ಕಲಬುರಗಿ: ಬಾರದಿದ್ದ ಮಳೆ ಬಂತು, ನೋವು-ನಲಿವು ತಂತು

Published : Jul 22, 2023, 09:00 PM IST
ಕಲಬುರಗಿ: ಬಾರದಿದ್ದ ಮಳೆ ಬಂತು, ನೋವು-ನಲಿವು ತಂತು

ಸಾರಾಂಶ

ಧಾರಾಕಾರ ಮಳೆಗೆ ಕೆರೆಯಂತಾಗಿವೆ ಕಲಬುರಗಿ ಜಿಲ್ಲೆಯ ರೈತರ ಹೊಲಗದ್ದೆ, ಅದಾಗಲೇ ಬಿತ್ತಿರೋ ಬೀಜ ನಾಶ

ಕಲಬುರಗಿ(ಜು.22):  ಮಳೆ ಬರುತ್ತಿಲ್ಲ, ಮಳೆ ಮೋಡಗಳೇ ಕಲಬುರಗಿಯತ್ತ ಇಣುಕುತ್ತಿಲ್ಲ, ನಿಲ್ಲಿ ಮೋಡಗಳೆ, ಎಲ್ಲಿ ಓಡುವಿರಿ... ಎಂದು ಮುಗಿಲು ನೋಡುತ್ತಿದ್ದ ಜಿಲ್ಲೆಯ ರೈತರು ಇದೀಗ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಂಗಾಲಾಗಿದ್ದಾರೆ. ಹೀಗಾಗಿ ಬಾರದಿದ್ದ ಮಳೆ ಬಂತು, ಖುಷಿ- ನೋವು ಒಮ್ಮೆಲೇ ತಂತು ಎಂದು ಜಿಲ್ಲೆಯ ರೈತರು, ಜನತೆ ಇದೀಗ ಗೊಣಗುತ್ತಿದ್ದಾರೆ.

ಮುಂಗಾರು ಹಂಗಾಮು ಶುರುವಾಗಿದ್ದರೂ ಮಳೆಯೇ ಬರಲಿಲ್ಲವೆಂದು ಕಂಗಾಲಾಗಿ ಮುಗಿಲು ನೋಡುತ್ತಿದ್ದ ರೈತರಿಗೆ ಸಾಕಪ್ಪ ಮಳೆಯ ಸಹವಾಸ ಎಂಬಂತೆ ಮಳೆ ಸುರಿಯುತ್ತಿದೆ. ಕಲಬುರಗಿ ನಗರ ಹಾಗೂ ಜಿಲ್ಲೆಯಲ್ಲಿ ಕಳೆದ 4 ದಿನದಿಂದ ಬಿಟ್ಟುಬಿಡದಂತೆ ಮಳೆ ಸುರಿಯುತ್ತಿರೋದರಿಂದ ಹಳ್ಳ- ಕೊಳ್ಳ ಉಕ್ಕೇರುತ್ತಿವೆ. ರೈತರ ಹೊಲಗದ್ದೆಗಳನ್ನು 2 ಅಡಿಗೂ ಅಧಿಕ ನೀರು ನಿಂತು ಹೊಲಗಳೇ ಕೆರೆಯಂತಾಗಿವೆ.

ತೊಗರಿ ಕಣಜ ಕಲಬುರಗಿಯಲ್ಲಿ ಪುನರ್ವಸು ಮಳೆ ಬಿರುಸು

ಅಲ್ಪ ಮಳೆಯನ್ನೇ ನಂಬಿ ಅದಾಗಲೇ ಹೊಲದಲ್ಲಿ ಬಿತ್ತನೆ ಮಾಡಿದ್ದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ, ಏಕೆಂದರೆ ಇವರ ಹೊಲಗದ್ದೆಗಳಲ್ಲಿದ್ದ ನಾಟಿಕೆ ಮಳೆಯ ನೀರಿಗೆ ಕೊಳೆತು ಹೋಗುತ್ತಿದೆ. ಅಲ್ಲಲ್ಲಿ ಬಿತ್ತನೆಯಾಗಿದ್ದ ತೊಗರಿ, ಹೆಸರು, ಅಲಸಂದಿ, ಉದ್ದಿನ ಬೆಳೆಗಳು ಅತಿಯಾದ ಮಳೆಯಿಂದಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಹೀಗಾಗಿ ರೈತರು ಅಳಿದುಳಿದ ಬೆಳೆಗಳೂ ಹಾಳಾಗುತ್ತಿವೆಯಲ್ಲ ಎಂದು ಕಂಗಾಲಾಗಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 8.50 ಲಕ್ಷ ಹೆಕ್ಟೇರ್‌ ಬಿತ್ತನೆ ಯೋಜನೆ ಇದೆ. ಈ ಪೈಕಿ ಮಳೆ ಕೊರತೆಗೆ ಶೇ.30ರಷ್ಟುಮಾತ್ರ ಬಿತ್ತನೆಯಾಗಿತ್ತು. ಅಂದರೆ 3 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದರು. ಆದರೀಗ ಬಿತ್ತನೆ ಮಾಡಿದ ಬೆಲೆಗಳಿಗೂ ಈ ಅತಿಯಾದ ಮಲೆ ಕುತ್ತು ತಂದಿದೆ. ಬಿತ್ತನೆಯಾದ 30 ಸಾವಿರ ಹೆಕ್ಟೇರ್‌ ಹೆಸರು, 15 ಸಾವಿರ ಹೆಕ್ಟೇರ್‌ ಉದ್ದು, ಅಷ್ಟೇ ಪ್ರಮಾಣದ ಅಲಸಂದಿ ಬೆಳೆಗಳು ನೀರಲ್ಲಿ ನಿಂತು ಹಳದಿ ವರ್ಣಕ್ಕೆ ತಿರುತ್ತಿವೆ. ಇನ್ನು ಮಲೆ ಸುರಿಯೋದು ನಿಂತು ವಾರ ಕಳೆದ ಮೇಲೆ ತೊಗರಿ ಬಿತ್ತನೆಯಾಗಬೇಕು. ಅದಕ್ಕಿನ್ನೂ 18 ದಿನಗಳ ಕಾಲವಕಾಶವಿದೆ. ಆದರೆ ಈಗಾಗಲೇ ಬಿತ್ತನೆಯಾಗಿರುವ ತೊಗರಿಗೂ ಮಳೆ ಕಂಟಕವಾಗಿದೆ.

ಕಲಬುರಗಿ: ಸಾಧಾರಣ ಮಳೆ, ಭೀಮಾ ನದಿಗೆ ಹರಿವು ಹೆಚ್ಚಳ

ಇದೇ ಪ್ರಕಾರ ಇನ್ನೆರಡು ದಿನಗಳು ಮಳೆ ಸುರಿದರೆ ಕೈಗೆಟುಕುವ ಅಲ್ಪ-ಸ್ವಲ್ಪ ಬೆಳೆಗಳು ಕೂಡ ಕೈಗೆ ಸಿಗದೆ ರೈತರ ಬಾಳು ಇನ್ನೂ ಹೆಚ್ಚಿನ ಗೋಳಾಗಲಿದೆ, ರೈತರ ಪರಿಸ್ತಿತಿ ಇನ್ನೂ ದುರ್ಭರವಾಗುವ ಆತಂಕ ಎದುರಾಗಿದೆ. ವರುಣನ ಆರ್ಭಟಕ್ಕೆ ರೈತ ಸಮೂಹ ಕಂಗಾಲಾಗಿದೆ ಎಂದು ಕಾಳಗಿ ಪ್ರಗತಿಪರ ರೈತ ಮಲ್ಲಣ್ಣ ಕುಡ್ಡಳ್ಳಿ ಹೇಳಿದ್ದಾರೆ.  

ಅತಿಯಾದ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತಿವೆ. ಬಸವನ ಹುಳುಗಳ ಕಾಟ ಶುರುವಾಗಿದೆ. ನಾಟಿಗೆ ತಿನ್ನುತ್ತಿವೆ. ಅಲ್ಪ ಸ್ವಲ್ಪ ಚಿಗುರೊಡೆಯುತ್ತಿರುವ ಹೆಸರು, ಉದ್ದು, ತೊಗರಿ ಬೆಳೆಗಳ ಮುಗುಳನ್ನೇ ಕತ್ತರಿಸಲು ಪ್ರಾರಂಭ ಮಾಡಿರುವುದರಿಂದ ರೈತರಿಗೆ ಚಿಂತೆಗೀಡುಮಾಡಿದೆ. ಮಳೆಯನ್ನು ಲೇಕ್ಕಿಸದೆ ಬಸವನ ಹುಳುವನ್ನು ಸಂಗ್ರಹಿಸುವಂತಾಗಿದೆ ಎಂದು ಕೊಡದೂರ ಪ್ರಗತಿಪರ ರೈತ ಶರಣಪ್ಪ ಗದ್ದಿಗೌಡ್ರು ತಿಳಿಸಿದ್ದಾರೆ.  

PREV
Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!