ಕಿಟ್ಟೆಲ್‌ ಕನ್ನಡ-ಇಂಗ್ಲಿಷ್‌ ಶಬ್ದಕೋಶ ರಚಿಸಲು ಡಾ.ವಿವೇಕ ರೈ ಸಲಹೆ

By Kannadaprabha News  |  First Published Nov 12, 2022, 11:44 PM IST
  • ಕಿಟ್ಟೆಲ್‌ ಕನ್ನಡ-ಇಂಗ್ಲಿಷ್‌ ಶಬ್ದಕೋಶ ರಚಿಸಲು ಡಾ.ವಿವೇಕ ರೈ ಸಲಹೆ
  • ಮಂಗ್ಳೂರಲ್ಲಿ ರೆ.ಡಾ.ಫರ್ಡಿನಾಂಡ್‌ ಕಿಟ್ಟೆಲ್‌ ಪ್ರತಿಮೆ ಅನಾವರಣ

ಮಂಗಳೂರು (ನ.12) : ಮಂಗಳೂರಿನಲ್ಲಿದ್ದು ಕನ್ನಡ ಕಟ್ಟುವ ಕೆಲಸ ಮಾಡಿರುವ ಕಿಟ್ಟೆಲ್‌ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ಈ ಪರಿಸರದ ಯಾವುದಾದರೊಂದು ರಸ್ತೆಗೆ ಅವರ ಹೆಸರನ್ನಿಡಬೇಕು. ಜರ್ಮನಿಯಲ್ಲಿರುವ ಕಿಟ್ಟೆಲ್‌ರ ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ, ಅವರ ಸಮಗ್ರ ಸಾಹಿತ್ಯ ಸಂಪಾದನೆಗೆ ಮುಂದಾಗಬೇಕು, ಅಲ್ಲದೆ ಕನ್ನಡ-ಇಂಗ್ಲಿಷ್‌ ಶಬ್ದಕೋಶ ರಚಿಸಬೇಕು ಎಂದು ಕನ್ನಡದ ಹಿರಿಯ ವಿದ್ವಾಂಸ ಪ್ರೊ.ಡಾ.ಬಿ.ಎ.ವಿವೇಕ್‌ ರೈ ಸಲಹೆ ಮಾಡಿದ್ದಾರೆ.

ಕರ್ನಾಟಕ ಥಿಯೋಲಾಜಿಕಲ್‌ ಕಾಲೇಜು(ಕೆಟಿಸಿ) ಬಲ್ಮಠ ಇದರ ಆವರಣದಲ್ಲಿ ಶನಿವಾರ ಕನ್ನಡ ಶಬ್ದಕೋಶದ ಪಿತಾಮಹ ಡಾ. ಕಿಟ್ಟೆಲ್‌ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

Tap to resize

Latest Videos

ಕನ್ನಡದ ಮೊದಲ ನಿಘಂಟು ಬರೆದ ಕಿಟಲ್‌ ವಂಶಸ್ಥರು ಹಾವೇರಿಗೆ ಭೇಟಿ

1894ರಲ್ಲಿ ಅವರು ರಚಿಸಿದ ಶಬ್ದಕೋಶದಲ್ಲಿ 75 ಸಾವಿರ ಕನ್ನಡ ಪದಗಳಿವೆ. ವ್ಯಾಕರಣ ಕುರಿತು ಅವರು ರಚಿಸಿದ ಸಮಗ್ರ ಗ್ರಂಥ ಅವರ ಕೊನೆಯದ್ದಾಗಿದೆ. ಜರ್ಮನಿಯಿಂದ ಬಂದು ರಾಜ್ಯದಲ್ಲಿ ನೆಲೆಯೂರಿ ಕನ್ನಡ ಭಾಷೆ, ವ್ಯಾಕರಣಕ್ಕೆ ಅಪೂರ್ವ ಕೊಡುಗೆ ನೀಡಿದ ರೆ. ಡಾ. ಫರ್ಡಿನಾಂಡ್‌ ಕಿಟ್ಟೆಲ್‌ ಅವರು ಒಂದು ಹಂತದಲ್ಲಿ ಬಾಸೆಲ್‌ ಮಿಷನ್‌ ಸುಪೀರಿಯರ್‌ಗಳಿಂದ ತಾವು ಕ್ರೈಸ್ತ ಮತಪ್ರಚಾರದ ಕೆಲಸವನ್ನು ಮಾಡುತ್ತಿಲ್ಲ, ಕೇವಲ ಕನ್ನಡ ಪರಿಚಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೂ ಒಳಗಾಗಿದ್ದರು. ಆದರೆ ಅದೆಲ್ಲವನ್ನೂ ಕಡೆಗಣಿಸಿ ಕನ್ನಡದ ಕೆಲಸ ಮುಂದುವರಿಸಿದ ಮಹಾನುಭಾವರಾಗಿದ್ದರು ಎಂದರು.

ಕಿಟ್ಟೆಲ್‌ ಅವರು 1853ರಲ್ಲಿ ಮುಂಬಯಿಗೆ ಆಗಮಿಸಿ, ಬಳಿಕ ಧಾರವಾಡಕ್ಕೆ ಬಂದರು. ಪ್ರಾರಂಭದಲ್ಲೇ ಕನ್ನಡವನ್ನು ಕಲಿತು ಆ ಬಳಿಕ ಕನ್ನಡ ಕೃತಿ ರಚನೆ, ಭಾಷಾಂತರ, ವ್ಯಾಕರಣ ರಚನೆ, ಛಂದಸ್ಸು, ಸಮಗ್ರ ಮಾಹಿತಿ ಇರುವ ಪಠ್ಯಪುಸ್ತಕ ರಚನೆಯಂತಹ ಕೆಲಸಕ್ಕೆ ಕೈಹಾಕಿದರು. ಅವರ ಕನ್ನಡ ಸೇವೆ ಎಷ್ಟಿತ್ತು ಎಂದರೆ ಅವರ ಮಿಶನ್‌ ಸುಪೀರಿಯರ್‌ಗಳೇ ನೀನು ಭಾರತದಲ್ಲಿ ಕ್ರೈಸ್ತ ಮತಪ್ರಚಾರ ಮಾಡದೆ ಕನ್ನಡದ ಕೆಲಸ ಮಾಡುತ್ತಿರುವೆ, ಹೀಗಾದರೆ ಮಿಶನ್‌ನಿಂದ ನಿನ್ನನ್ನು ಕೈಬಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಉತ್ತರಿಸಿದ್ದ ಕಿಟ್ಟೆಲ್‌, ಮಿಶನ್‌ನಿಂದ ಕೈಬಿಟ್ಟರೆ ತನ್ನದೇ ಮಿಶನ್‌ ಸ್ಥಾಪಿಸಿ ಕೆಲಸ ಮುಂದುವರಿಸುವುದಾಗಿ ಹೇಳಿದ್ದು ಅವರ ಪತ್ರಗಳಲ್ಲಿ ಉಲ್ಲೇಖವಾಗಿದೆ ಎಂದು ಪ್ರೊ. ವಿವೇಕ್‌ ರೈ ವಿವರಿಸಿದರು.

ಜರ್ಮನ್‌ ಸರ್ಕಾರದ ಕೌನ್ಸುಲ್‌ ಜನರಲ್‌ ಫ್ರೆಡರಿಕ್‌ ಬಿರ್ಗೆಲಿನ್‌ ಮಾತನಾಡಿ, ಡಾ. ಕಿಟ್ಟೆಲ್‌ ಅವರು ನಮ್ಮೆರಡು ದೇಶಗಳ ಹಾಗೂ ಸಂಸ್ಕೃತಿಗಳ ನಡುವೆ ಇದ್ದ ಸೇತುವೆಯಂತೆ. ಮಿಶನರಿಯಾಗಿದ್ದುಕೊಂಡು ಕನ್ನಡದ ಕುರಿತು ವಿಸ್ತಾರವಾದ ಸೇವೆ ಮಾಡಿದ ಕಿಟ್ಟೆಲ್‌ ಬಗ್ಗೆ ಇಲ್ಲಿನ ಜನರಿಗೆ ಇರುವ ಪ್ರೀತಿ ನೋಡಿ ವಿಸ್ಮಿತನಾಗಿದ್ದೇನೆ ಎಂದರು.

ಕಿಟ್ಟೆಲ್‌ ಅವರ ಮರಿಮಗಳು ಅಲ್ಮುಥ್‌ ಬಾರ್ಬರಾ ಎಲೆನೊರೆ ಮೈಯರ್‌(ಕಿಟ್ಟೆಲ್‌) ಮಾತನಾಡಿ, ನನ್ನ ಮುತ್ತಜ್ಜನ ಬಗ್ಗೆ ಅಜ್ಜ ಹೇಳಿದ್ದು ಕೇಳಿದ್ದೇನೆ. ಇಲ್ಲಿನ ಜನರಿಗೆ ಅವರ ಬಗ್ಗೆ ಇದ್ದ ಮಮತೆ ನೋಡಿ ಖುಷಿ ಎನಿಸಿದೆ. ಧಾರವಾಡ ಹಾಗೂ ಮಂಗಳೂರಿಗೆ ಭೇಟಿ ನೀಡಿ ಸಂತಸವಾಗಿದೆ ಎಂದರು.

ಬಾಲ್ಯದ 5 ವರ್ಷ ಕರ್ನಾಟಕದಲ್ಲಿ ಕಳೆದಿದ್ದ ಶಾರೂಖ್ ಖಾನ್: ಈ ಊರಿಗಿದೆ ಬಾಲಿವುಡ್ ಕಿಂಗ್‌ಖಾನ್ ನಂಟು!

ಕಿಟ್ಟೆಲ್‌ ಅವರ ಮರಿಮರಿಮಗ ವೈ.ಪ್ಯಾಟ್ರಿಕ್‌ ಮೈಯರ್‌ ಮಾತನಾಡಿ, ಮುತ್ತಜ್ಜನ ತಂದೆಯಾದ ಕಿಟ್ಟೆಲ್‌ ಅವರು ಬೆಸೆದಿರುವ ಎರಡು ದೇಶಗಳ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟುಗಟ್ಟಿಯಾಗಿಸುವ ಇರಾದೆ ಇದೆ ಎಂದರು. ಕೆಟಿಸಿ ಪ್ರಾಂಶುಪಾಲ ಡಾ.ಎಚ್‌.ಎಂ.ವಾಟ್ಸನ್‌ ಅಧ್ಯಕ್ಷತೆ ವಹಿಸಿದ್ದರು.

click me!