ವರದಿ: ರಾಘವೇಂದ್ರ ಹೆಬ್ಬಾರ
ಭಟ್ಕಳ (ಆ.5) : ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಗ್ರಾಮಾಂತರ ಭಾಗದಲ್ಲಿ ನೂರಾರು ಎಕರೆ ಅಡಕೆ ತೋಟ ಮತ್ತು ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದ್ದು, ರೈತರು ಸರ್ಕಾರದಿಂದ ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಆಕಸ್ಮಿಕ ಮಹಾಮಳೆಗೆ ಗ್ರಾಮಾಂತರ ಭಾಗದಲ್ಲಿ ಹೊಳೆ, ಕಾಲುವೆ ಉಕ್ಕಿ ಹರಿದು ತೋಟಕ್ಕೆ ನೀರು ನುಗ್ಗಿದೆ. ಅಲ್ಲಲ್ಲಿ ಭೂ ಕುಸಿತವೂ ಉಂಟಾಗಿದೆ. ಒಮ್ಮೇಲೆ ಬಂದ ನೀರು ತೋಟದ ಗೊಬ್ಬರ, ಸಣ್ಣ ಸಸಿಗಳನ್ನು ಕೊಚ್ಚಿಕೊಂಡು ಹೋಗಿದೆ. ಮಳೆಯಾಗಿ ನಾಲ್ಕು ದಿನಗಳು ಕಳೆದರೂ ಇಲ್ಲಿಯವರೆಗೆ ಸರ್ವೇ ಕಾರ್ಯ ಆರಂಭವಾಗಿಲ್ಲ.
ಭಟ್ಕಳದಲ್ಲಿ 24 ಗಂಟೆಯಲ್ಲಿ 55 ಸೆಂಮೀ ಮಳೆ: ಇದು ರಾಜ್ಯದ ಒಂದು ದಿನದ ಸಾರ್ವಕಾಲಿಕ ದಾಖಲೆ
ಕೆಲವು ತೋಟದಲ್ಲಿ ಮಣ್ಣಿನ ರಾಶಿಯೇ ಬಿದ್ದಿದೆ. ತೋಟಕ್ಕೆ ಹೋದರೆ ಕಾಲು ಹುಗಿಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಗುಡ್ಡ ಕುಸಿದು ತೋಟದಲ್ಲಿ ಬಿದ್ದರೆ, ಇನ್ನೂ ಕೆಲವು ಕಡೆ ರಸ್ತೆಯ ಮೇಲೆ ಗುಡ್ಡ ಕುಸಿದು ಸಂಪರ್ಕಕ್ಕೆ ತೊಂದರೆಯಾಗಿತ್ತು. ಹೊಳೆಯಂಚಿನ ತೋಟಗಳಿಗೆ ನೀರು ನುಗ್ಗಿದ್ದರಿಂದ ತೋಟಗಳು ಹೊಳೆಯಾಗಿ ಮಾರ್ಪಟ್ಟಿದ್ದವು. ಮಳೆಗೆ ಸಾವಿರಾರು ಅಡಕೆ ಮರಗಳು, ತೆಂಗಿನ ಮರಗಳು ಧರಾಶಾಹಿಯಾಗಿದೆ. ಮಳೆ ನಿಂತರೂ ಜನರ ಗೋಳು ಅನುಭವಿಸುವುದು ತಪ್ಪಿಲ್ಲ. ಕೆಲವೆಡೆ ಕೊಟ್ಟಿಗೆ, ಗೋಬರ ಗ್ಯಾಸ್ ಡ್ರಮ್ ಮೇಲೂ ಧರೆ ಕುಸಿದು ಹಾನಿಯಾಗಿದೆ.
ತೋಟದಲ್ಲಿರುವ ಕೆಸರು ಮತ್ತು ಮಣ್ಣನ್ನು ವಿಲೇವಾರಿಯ ತಲೆಬಿಸಿಯಲ್ಲಿ ರೈತರಿದ್ದಾರೆ. ಈ ಸಲ ಭಾರೀ ಮಳೆಗೆ ಅಡಕೆಗೆ ಕೊಳೆರೋಗ ತಗುಲಿದೆ. ಹೆಚ್ಚಿನ ರೈತರು ಇತ್ತೀಚೆಗಷ್ಟೇ ತೋಟಕ್ಕೆ ಔಷಧಿ ಸಿಂಪಡಿಸಿದ್ದರು. ಅಡಕೆ ಬೆಳೆಗೆ ಕೊಳೆ ರೋಗ ಬಂದು ಉದುರುತ್ತಿರುವ ಸಂದರ್ಭದಲ್ಲೇ ಮಹಾಮಳೆ ಸುರಿದು ರೈತರಿಗೆ ಮತ್ತಷ್ಟುಆಘಾತ ನೀಡಿದೆ.
Uttara Kannada Rainfall; ಮಲಗಿದ್ದವರ ಮೇಲೆ ಮನೆ ಕುಸಿದು 4 ಮಂದಿ ದುರ್ಮರಣ
ಭತ್ತ ಬೆಳೆಯುವ ಪ್ರದೇಶವಾದ ಸಾರದಹೊಳೆ, ಬೇಂಗ್ರೆ, ಶಿರಾಲಿ, ಮುಂಡಳ್ಳಿ, ಮುಟ್ಟಳ್ಳಿ, ಯಲ್ವಡಿಕವೂರು ಭಾಗದ ಗದ್ದೆಯಲ್ಲೂ ನೀರು ನಿಂತು ಕೆಸರುಮಯವಾಗಿದೆ. ಇಲ್ಲಿಯವರೆಗೆ ತಾಲೂಕು ಆಡಳಿತ ಅಂದಾಜಿಸಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಬೆಳೆಹಾನಿಯಾಗಿದೆ ಎಂದು ರೈತರು ತಿಳಿಸುತ್ತಾರೆ.
ಅಡಕೆ ಬೆಳೆಗಾರರಿಗೆ ಕಳೆದ ಮೂರು ವರ್ಷಗಳಿಂದ ಕೊಳೆರೋಗದ ಪರಿಹಾರವನ್ನೇ ಸರ್ಕಾರ ವಿತರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬುಧವಾರ ನಡೆಸಿದ ಮಳೆ ಹಾನಿ ಪರಿಶೀಲನಾ ಸಭೆಯಲ್ಲಿ ಕೃಷಿಭೂಮಿ ಹಾನಿಗೆ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಮಳೆಯಿಂದಾಗಿ ಹಾನಿಯಾದ ಗದ್ದೆ, ತೋಟವನ್ನು ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲು ತಾಲೂಕು ಆಡಳಿತ ಮುಂದಾಗಬೇಕಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.
ಕೊಳೆರೋಗದಿಂದ ತತ್ತರಿಸಿರುವ ಅಡಕೆ ಬೆಳೆಗಾರರಿಗೆ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಭೂ ಕುಸಿತ, ತೋಟದಲ್ಲಿ ನೀರು ನುಗ್ಗಿರುವುದು, ಅಡಕೆ ಮರ ಬಿದ್ದಿರುವುದು ಮುಂತಾದ ಸಮಸ್ಯೆಗಳಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ಹಾನಿಗೀಡಾದ ರೈತರಿಗೆ ಹೆಚ್ಚಿನ ಪರಿಹಾರ ವಿತರಿಸಬೇಕು.
ಕೃಷ್ಣಮೂರ್ತಿ ಹೆಗಡೆ ಕೋಟಖಂಡ, ರೈತ