ಮಗನನ್ನು ಕೊಲ್ಲಲು ಅಪ್ಪನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ. ಮಗನನ್ನು ಕೊಲ್ಲಲು ಲಕ್ಷ ಲಕ್ಷ ಹಣ ಕೊಟ್ಟು ಸುಪಾರಿ ಕಿಲ್ಲರ್‌ಗಳೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ.
ಹಾಸನ (ಸೆ.17): ಹಳೆಯ ದ್ವೇಷದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಮಗನ ಕೊಲೆಗೆ ಸುಪಾರಿ ಕೊಟ್ಟಪ್ರಕರಣವನ್ನು ಭೇದಿಸಿ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1 ಲಕ್ಷದ 88 ಸಾವಿರ ರು., 5 ಬಂದೂಕು, ಒಂದು ಮಾರುತಿ ಓಮಿನಿ, ಮೂರು ಬೈಕ್, ಐದು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕಳೆದ ಆಗಸ್ಟ್ 27 ರಂದು ತಂದೆಯೇ ಸುಪಾರಿ ನೀಡಿ ಮಗನನ್ನು ಕೊಲೆ ಮಾಡಿಸಿದ ಪ್ರಕರಣ ಸಂಬಂಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನವನೆ ಆದ ಓರ್ವ ಆರೋಪಿ ನಾಗರಾಜ್ ಬಂದೂಕು ರಿಪೇರಿ ಮಾಡುವ ಲೈಸೆನ್ಸ್ ಹೊಂದಿದ್ದ. ಹತ್ಯೆಯಾದ ಪುನೀತನ ತಂದೆ ಹೇಮಂತ್ (48), ಕಾಂತರಾಜು (52), ಸುನಿಲ್( 27), ಪ್ರಶಾಂತ್ (23), ನಂದೀಶ್(28), ನಾಗರಾಜು( 65) ಎಂಬುವವರನ್ನು ಬಂಧಿಸಲಾಗಿದೆ.
ಇವರಿಂದ 1.88 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಲೆನಾಡು ಭಾಗದ ಕಾಫಿ ತೋಟದ ಮಾಲೀಕರು ಹಾಗೂ ಶಿಕಾರಿ ಮಾಡಲು ಬಳಸುವ ಆರು ಬಂದುಕುಗಳನ್ನು ಆರೋಪಿಗಳು ಬಳಸಿದ್ದಾರೆ. ಇದನ್ನು ಬಂದೂಕು ರಿಪೇರಿ ಮಾಡುವಂತಹ ಆರೋಪಿ ನಾಗರಾಜ್ ಅವರಿಂದ ವಶಪಡಿಸಿಕೊಳ್ಳಲಾಗಿದೆ.
ತೆಂಗಿನ ಕಾಯಿ ರಾಶಿಯಲ್ಲಿ ಹೆಬ್ಬಾವು, ಸಮುದ್ರ ಪಾಲಾದ ಹಸುಗಳಿದ್ದ ಹಡಗು..! ..
ತಂದೆ ನೀಡಿದ ಸುಪಾರಿಗೆ ಪುನೀತ್‌ನನ್ನು ಕೊಲೆ ಮಾಡಲು ಆರೋಪಿಗಳು ಕಳೆದ ಐದು ತಿಂಗಳುಗಳಿಂದಲೂ ಪುನೀತನ ಚಲನವಲನ ಹಾಗೂ ಇತರ ಮಾಹಿತಿಗಳನ್ನು ಕಲೆಹಾಕಿದ್ದರು. ಆರೋಪಿಗಳಿಗೆ ತಂದೆ ಹೇಮಂತ್ ಸುಪಾರಿಯಾಗಿ 2 ಲಕ್ಷ ರು. ನೀಡಲು ಒಪ್ಪಿದ್ದ. ಮುಂಗಡವಾಗಿ 5001 ರು. ನೀಡಲಾಗಿತ್ತು. ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ವೈಷಮ್ಯ ಇತ್ತು. ಮೂರು ವರ್ಷಗಳಿಂದ ತಂದೆ ಮತ್ತು ಪುನೀತ್ ಬೇರೆಯಾಗಿದ್ದರು. ಪುನೀತ್‌ನೊಂದಿಗೆ ತಾಯಿ ಯಶೋಧಮ್ಮ ವಾಸವಾಗಿದ್ದರು. ಹೇಮಂತ್ ಯಶೋಧಮ್ಮ ಅವರಿಗೆ ಯಾವುದೇ ಜೀವನಾಂಶವನ್ನು ನೀಡಿರಲಿಲ್ಲ .
ಈ ಸಂಬಂಧ ಗ್ರಾಮದಲ್ಲಿ ಎರಡು-ಮೂರು ಬಾರಿ ರಾಜಿ ಪಂಚಾಯತಿಯು ನಡೆದಿತ್ತು. ಆದರೆ ಯಾವುದೇ ಜೀವನಾಂಶ ನೀಡುವುದಿಲ್ಲ ಎಂದು ಹೇಮಂತ್ ಸ್ಪಷ್ಟಪಡಿಸಿದ್ದರು. ಪುನೀತ್ ಬೆಂಗಳೂರಿನಲ್ಲಿ ಕೂಲಿ ಮಾಡಿಕೊಂಡು ವಾಸವಾಗಿದ್ದರು.
ಕೆಲ ದಿನಗಳ ಹಿಂದೆ ಹೇಮಂತ್ ಅವರ ತೋಟದಲ್ಲಿ ಪುನೀತ್ ತೆಂಗಿನಕಾಯಿ ಕೆಡವಿದ್ದರಿಂದ ತಂದೆ ಹೇಮಂತ್ ಪುನೀತ್‌ಗೆ ಎಚ್ಚರಿಕೆ ನೀಡಿದ್ದ. ಈ ಕಾರಣದಿಂದಲೇ ಆತ ಬೈಕಿನಲ್ಲಿ ತೆರಳುವಾಗ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಎಂದು ಯಶೋದಮ್ಮ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಡಿವೈಎಸ್ಪಿ ಬಿ.ಬಿ ಲಕ್ಷ್ಮೇಗೌಡ, ಸಿಪಿಐ ಬಿ.ಜಿ.ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನೋದ ರಾಜ್, ಪಿಎಸ್‌ಐ ಶ್ರೀನಿವಾಸ್ ಸೇರಿದಂತೆ ಪ್ರಕರಣ ಭೇದಿಸಿದ ಎರಡು ತಂಡಗಳಿಗೆ ಎಸ್ಪಿ ಶ್ರೀನಿವಾಸ್‌ಗೌಡ ಶ್ಲಾಘಿಸಿದರು.