ಪತ್ನಿಯ ನಡವಳಿಕೆ ಸರಿಯಿಲ್ಲದ ಕಾರಣ ಆಗಿಂದಾಗೆ ನಡೆಯುತ್ತಿದ್ದ ಜಗಳ| ಕೆಲ ತಿಂಗಳ ಹಿಂದೆಯಷ್ಟೇ ಗ್ರಾಮದಿಂದ ರಾಮನಗರದ ಐಜೂರು ಬಡಾವಣೆಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ| ಮಗಳಿಗೆ ನೇಣಿನ ಕುಣಿಕೆ ಬಿಗಿದು ತಾನೂ ನೇಣಿಗೆ ಶರಣಾದ ರಾಮಚಂದ್ರ|
ರಾಮನಗರ(ಮೇ.21): ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ತನ್ನ ಮಗಳನ್ನು ನೇಣು ಬಿಗಿದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಟಮಾನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಮಚಂದ್ರ (38)ಹಾಗೂ ಪುತ್ರಿ ವರ್ಷಾ (5) ಮೃತರು. ಆತ್ಮಹತ್ಯೆಗೂ ಮುನ್ನ ರಾಮಚಂದ್ರ ಮಾಡಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದೆ.
ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡಿದ್ದ ರಾಮಚಂದ್ರ ಮತ್ತು ರಂಜಿತಾರವರ ವಿವಾಹವಾಗಿ 8 ವರ್ಷಗಳಾಗಿತ್ತು. ಈ ದಂಪತಿಗೆ ಓರ್ವ ಪುತ್ರ, ಪುತ್ರಿ ಇದ್ದರು. ಪತ್ನಿಯ ನಡವಳಿಕೆ ಸರಿಯಿಲ್ಲದ ಕಾರಣ ಆಗಿಂದಾಗೆ ಜಗಳ ನಡೆಯುತ್ತಿತ್ತು. ಕೆಲ ತಿಂಗಳ ಹಿಂದೆಯಷ್ಟೇ ದಂಪತಿ ಗ್ರಾಮದಿಂದ ರಾಮನಗರದ ಐಜೂರು ಬಡಾವಣೆಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು.
'ಡಿ.ಕೆ.ಶಿವಕುಮಾರ್ ಸಿಎಂ ಮಾಡಲು ಎಚ್‌ಡಿಕೆ ಕೈಜೋಡಿಸಲಿ'
ಕೆಲ ದಿನಗಳ ಹಿಂದೆ ರಂಜಿತಾ ರೌಡಿಯೊಂದಿಗೆ ಕಾಣಿಸಿಕೊಂಡಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ. ಅಂತಿಮವಾಗಿ ರಾಮಚಂದ್ರ ಪುತ್ರಿ ವರ್ಷಾ ಜತೆ ಬಾಡಿಗೆ ಮನೆಯಿಂದ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ತಡರಾತ್ರಿ ಮಗಳಿಗೆ ನೇಣಿನ ಕುಣಿಕೆ ಬಿಗಿದ ರಾಮಚಂದ್ರ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ವಿಚಾರ ತಿಳಿಯುತ್ತಿದ್ದಂತೆ ಕಾಣೆಯಾಗಿದ್ದ ರಂಜಿತಾ ಪೊಲೀಸರ ವಶದಲ್ಲಿದ್ದಾಳೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.