ಗಣಿ ನಾಡು ಬಳ್ಳಾರಿಯಲ್ಲಿ ಧೂಳಿನದ್ದೇ ದರ್ಬಾರ್‌: ಅಪಾಯ ತಪ್ಪಿದ್ದಲ್ಲ !

By Kannadaprabha News  |  First Published Jan 25, 2020, 9:17 AM IST

ಅಪಾಯದ ಮಟ್ಟ ಮೀರಿದ ಬಳ್ಳಾರಿ ಧೂಳು ಮಾಲಿನ್ಯ|ಮುಂಜಾಗ್ರತೆ ವಹಿಸದೇ ಹೋದರೆ ನಾನಾ ಕಾಯಿಲೆಗಳಿಗೆ ಜನರು ತುತ್ತಾಗಬೇಕಾದ ಸ್ಥಿತಿ ನಿರ್ಮಾಣ| ಸುದ್ದಿ​ಗೋ​ಷ್ಠಿ​ಯಲ್ಲಿ ಪರಿಸರ ಹೋರಾಟಗಾರ ಶಶಿಧರ ಕಲ್ಮಠ ಆತಂಕ|


ಬಳ್ಳಾರಿ(ಜ.25): ನಗರದಲ್ಲಿ ಧೂಳು ಮಾಲಿನ್ಯ ಅಪಾಯದ ಮಟ್ಟ ಮೀರುತ್ತಿದ್ದು, ಕೂಡಲೇ ಮುಂಜಾಗ್ರತೆ ವಹಿಸದೇ ಹೋದರೆ ನಾನಾ ಕಾಯಿಲೆಗಳಿಗೆ ಜನರು ತುತ್ತಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಪರಿಸರ ಹೋರಾಟಗಾರ ಶಶಿಧರ ಕಲ್ಮಠ ತಿಳಿಸಿದ್ದಾರೆ. 

ಇಲ್ಲಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಸಹಕಾರದಿಂದ ನಗರದ ನಾನಾ ಕಡೆ ವಾಯು ಪರೀಕ್ಷೆ ನಡೆಸಲಾಯಿತು. ಅದರ ಫಲಿತಾಂಶ ನೋಡಿ ನಮಗೆ ಅಚ್ಚರಿ ಕಾದಿತ್ತು. ನಗರದಲ್ಲಿ ಮಣ್ಣಿನ ಧೂಳಿನ ಪ್ರಮಾಣ ನೋಡಿದರೆ ದೆಹಲಿಯ ಮಾಲಿನ್ಯವನ್ನು ಮೀರಿಸುವಂತಿದೆ. ಅಪಾಯದ ಗರಿಷ್ಠ ಪ್ರಮಾಣವನ್ನು ಮೀರಿ ಹೋಗಿದ್ದರೂ ಯಾವುದೇ ಕ್ರಮ ವಹಿಸಲಾಗುತ್ತಿಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮದ ಹೆಜ್ಜೆ ಇಡದೇ ಹೋದರೆ ನಗರದ ನಿವಾಸಿಗಳು ನಾನಾ ಕಾಯಿಲೆಗಳಿಂದ ಬಳಲಬೇಕಾದ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ಶ್ರೀಕನಕದುರ್ಗಮ್ಮ ದೇವಸ್ಥಾನ, ಮಿಲ್ಲಾರ್‌ಪೇಟೆಯ ಗಂಗಪ್ಪ ಜಿನ್‌ ಪ್ರದೇಶ, ಅನಂತಪುರ ರಸ್ತೆಯ ಬೆನಕ ಆಟೋಗ್ಯಾಸ್‌ ಬಳಿ ವಾಯು ಪರೀಕ್ಷೆ ನಡೆಸಲಾಯಿತು. ಉತ್ತಮ ಪರಿಸರದಲ್ಲಿ ಪಿಎಂ 10 ಶೇ. ಅಂಶವು 60ರಿಂದ 100 ರಷ್ಟಿರಬೇಕು. ಆದರೆ, ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ವಾಯು ಪರೀಕ್ಷೆಯಲ್ಲಿ ಗರಿಷ್ಠ ಪ್ರಮಾಣ 218ಕ್ಕೆ ತಲುಪಿದೆ. ಮಿಲ್ಲಾರ್‌ಪೇಟೆಯ ಗಂಗಪ್ಪ ಜಿನ್‌ ಪ್ರದೇಶದಲ್ಲಿ 1398 ಹಾಗೂ ಅನಂತಪುರ ರಸ್ತೆಯಲ್ಲಿ 206 ರಷ್ಟಿದೆ ಎಂದು ತಿಳಿಸಿದರು.

ಪಾಲಿಕೆಯ ಆಡಳಿತ ವೈಖರಿಯೇ ಕಾರಣ:

ನಗರದಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಲು ಪಾಲಿಕೆಯ ಆಡಳಿತ ವೈಖರಿಯೇ ಕಾರಣ. ರಸ್ತೆಯ ಮೇಲಿನ ಮಣ್ಣನ್ನು ವೈಜ್ಞಾನಿಕವಾಗಿ ತೆಗೆಯುತ್ತಿಲ್ಲ. ಹಳೆ ಕಾಲದ ಪೊರಕೆಯಿಂದ ರಸ್ತೆ ಮೇಲಿನ ಮಣ್ಣನ್ನು ತೆಗೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ವಿಶೇಷ ಸಲಕರಣೆಗಳಿವೆ. ಅವುಗಳನ್ನು ಬಳಸಬೇಕು. ರಸ್ತೆಯ ಆಸುಪಾಸಿನ ಪ್ರದೇಶದಲ್ಲಿ ಸಂಗ್ರಹವಾಗುವ ಮಣ್ಣನ್ನು ಕೂಡಲೇ ವಿಲೇವಾರಿ ಮಾಡಬೇಕು. ಆದರೆ, ಅದಾಗುತ್ತಿಲ್ಲ. ಇದರಿಂದ ರಸ್ತೆ ಬದಿಯ ಮಣ್ಣು ಮತ್ತೆ ರಸ್ತೆಗೆ ಬಂದು ಸೇರುತ್ತದೆ. ಕಳೆದ ಏಳು ತಿಂಗಳಿಂದ ಪಾಲಿಕೆಯ ಹಿಂದೆ ಬಿದ್ದು ಪಾಲಿಕೆಯ ಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ಕೊಡಿಸುವ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಇನ್ನೂ ತಲುಪಿಸಿಲ್ಲ. ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರಿಗೆ ನಗರದಲ್ಲಾಗುತ್ತಿರುವ ಮಾಲಿನ್ಯ ಸಮಸ್ಯೆಯ ಬಗ್ಗೆ ತಿಳಿಸಿಕೊಟ್ಟಿರುವೆ. ಅವರು ಸಹ ಪೂರಕ ಕ್ರಮಕ್ಕೆ ಸ್ಪಂದಿಸಿದ್ದಾರೆ. ಆದರೆ, ಪಾಲಿಕೆಯ ಅಧಿಕಾರಿಗಳು ನಮ್ಮ ನಿರೀಕ್ಷೆಯಷ್ಟು ಕೆಲಸ ಮಾಡುತ್ತಿಲ್ಲ. ಕಾರ್ಮಿಕರಿಗೆ ಕೊಡಬೇಕಾದ ಪರಿಕರಗಳು ಗೋಡಾನ್‌ ಸೇರಿದ್ದವು. ನಾವು ಹೋರಾಟ ಮಾಡಿ ಕೊಡಿಸಬೇಕಾಯಿತು ಎಂದು ತಿಳಿಸಿದರು.

ಕಾರ್ಮಿಕ ಸುರಕ್ಷತಾ ಕ್ರಮಗಳಿಲ್ಲ:

ನಗರದಲ್ಲಿನ ಹಾಳಾಗಿರುವ ರಸ್ತೆಗಳು ಸಹ ಧೂಳಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಪಾಲಿಕೆ ಸಿಬ್ಬಂದಿ ಕಾರ್ಯನಿರ್ವಹಿಸಲು ಸಿದ್ಧವಿದ್ದಾರೆ. ಆದರೆ, ಅವರಿಗೆ ಸೂಕ್ತ ಸುರಕ್ಷತಾ ಪರಿಕರಗಳನ್ನು ನೀಡುತ್ತಿಲ್ಲ. ನಾವು ಕಳೆದ ಏಳು ತಿಂಗಳಿನಿಂದ ನಗರದಲ್ಲಿ ಸುತ್ತಾಡಿ ವರದಿ ತಯಾರಿಸಿದ್ದು, ಬಹುತೇಕ ಕಡೆಗಳಲ್ಲಿ ಕಾರ್ಮಿಕರು ಸುರಕ್ಷತೆಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಅದನ್ನು ವೀಡಿಯೋ ದಾಖಲೀಕರಣ ಸಹ ಮಾಡಿಕೊಂಡಿದ್ದೇವೆ. ರಸ್ತೆ ಬದಿಯ ಮಣ್ಣನ್ನು ಎತ್ತಲು ಸಹ ಯಾವುದೇ ಪರಿಕರ ನೀಡಿಲ್ಲ. ಚೀಲದಲ್ಲಿ ಮಣ್ಣು ಎತ್ತುವ ದೃಶ್ಯಗಳು ಕಂಡು ಬರುತ್ತವೆ. ಸಾಕಷ್ಟು ಕಾರ್ಮಿಕರಿಗೆ ಗಮ್‌ಬೂಟ್‌ಗಳ​ನ್ನು ನೀಡಿಲ್ಲ. ಗ್ಲೌಸ್‌ಗಳನ್ನು ನೀಡಿಲ್ಲ. ಚಿಕ್ಕ ಚಿಕ್ಕ ಸಂಗತಿಗಳನ್ನು ಪಾಲಿಕೆ ಗಮನಹರಿಸುತ್ತಿಲ್ಲ. ಇದು ನಗರದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಎಚ್ಚೆತ್ತುಕೊಳ್ಳದೇ ಹೋದರೆ ನಾನಾ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಮೂಲೆ ಸೇರಿದ ಧೂಳು ಯಂತ್ರ:

ರಸ್ತೆಯ ಮೇಲಿನ ಧೂಳು ಎತ್ತು​ವ ಯಂತ್ರವನ್ನು ಲಕ್ಷಾಂತರ ರು. ನೀಡಿ ಖರೀದಿಸಲಾಗಿದೆ. ಆದರೆ, ಅದನ್ನು ಬಳಕೆ ಮಾಡುತ್ತಿಲ್ಲ. ಗೋಡಾನ್‌ನಲ್ಲಿ ನಿಲ್ಲಿಸಲಾಗಿದೆ. ಇದರಿಂದ ಹೆಚ್ಚು ಅನುಕೂಲವಾಗುತ್ತಿಲ್ಲ. ಹೀಗಾಗಿಯೇ ನಿಲ್ಲಿಸಿಬಿಟ್ಟಿದ್ದೇವೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಿದ್ದ ಮೇಲೆ ಲಕ್ಷಾಂತರ ರು. ಜನರ ತೆರಿಗೆ ಹಣದಿಂದ ಆ ಯಂತ್ರ ಖರೀಸಿದ್ದಾದರೂ ಏಕೆ? ಎಂದು ಶಶಿಧರ್‌ ಕಲ್ಮಠ ಪ್ರಶ್ನಿಸಿದರು. 

ರಾಜ್ಯ ಸರ್ಕಾರದ ಸ್ವಚ್ಛತಾ ಆ್ಯಪನ್ನು ಪಾಲಿಕೆ ಆರೋಗ್ಯ ವಿಭಾಗ ಬಳಕೆ ಮಾಡಿಕೊಳ್ಳುತ್ತಿಲ್ಲ. ಈ ಆ್ಯಪ್‌ನಿಂದ ನಗರದ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಈಗಾಗಲೇ ಸಾರ್ವಜನಿಕರು ನೀಡಿರುವ ದೂರುಗಳಿಗೆ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು. 

ಪಾಲಿಕೆಯನ್ನು ಗುರಿಯಾಗಿಟ್ಟುಕೊಂಡು ದೂರುವುದು ನಮ್ಮ ಉದ್ದೇಶವಲ್ಲ. ಆದರೆ, ಕಾನೂನು ಪ್ರಕಾರ ಮಹಾನಗರಕ್ಕೆ ಬೇಕಾದ ಆರೋಗ್ಯ ಸೇವೆಯನ್ನು ನೀಡುವುದು ಹಾಗೂ ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪಾಲಿಕೆಯ ಕರ್ತವ್ಯ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಬಳಲುವಂತಾಗಿದೆ ಎಂದು ತಿಳಿಸಿದರಲ್ಲದೆ, ನಗರದ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರ ಹೋರಾಟ ನಡೆಸಲಾಗುವುದು. ನಗರವನ್ನು ಮಾಲಿನ್ಯಮುಕ್ತ ಮಾಡಲು ಅನೇಕ ಯುವಕರು ನಮ್ಮ ಜೊತೆ ಕೈ ಜೋಡಿಸಲು ಮುಂದೆ ಬರುತ್ತಿದ್ದು ನಮ್ಮ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸಿದರು. ಅಂಜಿ, ವೀರೇಶ್‌ ಎಸ್‌.ಜಿ. ಸುದ್ದಿಗೋಷ್ಠಿಯಲ್ಲಿದ್ದರು.

ಬ್ಲಾಕ್‌ ಲೀಸ್ಟ್‌ನಲ್ಲಿ ನಮ್ಮ ನಂಬರ್‌:

ನಾವು ಪದೇ ಪದೇ ಪಾಲಿಕೆಗೆ ಹೋಗಿ ಜನರ ಸಮಸ್ಯೆಗಳನ್ನು ಕೇಳುವುದರಿಂದ ರೋಸಿ ಹೋಗಿರುವ ಪಾಲಿಕೆ ಆಯುಕ್ತರು ನಮ್ಮ ಮೊಬೈಲ್‌ ಸಂಖ್ಯೆಯನ್ನು ಬ್ಲಾಕ್‌ ಲೀಸ್ಟ್‌ನಲ್ಲಿಟ್ಟಿದ್ದಾರೆ ಎಂದು ಪರಿಸರ ಹೋರಾಟಗಾರ ಶಶಿಧರ ಕಲ್ಮಠ ದೂರಿದರು.

ನಾವು ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ನಗರದ ಸಮಸ್ಯೆಗಳನ್ನು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಹೇಳಿದೆವು. ನಾವು ಪದೇ ಪದೇ ಜನರ ಸಮಸ್ಯೆ ಹೊತ್ತು ಹೋಗುತ್ತೇವೆ ಎಂಬ ಕಾರಣಕ್ಕಾಗಿ ನನ್ನ ಸಂಖ್ಯೆ ಬ್ಲಾಕ್‌ ಲೀಸ್ಟ್‌ನಲ್ಲಿಟ್ಟಿದ್ದಾರೆ. ಇದು ಎಷ್ಟುಸರಿ? ಎಂದು ಪ್ರಶ್ನಿಸಿದರು.
 

click me!