ಶೃಂಗೇರಿ ತಾಲೂಕಿನ ಮಾತೋಳ್ಳಿ, ಕೆರೆಕಟ್ಟೆ, ಶಿರ್ಲು, ಮುಡಬ, ಗುಲಗುಂಜಿಮನೆ, ಕಾರ್ಕಿ, ಹೆಮ್ಮಿಗೆ, ಹಾದಿ ಸೇರಿದಂತೆ ತಾಲೂಕಿನ ಶೇ. 80ರಷ್ಟು ಅಡಿಕೆ ತೋಟಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿವೆ. ಐದು ತರಹದ ಹುಳಗಳು ಅಡಿಕೆಯ ಹಸಿ ಸೋಗೆಯನ್ನ ತಿನ್ನುತ್ತಿವೆ. ಹುಳಗಳು ಸುಳಿಯನ್ನ ತಿಂದ ಮೇಲೆ ಗಿಡಗಳೇ ಸತ್ತು ಹೋಗುತ್ತಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.03): ಅಡಿಕೆ. ಮಲೆನಾಡಿಗರ ಬದುಕೇ ಸರಿ. ಅಡಿಕೆಯನ್ನ ನಂಬಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಅಡಿಕೆಗೆ ಬಾಧಿಸುತ್ತಿರೋ ಹಳದಿ ಎಲೆ ರೋಗದಿಂದ ಬೆಳೆಗಾರರು 4-5 ದಶಕಗಳಿಂದ ಕಂಗಾಲಾಗಿದ್ರು. ಆದ್ರೀಗ, ಆ ಹಳದಿ ರೋಗದ ಜೊತೆ ಎಲೆ ಚುಕ್ಕಿ ರೋಗ ಬೆಳೆಗಾರರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಹಳದಿ ಎಲೆ ರೋಗ ಮರಗಳನ್ನ ಎಂಟತ್ತು ವರ್ಷಗಳ ಉಳಿಸುತ್ತಿತ್ತು. ಆದರೆ, ಎಲೆ ಚುಕ್ಕಿ ರೋಗ ಬಂದ್ರೆ ಮುಗೀತು ಕಥೆ. ಮುಗಿಲೆತ್ತರದ ಮರಗಳು ನೋಡನೋಡ್ತಿದ್ದಂತೆ ಉದ್ದುದ್ದ ಮಲಗಿರುತ್ವೆ. ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ್ದ ಮರಗಳು ಕಣ್ಣೆದುರೇ ಸುಟ್ಟಿ ಹೋಗ್ತಿದ್ದು ಬೆಳೆಗಾರರು ಅಕ್ಷರಶಃ ಕಣ್ಣೀರಿಡ್ತಿದ್ದಾರೆ.
undefined
ಮುಗಿಲೆತ್ತರದ ಮರಗಳು ನೆಲ ಸಮ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಅಡಿಕೆ ಬೆಳೆದ ಬೆಳೆಗಾರರು ಕಂಗಾಲಾಗಿದ್ದಾರೆ. ಪ್ರತಿ ತೋಟದಲ್ಲೂ ಚುಕ್ಕಿ ಬಿದ್ದು ಬಾಗಿರೋ ಗರಿಗಳು. ಮರದಿಂದ ಬಿದ್ದು ಒಡೆದು ಹೋಗಿರೋ ಅಡಿಕೆ ಕಾಯಿಯ ದ್ರಶ್ಯ ಸರ್ವೇ ಸಾಮಾನ್ಯವಾಗಿದೆ. ಶೃಂಗೇರಿ ತಾಲೂಕಿನ ಮಾತೋಳ್ಳಿ, ಕೆರೆಕಟ್ಟೆ, ಶಿರ್ಲು, ಮುಡಬ, ಗುಲಗುಂಜಿಮನೆ, ಕಾರ್ಕಿ, ಹೆಮ್ಮಿಗೆ, ಹಾದಿ ಸೇರಿದಂತೆ ತಾಲೂಕಿನ ಶೇ. 80ರಷ್ಟು ಅಡಿಕೆ ತೋಟಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿವೆ. ಐದು ತರಹದ ಹುಳಗಳು ಅಡಿಕೆಯ ಹಸಿ ಸೋಗೆಯನ್ನ ತಿನ್ನುತ್ತಿವೆ. ಹುಳಗಳು ಸುಳಿಯನ್ನ ತಿಂದ ಮೇಲೆ ಗಿಡಗಳೇ ಸತ್ತು ಹೋಗುತ್ತಿವೆ. ಗರಿಗಳ ಮೂಲಕ ಹರಡುತ್ತಿರೋ ಈ ರೋಗ ಗರಿಗಳಲ್ಲಿ ತೆಳು ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪುಬಣ್ಣದ ಚುಕ್ಕಿಗಳು ಕಾಣಿಸುತ್ತಿವೆ. ಹಾಗಾಗಿ ಗರಿಗಳು ಕೆಂಪಾಗಿ, ಮರದ ಗಾತ್ರವೇ ಸಣ್ಣದಾಗಿ ಅಡಿಕೆ ಮರಗಳು ನಿಲ್ಲುವ ಸಾಮಥ್ರ್ಯವನ್ನೇ ಕಳೆದುಕೊಳ್ತಿವೆ. 15-20 ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಮರಗಳು ಈಗೀಗ ಫಸಲು ನೀಡಲು ಶುರುವಿಟ್ಟಿದ್ವು. ಆದ್ರೀಗ, ಕಳೆದೊಂದು ವರ್ಷದಿಂದ ಕ್ರಮೇಣ ತೋಟವೇ ನಾಶವಾಗ್ತಿದೆ. ಹೀಗಾದ್ರೆ ನಾವು ಹೇಗೆ ಬದುಕೋದೇಗೆ, ಸಾವಿರಾರು ರೂಪಾಯಿಯ ಔಷಧಿ ಸಿಂಪಡಿಸಿ ಸಾಕಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.
ಒಬ್ಬ ಪ್ರಧಾನಿ ಎಷ್ಟು ಸರಳವಾಗಿ ಬದುಕಬಹುದೆಂದು ತೋರಿಸಿಕೊಟ್ಟವರು ಲಾಲ್ ಬಹದ್ದೂರ್: ಶೋಭಾ ಕರಂದ್ಲಾಜೆ
ತೋಟವನ್ನ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ
ಈ ಹಿಂದೆ ಗುಡ್ಡಕ್ಕೆ ಬೆಂಕಿ ಬೀಳುವುದು ಮತ್ತು ಕಾಡ್ಗಿಚ್ಚು ಬೀಳುವುದರಿಂದ ಹುಳಗಳು ಬೆಂಕಿಗೆ ಬಿದ್ದು ಸಾಯುತ್ತಿದ್ದವಂತೆ. ಆದರೆ ಒಂದು ವರ್ಷ ಮಳೆ ಜಾಸ್ತಿ ಯಾದ್ರೆ ಮತ್ತೊಂದು ವರ್ಷ ಮಳೆ ಕಡಿಮೆ , ಈ ಹಿನ್ನಲೆಯಲ್ಲಿ ಹುಳಗಳ ಸಂತತಿ ಜಾಸ್ತಿಯಾಗಿದೆ ಅಂತಾರೆ ಸ್ಥಳಿಯರು. ಆದ್ದರಿಂದ ತೋಟಗಳ ಮೇಲೆ ಈ ರೋಗ ಪರಿಣಾಮ ಬೀರಿದ್ದು ದಶಕಗಳ ಅಡಿಕೆ ಮರಗಳು ನಾಲ್ಕೈದು ತಿಂಗಳಲ್ಲೇ ಸಾಯುತ್ತಿವೆ ಎಂದು ಸ್ಥಳಿಯರು ಅಭಿಪ್ರಾಯಪಟ್ಟಿದ್ದಾರೆ. ಎಷ್ಟೆ ಔಷಧಿ ಕಂಡುಹಿಡಿದು ಕೀಟನಾಶಕವನ್ನ ಸಿಂಪಡಿಸಿದರು ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬೇರು ಹುಳ ಬಾಧೆ, ಹಳದಿಎಲೆ ರೋಗ ಸೇರಿದಂತೆ ಇತರೆ ರೋಗಗಳು ಕಾಡಿದಾಗ ರೈತರು ಸವಾಲಾಗಿ ಸ್ವೀಕರಿಸಿ ತೋಟವನ್ನ ಉಳಿಸಿಕೊಂಡಿದ್ದರು. ಆದರೆ, ಎಲೆ ಚುಕ್ಕಿ ರೋಗ ತೋಟವನ್ನ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಬೆಳೆಗಾರರು ಕೈಚೆಲ್ಲಿ ಕೂತಿದ್ದು, ಕಣ್ಣೆದುರೇ ತೋಟ ನಾಶವಾಗ್ತಿರೋದ ಕಂಡು ಮಮ್ಮುಲು ಮರುಗಿದ್ದಾರೆ.
ಒಟ್ಟಾರೆ, ಶೃಂಗೇರಿ ತಾಲೂಕಿನಾದ್ಯಂತ ಎಲೆ ಚುಕ್ಕಿ ರೋಗ ರೈತರ ಬದುಕನ್ನೇ ಬರ್ಬಾದ್ ಮಾಡ್ತಿದೆ. ಆದ್ರೆ, ಶೃಂಗೇರಿಯ ಅಡಿಕೆ ಸಂಶೋಧನ ಕೇಂದ್ರದ ವಿಜ್ಞಾನಿಗಳು ಮಾತ್ರ ಸಂಬಂಧವಿಲ್ಲದಂತಿದ್ದಾರೆ. ಬೆಳೆಗಾರರು ತಮ್ಮ ಸಮಸ್ಯೆಯನ್ನ ಅಧಿಕಾರಿಗಳು, ವಿಜ್ಞಾನಿಗಳಿಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾರೊಬ್ಬರು ತೋಟಕ್ಕೆ ಬಂದು ರೋಗದ ಬಗ್ಗೆ ಮಾಹಿತಿಯನ್ನೂ ಪಡೆದಿಲ್ಲ ಎಂದು ಬೆಳೆಗಾರರು ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದ್ರು ಎಲೆ ಚುಕ್ಕಿ ರೋಗದಿಂದ ಕಂಗಲಾಗಿರುವ ರೈತರ ನೆರವಿಗೆ ನಿಲ್ಲಬೇಕಿದೆ...