ಬಳ್ಳಾರಿ: ಅಂತೂ ಮಳೆ ಬಂತು, ನಿಟ್ಟುಸಿರು ಬಿಟ್ಟ ಅನ್ನದಾತ...!

By Kannadaprabha NewsFirst Published Jul 7, 2023, 10:45 PM IST
Highlights

ಜೂನ್‌ ಮುಗಿದರೂ ವಾಡಿಕೆ ಮಳೆ ಬಾರದಿದ್ದರಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಅಷ್ಟಿಷ್ಟು ಮಳೆಗೆ ತಮ್ಮ ಜಮೀನುಗಳಿಗೆ ಬಿತ್ತನೆ ಕಾರ್ಯ ಕೈಗೊಳ್ಳಲು ಜಮೀನುಗಳನ್ನು ಹದ ಮಾಡಿಕೊಂಡಿದ್ದರು. ಇದೀಗ ಬಿತ್ತನೆ ಕೈಗೊಳ್ಳಲು ಬಹುತೇಕ ಕಡೆ 3 ದಿನಗಳ ಕಾಲ ಬಿಸಿಲಿಗಾಗಿ ಕಾಯುವ ಪರಿಸ್ಥಿತಿ ರೈತರದಾಗಿದೆ.

ಜಿ. ಸೋಮಶೇಖರ

ಕೊಟ್ಟೂರು(ಜು.07):  ಮುಂಗಾರು ಮುನಿಸಿನಿಂದ ತಾಲೂಕಿನಲ್ಲಿ ಬರದ ಛಾಯೆ ಮೂಡಿರುವಾಗಲೇ ಕಳೆದ 3 ದಿನಗಳಿಂದ ಮಳೆ ಸುರಿಯಲಾರಂಭಿಸಿದ್ದು, ವರುಣ ಕೃಪೆ ತೋರದಿದ್ದರೆ ಕೃಷಿಯಷ್ಟೇ ಅಲ್ಲದೇ ಜೀವಜಲ ಮತ್ತು ಜಾನುವಾರುಗಳಿಗೆ ಖಂಡಿತ ಕಂಟಕವಾಗುತ್ತಿತ್ತು ಎಂದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಜೂನ್‌ ಮುಗಿದರೂ ವಾಡಿಕೆ ಮಳೆ ಬಾರದಿದ್ದರಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಅಷ್ಟಿಷ್ಟು ಮಳೆಗೆ ತಮ್ಮ ಜಮೀನುಗಳಿಗೆ ಬಿತ್ತನೆ ಕಾರ್ಯ ಕೈಗೊಳ್ಳಲು ಜಮೀನುಗಳನ್ನು ಹದ ಮಾಡಿಕೊಂಡಿದ್ದರು. ಇದೀಗ ಬಿತ್ತನೆ ಕೈಗೊಳ್ಳಲು ಬಹುತೇಕ ಕಡೆ 3 ದಿನಗಳ ಕಾಲ ಬಿಸಿಲಿಗಾಗಿ ಕಾಯುವ ಪರಿಸ್ಥಿತಿ ರೈತರದಾಗಿದೆ.

ಕುಡಿಯಲು ನೀರು, ಮೇವಿಲ್ಲದೆ ಕಂಗಾಲಾದ ದೇವರ ಎತ್ತುಗಳು ಎರಡು ವಾರದಲ್ಲಿ 5 ಸಾವು!

ತಾಲೂಕಿನ ರೈತರು ತೊಗರಿ, ಹೆಸರು, ಮೆಕ್ಕೆಜೋಳ ಮತ್ತಿತರ ಬೆಳೆ ಬಿತ್ತಲು ಪೂರಕ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸಕಾಲಿಕವಾಗಿ ಮಳೆ ಆಗದಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಜೂನ್‌ವರೆಗೆ ತಾಲೂಕಿನಲ್ಲಿ 500ಕ್ಕೂ ಹೆಚ್ಚು ಮಿಮೀ ಮಳೆಯಾಗಬೇಕಿತ್ತು. ಆದರೆ 100 ಮಿಮೀ ಮಳೆ ಮಾತ್ರ ತಾಲೂಕಿನಲ್ಲಿ ಬಿದ್ದಿತ್ತು. ಸಮರ್ಪಕವಾಗಿ ಮಳೆ ಬಾರದ್ದರಿಂದ ರೈತರು ವರುಣನ ಕೃಪೆಯಾಗಿ ದೇವರ ಮೊರೆ ಹೋಗತೊಡಗಿದ್ದರು.

ಕೊಟ್ಟೂರು ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೆಕ್ಕೆಜೋಳ ಬೆಳೆಯನ್ನು ಹೆಚ್ಚಾಗಿ ರೈತರು ಬೆಳೆಯಲು ಆರಂಭಿಸತೊಡಗಿದ್ದಾರೆ. ಕೆಲವಡೆ ಹೈಬ್ರಿಡ್‌ ಜೋಳದ ಬಿತ್ತನೆ ಮಾಡಿದ್ದಾರೆ. ಉಳಿದಂತೆ ರಾಗಿ, ಮೆಕ್ಕೆಜೋಳ ಬೆಳೆಯಲು ಸಿದ್ಧತೆಯನ್ನು ರೈತರು ಕೈಗೊಂಡು ಮುಗಿಲಿನತ್ತ ನಿತ್ಯ ಮುಖ ಮಾಡುವುದನ್ನು ರೂಢಿ ಮಾಡಿಕೊಂಡಿದ್ದರು.

ಇದೀಗ ಬಿತ್ತನೆ ಕಾರ್ಯ ಆರಂಭಿಸಲು ಬಹುತೇಕ ಕಡೆ ರೈತರು ಇನ್ನೂ 2-3 ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನುಗಳಲ್ಲಿ ಕಳೆದ ಮೂರು ದಿನಗಳಿಂದ ಬರುತ್ತಿರುವ ಮಳೆಯ ನೀರು ನಿಂತು ಜಮೀನು ಸಂಪೂರ್ಣ ತೋಯ್ದು ಒದ್ದೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿತ್ತನೆ ಮಾಡಲು ಖಂಡಿತ ಸಾಧ್ಯವಾಗದು. ಬಿಸಿಲು ಮೂಡಿದರೆ ತೋಯ್ದ ಹೊಲಗಳು ಸ್ವಲ್ಪ ಒಣಗುವುದರಿಂದ ನಿರುಮ್ಮಳವಾಗಿ ರೈತರು ಬಿತ್ತನೆ ಕಾರ್ಯ ಕೈಗೊಳ್ಳಬಹುದು. ಬಿತ್ತನೆಗೆ ಬೇಕಾದ ಎಲ್ಲ ಬಗೆಯ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ತಾಲೂಕಿನಲ್ಲಿ ದಾಸ್ತಾನಿರಿಸಿಕೊಂಡಿದೆ. ಜತೆಗೆ ಗೊಬ್ಬರ, ಔಷಧಗಳು ಸಹ ರೈತರ ನಿರೀಕ್ಷೆಗೆ ಅನುಗುಣವಾಗಿ ಸಂಗ್ರಹವಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರೈತರ ಜೀವಾಳವಾದ ಕೊಟ್ಟೂರು ಕೆರೆ ತುಂಬಿದರೆ ಈ ಭಾಗದ ಸುಮಾರು 600ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದ ಜಮೀನುಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ರೈತರಿಗೆ ಬೆಳೆ ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಸಹಕಾರಿಯಾಗಲಿದೆ.

ಹನಿ ನೀರಿಗಾಗಿ ಹಾಹಾಕಾರ: ನಮಗೆ ನಿಮ್ಮ ಗ್ಯಾರಂಟಿಗಳು ಬೇಡ, ಕುಡಿಯಲು ನೀರು ಕೊಡಿ ಎನ್ನುತ್ತಿರುವ ಜನ..!

ಕೊಟ್ಟೂರು ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಆರಂಭಿಸಿದ್ದಾರೆ. ಪ್ರಸ್ತುತ ಮೆಕ್ಕೆಜೋಳ ಬಿತ್ತನೆ ಬೀಜಗಳ ಬೇಡಿಕೆ ಹೆಚ್ಚಿದ್ದು, ಜೋಳ, ಸಜ್ಜೆಯ ಬಿತ್ತನೆ ಅವಧಿ ಮುಗಿದಿದೆ. ರಾಗಿ ನವಣೆ, ಶೇಂಗಾ ಬೀಜ ಬಿತ್ತನೆ ಮಾಡಲು ಇದು ಉತ್ತಮ ಸಮಯ ಅಂತ ಕೊಟ್ಟೂರು ಕೃಷಿ ಸಹಾಯಕ ಅಧಿಕಾರಿ ಶ್ಯಾಮಸುಂದರ್‌ ತಿಳಿಸಿದ್ದಾರೆ. 

ಮಳೆ ತಡವಾಗಿ ಆರಂಭಗೊಂಡ ಕಾರಣ ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ಮತ್ತು ಗುಣಮಟ್ಟದ ಬಿತ್ತನೆ ಬೀಜಗಳನ್ನು ಖರೀದಿಸಲು ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ ತಡವಿಲ್ಲದೆ ಬಿತ್ತನೆ ಬೀಜವನ್ನು ಪೂರೈಸಬೇಕು ಅಂತ ಕೊಟ್ಟೂರು ರೈತ ಚನ್ನವೀರಪ್ಪ ತಿಳಿಸಿದ್ದಾರೆ.

click me!