 4ನೇ ಬ್ಲಾಕ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳಿಗೆ ಮಳೆ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿತ್ತು. ರಸ್ತೆಯಲ್ಲಿ ಮೂರು ಅಡಿ ನೀರು ಹಾಗೂ ಕೆಸರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ಈ ವೇಳೆ ಬಿಬಿಎಂಪಿ ಸಿಬ್ಬಂದಿ ತಗ್ಗುಪ್ರದೇಶದ ರಸ್ತೆಗಳಿಗೆ ಜಲ್ಲಿ ಹಾಕಿ ವಾಹನ ಸವಾರರು ಓಡಾಡಲು ಅನುಕೂಲ ಮಾಡಿದರು.
ಕಲ್ಯಾಣಮಂಟಪ ಜಲಾವೃತ:
ರಾಜರಾಜೇಶ್ವರಿ ನಗರ ಸಮೀಪದ ಮೀನಾಕ್ಷಿ ಕಲ್ಯಾಣ ಮಂಟಪದ ಊಟದ ಸಭಾಂಗಣ, ಬೆಸ್‌ಮೆಂಟ್‌ಗೆ ನೀರು ನುಗ್ಗಿದ ಪರಿಣಾಮ ಖುರ್ಚಿ, ಟೇಬಲ್, ಊಟದ ಪಾತ್ರೆಗಳು ನೀರಿನಲ್ಲಿ ತೇಲಿದವು. ರಾತ್ರಿ ಮದುವೆ ರಿಸೆಪ್ಷನ್‌ಗೆ ಬಂದಿದ್ದ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲು ಮದುವೆ ಮನೆಯವರು ಪರದಾಡಿದರು. ಬುಧವಾರ ಬೆಳಗ್ಗೆ ಸಹ ಜನರೇಟರ್ ಬಳಸಿಕೊಂಡು ನೀರನ್ನು ಹೊರಹಾಕಲಾಯಿತು. ಇಂತಹ ಅವಾಂತರದ ನಡುವೆ ಸರಳ ಮದುವೆ ನಡೆಯಿತು.
ಕೆರೆಯಂತಾದ ರಸ್ತೆಗಳು:
ರಾತ್ರಿ ಸುರಿದ ಭಾರೀ ಮಳೆಗೆ ಹೆಣ್ಣೂರು ಬಳಿಯ ಹೊರಮಾವು ಬಳಿಯ ಸಾಯಿಬಾಬಾ ದೇವಾಲಯದ ರಸ್ತೆ ಜಲಾವೃತವಾಗಿತ್ತು. ಕೋರಮಂಗಲದ ಆರ್‌ಟಿಒ ಕಚೇರಿ ಬಳಿಯ ರಸ್ತೆಗಳಲ್ಲಿ ರಾಜಕಾಲುವೆ ನೀರು ಹರಿದು ಬಂದಿತ್ತು. ಹೊರಮಾವು ಪ್ರದೇಶದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಮನೆ ಹೊರಗೆ ಕುಳಿತು ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು. ಕೋರಮಂಗಲದ 80 ಅಡಿ ರಸ್ತೆ ಸಮೀಪದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು.
ಪ್ರವಾಹ ತಪ್ಪಿಸಲು ಮಳೆ ನೀರು ಸಂಗ್ರಹ ಗುಂಡಿ ನಿರ್ಮಾಣ: ಡಿಸಿಎಂ ಅಶ್ವತ್ಥನಾರಾಯಣ
ತುಂಬಿ ಹರಿದ ಕಸವನಹಳ್ಳಿ ಕೆರೆ:
ಬೆಳ್ಳಂದೂರು ಸಮೀಪದ ಕಸವನಹಳ್ಳಿ ಕೆರೆ ತುಂಬಿ ಹರಿದ ಪರಿಣಾಮ ಕೆರೆಯ ಸುತ್ತಮುತ್ತಲ ಮನೆಗಳು, ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಅಂತೆಯೆ ಬೇಗೂರು, ಮಂಗಮ್ಮನಪಾಳ್ಯದ ಬಹುತೇಕ ಮನೆಗಳಿಗೆ ನೀರು ನುಗ್ಗಿತು. ಬೇಸ್‌ಮೆಂಟ್‌ನಲ್ಲಿ ನಿಲುಗಡೆ ಮಾಡಿದ್ದ ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದವು. ಸುಮಾರು 800 ಮನೆಗಳಿರುವ ಶ್ರೀರಾಮ ಚಿರ್ಪಿಂಗ್ ವುಡ್ಸ್ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದ ಪರಿಣಾಮ ಬೇಸ್‌ಮೆಂಟ್‌ನ ಸಂಪ್‌ಗಳಿಗೆ ಕೊಳಚೆ ನೀರು ತುಂಬಿಕೊಂಡಿತ್ತು. ಎಲೆಕ್ಟ್ರಿಕಲ್ ಕೊಠಡಿಯೂ ಜಲಾವೃತವಾದ ಪರಿಣಾಮ ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿ ನಿವಾಸಿಗಳು ಪರದಾಡಿದರು.
ಹೊಸಕೆರೆಹಳ್ಳಿ ರಾಜಕಾಲುವೆ ಗೋಡೆ ಕುಸಿತ:
ಹೊಸಕೆರೆಹಳ್ಳಿಯ ರಾಜಕಾಲುವೆಯಲ್ಲಿ ನೀರು ಪ್ರಯಾಣ ಹೆಚ್ಚಾಗಿ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು. ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿ ತುಲುಪಿವೆ. ಇದರಿಂದ ಸ್ಥಳೀಯರು ಆತಂಕದಲ್ಲಿ ಇದ್ದರು. ಬಿಬಿಎಂಪಿಯವರು ರಾಜಕಾಲುವೆ ಒಳ ಭಾಗದಲ್ಲಿ ಕಾಮಗಾರಿ ಕೈಗೊಂಡಿದ್ದರಿಂದ ಕಾಲುವೆ ಹರಿಯುವ ಮಾರ್ಗ ಬದಲಿಸಿದ್ದರು. ಇದರಿಂದ ನೀರಿನ ಪ್ರಮಾಣ ಹೆಚ್ಚಾಗಿ ಗೋಡೆ ಕುಸಿದಿತ್ತು.
ಶುಭ ಎನ್‌ಕ್ಲೈವ್ ಬಡಾವಣೆ ಜಲಾವೃತ:
ಬೆಳ್ಳಂದೂರು ವಾರ್ಡ್‌ನ ಹರಳೂರು ಕೆರೆ ಕೋಡಿ ಒಡೆದಿದ್ದು, ಶುಭ ಎನ್‌ಕ್ಲೈವ್ ಬಡಾವಣೆಗೆ ನೀರು ನುಗ್ಗಿ ನಿವಾಸಿಗಳನ್ನು ತೊಂದರೆಗೆ ಒಳಗಾದರು. ಈ ಭಾಗದಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದು, ಎರಡು ವರ್ಷದ ಹಿಂದೆ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ಆದರೆ, ಕೆಲವರು ನ್ಯಾಯಾಲಯಕ್ಕೆ ತೆರಳಿ ತಡೆಯಾಜ್ಞೆ ತಂದಿದ್ದರಿಂದ ತೆರವು ಕಾರ್ಯ ಸ್ಥಗಿತಗೊಂಡಿದೆ. ಅಲ್ಲದೆ, ರಾಜಕಾಲುವೆ ದಿಕ್ಕು ಬದಲಾಗಿದ್ದು, ಮಳೆಯಾದರೆ ಇಡೀ ಬಡಾವಣೆ ಜಲಾವೃತವಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಅರಮನೆ ಮೈದಾನಕ್ಕೆ ನೀರು:
ರಾತ್ರಿ ಸುರಿದ ಮಳೆಗೆ ಅರಮನೆ ಮೈದಾನಕ್ಕೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿತು. ಇಲ್ಲಿನ ನಲಪಾಡ್ ಪೆವಿಲಿಯನ್ ಆವರಣದಲ್ಲಿ ಅಪಾರ ನೀರು ತುಂಬಿದ್ದರಿಂದ ಮೋಟರ್ ಬಳಸಿಕೊಂಡು ನೀರನ್ನು ಹೊರಹಾಕಲಾಯಿತು. ಅಂತೆಯೆ ನಗರದ ಶಿವಾನಂದ ವೃತ್ತ, ಹೆಬ್ಬಾಳ, ಕಾವೇರಿ ಜಂಕ್ಷನ್, ಸೋನಿ ಜಂಕ್ಷನ್, ಓಕಳಿಪುರಂ ಜಂಕ್ಷನ್ ನ ಅಂಡರ್ ಪಾಸ್ ಸೇರಿದಂತೆ ನಗರದ ಹಲವು ಅಂಡರ್ ಪಾಸ್ ಹಾಗೂ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ರಸ್ತೆ ದಾಟಲು ಪಡಿಪಾಟಲುಪಟ್ಟರು.
ಮೊನ್ನೆಯದು 23 ವರ್ಷದ ‘3ನೇ ಮಹಾಮಳೆ’
ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ವರೆಗೆ ಎಡೆಬಿಡದೇ ಸುರಿದು ಅವಾಂತರ ಸೃಷ್ಟಿಸಿದ ಮಳೆ ಸಾಮಾನ್ಯ ಮಳೆಯಲ್ಲ. ಇದು ಕಳೆದ 23 ವರ್ಷದ ಇತಿಹಾಸದಲ್ಲಿ ಅಕ್ಟೋಬರ್‌ನಲ್ಲಿ ಸುರಿದ ಮೂರನೇ ಮಹಾಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ದೃಢಪಡಿಸಿದೆ.
ನಗರನಲ್ಲಿ ಕಳೆದ ಮಂಗಳವಾರ ಸಂಜೆಯಿಂದ ಆರಂಭವಾಗಿ ತಡ ರಾತ್ರಿ ವರೆಗೆ ಸುರಿದ ಧಾರಾಕಾರದ ಮಳೆಯಿಂದ ರಾಜರಾಜೇಶ್ವರಿ ನಗರದ ದತ್ತಾ ಲೇಔಟ್ ಬಳಿಕ ವೃಷಭಾವತಿ ರಾಜಕಾಲುವೆಯ ತಡೆಗೋಡೆ ಕುಸಿದು ಮನೆಗಳು ಕುಸಿಯುವ ಭೀತಿ ಉಂಟಾಗಿದೆ. ನಗರದ ವಿವಿಧ ಭಾಗದ ಅನೇಕ ಮನೆಗಳಿಗೆ ನೀರು ನುಗ್ಗಿದೆ, ರಸ್ತೆಗಳು ಕೊಚ್ಚಿ ಹೋಗಿದ್ದು, ಮರಗಳು ಧರೆಗುರುಳಿವೆ. ಬೈಕು ಕಾರು ಆಟೋ ನೀರಿನಲ್ಲಿ ಮುಳುಗಡೆಯಾಗಿ ಜಲಪ್ರಳಯವೇ ಸೃಷ್ಟಿ ಆಗಿತ್ತು.
ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸಿರುವ ಈ ಮಳೆಯು 1997ರ ನಂತರ ಕಳೆದ 23 ವರ್ಷದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 24 ಗಂಟೆಯಲ್ಲಿ ಸುರಿದ ಮೂರನೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. ಮಂಗಳವಾರ ನಗರದ ಕೆಂಗೇರಿಯಲ್ಲಿ ಅತಿ ಹೆಚ್ಚು 124.5 ಮಿ.ಮೀ ಮಳೆಯಾದ ವರದಿಯಾಗಿದೆ. ಇನ್ನು 1997ರ ಅ.1ರಂದು 178.9 ಮಿ.ಮೀ ದಾಖಲೆಯ ಮಳೆಯಾಗಿದೆ. ಇದು ಅಕ್ಟೋಬರ್ ತಿಂಗಳಿನ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ. ತದನಂತರ 2019ರ ಅ.9ರಂದು 140.5 ಮಿ.ಮೀ ಮಳೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ದಾಖಲಾಗಿದೆ. ಇದು ಎರಡನೇ ದಾಖಲೆಯ ಮಳೆಯಾಗಿದೆ. ಇದೀಗ ಮಂಗಳವಾರದ ಮಳೆ ಅಕ್ಟೋಬರ್‌ನ ಮೂರನೇ ಅತಿ ಹೆಚ್ಚಿನ ಮಳೆಯಾಗಿ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ:
ವಾಡಿಕೆ ಅಂದಾಜಿನ ಪ್ರಕಾರ ನಗರದಲ್ಲಿ ಅ.20ರ ಮಂಗಳವಾರ ಸರಾಸರಿ 5 ಮಿ.ಮೀ ಮಳೆಯಾಗಬೇಕು. ಆದರೆ, ಮಂಗಳವಾರ 24 ಗಂಟೆಯಲ್ಲಿ ಸರಾಸರಿ 57 ಮಿ.ಮೀ ಮಳೆಯಾಗಿದೆ. ಇದು ವಾಡಿಕೆ ಮಳೆಗಿಂತ 10 ಪಟ್ಟು ಅಧಿಕ. ಇನ್ನು ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಗರದಲ್ಲಿ ವಾಡಿಕೆಗಿಂತ ಶೇ.29 ರಷ್ಟು(146 ಮಿ.ಮೀ) ಹೆಚ್ಚಿನ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
6 ಕಡೆ 100 ಮಿ.ಮೀ ಗೂ ಹೆಚ್ಚು ಮಳೆ:
ಕೆಂಗೇರಿಯಲ್ಲಿ ಅತಿ ಹೆಚ್ಚು 124.5 ಮಿ.ಮೀ ಮಳೆಯಾದರೆ, ಆರ್‌ಆರ್ ನಗರ ವಾರ್ಡ್‌ನಲ್ಲಿ 123.5 (ಮೊದಲನೇ ಮಳೆಮಾಪನ ಕೇಂದ್ರ), ಲಕ್ಕಸಂದ್ರದಲ್ಲಿ 115, ವಿಶ್ವೇಶ್ವರಪುರದಲ್ಲಿ 108.5, ಆರ್.ಆರ್. ನಗರದಲ್ಲಿ 102 (2ನೇ ಮಳೆ ಮಾಪನ ಕೇಂದ್ರ) ಹಾಗೂ ಗೊಟ್ಟಿಗೆರೆಯಲ್ಲಿ 101 ಮಿ.ಮೀ ಮಳೆಯಾಗಿದೆ.
ಮಂಗಳವಾರ ತಡರಾತ್ರಿಯ ಮಳೆ ನಗರದಲ್ಲಿ ಅಕ್ಟೋಬರ್ ಪಾಲಿಗೆ ಮೂರನೇ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ. ಅಕ್ಟೋಬರ್ ಬೆಂಗಳೂರಿಗೆ ಅತಿ ಹೆಚ್ಚು ಮಳೆಯಾಗುವ ತಿಂಗಳಾಗಿದೆ ಎಂದು ಹಿರಿಯ ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
2ನೇ ಅತಿ ಹೆಚ್ಚು ಮಳೆ ಸುರಿಯುವ ತಿಂಗಳು
ಅಕ್ಟೋಬರ್ ಬೆಂಗಳೂರಿನ ಪಾಲಿಗೆ ಪ್ರತಿ ವರ್ಷವೂ ಅತಿ ಹೆಚ್ಚು ಮಳೆ ಸುರಿಯುವ ಎರಡನೇ ತಿಂಗಳಾಗಿದೆ. ಅತಿ ಹೆಚ್ಚು ವಾಡಿಕೆ ಮಳೆ 212.8 ಮಿ.ಮೀ ಸೆಪ್ಟಂಬರ್‌ನಲ್ಲಿ ಸುರಿಯಲಿದೆ. ಅಕ್ಟೋಬರ್‌ನಲ್ಲಿ ಎರಡನೇ ಅತಿ ಹೆಚ್ಚು 168.3 ಮಿ.ಮೀ ವಾಡಿಕೆ ಮಳೆ ಆಗಲಿದೆ. ಅಕ್ಟೋಬರ್‌ನಲ್ಲಿ ಸುಮಾರು 8.3 ದಿನಗಳು (ಸತತ 199.2 ಗಂಟೆ) ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.