ಮೀನುಗಾರಿಕೆಗೆ ಎರಡು ತಿಂಗಳ ನಿಷೇಧದ ಬಳಿಕ ಆಗಸ್ಟ್ 1ರಿಂದ ಮೀನುಗಾರರು ಮತ್ತೆ ಮೀನುಗಳ ಬೇಟೆಗೆ ಮುಂದಾಗಿದ್ರು. ಆದರೆ, ಲಾಭದಾಯಿಕ ಮೀನುಗಳ ಹೊರತಾಗಿ ಹೇರಳವಾಗಿ ಸೀಗಡಿ ಹಾಗೂ ಮಾರಾಟವಾಗದ ಮೀನುಗಳು ದೊರೆಯ ತೊಡಗಿತಲ್ಲದೇ, ಮೊನ್ನೆಯವರೆಗೆ ತೀರಗಳಲ್ಲೂ ಬಂದು ಬೀಳುತ್ತಿತ್ತು.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಆ.08): ಮೀನುಗಾರಿಕೆಗೆ ಎರಡು ತಿಂಗಳ ನಿಷೇಧದ ಬಳಿಕ ಆಗಸ್ಟ್ 1ರಿಂದ ಮೀನುಗಾರರು ಮತ್ತೆ ಮೀನುಗಳ ಬೇಟೆಗೆ ಮುಂದಾಗಿದ್ರು. ಆದರೆ, ಲಾಭದಾಯಿಕ ಮೀನುಗಳ ಹೊರತಾಗಿ ಹೇರಳವಾಗಿ ಸೀಗಡಿ ಹಾಗೂ ಮಾರಾಟವಾಗದ ಮೀನುಗಳು ದೊರೆಯ ತೊಡಗಿತಲ್ಲದೇ, ಮೊನ್ನೆಯವರೆಗೆ ತೀರಗಳಲ್ಲೂ ಬಂದು ಬೀಳುತ್ತಿತ್ತು. ಈ ನಡುವೆ ಸಮುದ್ರದಲ್ಲಿ ಚಂಡ ಮಾರುತ ಕಾಣಿಸಿಕೊಂಡಿರುವುದರಿಂದ ಮೀನುಗಾರಿಕೆ ಮತ್ತೆ ಸ್ಥಗಿತಗೊಂಡಿದೆ. ಈ ಎಲ್ಲಾ ವಿಷಯಗಳ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
undefined
ಹೌದು! ಎರಡು ತಿಂಗಳ ಕಾಲ ನಿಷೇಧಿಸಲ್ಪಟ್ಟಿದ್ದ ಮೀನುಗಾರಿಕೆ ಆಗಸ್ಟ್ ತಿಂಗಳಲ್ಲಿ ಮತ್ತೆ ಪ್ರಾರಂಭವಾಗಿದ್ರೂ, ಚಂಡ ಮಾರುತದ ಎಫೆಕ್ಟ್‌ನಿಂದಾಗಿ ಮೀನುಗಾರಿಕೆ ಸ್ಥಗಿತಗೊಂಡಿದೆ. ಇದರಿಂದ ಮೀನುಗಾರಿಕೆಯ ಪ್ರಾರಂಭದ ದಿನಗಳಲ್ಲೇ ಮೀನುಗಾರರಿಗೆ ಕಂಟಕ ಶುರುವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 20 ದಿನಗಳವರೆಗೆ ಭಾರೀ ಮಳೆಯಾಗಿದ್ರೂ, ನಂತರದ ದಿನಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅಷ್ಟೊಂದು ಮಳೆಯಾಗಿಲ್ಲ. ಇದರಿಂದ ಸಮುದ್ರದಲ್ಲಿ ಲಾಭದಾಯಕ ಮೀನುಗಳ ಲಭ್ಯತೆಯೂ ಕಡಿಮೆಯಾಗಿತ್ತು. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಹೇರಳವಾಗಿ ಸೀಗಡಿ ಹಾಗೂ ಇತರ ಲಾಭ ರಹಿತ ಮೀನುಗಳೇ ಹೇರಳವಾಗಿ ದೊರೆಯತೊಡಗಿತ್ತು.
ಉತ್ತರಕನ್ನಡ: ಬಸ್‌ಗಾಗಿ ವಿದ್ಯಾರ್ಥಿಗಳ ಬೇಡಿಕೆ, ಕ್ಯಾರೇ ಅನ್ನದ ಅಧಿಕಾರಿಗಳು
ಇದರಿಂದಾಗಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನಷ್ಟದೊಂದಿಗೇ ಹಿಂತಿರುಗಬೇಕಾದ ಸ್ಥಿತಿ ಎದುರಾಗಿತ್ತು. ಇದರೊಂದಿಗೆ ವಾತಾವರಣ ಬದಲಾವಣೆಯಿಂದ ಸಮುದ್ರದಲ್ಲಿ ಕೋಲ್ಡ್ ಕರೆಂಟ್ ಉಂಟಾಗಿ ಸುಮಾರು 20 ನಾಟಿಕಲ್ ದೂರದಲ್ಲಿ ದೊರೆಯುತ್ತಿದ್ದ ಗೊಬ್ಬರೆ ಹಾಗೂ ಇತರ ಸಣ್ಣ ಸಣ್ಣ ಮೀನುಗಳು ಹೊನ್ನಾವರ, ಕುಮಟಾ ಭಾಗದಲ್ಲಿ ಸಮುದ್ರ ತೀರದಲ್ಲಿ ಬೀಳತೊಡಗಿವೆ. ಈ ನಡುವೆ ಇದೀಗ ಆಳ ಸಮುದ್ರದಲ್ಲಿ ಚಂಡ ಮಾರುತ ಕಾಣಿಸಿಕೊಂಡಿದ್ದು, ಮೀನುಗಾರರು ಮತ್ತೆ ಬಂದರಿನಲ್ಲೇ ಲಂಗರು ಹಾಕಿದ್ದಾರೆ. ಈ ಚಂಡ ಮಾರುತದ ಎಫೆಕ್ಟ್ ಇನ್ನೂ 6-7 ದಿನಗಳ ಕಾಲ ಇರೋದ್ರಿಂದ ಮೀನುಗಾರರು ಯಾವುದೇ ಕೆಲಸವಿಲ್ಲದೇ, ಮನೆಯಲ್ಲೇ ದಿನದೂಡಬೇಕಾದ ಸ್ಥಿತಿಯುಂಟಾಗಿದೆ.
ಪ್ರಾರಂಭದ ದಿನಗಳಲ್ಲೇ ಮೀನುಗಾರರಿಗೆ ಭಾರೀ ನಷ್ಟವಾಗಿರೋದ್ರಿಂದ ಸರಕಾರ ಈ ಬಗ್ಗೆ ಗಮನ ಹರಿಸಿ ಮೀನುಗಾರರಿಗೆ ಪರಿಹಾರ ವಿತರಿಸಬೇಕೆಂದು ಮೀನುಗಾರರು ಒತ್ತಾಯಿಸಿದ್ದಾರೆ. ಇನ್ನು ಸಮುದ್ರದಲ್ಲಿ ಏಕಾಏಕಿ ತಂಪು ಉಷ್ಣತೆ ಕಾಣಿಸಿಕೊಳ್ಳಲು ಹಾಗೂ ಮೀನುಗಳು ದಡದಲ್ಲಿ ಕಾಣಿಸಿಕೊಳ್ಳಲು ಕಡಲಜೀವ ಶಾಸ್ತ್ರಜ್ಞರು ವಿವಿಧ ಕಾರಣಗಳನ್ನು ನೀಡಿದ್ದಾರೆ. ತಜ್ಞರು ಹೇಳೋ ಪ್ರಕಾರ, ಸಮುದ್ರಕ್ಕೆ ತಂಪು ನೀರು ಸೇರುವುದರಿಂದ ನೀರಿನ ಉಷ್ಣತೆ ಬದಲಾಗಿ ಹೆಚ್ಚಿನ ಅಂಡರ್ ಕರೆಂಟ್‌ಗೆ ಕಾರಣವಾಗುತ್ತದೆ. ಉಷ್ಣತೆಯ ಬದಲಾವಣೆಯಿಂದ ಕೆಲವು ಮೀನುಗಳಿಗೆ ತಡೆದುಕೊಳ್ಳಲಾಗದೆ ದಡದ ಕಡೆಗೆ ವಲಸೆ ಹೋಗುತ್ತದೆ.
ಇವುಗಳು ಮೀನುಗಾರರ ಬಲೆಗೆ ಸಿಕ್ಕಿಕೊಳ್ಳುತ್ತವೆ. ಇನ್ನು ಮಳೆಗಾಲದಲ್ಲಿ ಅಪ್ ವೆಲ್ಲಿಂಗ್ ಅನ್ನೋ ಪ್ರಕ್ರಿಯೆ ಸಮುದ್ರದಲ್ಲಿ ನಡೆಯುತ್ತದೆ. ಖನಿಜ, ಲವಣಯುಕ್ತ ನೀರು ಸಮುದ್ರಕ್ಕೆ ಸೇರುವಾಗ ಕೆಳಗಿದ್ದ ನೀರು ಮೇಲೆ ಬಂದು ಮೇಲಿದ್ದ ನೀರು ಕೆಳಕ್ಕೆ ಸೇರುತ್ತದೆ. ಮಿಕ್ಸಿಂಗ್ ಪ್ರಕ್ರಿಯೆ ವೇಳೆ ಯಾವುದಾದರೂ ಮೀನುಗಳು ನಡುವಿನಲ್ಲಿ ಹಾದು ಹೋದಲ್ಲಿ ಅವುಗಳು ಮೇಲೆ ಬರಲಾರಂಭಿಸುತ್ತವೆ. ಇವುಗಳು ತೀರ ಪ್ರದೇಶಗಳಲ್ಲಿ ಬಲೆಗಳಲ್ಲಿ ಸಿಲುಕುತ್ತವೆ. ಇನ್ನು ಬಂಗುಡೆ, ಬೂತಾಯಿ, ಅಂಜಲ್, ಪಾಂಪ್ಲೆಟ್ ಮುಂತಾದ ಲಾಭಯುತ ಮೀನುಗಳನ್ನು ಸರಿಯಾಗಿ ಬೆಳೆಯಲು ಬಿಡದೆ ಸಾಕಷ್ಟು ಶೋಷಣೆ ಮಾಡಲಾಗಿದ್ದರಿಂದ ಗೊಬ್ಬರೆಯಂತಹ ಲಾಭ ರಹಿತ, ನಿರ್ಲಕ್ಷ್ಯ ಮಾಡಿ ಬಿಟ್ಟಿದ್ದ ಮೀನುಗಳೇ ಮೀನುಗಾರರಿಗೆ ದೊರೆಯುತ್ತಿದೆ.
ಮುಂದಿನ ದಿನಗಳಲ್ಲಿ ಲಾಭಯುಕ್ತ ಮೀನುಗಳು ದೊರೆಯುವ ಸಾಧ್ಯತೆಗಳಿವೆ. ಇನ್ನು ಮಳೆಯ ಪ್ರಮಾಣ ಕಡಿಮೆಯಾಗಿರೋದು ಕೂಡಾ ಒಂದು ಕಾರಣವಾದ್ರೆ, ಖನಿಜಾಂಶ ಹಾಗೂ ಮೀನುಗಳಿಗೆ ಪೂರಕ ಆಹಾರಗಳನ್ನು ಹೊಂದಿರುವ ಘಟ್ಟ ಪ್ರದೇಶಗಳಿಂದ ಹರಿದು ಬರುವ ನೀರು ಇತ್ತೀಚಿನ ದಿನಗಳಲ್ಲಿ ನೇರವಾಗಿ ಸಮುದ್ರ ಸೇರುತ್ತಿಲ್ಲ. ಅಲ್ಲಲ್ಲಿ ತಡೆಗಳು, ಡ್ಯಾಂಗಳ ನಿರ್ಮಾಣದಿಂದ ಖನಿಜ, ಲವಣಾಂಶಗಳು ಹಾಗೂ ಮೀನುಗಳಿಗೆ ಪೂರಕ ಆಹಾರಗಳು ಡ್ಯಾಂಗಳಲ್ಲೇ ತಳ ಸೇರಲ್ಪಡುತ್ತದೆ. ಇದರಿಂದ ಮೀನುಗಳಿಗೆ ಆಹಾರ ಸಿಗದ ಸಮಸ್ಯೆಗಳೂ ಉಂಟಾಗುತ್ತದೆ.
ಉತ್ತರಕನ್ನಡ: ಗ್ಯಾರೇಜ್ ಸೇರಿಕೊಂಡ ಜನಸೇವೆಗಿದ್ದ ಆ್ಯಂಬುಲೆನ್ಸ್..!
ಇವೆಲ್ಲಾ ವಿಚಾರಗಳು ಮೀನುಗಳ ಲಭ್ಯತೆ ಹಾಗೂ ಮೀನುಗಾರರ ಲಾಭ ನಷ್ಟದ ಮೇಲೆ ಪರಿಣಾಮ ಬೀರುತ್ತದೆ ಅಂತಾರೆ ಕಡಲಜೀವ ಶಾಸ್ತ್ರಜ್ಞರು. ಒಟ್ಟಿನಲ್ಲಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಚಂಡಮಾರುತ, ಕೋಲ್ಡ್ ಕರೆಂಟ್ ಹಾಗೂ ಲಾಭ ರಹಿತ ಕೆಲವು ಮೀನುಗಳು ಸಮುದ್ರ ತೀರಕ್ಕೆ ಬಂದು ಬೀಳುತ್ತಿರುವುದು ಮೀನುಗಾರರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮೀನುಗಾರಿಕೆಯ ಪ್ರಾರಂಭದಲ್ಲೇ ನಷ್ಟವನ್ನು ಎದುರಿಸುತ್ತಿರುವ ಈ ಸಮಸ್ಯೆಗೆ ಸರಕಾರ ಪರಿಹಾರ ಒದಗಿಸಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.