ಆಗಸ್ಟ್ 10ರಂದು ಕಾವೇರಿ ಜಲ ನಿಯಂತ್ರಣ ಸಭೆ, ಆಗಸ್ಟ್ 11ರಂದು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ನೀರು ಹರಿಸಲು ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿದ ಮರುದಿನವೇ ತಮಿಳುನಾಡು ರಾಜ್ಯ ತುರ್ತಾಗಿ ಸುಪ್ರಿಂ ಕೋರ್ಟಿಗೆ ಹೋಗಬೇಕಿತ್ತು. ಆ ರೀತಿ ಮಾಡದ ರಾಜ್ಯ ಸರ್ಕಾರ ವಿನಾಕಾರಣ ಕಾಲಹರಣ ಮಾಡಿತು ಎಂದು ಆರೋಪಿಸಿದ ಕುಮಾರಸ್ವಾಮಿ
ರಾಮನಗರ(ಸೆ.20): ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ನೀರು ಬಿಡಿ ಎಂದು ಸೂಚನೆ ನೀಡಿದಾಕ್ಷಣ ರಾಜ್ಯ ಸರ್ಕಾರ ತಡಮಾಡದೆ ಸುಪ್ರಿಂ ಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಬೇಕಿತ್ತು. ಅದು ಬಿಟ್ಟು ತಮಿಳುನಾಡಿಗೆ ನೀರು ಬಿಡುವ ಆತುರ ತೋರಿದ್ದೇಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಡದಿ ಸಮೀಪದ ಕೇತಗಾನಳ್ಳಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಗೌರಿ ಗಣೇಶ ಹಬ್ಬವನ್ನು ಜನರು ಆಚರಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ನೆರೆ ರಾಜ್ಯದ ಒತ್ತಡಕ್ಕೆ ಮಣಿದು ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ ಮಾಡಿದೆ. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿಯಬೇಕಿತ್ತು ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು: ಸುಮತಲಾ- ಸಚಿವರ ವಾಕ್ಸಮರ
ತಮಿಳುನಾಡು ಸುಪ್ರಿಂ ಕೋರ್ಟ್ ಮುಂದೆ ಹೋಗಿರುವುದರಿಂದ ಕೋರ್ಟಿನ ಆದೇಶ ಬರುವವರೆಗೂ ಕಾಯಬೇಕಿತ್ತು. ತರಾತುರಿಯಲ್ಲಿ ಏಕೆ ನೀರು ಬಿಡಬೇಕಿತ್ತು. ನಾನು ಸಿಎಂ ಆಗಿದ್ದಾಗ ಇಂತಹ ಆದೇಶ ಬಂದಾಗ ರಿವ್ಯೆ ಪಿಟಿಷನ್ ಹಾಕಿದ್ದೆವು. ಅಂತಹ ಅರ್ಜಿ ಸಲ್ಲಿಸುವುದಕ್ಕೆ ಇವರಿಗೆ ಏನಾಗಿತ್ತು ಎಂದು ಪ್ರಶ್ನೆ ಮಾಡಿದರು.
ಆಗಸ್ಟ್ 10ರಂದು ಕಾವೇರಿ ಜಲ ನಿಯಂತ್ರಣ ಸಭೆ, ಆಗಸ್ಟ್ 11ರಂದು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ನೀರು ಹರಿಸಲು ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿದ ಮರುದಿನವೇ ತಮಿಳುನಾಡು ರಾಜ್ಯ ತುರ್ತಾಗಿ ಸುಪ್ರಿಂ ಕೋರ್ಟಿಗೆ ಹೋಗಬೇಕಿತ್ತು. ಆ ರೀತಿ ಮಾಡದ ರಾಜ್ಯ ಸರ್ಕಾರ ವಿನಾಕಾರಣ ಕಾಲಹರಣ ಮಾಡಿತು ಎಂದು ಆರೋಪಿಸಿದರು.
ಸೋಮವಾರದಂದು ಮುಂದಿನ 15 ದಿನ ನೆರೆ ರಾಜ್ಯಕ್ಕೆ ನಿತ್ಯವೂ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಹೇಳಿದ ಕೂಡಲೇ ರಾಜ್ಯ ಸರ್ಕಾರ ಒಂದು ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಬೇಕಿತ್ತು. ಮಧ್ಯರಾತ್ರಿ ಆದರೂ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಎಷ್ಟೋ ಸಂದರ್ಭದಲ್ಲಿ ಮಧ್ಯರಾತ್ರಿ ಸಮಯದಲ್ಲಿಯೂ ಸುಪ್ರೀಂ ಕೋರ್ಟ್ ಕಲಾಪ ನಡೆದಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಪೂರ್ಣ ವಿಫಲವಾಗಿದೆ. ಸರ್ಕಾರಕ್ಕೆ ಕಾನೂನು ತಜ್ಞರು ಸಲಹೆ ಕೊಡಲಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ನೀರು ಬಿಡದಿದ್ದರೆ ಕೋರ್ಟಿನಲ್ಲಿ ನಮ್ಮ ವಿರುದ್ಧವಾದ ಆದೇಶ ಬರಬಹುದು ಎಂಬ ಆತಂಕದಿಂದ ರಾಜ್ಯ ಸರ್ಕಾರ ನಿನ್ನೆ ರಾತ್ರಿಯಿಂದಲೇ ತಮಿಳುನಾಡಿಗೆ ನೀರು ಹರಿಸುತ್ತಿದೆ. ಪ್ರಾಕಾರದ ಸೂಚನೆ ಬಂದ ಕೂಡಲೇ ವಿವೇಚನಾಹೀನರಾಗಿ ಜಲ ಸಂಪನ್ಮೂಲ ಸಚಿವರು ತರಾತುರಿಯಲ್ಲಿ ನೀರು ಹರಿಸುವ ನಿರ್ಧಾರ ಮಾಡಿರುವುದು ಸರಿಯಲ್ಲ. ಇಬ್ಬರು ನಮ್ಮ ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು.
ಈ ಹಿಂದಿನ ಸರ್ಕಾರಗಳು ನೀರು ಬಿಟ್ಟಿಲ್ಲವೇ ಎಂದು ಜಲಸಂಪನ್ಮೂಲ ಸಚಿವರು ಕೇಳುತ್ತಿದ್ದಾರೆ. ಮಳೆಯ ಅಭಾವದಿಂದ ಕೃಷಿಗೆ ನೀರು ಕೊಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಹಾಕಿರುವ ಬೆಳೆಗಳಿಗೆ ಬೆಂಕಿ ಇಡುವ ಸ್ಥಿತಿಗೆ ರೈತರು ಬಂದಿದ್ದಾರೆ. ಇದರ ಜತೆಗೆ ನಮ್ಮ ರೈತರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಸಭೆಗಳು ನಡೆದಾಗ ನಮ್ಮ ರಾಜ್ಯದ ಹಿರಿಯ ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸದೇ ಲಘುವಾಗಿ ತೆಗೆದುಕೊಂಡಿದ್ದಾರೆ. ಅಲ್ಲಿ ನೋಡಿದರೆ ತಮಿಳುನಾಡಿನ ಹತ್ತು ಹದಿನೈದು ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸುತ್ತಾರೆ. ನಮ್ಮ ಅಧಿಕಾರಿಗಳಿಗೆ ಬಿಡುವೇ ಇಲ್ಲ. ಪ್ರಾಧಿಕಾರ ಮತ್ತು ಜಲ ನಿಯಂತ್ರಣ ಸಮಿತಿ ಸಭೆಗಳಿಗೆ ವರ್ಚುವಲ್ ಮೂಲಕ ಹಾಜರಾಗುತ್ತಾರೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಹೆಚ್ಚಿದ ಕಾವೇರಿ ಕಿಚ್ಚು
ವಾಟರ್ ಮ್ಯಾನೇಜ್ಮೆಂಟ್ ಬೋರ್ಡಿನವರೇನು ಬ್ರಹ್ಮನಾ? ಅವರು ಹೇಳಿದಂಗೆ ಕೇಳಲು ಅವರೇನು ಮೇಲಿಂದ ಇಳಿದು ಬಂದಿದ್ದಾರಾ. ಅವರೆಲ್ಲರು ನಾವು ನೇಮಕ ಮಾಡಿರುವ ಸದಸ್ಯರು. ನೀರು ಬಿಡಿ ಎನ್ನುವ ಮೊದಲು ಜಲಾಶಯಗಳಲ್ಲಿ ನೀರು ಎಷ್ಟಿದೆ. ಡೆಡ್ ಸ್ಟೋರೇಜ್ ಎಷ್ಟು ಇರಬೇಕು ಅನ್ನೋದು ಗೋತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರಾಧಿಕಾರದವರು ಎಸಿ ರೂಮ್ ನಲ್ಲಿ ಕುಳಿತುಕೊಂಡು ತಮಿಳುನಾಡಿವರು ಅರ್ಜಿ ಹಾಕಿದಾಕ್ಷಣಕ್ಕೆ ನೀರು ಬಿಡುವಂತೆ ಹೇಳಲು ಅವರನ್ನು ಕೂರಿಸಿಲ್ಲ. ತಮಿಳುನಾಡಿನ ರೈತರು 2 ಬೆಳೆ ಬೆಳೆಯುತ್ತಾರೆ. ಕರ್ನಾಟಕದವರಿಗೆ ಒಂದು ಬೆಳೆಗೂ ಅವಕಾಶ ಇಲ್ಲವಾಗಿದೆ. ಎರಡು ರಾಜ್ಯಗಳಲ್ಲು ಸ್ಥಳ ಪರಿಶೀಲನೆ ಮಾಡಿ ಸತ್ಯಾಂಶ ವರದಿ ಕೊಡುವ ಕೆಲಸವನ್ನು ಪ್ರಾಕಾರ ಮಾಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.