ಧಾರವಾಡ: ಬಾರದ ಮಳೆಗೆ ಕೈ ಸುಟ್ಟುಕೊಂಡ ಮೀನುಗಾರರು..!

By Kannadaprabha News  |  First Published Jul 7, 2023, 10:15 PM IST

ಮಳೆ ಇಲ್ಲದೇ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿ ಖಾಲಿ, ನೀರಿನ ಕೊರತೆಯಿಂದ ಮೀನು ಮರಿಗಳ ಸಾವು, ಮಮ್ಮಲ ಮರುಗಿದ ಮೀನುಗಾರರು. 


ಬಸವರಾಜ ಹಿರೇಮಠ

ಧಾರವಾಡ(ಜು.07):  ಮಳೆ ಕೊರತೆಯ ದುಷ್ಪರಿಣಾಮ ಸಾಂಪ್ರದಾಯಿಕ, ತೋಟಗಾರಿಕೆ ಕೃಷಿ ಸೇರಿದಂತೆ ಮೀನು ಕೃಷಿಗೂ ತಟ್ಟಿದೆ. ಜಿಲ್ಲೆಯಲ್ಲಿ ಮೀನುಗಾರಿಕೆ ಮಾಡುತ್ತಿರುವ ಕೆರೆಗಳಲ್ಲಿ ನೀರಿನ ಮಟ್ಟ ತಳಕ್ಕೆ ಇಳಿದಿದ್ದು, ಈ ವರ್ಷ ಮೀನುಗಾರರಿಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ.

Latest Videos

undefined

ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಲಿವೆ ಎಂದು ಒಂದೊಂದು ಕರೆಗಳಲ್ಲಿ ಲಕ್ಷಾನುಗಟ್ಟಲೇ ಮೀನುಗಳನ್ನು ಬಿಡಲಾಗಿತ್ತು. ಇದೀಗ ಧಾರವಾಡ ಸಮೀಪದ ನೀರಸಾಗರ ಸೇರಿದಂತೆ ಮುಗದ, ಕೆಲಗೇರಿ, ಹುಲಿಕೇರಿ ಇಂದಿರಮ್ಮನ ಕೆರೆ ಹಾಗೂ ಕಲಘಟಗಿಯ ಹಲವು ಕೆರೆಗಳ ನೀರಿನ ಮಟ್ಟ ತಳಕ್ಕೆ ಇಳಿದಿದ್ದು, ಮೀನು ಮರಿಗಳು ಆಮ್ಲಜನಕ ಕೊರತæಯಿಂದ ಸತ್ತು ಕೆರೆ ದಂಡೆ ಮೇಲೆ ಬೀಳುತ್ತಿವೆ. ಮೀನುಗಾರರು ಮಮ್ಮಲ ಮರಗುವಂತಾಗಿದೆ. ಎಲ್ಲ ಕೆರೆಗಳಲ್ಲೂ ಗುಂಡಿಗಳ ಆಕಾರದಲ್ಲಿ ನೀರು ನಿಂತಿದ್ದು ಮೀನುಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿವೆ.

SOUTH WESTERN RAILWAY: ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಶಾಶ್ವತ ಸ್ಥಗಿತ!

ಕಳೆದ ಎರಡ್ಮೂರು ವರ್ಷಗಳ ಕಾಲ ಅತಿವೃಷ್ಟಿಯಿಂದ ಕೆರೆಯಲ್ಲಿ ಬಿಟ್ಟಮೀನು ಮರಿಗಳು ತೇಲಿ ಹೋಗಿವೆ. ಈಗ ಮಳೆ ಇಲ್ಲದೇ ಕೆರೆ ನೀರು ಖಾಲಿಯಾಗಿ ಸತ್ತು ದಂಡೆಯ ಮೇಲೆ ಬಂದು ಬೀಳುತ್ತಿರುವುದಕ್ಕೆ ಕಂಗಾಲಾಗಿರುವ ಮೀನುಗಾರರು ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಜುಲೈ ಮೊದಲ ವಾರದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾದರೂ ಕೆರೆಗಳು ತುಂಬುವಷ್ಟುಮಳೆಯಾಗಿಲ್ಲ. ಹೀಗಾಗಿ ಮೀನುಗಳು ಆರೋಗ್ಯವಾಗಿ ಬೆಳೆಯುತ್ತಿಲ್ಲ. ಜೊತೆಗೆ ಬಲೆಗೂ ಬೀಳುತ್ತಿಲ್ಲ ಎಂದು ರೆ ಮೀನುಗಾರರು ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.

ಮೀನು ನಂಬಿ ನಷ್ಟ:

ಮುಗದ ಹಾಗೂ ಇತರೆ ಕೆರೆಗಳಲ್ಲಿ ಹತ್ತಾರು ವರ್ಷಗಳಿಂದ ಮೀನುಗಾರಿಕೆ ಮಾಡಿಕೊಂಡು ಹತ್ತಾರು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಇದೀಗ ಕೆರೆಯಲ್ಲಿ ಮೀನುಗಳಿಲ್ಲದೇ ಅವರು ನಿರುದ್ಯೋಗಿಗಳಾಗಿದ್ದಾರೆ. ಇದರೊಂದಿಗೆ ಗುತ್ತಿಗೆದಾರರು ಟೆಂಡರ್‌ ಮೂಲಕ ಲಕ್ಷಾನುಗಟ್ಟಲೇ ಹಣ ಕೊಟ್ಟು ಕೆರೆಗಳಲ್ಲಿ ಮೀನು ಮರಿ ಹಾಕಿದ್ದು ಮೀನು ಸಿಗದೇ ಪರದಾಡುವಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮೀನಿಗೆ ಸಾಕಷ್ಟುಬೇಡಿಕೆ, ಬೆಲೆ ಇದೆ. ಆದರೆ, ಮೀನುಗಳೇ ಇಲ್ಲವಾಗಿದೆ.

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಹುಲಿಕೇರಿ, ಕೆಲಗೇರಿ, ಸಾಧನಕೇರಿ ಕೆರೆಗಳ ಟೆಂಡರ್‌ ಪಡೆದಿರುವ ಮೊಹಮ್ಮದ ಹನೀಫ್‌, ಮೊದಲು ಸಾಧಾರಣ ಪ್ರಮಾಣದ ಕೆರೆಗೆ .30-40 ಸಾವಿರ ಕೊಟ್ಟು ಗುತ್ತಿಗೆ ಪಡೆಯುತ್ತಿದ್ದೆವು. ಇದೀಗ ಇ-ಟೆಂಡರ್‌ನಿಂದಾಗಿ ಲಕ್ಷಗಟ್ಟಲೇ ಹಣ ತುಂಬಬೇಕಾಗಿದೆ. ಕಳೆದ ವರ್ಷ ಅತಿ ಹೆಚ್ಚು ಮಳೆಯಾಗಿ ಕೋಡಿ ಹರಿದು ಮೀನು ಮರಿಗಳು ತೇಲಿ ಹೋದವು. ಈಗ ಮಳೆ ಇಲ್ಲದೇ ಮೀನು ಮರಿಗಳು ಸಾಯುತ್ತಿವೆ. ಹುಲಿಕೇರಿಯ ಇಂದಿರಮ್ಮನ ಕೆರೆಯಲ್ಲಿ ಇತ್ತೀಚೆಗಷ್ಟೇ 12 ಲಕ್ಷ ಮೀನು ಮರಿ ಬಿಡಲಾಗಿತ್ತು. ಆದರೆ, ನೀರು ಬಾರದೇ ಅವುಗಳು ಸಾವನ್ನಪ್ಪಿವೆ. ಸಾಧನಕೇರಿ ಕೆರೆ ಅಭಿವೃದ್ಧಿಗೋಸ್ಕರ ಸಂಪೂರ್ಣ ನೀರು ಖಾಲಿ ಮಾಡಿದ್ದಾರೆ. ಕೆಲಗೇರಿಯಲ್ಲೂ ನಿರೀಕ್ಷಿತ ಮಟ್ಟದ ನೀರಿಲ್ಲ. ಹೇಗೆ ಮೀನು ಕೃಷಿ ಮಾಡಬೇಕು ಎಂದು ಪ್ರಶ್ನಿಸಿದರು.

3622 ಹೆಕ್ಕೇರ್‌ನಲ್ಲಿ ಮೀನುಗಾರಿಕೆ

ಜಿಲ್ಲೆಯಲ್ಲಿ ಹತ್ತು ಮೀನುಗಾರಿಕೆ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ಕೆರೆಗಳನ್ನು ಇಷ್ಟುವರ್ಷಕ್ಕೆಂದು ಟೆಂಡರ್‌ ಮೂಲಕ ಗುತ್ತಿಗೆ ಪಡೆದು ಅವುಗಳಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ಧಾರವಾಡ ಜಿಲ್ಲೆಯು ರಾಜ್ಯದಲ್ಲಿಯೇ ಕಡಿಮೆ ಜಲಸಂಪನ್ಮೂಲ ಹೊಂದಿದ ಜಿಲ್ಲೆಯಾದರೂ ಕಲಘಟಗಿ, ಧಾರವಾಡ ಭಾಗಗಳಲ್ಲಿನ ಬಹುತೇಕ ದೊಡ್ಡ ಕೆರೆಗಳಲ್ಲಿ ಇತ್ತೀಚೆಗೆ ಮೀನುಗಾರಿಕೆ ನಡೆಯುತ್ತಿದೆ. ಜಿಲ್ಲೆಯಲ್ಲಿ 3622 ಹೆಕ್ಟೇರ್‌ ಪ್ರದೇಶದಲ್ಲಿ ಮೀನುಗಾರಿಕೆ ನಡೆಯುತ್ತಿದೆ.

click me!