* ಜಿಲ್ಲೆಯಾದ್ಯಂತ ವಾರದಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆ.
* ಜಿಲ್ಲೆಯಲ್ಲಿ 6340 ಹೆಕ್ಟೇರ್ ಪ್ರದೇಶದ 31 ಕೋಟಿ ರುಪಾಯಿ ಬೆಳೆ ನಷ್ಟ.
* ನಿರಂತರ ಮಳೆಯಿಂದ 500 ಶಾಲಾ ಕಟ್ಟಡಗಳಿಗೂ ಹಾನಿ - ಮಕ್ಕಳಿಗೆ ಕಷ್ಟ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಮೇ.20): ಜಿಲ್ಲೆಯಾದ್ಯಂತ ವಾರದಿಂದ ಬಿರುಗಾಳಿ ಸಹಿತ ಮಳೆ (Rain) ಬೀಳುತ್ತಿದೆ. ಇದರಿಂದ ಜಿಲ್ಲೆಯ ಹಲವೆಡೆ ಮಾವು (Mango), ಟೊಮೆಟೋ (Tomato) ಫಸಲು ಸೇರಿ ಹಲವು ಬೆಳೆಗಳು ನಾಶವಾಗಿದೆ. 500 ಶಾಲಾ ಕಟ್ಟಡಗಳಿಗೂ ಹಾನಿಯಾಗಿದ್ದು, ಮಕ್ಕಳಿಗೆ ಕಷ್ಟವಾಗಿದೆ. ಜಿಲ್ಲೆಯಾದ್ಯಂತ ನಿರಂತರ ಮಳೆಯಿಂದ 6340 ಹೆಕ್ಟೇರ್ ಪ್ರದೇಶದ 31 ಕೋಟಿ ರುಪಾಯಿ ಬೆಳೆ ನಷ್ಟವಾಗಿದ್ದು, ಪರಿಹಾರಕ್ಕಾಗಿ ಜಿಲ್ಲಾಡಳಿತ ಸರ್ಕಾರದ ಮೊರೆ ಹೋಗಿದೆ. ಹೌದು! ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ. ಬಿರುಗಾಳಿ ಸಹಿತ ಮಳೆಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮಾವಿನ ಫಸಲು ಸೇರಿದಂತೆ ಹಲವು ಬೆಳೆಗಳು ಹಾಳಾಗಿದೆ.
undefined
ರೈತರ ಪಾಲಿಹೌಸ್, ನೆಟ್ ಹೌಸ್‌ಗಳು ಬಿರುಗಾಳಿಯ ರಭಸಕ್ಕೆ ಕಿತ್ತುಹೋಗಿದೆ. ಬೆಳೆ ಕಳೆದುಕೊಂಡ ರೈತರೀಗ ತಲೆಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ. ಕೋಲಾರ ಜಿಲ್ಲೆಯಾದ್ಯಂತ ಬಿದ್ದ ಮಳೆಯು ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಬಿರುಗಾಳಿ ಸಹಿತ ಶುರುವಾದ ಮಳೆಯು ಜಿಲ್ಲೆಯ ಮಾಲೂರು ತಾಲೂಕನ್ನು ಹೊರತುಪಡಿಸಿ ಐದು ತಾಲೂಕಗಳಲ್ಲಿ ಜನರನ್ನು ಕಷ್ಟಕ್ಕೆ ಸಿಲುಕಿಸಿದೆ. ಕಳೆದೊಂದು ವಾರದಿಂದ ಕೋಲಾರ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಕೋಲಾರ ಜಿಲ್ಲೆಯಲ್ಲಿ ರೈತರ ಬದುಕು ದುಸ್ತರವಾಗಿದೆ. ಕಷ್ಟಪಟ್ಟು ಬೆಳೆದಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬೆಳೆಗಳು ನೆಲಕಚ್ಚಿ ಹೋಗಿದೆ.
ಬೇಸಿಗೆ ದಾಹಕ್ಕೆ ನಿಂಬೆಹಣ್ಣಿನ ದರ ಏರಿಕೆ: 100 ರೂ ಇದ್ದ ಕೇಜಿ ನಿಂಬೆಹಣ್ಣಿಗೆ ಈಗ 300 ರೂ!
1500ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಮಾವು ಬೆಳೆ ಶೇಕಡ 75 ರಷ್ಟು ಮಾವಿನ ಕಾಯಿಗಳು ಬಿರುಗಾಳಿಯ ರಭಸಕ್ಕೆ ನೆಲಕ್ಕುದುರಿ ಹೋಗಿದೆ. ಮಾವಿನ ತವರು ಶ್ರೀನಿವಾಸಪುರದಲ್ಲಿ ಸರಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಇದೇ ಪರಿಸ್ಥಿತಿ ಅಲ್ಲಿಯೂ ಇದೆ. ಮಾವಿನ ಜೊತೆಗೆ ಟಮೆಟೋ ಬೆಳೆಯೂ ಸೇರಿ ಹಲವು ಬೆಳೆಗಳೂ ಬಿರುಗಾಳಿಗೆ ನೆಲಕಚ್ಚಿದೆ. ಬಿರುಗಾಳಿಯ ಹೊಡೆತಕ್ಕೆ ನೂರಾರು ವಿದ್ಯುತ್ ಕಂಬಗಳು, ರಸ್ತೆ ಬದಿಯಲ್ಲಿದ್ದ ನೂರಾರು ಮರಗಳು ಕೂಡಾ ಮುರಿದು ಬಿದ್ದಿವೆ. ಇನ್ನು ಹಲವು ಪಾಲಿಹೌಸ್‌ಗಳು, ನೆಟ್ ಹೌಸ್‌ಗಳು ಹರಿದು ಹೋಗಿವೆ.
ಜಿಲ್ಲೆಯಲ್ಲಿ ಮಳೆಗೆ 6340 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿದ್ದು, 31 ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಬೆಳೆ ನಷ್ಟದ ವರದಿಯನ್ನ ಸರ್ಕಾರಕ್ಕೆ ಕಳುಹಿಸಿದ್ದು, ವಿಶೇಷ ಪರಿಹಾರಕ್ಕಾಗಿ ಸಲ್ಲಿಸಲಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ ಶಾಲಾ ಕಟ್ಟಡಗಳಿಗೂ ಹಾನಿಯಾಗಿದೆ. 9700 ಶಾಲಾ ಕಟ್ಟಡಗಳ ಪೈಕಿ 500 ಕಟ್ಟಡಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು,ತೆರವುಗೊಳಿಸಬೇಕಾಗಿದೆ. 1500 ಶಾಲೆಗಳಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳು ಆಗಬೇಕಾಗಿದ್ದು,ಕನಿಷ್ಠ 30 ಕೋಟಿ ರುಪಾಯಿ ಅನುದಾನ ಅಗತ್ಯವಿದೆ ಅಂತಾ ಅಂದಾಜಿಸಲಾಗಿದೆ.
ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಕಾರ್ಡ್ ಹೋಲ್ಡರ್, ಸ್ಪಷ್ಟನೆ ಕೊಟ್ಟ MLA
ಸತತ ಮಳೆಗೆ ಶಾಲೆಗಳ ಕಟ್ಟಡಗಳು ನೆಲಕ್ಕುರುಳಿದ್ದು ಅಂತಹ ಗ್ರಾಮಗಳಲ್ಲಿ ಸರಕಾರಿ ಸಮುದಾಯ ಭವನ, ಎಂಪಿಸಿಎಸ್ ಕಟ್ಟಡ, ಅಂಗನವಾಡಿ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಮಾಡಲು ಜಿಲ್ಲಾಡಳಿತ ಸೂಚಿಸಿದೆ. ಒಟ್ಟಿನಲ್ಲಿ, ಒಂದು ಕಡೆ ಬಿಸಿಲಿನಿಂದ ಬಸವಳಿದು ಹೋಗಿದ್ದ ಜನರಿಗೆ ತಂಪು ತಂಪು ವಾತಾವರಣ ತಂದುಕೊಟ್ಟಿದೆ. ಆದ್ರೆ, ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತರ ಬದುಕಿಗೆ ಈ ಬಿರುಗಾಳಿ ಮಳೆ ಬೆಂಕಿ ಇಟ್ಟಿದೆ. ಸರ್ಕಾರ ಮಾವು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕಿದೆ ಅಂತಾ ಸಂಕಷ್ಟಕ್ಕೆ ಸಿಲುಕಿರುವ ರೈತರು ಮನವಿ ಮಾಡುತ್ತಿದ್ದಾರೆ.