ಕಲಬುರಗಿ: 940 ಕೋಟಿ ಖರ್ಚಾದರೂ ಸಿಗುತ್ತಿಲ್ಲ ನೀರು

By Kannadaprabha News  |  First Published Jun 9, 2023, 10:15 PM IST

ಖಾಲಿಯಾದ ಭೀಮಾ ಬಾಂದಾರು, ಜನ ಜಾನುವಾರುಗಳ ಗೋಳು ಕೇಳುವವರು ಯಾರು?, ನೀರಿಲ್ಲದೆ ಕಳೆಗುಂದಿದ ಕೃಷಿ ಚಟುವಟಿಕೆ. 


ರಾಹುಲ್‌ ದೊಡ್ಮನಿ ಬಡದಾಳ

ಚವಡಾಪುರ(ಜೂ.09):  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಆರಂಭಿಕ ಮಳೆಗಳು ಬರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ರೈತಾಪಿ ವರ್ಗದ ಜನ ಹಣೆ ಮೇಲೆ ಕೈ ಇಟ್ಟು ಮುಗಿಲ ಕಡೆ ಮುಖ ಮಾಡುವಂತಾಗಿದೆ. ಇನ್ನೊಂದೆಡೆ ಅಫಜಲ್ಪುರ ತಾಲೂಕಿನಲ್ಲಿರುವ ದೊಡ್ಡ ನೀರಾವರಿ ಯೋಜನೆಯಾಗಿರುವ ಸೊನ್ನ ಏತ ನೀರಾವರಿ ಬಾಂದಾರಿನಲ್ಲೂ ಕೂಡ ನೀರು ಖಾಲಿಯಾಗಿದ್ದು ಜನ ಜಾನುವಾರುಗಳ ಗೋಳು ಕೇಳುವವರು ಯಾರು ಎಂಬಂತಾಗಿದೆ.

Tap to resize

Latest Videos

undefined

ಅಫಜಲ್ಪುರ ತಾಲೂಕಿನಲ್ಲಿ ಹರಿಯುವ ಭೀಮಾ ಮತ್ತು ಅಮರ್ಜಾ ನದಿಗಳಿಗೆ ನೂರಾರು ಕೋಟಿ ಹಣ ವ್ಯಯಿಸಿ ಅನೇಕ ನೀರಾವರಿ ಯೋಜನೆಗಳನ್ನು ಮಾಡಲಾಗಿದೆ. ಅದರಲ್ಲಿ ಮುಖ್ಯವಾದುದ್ದು ಸೊನ್ನ ಏತ ನೀರಾವರಿ ಯೋಜನೆ. ಈ ಏತ ನೀರಾವರಿ ಯೋಜನೆಗಾಗಿ ಇದುವರೆಗೆ 940 ಕೋಟಿ ಅನುದಾನ ಖರ್ಚಾಗಿದೆ. ಇಷ್ಟುದೊಡ್ಡ ಮೊತ್ತದಲ್ಲಿ ನಿರ್ಮಾಣವಾದ ಯೋಜನೆಯಿಂದ ಅಫಜಲ್ಪುರ ತಾಲೂಕಿನಲ್ಲಿ 3.16 ಟಿಎಂಸಿ ನೀರಿನ ಲಭ್ಯತೆ ಸಾಧ್ಯವಾಗುತ್ತಿದೆ. ಒಟ್ಟು ಸಂಗ್ರಹ ಸಾಮರ್ಥ್ಯ 3.16 ಟಿಎಂಸಿ ಇದ್ದು ಸಧ್ಯ ಬ್ಯಾರೇಜ್‌ನಲ್ಲಿ 1.43 ಟಿಎಂಸಿ ನೀರು ಮಾತ್ರ ಉಳಿದುಕೊಂಡಿದೆ. ಲಭ್ಯವಿರುವ ನೀರಿನಲ್ಲಿ ಈಗ ಕೇವಲ 0.75 ಟಿಎಂಸಿ ಮಾತ್ರ ಬಳಕೆ ಮಾಡಬಹುದಾಗಿದೆ. ಅದಿಷ್ಟುನೀರು ಬಳಕೆ ಮಾಡಿದರೆ ಉಳಿದ ನೀರಲ್ಲಿ ಯಾವ ಕೈಗಾರಿಕೆಗೂ, ಕೃಷಿ ಚಟುವಟಿಕೆಗಳಿಗೂ, ಕುಡಿಯುವುದಕ್ಕೂ ನೀರು ಬಿಡಲು ಸಾಧ್ಯವಾಗುವುದಿಲ್ಲ.

ಕಲ​ಬು​ರ​ಗಿಗೆ ಏಮ್ಸ್‌: ಶ​ರಣ ಪ್ರಕಾಶ ಹೇಳಿ​ಕೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ

ಬ್ಯಾರೇಜ್‌ನ ನೀರಿನ ಪ್ರಮಾಣದಲ್ಲಿ ಕೃಷಿ, ಕೈಗಾರಿಕೆ, ವಿದ್ಯುತ್‌ ಉತ್ಪಾದನೆ ಹಾಗೂ ಕುಡಿಯುವುದಕ್ಕಾಗಿ ಹಂಚಿಕೆ ಮಾಡಲಾಗಿದ್ದು 0.1 ಟಿಎಂಸಿ ನೀರು ಕುಡಿಯುವುದಕ್ಕಾಗಿ ಬಳಕೆ ಮಾಡಬಹುದಾಗಿದೆ, 0.27 ಟಿಎಂಸಿ ಕೈಗಾರಿಕೆಗಳಿಗೆ ಬಳಕೆ ಮಾಡಬಹುದಾಗಿದೆ. ಭರ್ತಿಯಾದ ಬಳಿಕ 0.9 ಟಿಎಂಸಿ ಆವಿಯಾಗಿ ಪುನಃ ಮೋಡ ಸೇರಿಕೊಳ್ಳುತ್ತದೆ. ಹೀಗಿರುವಾಗ ಸಧ್ಯ ಬ್ಯಾರೇಜ್‌ ಖಾಲಿಯಾಗುವ ಹಂತಕ್ಕೆ ತಲುಪಿದ್ದು ಎಲ್ಲರಲ್ಲೂ ಆತಂಕ ಮನೆ ಮಾಡುವಂತಾಗಿದೆ.

ನೀರಿಲ್ಲದೆ ಕಳೆಗುಂದಿದ ಕೃಷಿ ಚಟುವಟಿಕೆ:

ಪ್ರತಿವರ್ಷ ಇಷ್ಟೊತ್ತಿಗಾಗಲೇ ಒಂದೆರಡು ಮಳೆ ಬಂದು ಮಳೆಯಾಶ್ರೀತ ಪ್ರದೇಶಗಳಲ್ಲಿ ಮುಂಗಾರು ಕೃಷಿ ಚಟುವಟಿಕೆಗಳು ಅಬ್ಬರದಿಂದ ಸಾಗುತ್ತಿದ್ದವು. ಈ ವರ್ಷ ಮುಂಗಾರು ಮಳೆ ಬಾರದ ಹಿನ್ನೆಲೆ ಕೃಷಿ ಚಟುವಟಿಕೆಗಳು ಕಳೆಗುಂದಿವೆ. ಇನ್ನೊಂದೆಡೆ ಭೀಮಾ ಬ್ಯಾರೇಜ್‌ ನಂಬಿ ಕೃಷಿ ಮಾಡುತ್ತಿರುವ ರೈತರು ಈಗ ಮಳೆಯೂ ಇಲ್ಲ, ಬ್ಯಾರೇಜ್‌ ನೀರು ಇಲ್ಲದಂತಾಗಿ ಆತಂಕ ಎದುರಿಸುತ್ತಿದ್ದಾರೆ. ಸೊನ್ನ ಬ್ಯಾರೇಜ್‌ ಇರುವ ಕಾರಣಕ್ಕಾಗಿಯೇ ಹಾವಳಗಾ ಹಾಗೂ ಚವಡಾಪುರ ಗ್ರಾಮಗಳಲ್ಲಿ ರೇಣುಕಾ ಹಾಗೂ ಕೆಪಿಆರ್‌ ಎನ್ನುವ ಸಕ್ಕರೆ ಕಾರ್ಖಾನೆಗಳು ಹುಟ್ಟಿಕೊಂಡಿವೆ. ಅಲ್ಲದೆ ತಾಲೂಕಿನ ಸುತ್ತಮುತ್ತಲಿನಲ್ಲಿ ಸುಮಾರು ನಾಲ್ಕೈದು ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿವೆ. ಹೀಗಾಗಿ ಸಾವಿರಾರು ಎಕರೆಯಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ನಾಟಿ ಮಾಡಿದ ಕಬ್ಬು ಈಗ ನೀರಿನ ಕೊರತೆಯಿಂದ ಒಣಗುತ್ತಿದ್ದು ರೈತರ ಚಿಂತೆ ಹೆಚ್ಚುವಂತೆ ಮಾಡಿದೆ.

ನೀರಿನ ಬವಣೆ:

ಸರ್ಕಾರ ಅಫಜಲ್ಪುರ ತಾಲೂಕಿನ ಸಮಗ್ರ ನೀರಾವರಿಗಾಗಿ ಪರಿಪೂರ್ಣವಾದ ಯೋಜನೆ ರೂಪಿಸುತ್ತಿಲ್ಲ. ಈಗಾಗಲೇ ಅಫಜಲ್ಪುರ ಮತ್ತು ಆಳಂದ ತಾಲೂಕಿನ ಕೆರೆಗಳು ಮತ್ತು ಬ್ಯಾರೇಜ್‌ಗೆ ನೀರು ತುಂಬಿಸುವ ಸಲುವಾಗಿ ರೂಪಿಸಿದ ಕೆರೆ ತುಂಬುವ ಯೋಜನೆ ಪ್ರಗತಿ ಹಂತದಲ್ಲಿದೆ. ಪ್ರವಾಹದ ನೀರನ್ನು ಸಮರ್ಪಕವಾಗಿ ಲಿಫ್ಟ್‌ ಇರಿಗೇಷನ್‌ ಮೂಲಕ ಬಳಕೆ ಮಾಡುವ ಯೋಜನೆ ಇದಾಗಿದೆ. ಇಷ್ಟೊತ್ತಿಗಾಗಲೇ ಮುಗಿಯಬೇಕಿದ್ದ ಯೋಜನೆ ಇನ್ನೂ ಆಮೆ ಗತಿಯಲ್ಲಿ ಸಾಗಿದೆ. ಕಳದ ಬಾರಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಬಿಜೆಪಿಯನ್ನು ದೂರುವ ಭರಾಟೆಯಲ್ಲಿ ನೀರಾವರಿ ಯೋಜನೆಗಳಿಗೆ ದುಡ್ಡು ಕೊಡಲಿಲ್ಲ ಎಂದು ಆಪಾದಿಸುತ್ತಿತ್ತು. ಈಗ ಕಾಂಗ್ರೆಸ್‌ ನವರೇ ಅಧಿಕಾರದಲ್ಲಿದ್ದಾರೆ. ಆಳಂದ, ಅಫಜಲ್ಪುರದಲ್ಲೂ ಕಾಂಗ್ರೆಸ್‌ ಶಾಸಕರಿದ್ದಾರೆ. ಈಗಲಾದರೂ ಬಿಸಿಲೂರಿನ ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಪರಿಪೂರ್ಣ ಯೋಜನೆ ರೂಪಿಸುವರೇ? ಅನುಷ್ಠಾನಕ್ಕೆ ತರುವರೇ ಕಾದು ನೋಡಬೇಕಾಗಿದೆ.

Agriculture: ಕಲಬುರಗಿಯಲ್ಲಿ ಕೃಷಿ ಮಾಹಿತಿ ರಥಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ

ಭೀಮಾ ಬ್ಯಾರೇಜ್‌ನಲ್ಲಿಗ ನೀರಿನ ಪ್ರಮಾಣ ಕುಸಿತವಾಗಿದೆ. ಮಳೆಯಾಗದಿದ್ದರೆ ಆತಂಕ ಹೆಚ್ಚಿಸಲಿದೆ. ಸದ್ಯ 1.43 ಟಿಎಂಸಿ ನೀರು ಮಾತ್ರ ಇದ್ದು ಇದರಲ್ಲಿ ಕೇವಲ 0.75 ಟಿಎಂಸಿ ನೀರು ಜನ, ಜಾನುವಾರುಗಳಿಗೆ ಕುಡಿವ ಸಲುವಾಗಿ ಬಳಕೆ ಮಾಡಬಹುದಾಗಿದೆ. ಕೈಗಾರಿಕೆಗಳಿಗೆ ಆರ್‌ಸಿ ಅವರು ಪರವಾನಗಿ ಕೊಟ್ಟರೆ ಮಾತ್ರ ನೀರು ಬಿಡಬಹುದು. ಸೊನ್ನ ಬ್ಯಾರೇಜ್‌ನ ನೀರಿನಿಂದ 60 ಸಾವಿರ ಎಕರೆಗೆ ನೀರುಣಿಸಬಹುದಾಗಿದ್ದು ಸಧ್ಯ ನೀರಿನ ಕೊರತೆಯಿಂದ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟುವಿಕೋಪಕ್ಕೆ ಹೋಗಲಿದೆ ಅಂತ ಅಫಜಲ್ಪುರ ಕೆಎನ್‌ಎನ್‌ಎಲ್‌ ಅಧಿಕಾರಿ ಗುರು ಪಾಣೆಗಾಂವ್‌ ಹೇಳಿದ್ದಾರೆ. 

ಭೀಮಾ ನದಿ, ಸೊನ್ನ ಬ್ಯಾರೇಜ್‌ ನಂಬಿದ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಈಗ ನೀರಿನ ಕೊರತೆಯಿಂದ ಕಬ್ಬು ಒಣಗುತ್ತಿವೆ. ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಲಿ, ಜೊತೆಗೆ ಭೀಮಾ ಬ್ಯಾರೇಜ್‌ಗೆ ಬೇರೆ ಜಲಾಶಯಗಳಿಂದ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆ ಮಾಡುವಂತೆ ಕ್ರಮ ಕೈಗೊಳ್ಳಲಿ ಅಂತ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ತಿಳಿಸಿದ್ದಾರೆ. 

click me!