ಫಸಲ್ ಬಿಮಾ ಯೋಜನೆ ಬೆಳೆ ವಿಮೆ ನೋಂದಣಿಗೆ ಜು. 31 ಕೊನೆಯ ದಿನ

By Gowthami K  |  First Published Jul 11, 2023, 8:18 PM IST

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ಜು. 31 ಕೊನೆಯ ದಿನವಾಗಿದೆ.


ಉಡುಪಿ (ಜು.11): ಕೃಷಿ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ, ರೈತರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ, ವಿಮಾ ಮೊತ್ತ ಪ್ರತಿ ಹೆ.ಗೆ 63,750 ರೂ.ಗೆ ವಿಮಾ ಕಂತಿನ ದರ ಪ್ರತಿ ಹೆ.ಗೆ 1275 (2%) ರೂ.ಗಳಂತೆ ಜುಲೈ 31 ರ ಒಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. 

ಬೆಳೆ ಸಾಲ ಪಡೆಯದ ರೈತರು ಪಹಣಿ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಕಂದಾಯ ರಸೀದಿ ಮತ್ತು ಆಧಾರ್ ಸಂಖ್ಯೆಗಳನ್ನು ಒದಗಿಸಿ, ಸ್ಥಳೀಯ ಸಾಲ ನೀಡುವ ವಾಣಿಜ್ಯ ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಾರ್ವಜನಿಕ ಸೇವಾ ಕೇಂದ್ರ ಮತ್ತು ವಿಮಾ ಸಂಸ್ಥೆಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

Tap to resize

Latest Videos

undefined

ಫಸಲ್‌ ಬಿಮಾ ಯೋಜನೆಗೆ ರಾಜ್ಯ ಸರ್ಕಾರ ಗುಡ್‌ಬೈ?: ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ

ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ, ನೆರೆ/ ಪ್ರವಾಹದಿಂದ ಬೆಳೆ ಮುಳುಗಡೆ, ದೀರ್ಘಕಾಲ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ಭಿತ್ತನೆಯಾದ ಒಂದು ತಿಂಗಳಿನಿಂದ ಕಟಾವಿನ 15 ದಿನಪೂರ್ವದವರೆಗಿನ ಬೆಳೆಯಲ್ಲಿ ನಷ್ಟ ಉಂಟಾಗಿ ನಿರೀಕ್ಷಿತ ಇಳುವರಿಯು, ಪ್ರಾರಂಭಿಕ ಇಳುವರಿಯ ಶೇ. 50 ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬೆಳೆ ನಷ್ಟ ಕಂಡುಬಂದಲ್ಲಿ ಮುಂಚಿತವಾಗಿ ವಿಮೆ ಮಾಡಿದ ರೈತರಿಗೆ ಶೇ. 25 ರಷ್ಟು ಬೆಳೆ ನಷ್ಟ ಪರಿಹಾರ ದೊರೆಯಲಿದೆ.

ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಸ್ಪೋಟ ಹಾಗೂ ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ಹಾನಿಯಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದ್ದು, ಅಧಿಸೂಚಿತ ಘಟಕದಲ್ಲಿ ಶೇ. 25 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆ ನಷ್ಟವಾದಲ್ಲಿ ಬೆಳೆ ನಷ್ಟದ ವರದಿ ಮಾಡಿದ ರೈತರಿಗೆ ಮಾದರಿ ಸಮೀಕ್ಷೆಗೆ ಅನುಗುಣವಾಗಿ ಪರಿಹಾರ ದೊರೆಯಲಿದೆ.

ಟೊಮೆಟೊ ಬೆಲೆ ಗಗನಕ್ಕೆ, ಕೋಲಾರದಿಂದ 2 ಲಕ್ಷ ರೂ ಮೌಲ್ಯದ ಟೊಮೆಟೊ ತುಂಬಿದ ಗಾಡಿ ಹೈಜಾಕ್!

ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದೆ. ಮೇಲಿನ ಎರಡೂ ಸಂದರ್ಭದಲ್ಲಿ ರೈತರು ವಿಮಾ ಸಂಸ್ಥೆ/ ಆರ್ಥಿಕ ಸಂಸ್ಥೆ ಅಥವಾ ಕೃಷಿ ಇಲಾಖಾ ಕಚೇರಿಗೆ 72 ಗಂಟೆಗಳ ಒಳಗಾಗಿ ಬೆಳೆ ಹಾನಿ ವಿವರದ ಮಾಹಿತಿ ಒದಗಿಸಬೇಕು.

ಮಳೆ ಅಭಾವ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ ಶೇ. 75 ರಷ್ಟು ಭಿತ್ತನೆಯಾಗದಿದ್ದಲ್ಲಿ ವಿಮೆ ಮಾಡಿಸಿದ ರೈತರಿಗೆ ವಿಮಾ ಮೊತ್ತದ ಶೇ. 25 ರಷ್ಟು ಪರಿಹಾರ ದೊರೆಯಲಿದೆ.

ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಮುಚ್ಚಳಿಕೆ ಪತ್ರ ನೀಡಿ, ಬೆಳೆ ವಿಮೆಯಿಂದ ಕೈಬಿಡಲು ಕೋರಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!