ಕೆಜಿಗೆ 20ರಂತೆ ಖರೀದಿಸುತ್ತಿರುವ ದಲ್ಲಾಳಿಗಳು| ವಿಮಾ ಪರಿಹಾರ ಸಿಗುವ ಖಾತ್ರಿಯೂ ಇಲ್ಲ| ಮಾವು ತೋಪಿನ ಆದಾಯವನ್ನೇ ನೆಚ್ಚಿಕೊಂಡವರಿಗೆ ಎರಡು ವರ್ಷಗಳು ಮೇಲೇಳಲಾರದ ಶಾಕ್|
ಹಾನಗಲ್ಲ(ಮೇ.01): ಈ ಬಾರಿಯೂ ತಾಲೂಕಿನಲ್ಲಿ ಮಾವು ಬೆಳೆಗಾರರು ಸಂಕಷ್ಟದ ಸವಾಲೆದುರಿಸುತ್ತಿದ್ದು, ದಲ್ಲಾಳಿಗಳ ಕೈಗೊಂಬೆಯಾಗಿದ್ದಾರೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.
ಹಾನಗಲ್ಲ ತಾಲೂಕಿನಲ್ಲಿ 3.5 ಸಾವಿರ ಹೆಕ್ಟೇರನಷ್ಟು ಮಾವು ತೋಟಗಳಿವೆ. ರೈತರು ಒಂದೆಡೆ ದಲ್ಲಾಳಿಗಳ ಬಿಗಿಪಟ್ಟಿನ ಪೆಟ್ಟು ತಿಂದು ಕಂಗಾಲಾಗಿದ್ದರೆ ಇನ್ನೊಂದೆಡೆ ಕೊರೋನಾ ಶಾಕ್‌ಗೆ ಸಂಚಲನವನ್ನೇ ಕಳೆದುಕೊಂಡಿದ್ದಾರೆ. ತೋಟಗಾರಿಕೆ ಇಲಾಖೆ ಮಾವು ವಿಮೆ ವಿಷಯದಲ್ಲಿ ನಮ್ಮ ಪಾತ್ರವಿಲ್ಲ. ಅದು ಹವಾಮಾನ ಆಧರಿತ ವಿಮಾ ಪರಿಹಾರ ಎಂದು ಕೈ ಚೆಲ್ಲುತ್ತದೆ. ವಾಸ್ತವದ ಅರಿವು ತೋಟಗಾರಿಕೆ ಇಲಾಖೆಗೆ ಇದ್ದರೂ ಅಸಹಾಯಕವಾಗಿದೆ.
ಪ್ರಸ್ತುತ ವರ್ಷ ಹತ್ತಾರು ಬಾರಿ ಮಳೆ ಬಂದು ಮಾವು ಫಸಲು ಪೂರ್ಣ ಪ್ರಮಾಣದಲ್ಲಿ ಕಲೆಯಾಗಿ ಕೆಟ್ಟು ಹೋಗಿದೆ. ಬೆಳೆಯ ಪ್ರಮಾಣವೂ ತೀರ ಕಡಿಮೆ. ಇದರ ನಡುವೆ ಮಾವು ಖರೀದಿಸುವವರೂ ರೈತರೊಂದಿಗೆ ಆಟವಾಡುತ್ತಿದ್ದಾರೆ. ಬಾಯಿಗೆ ಬಂದ ಬೆಲೆಗೆ ಇರುವಷ್ಟು ಮಾವು ಮಾರಿ ರೈತರು ಊರಿಗೆ ಮರಳುತ್ತಿದ್ದಾರೆ. ಮಾವಿನ ಮಂಡಿಗಳ ಮಾಲೀಕರು ಕೂಡ ಒಂದು ಕೆಜಿಗೆ 20ರಿಂದ 25ಕ್ಕೆ ಖರೀದಿಸುತ್ತಿದ್ದಾರೆ.
ಕಳೆದ ವರ್ಷ ಇದೇ ರೀತಿ ಕೊರೋನಾ ಹಾಗೂ ದಲ್ಲಾಳಿಗಳ ಹೊಡೆತಕ್ಕೆ ಸಿಕ್ಕು ತೋಟದಲ್ಲಿಯೇ ಮಾವು ಕೊಳೆತು ಹೋಯಿತು. ಹಲವರು ಹತ್ತಾರು ವರ್ಷಗಳಿಂದ ಕಾಳಜಿಯಿಂದ ಬೆಳೆಸಿದ ಮಾವಿನ ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿದರು. ಇನ್ನೊಂದೆಡೆ ಮಾವಿನ ತೋಪಿನಲ್ಲಿಯೇ ಕೆಲವರು ಭವಿಷ್ಯದ ಆಶಾದಾಯಕ ಮನಸ್ಥಿತಿಯಿಂದ ಅಡಕೆ ಗಿಡ ನೆಟ್ಟಿದ್ದಾರೆ. ಆದರೆ ಮಾವು ತೋಪಿನ ಆದಾಯವನ್ನೇ ನೆಚ್ಚಿಕೊಂಡವರಿಗೆ ಎರಡು ವರ್ಷಗಳು ಮೇಲೇಳಲಾರದ ಶಾಕ್ ನೀಡಿವೆ.
ಈ ನಡುವೆ ಕಳೆದ ವರ್ಷದ ಮಾವು ವಿಮೆಯಲ್ಲಿ ಭಾರಿ ಏರುಪೇರಾಗಿದೆ. ತೋಟಗಾರಿಕಾ ಇಲಾಖೆಯಲ್ಲಿ ವಿಚಾರಿಸಿದರೆ ಇದು ನಮ್ಮ ಕೈಯಲ್ಲಿಲ್ಲ ಎಂದು ಕೈಚೆಲ್ಲುವುದು ಸಹಜವಾದರೂ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳಲ್ಲಿಯೇ ವಿಪರೀತ ವ್ಯತ್ಯಾಸ ಬೆಳೆ ವಿಮೆ ಕಂಪನಿಯಿಂದ ಆಗಿದೆ ಎಂಬ ಸತ್ಯ ಇಲಾಖೆಗೆ ಗೊತ್ತಿದೆ. ಹವಾಮಾನ ಆಧರಿತ ಎಂದು ಹೇಳುವ ತೋಟಗಾರಿಕೆ ಇಲಾಖೆ ವಾಸ್ತವ ತಿಳಿದೂ, ಕಣ್ಣಿದ್ದು ಕುರುಡರಂತಾಗಿದೆ. ಒಂದೇ ಮಳೆ ಮಾಪನ ಕೇಂದ್ರ, ಅದೇ ವಾತಾವರಣದಲ್ಲಿದ್ದ ಮಾವು ಬೆಳೆಗೆ ಭಾರಿ ಪ್ರಮಾಣದ ನಷ್ಟವಾದರೂ ಅತ್ಯಂತ ಕಡಿಮೆ ವಿಮೆ ಪರಿಹಾರ ಬಂದಿದೆ. ಈ ಬಗ್ಗೆ ರೈತ ಮಾತ್ರ ನಿಸ್ಸಹಾಯಕನಾಗಿದ್ದಾನೆ. ಸಂಪೂರ್ಣವಾಗಿ ತೋಟಗಳು ಹಾಳಾಗಿದ್ದರೂ ಬೆಳೆ ವಿಮೆ ಪರಿಹಾರ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಹೀಗೆ ಮುಂದುವರಿದರೆ ನಾಲ್ಕಾರು ವರ್ಷಗಳಲ್ಲಿ ಹಾನಗಲ್ಲ ತಾಲೂಕು ಮಾವು ಬೆಳೆ ಇಲ್ಲದ ತಾಲೂಕಿನ ಪಟ್ಟಿಗೆ ಸೇರುವ ಸ್ಥಿತಿ ಇದೆ.
ಕಳೆದ ವರ್ಷ ಮಾವು ವಿಮೆಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಕೆಲವರಿಗೆ ವಿಮಾ ಪರಿಹಾರ ಬರಲೇ ಇಲ್ಲ. ಪ್ರಸ್ತುತ ವರ್ಷ ಅಕಾಲಿಕ ಮಳೆಗೆ ಬೆಳೆ ಹಾಳಾಗಿ ರೈತರನ್ನು ಚಿಂತೆಗೀಡು ಮಾಡಿದೆ. ತೋಟಗಾರಿಕೆ ಇಲಾಖೆ ವಿಮೆ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಸ್ಥಿತಿ ಇಲ್ಲ. ವಿಮಾ ಇಲಾಖೆಗೆ ನಾವು ಮುಟ್ಟಲಾಗುವುದಿಲ್ಲ. ಹೀಗಾಗಿ ರೈತನ ಅಳಲು ಯಾರಿಗೂ ಮುಟ್ಟುವುದೇ ಇಲ್ಲ. ರೈತನಿಗೆ ಕಣ್ಣೀರೇ ಪರಿಹಾರ ಎನ್ನುವಂತಾಗಿದೆ ಎಂದು ಮಾವು ಬೆಳೆಗಾರ ರೈತ ಕಲ್ಯಾಣಕುಮಾರ ಶೆಟ್ಟರ ತಿಳಿಸಿದ್ದಾರೆ.
ಈ ಬಾರಿ ಮಳೆಯಿಂದಾಗಿ ಮಾವು ಬಹಳಷ್ಟುಹಾಳಾಗಿದೆ. ಕಳೆದ ವರ್ಷ ಮಾವಿನ ವಿಮೆಯಲ್ಲಿಯೂ ತಾರತಮ್ಯವಾಗಿದೆ ಎಂಬ ದೂರುಗಳಿವೆ. ಆದರೆ ಅದು ನಮ್ಮ ಕೈಯಲ್ಲಿಲ್ಲ. ಹವಾಮಾನ ಆಧರಿತ ಬೆಳೆ ವಿಮೆ ಇರುವುದರಿಂದ ಅದರಲ್ಲಿ ನಮ್ಮ ವರದಿಯ ಯಾವುದೇ ಪರಿಣಾಮವಿರುವುದಿಲ್ಲ. ಮಾವು ವಿಮೆಗೆ ಸಂಬಂಧಿಸಿದಂತೆ ಪ್ರಸ್ತುತ ವರ್ಷ ಒಳ್ಳೆಯ ವಿಮೆ ಬರಬೇಕು ಎಂದು ನಿರೀಕ್ಷಿಸಬಹುದಷ್ಟೇ ಎಂದು ಹಾನಗಲ್ಲ ಸಹಾಯಕ ತೋಟಗಾರಿಕೆ ಅಧಿಕಾರಿ ಮಂಜುನಾಥ ಬಣಕಾರ ಹೇಳಿದ್ದಾರೆ.