ಉತ್ತರಕನ್ನಡ: ಅನ್ನದಾತನಿಗೆ ಏಟಿನ ಮೇಲೆ ಏಟು, ಬೆಳೆಗೆ ರೋಗ ಕಾಟ, ಸಂಕಷ್ಟದಲ್ಲಿ ರೈತರು..!

By Girish Goudar  |  First Published Oct 4, 2023, 10:42 PM IST

ಅಂಕೋಲಾದಲ್ಲಿ ಬೆಂಕಿಗಾಳಿ ರೋಗದಿಂದಾಗಿ ರೈತರ ಸಾವಿರಾರು ಎಕರೆ ಭತ್ತದ ಕೃಷಿ ನಾಶವಾಗಿದೆ. ಮಳೆಯ ಕೊರತೆ ಕಾರಣದಿಂದಲೇ ಈ ರೋಗ ಕಾಣಿಸಿಕೊಂಡಿದ್ದು, ಭತ್ತದ ಪೈರುಗಳು ಸಂಪೂರ್ಣವಾಗಿ ಒಣಗಿ ಹೋದಂತಾಗಿ ಬಿಳಿ ಬಣ್ಣಕ್ಕೆ ತಿರುಗಿದಂತಾಗಿವೆ. 


ಉತ್ತರಕನ್ನಡ(ಅ.04):  ರಾಜ್ಯದಲ್ಲಿ ಮುಂಗಾರು ಮಳೆ ರಾಜ್ಯದ ಜನರಿಗೆ ಕೈ ಕೊಟ್ಟಿದ್ದರೂ ವಾಯುಭಾರ ಕುಸಿತದಿಂದ ಕಳೆದ ನಾಲ್ಕೈದು ದಿನಗಳಿಂದ ಕರಾವಳಿ ಭಾಗದಲ್ಲಂತೂ ಭಾರೀ ಮಳೆಯಾಗುತ್ತಿದೆ.‌ ಈ ಹಿಂದೆ‌ ಮಳೆಯಾಗದ ಕಾರಣ ಹಲವೆಡೆ ಭೂಮಿ ಹಾಗೂ ಬೆಳೆಗಳು ಒಣಗಿ ಹೋಗಿತ್ತು. ಇನ್ನು ಕೆಲವೆಡೆಯಂತೂ ಸಾವಿರಾರು ಎಕರೆ ಪ್ರದೇಶಕ್ಕೆ ಬೆಂಕಿ ಗಾಳಿ ರೋಗ ಕಾಣಿಸಿಕೊಂಡಿತ್ತು. ಇದೀಗ ಮಳೆ‌ ಕಾಣಿಸಿಕೊಂಡರೂ ಒಣಗಿದ ಹಾಗೂ ರೋಗಗ್ರಸ್ಥ ಬೆಳೆಗಳು ಕೊಳೆತು ಹಾಳಾಗುವ ಸ್ಥಿತಿ ಎದುರಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....

ಉತ್ತರಕನ್ನಡ ಜಿಲ್ಲೆಯಲ್ಲಿ ಕೃಷಿಯನ್ನು ನಂಬಿಕೊಂಡಿದ್ದ ರೈತರಿಗೆ ಈ ಬಾರಿ ವರುಣ ಏಟಿನ ಮೇಲೆ ಏಟು ನೀಡುತ್ತಿದ್ದಾನೆ. ಜೂನ್ ಬಳಿಕ ಉತ್ತಮ ಮಳೆಯಾಗಿದ್ದನ್ನು ನಂಬಿ ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೊಯಿಡಾ, ಹಳಿಯಾಳ ಭಾಗದಲ್ಲಿ ರೈತರು 40,000 ಹೆಕ್ಟೇರ್ ಗೂ ಹೆಚ್ಚು ಭತ್ತ,‌ ಮೆಕ್ಕೆಜೋಳ, ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಸಿದ್ದರು. ಆದ್ರೆ, ಆಗಸ್ಟ್‌ನಿಂದ ಸೆಪ್ಟೆಂಬರ್ ಮೊದಲ ವಾರದವರೆಗೂ ಮಳೆಯ ಕೊರತೆಯಿಂದ ಬಿತ್ತಿದ ಬೀಜಗಳು ಚಿಗುರೊಡೆದರೂ ಫಸಲು ನೀಡುವ ಮೊದಲೇ ಬಿಸಿಲಿನ ಹೊಡತಕ್ಕೆ ಸತ್ವ ಕಳೆದುಕೊಂಡು ಬಾಡುವ ಸ್ಥಿತಿಗೆ ಬಂದಿತ್ತು. ಇದರ ಜತೆ ಜಿಲ್ಲೆಯ ಅಂಕೋಲಾದಲ್ಲಂತೂ ಬೆಂಕಿಗಾಳಿ ರೋಗದಿಂದಾಗಿ ರೈತರ ಸಾವಿರಾರು ಎಕರೆ ಭತ್ತದ ಕೃಷಿ ನಾಶವಾಗಿದೆ. ಮಳೆಯ ಕೊರತೆ ಕಾರಣದಿಂದಲೇ ಈ ರೋಗ ಕಾಣಿಸಿಕೊಂಡಿದ್ದು, ಭತ್ತದ ಪೈರುಗಳು ಸಂಪೂರ್ಣವಾಗಿ ಒಣಗಿ ಹೋದಂತಾಗಿ ಬಿಳಿ ಬಣ್ಣಕ್ಕೆ ತಿರುಗಿದಂತಾಗಿವೆ. 

Latest Videos

undefined

ಉತ್ತರಕನ್ನಡ: ಮತ್ತೆ ಮುನ್ನೆಲೆಗೆ ಬಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ, ಕರವೇಯಿಂದ ಬಂದ್ ಎಚ್ಚರಿಕೆ

ಸರಿಯಾಗಿ ಮಳೆ ಬೀಳದ ಕಾರಣ ಬೆಳೆಗೆ ಸರಿಯಾಗಿ ನೀರು ದೊರೆಯದೆ ಹಾಗೂ ವಾತಾವರಣ ಬಿಸಿಯೇರಿದ ಕಾರಣ ಭತ್ತಗಳಿಗೆ ಬೆಂಕಿ ಗಾಳಿ ರೋಗ ಕಾಟ ಕಾಣಿಸಿಕೊಂಡಿದೆ. ಆದರೆ, ವಾಯುಭಾರ ಕುಸಿತದಿಂದ ಕಳೆದ ನಾಲ್ಕೈದು ದಿನಗಳಿಂದ ಮಳೆ‌ ಕಾಣಿಸಿಕೊಂಡಿದ್ದು, ಈ ರೋಗಕ್ಕೆ ತುತ್ತಾದ ಪೈರುಗಳು ನೀರಿನ ಸಂಪರ್ಕಕ್ಕೆ ಸಿಲುಕಿದಂತೇ ಕಪ್ಪಾಗಿ ತಿರುಗಿ ಕೊಳೆಯಲು ಪ್ರಾರಂಭವಾಗುತ್ತಿದೆ.‌ 

ಕೆಲವು ರೈತರು ಔಷಧಿ ಹೊಡೆದ ಕಾರಣ ಉಳಿದಂತಹ ಗಿಡಗಳಲ್ಲಿ ಕೇವಲ ಸಣ್ಣ ಸಣ್ಣ ತೆನೆಗಳು ಮಾತ್ರ ಬೆಳೆಯುತ್ತಿದೆ. ಇನ್ನು ಕೃಷಿ ಇಲಾಖೆಯ ಅಧಿಕಾರಿಗಳಿಂದ ಕೇವಲ ಬಾಯಿ ಮಾತಿನಲ್ಲಿ ಸರ್ವೇ ಹಾಗೂ ಪರಿಹಾರದ ಆಶ್ವಾಸನೆ ದೊರೆಯುತ್ತಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರೈತರ ಸಮಸ್ಯೆಗಳನ್ನು ಮಾತ್ರ ಪರಿಶೀಲಿಸಿಲ್ಲ. ಇದರಿಂದ ರೈತರಿಗೂ ಭಾರೀ ಸಮಸ್ಯೆಗಳಾಗತೊಡಗಿವೆ. 

ಉತ್ತರಕನ್ನಡ ಜಿಲ್ಲೆಯಲ್ಲಿ 67,719 ಹೆಕ್ಟೇರ್ ಕೃಷಿ ಭೂಮಿಯಿದ್ದು, ಇದರಲ್ಲಿ 65,566 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ ಸೇರಿದಂತೆ ಪ್ರಮುಖ ಬೆಳೆ ಬೆಳೆಯಲಾಗಿದೆ. ಜಿಲ್ಲೆಯಾದ್ಯಂತ ವಾಯುಭಾರ ಕುಸಿತದಿಂದ ಕಳೆದ ನಾಲ್ಕೈದು ದಿನಗಳಿಂದ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಬೀಳುತ್ತಿದೆ ಹೊರತು ಜಿಲ್ಲೆಯ ಮಲೆನಾಡು, ಬಯಲು ಸೀಮೆ ಭಾಗದಲ್ಲಿ ಅಷ್ಟೊಂದು ಮಳೆಯೇ ಕಾಣುತ್ತಿಲ್ಲ. ಈ ಹಿಂದೆಯೇ ಶಿರಸಿ, ಯಲ್ಲಾಪುರ, ಮುಂಡಗೋಡು ಭಾಗದಲ್ಲಿ ನೈಸರ್ಗಿಕ ವಿಕೋಪ ಕೇಂದ್ರಕ್ಕೆ ಮಾಹಿತಿ ನೀಡಲಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಫಸಲಿನ ನಷ್ಟವಾಗಲಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಒಟ್ಟಿನಲ್ಲಿ ಸರಕಾರ ರೈತರ ಸಮಸ್ಯೆಗಳಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಿ ಅವರನ್ನು ಸಾಲದ ಕೂಪಕ್ಕೆ ಬೀಳದಂತೆ ನೋಡಿಕೊಳ್ಳಬೇಕಿದೆ.

click me!