* ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದಲ್ಲಿ ನಡೆದ ಕತ್ತೆಗಳ ಓಟದ ಸ್ಪರ್ಧೆ
* ಕತ್ತೆಗಳ ಓಟದಲ್ಲೂ ಮಾಲೀಕನಿಗೆ ಸಿಕ್ತು ನಗದು ಬಹುಮಾನ
* ಕತ್ತೆಗಳಿಗೆ ನಡೆದಿತ್ತು ಸಖತ್ ಟ್ರೈನಿಂಗ್
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಜೂ.25): ಸಾಮಾನ್ಯವಾಗಿ ಕತ್ತೆಗಳು ಅಂದರೆ ಸಾಕು ಅವೇನು ಕತ್ತೆ ಬಿಡಿ ಸ್ವಾಮಿ ಅಂತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಕತ್ತೆಗಳಿಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಗ್ರಾಮಸ್ಥರು ಕುದುರೆ, ಎತ್ತಿನ ಗಾಡಿಗಳಂತೆ ಭರ್ಜರಿ ಕತ್ತೆಗಳ ಓಟ ನಡೆಸಿದ್ದಾರೆ. ಸಾಲದ್ದಕ್ಕೆ ಕತ್ತೆಗಳ ಓಟದ ಸ್ಪರ್ಧೆಗಾಗಿ ಕಳೆದೊಂದು ವಾರದಿಂದ ಸಖತ್ ಟ್ರೈನಿಂಗ್ ಸಹ ನೀಡಿದ್ದಾರೆ.
undefined
ಹೌದು, ಇಂತಹವೊಂದು ಭರ್ಜರಿ ಕತ್ತೆಗಳ ಓಟದ ಸ್ಪರ್ಧೆ ಆಯೋಜನೆಯಾಗಿದ್ದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಂಪೂರ ಗ್ರಾಮದಲ್ಲಿ. ಗ್ರಾಮದಲ್ಲಿ ರಸ್ತೆಗಳ ಮೇಲೆ ಅತ್ತ ಕತ್ತೆಗಳ ರೇಸ್ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜನರೆಲ್ಲಾ ನಿಂತು ಕೇಕೆ ಹಾಕಿ ಸಂಭ್ರಮಿಸಿ ಹುರುದುಂಬಿಸುತ್ತಿದ್ದರು. ಮಳೆ ಬಂದು ರಸ್ತೆಯೆಲ್ಲಾ ಒದ್ದೆಯಾಗಿದ್ದರೂ ಕತ್ತೆಗಳ ರೇಸ್‌ಗೆ ಮಾತ್ರ ಯಾವುದೇ ಅಡಚಣೆಯಾಗಲಿಲ್ಲ. ರಾಂಪೂರ ಗ್ರಾಮ ದೇವತೆ ಲಕ್ಕವ್ವ ದೇವಿ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅತ್ತ ಗ್ರಾಮದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಜನರೆಲ್ಲಾ ಭಕ್ತಿಯಿಂದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮುಳುಗಿದ್ದರು.
ಗುಳೇದಗುಡ್ಡ: ಸಾಕು ನಾಯಿಗೆ ಸೀಮಂತ ಮಾಡಿ ಸಂಭ್ರಮಿಸಿದ ಜ್ಯೋತಿ ಕುಟುಂಬ..!
ಇತ್ತ ಯುವಕರೆಲ್ಲಾ ಸೇರಿ ಹಿರಿಯರ ಅಣತಿಯಂತೆ ಗ್ರಾಮದ ಲಕವ್ವ ದೇವಿ ಉಡಿ ತುಂಬುವ ಕಾರ್ಯಕ್ರಮ ನಿಮಿತ್ತ ಕತ್ತೆಗಳ ಓಟ ಸ್ಫರ್ಧೆ ಆಯೋಜನೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ರಾಂಪೂರ, ಬನಹಟ್ಟಿ, ಆಸಂಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಒಟ್ಟು 10ಕ್ಕೂ ಅಧಿಕ ಕತ್ತೆಗಳು ಭಾಗವಹಿಸಿದ್ದವು. ಇನ್ನೇನು ಕತ್ತೆಗಳ ಓಟದ ಸ್ಫರ್ಧೆ ಆರಂಭವಾಗಿದ್ದೇ ತಡ ಎಲ್ಲೆಲ್ಲೂ ಕಾತರದೊಂದಿಗೆ ಸಂಭ್ರಮ ಮೊಳಗಿತ್ತು.
ಕತ್ತೆಗಳಿಗೆ ರನ್ನಿಂಗ್, ಟ್ರೈನಿಂಗ್
ಸಾಮಾನ್ಯವಾಗಿ ಕುದುರೆಗಳ ಓಟ, ಎತ್ತಿನ ಓಟ, ಟಗರಿನ ಕಾದಾಟಕ್ಕೆ ಅವುಗಳಿಗೆ ಪ್ರ್ಯಾಕ್ಟೀಸ್ ಮಾಡಿಸೋದನ್ನ ನೋಡಿದ್ವಿ, ಆದರೆ ಅದರಂತೆ ಇಲ್ಲಿ ಕತ್ತೆಗಳಿಗೂ ಸಹ ಓಟದ ಸ್ಪರ್ಧೆ ನಿಮಿತ್ತ ಟ್ರೇನಿಂಗ್ ಕೊಡೋ ಕೆಲಸ ಸಹ ನಡೆಯಿತು. ಅಂದರೆ ರಾಂಪೂರ ಗ್ರಾಮದಲ್ಲಿ ಕತ್ತೆಗಳ ಓಟದ ಸ್ಪರ್ಧೆ ಆಯೋಜನೆ ಮಾಡ್ತಾರೆ ಅನ್ನೋ ಸುದ್ದಿ ಕೇಳಿ ಕೆಲವರು ತಮ್ಮ ತಮ್ಮ ಬಳಿ ಇದ್ದ ಕತ್ತೆಗಳಿಗೆ ಟ್ರೈನಿಂಗ್ ಕೊಡೋಕೆ ಮುಂದಾದರು. ನಿತ್ಯ ಅವುಗಳಿಗೆ ಬೇಕಿದ್ದನ್ನ ತಿನ್ನಿಸಿ ರಸ್ತೆಗಳ ಮೇಲೆ ಓಟಕ್ಕಾಗಿ ಟ್ರೈನಿಂಗ್ ಕೊಡೋಕೆ ಮುಂದಾದರು. ಕಳೆದ ಒಂದು ವಾರದಿಂದ ಟ್ರೈನಿಂಗ್ ನೀಡಿದ್ದೇ ತಡ ಕತ್ತೆಗಳು ಸಹ ಕುದುರೆಯಂತೆ ತನ್ನ ಮಾಲೀಕನನ್ನ ಹೆಗಲ ಮೇಲೆ ಹೊತ್ತು ಓಡುವ ಹಂತಕ್ಕೆ ಬಂದು ನಿಂತವು. ಇದರಿಂದ ಬರೋಬ್ಬರಿ 10ಕ್ಕೂ ಅಧಿಕ ಕತ್ತೆಗಳು ಭಾಗವಹಿಸಿ ಭರ್ಜರಿ ಓಟ ನಡೆಸಿ ನೆರೆದವರಲ್ಲಿ ಅಚ್ಚರಿ ಮೂಡಿಸಿದವು.
ಬಡತನದ ಮಧ್ಯೆ ಓದಿ ಭಾರತೀಯ ಸೇನೆಗೆ ಆಯ್ಕೆಯಾದ ಕೋಟೆನಾಡಿನ ಕುವರಿ
ವಿಜೇತ ಕತ್ತೆಗೆ ಹಾರ ಹಾಕಿ ಕುಣಿದು ಕುಪ್ಪಳಿಸಿದ ಯುವಕರು
ಇನ್ನು ರಾಂಪೂರ ಗ್ರಾಮದಲ್ಲಿ ಆಯೋಜನೆಯಾಗಿದ್ದ ದಿನ ಮಳೆಯೂ ಸಹ ಸುರಿಯಿತು. ಆದರೆ ಮಳೆ ನಿಂತ ಮೇಲೆ ರಸ್ತೆಯ ಮೇಲೆಯೇ ಕತ್ತೆಗಳ ರೇಸ್ ನಡೆಸಲು ಯುವಕರೆಲ್ಲಾ ಮುಂದಾದರು. ಅತ್ತ ಕತ್ತೆಗಳನ್ನ ಓಟಕ್ಕೆ ಬಿಟ್ಟಿದ್ದೇ ತಡ ಅವುಗಳನ್ನ ಹಿಂಬಾಲಿಸಿ ಊರಲ್ಲಿದ್ದ ಯುವಕರು ಬೈಕ್ ನೊಂದಿಗೆ ಬೆನ್ನಟ್ಟಿ ಹೊರಟಿದ್ದರು. ಒಂದು ಕತ್ತೆಯಂತೂ ಅದೇನು ಕುದುರೇಯೇನೋ ಅನ್ನೋ ಮಟ್ಟಿಗೆ ಬರ್ಜರಿಯಾಗಿ ಓಟ ಮಾಡಿತ್ತು. ಹೀಗೆ ತನ್ನ ಮಾಲೀಕನನ್ನ ಹೊತ್ತು ಓಡುತ್ತಾ ಹೋಗಿ ಪ್ರಥಮ ಸ್ಥಾನ ಗಳಿಸಿತ್ತು. ಇತ್ತ ಕತ್ತೆಗಳ ಓಟದ ರೇಸ್ ನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ಕತ್ತೆಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಅಲ್ಲದೆ ವಿಜೇತ ಕತ್ತೆಗಳನ್ನ ಕರೆತಂದು ಊರ ಜನರ ಮಧ್ಯೆ ಮಾಲೆ ಹಾಕಿ ಅವುಗಳಿಗೆ ಗೌರವ ನೀಡಲಾಯಿತು. ಇನ್ನು ವಿಜೇತ ಕತ್ತೆಗಳ ಮಾಲೀಕರಂತೂ ನಗದು ಬಹುಮಾನ ಪಡೆದು ಕುಣಿದು ಕುಪ್ಪಳಿಸಿದರು.
ಇನ್ನು ಪ್ರಥಮ ಬಹುಮಾನವನ್ನ ರಾಂಪೂರದ ರವಿ ಭಜಂತ್ರಿಯವರಿಗೆ ಸೇರಿದ ಕತ್ತೆ ಪಡೆದರೆ, ದ್ವಿತೀಯ ಬಹುಮಾನವನ್ನ ಬನಹಟ್ಟಿ ಪಟ್ಟಣದ ಮಹಾದೇವ ಭಜಂತ್ರಿಯವರ ಕತ್ತೆ ಪಾಲಾಯಿತು, ಇನ್ನು ತೃತೀಯ ಸ್ಥಾನವನ್ನು ರಾಂಪೂರದ ನಾಗಪ್ಪ ಭಜಂತ್ರಿಯವರ ಕತ್ತೆ ಗಳಿಸಿಕೊಂಡಿತು. ಇದರಿಂದ ಬಹುಮಾನ ನೀಡುವ ವೇಳೆ ಯುವಕರೆಲ್ಲಾ ಕೇಕೆ ಹಾಕಿ ಸಂಭ್ರಮಿಸಿದರು.
ಕತ್ತೆಗಳೊಂದಿಗೆ ಓಟ ನಡೆಸಲು ಹೋಗಿ ರಸ್ತೆಯಲ್ಲಿ ಎದ್ದು ಬಿದ್ದು ಯುವಕರು
ಕತ್ತೆಗಳು ಓಟ ಆರಂಭಿಸಿದ್ದೇ ತಡ ಭರ್ಜರಿಯಾಗಿ ಓಡಲಾರಂಬಿಸಿದವು. ಇದರೊಟ್ಟಿಗೆ ತಮ್ಮ ತಮ್ಮ ಕತ್ತೆಗಳೊಂದಿಗೆ ಯುವಕರು ಸಹ ಸವಾರಿ ಮಾಡುತ್ತಿದ್ದರು. ಈ ಮಧ್ಯೆ ಕೆಲವು ಅಕ್ಕಪಕ್ಕದ ರಸ್ತೆಗಳಿಗೆ ನುಗ್ಗಿ ಹೋದ ಪ್ರಸಂಗಗಳು ಸಹ ನಡೆದವು. ಅವುಗಳನ್ನ ಮತ್ತೇ ಜನರೆಲ್ಲಾ ಸೇರಿ ಪ್ರಮುಖ ರಸ್ತೆಗೆ ತಂದು ಬಿಟ್ಟು ಓಡಲಾರಂಭಿಸಿದರು. ಇನ್ನು ಕೆಲವು ಕತ್ತೆಗಳು ರಸ್ತೆ ಪಕ್ಕದಲ್ಲೇ ಎದ್ದು ಬಿದ್ದು ಓಡಿದ ಪ್ರಸಂಗಗಳು ಸಹ ನಡೆದವು. ಇನ್ನು ಇದರೊಟ್ಟಿಗೆ ಕತ್ತೆಯ ಮೇಲಿದ್ದ ಯುವಕ ಸಹ ಬಿದ್ದ, ಆದರೂ ತಮ್ಮ ಸ್ಪರ್ಧೆ ಮನೋಭಾವದಿಂದ ಮತ್ತೇ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಹೀಗೆ ಕತ್ತೆಗಳ ಓಟದ ಸ್ಪರ್ಧೆ ಕೇವಲ ಸ್ಫರ್ಧೆಯಾಗಿರದೇ ಅದೊಂದು ಕುತೂಹಲ ಮತ್ತು ಮನರಂಜನೆಯ ಸ್ಪರ್ಧೆಯಾಗಿಯೂ ಮಾರ್ಪಟ್ಟಿತ್ತು.
ಸಹಿ ಪಡೆದು ಆಸ್ತಿ ಲಪಟಾಯಿಸಿದ ಮಕ್ಕಳು, ಬಾಗಲಕೋಟೆ ವದ್ಧೆ ತಾಯಿಯ ಗೋಳಿನ ಕಥೆ
ಇಂದಿಗೂ ನಿಲ್ಲದ ಕತ್ತೆಗಳ ಮೇಲಿನ ಮನುಷ್ಯರ ನಂಬಿಕೆ
ಹೌದು, ಕತ್ತೆಗಳನ್ನ ಕತ್ತೆಗಳು ಅಂತ ಅಷ್ಟೇ ಕರೆಯೋ ಹಾಗಿಲ್ಲ, ಯಾಕಂದ್ರೆ ಇಂದಿಗೂ ಸಹ ಅವುಗಳಿಗೆ ಉತ್ತರ ಕರ್ನಾಟಕದ ಸಂಪ್ರದಾಯಿಕ ಪದ್ಧತಿ, ಆಚರಣೆಗಳಲ್ಲಿ ನಂಬಿಕೆ ಇದೆ. ಅಂದರೆ ಊರಲ್ಲಿ ಮಳೆ ಬಾರದೇ ಇದ್ದಾಗ ಕತ್ತೆಗಳ ಮದುವೆ ಮಾಡೋದು ಸಹ ಒಂದು ವಾಡಿಕೆ. ಹೀಗೆ ಕತ್ತೆಗಳ ಜೋಡಿಗೆ ಮದುವೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ ಇದೆ. ಕೆಲವೊಮ್ಮೆ ಮಳೆ ಬರದೇ ಬರಗಾಲ ಬಂದಾಗ ಇಂತಹ ಕತ್ತೆಗಳ ಮದುವೆಯನ್ನೂ ಸಹ ಕೆಲವೆಡೆ ಗ್ರಾಮಸ್ಥರು ಮಾಡಿದ್ದುಂಟು. ಹೀಗಾಗಿ ಕತ್ತೆಗಳ ಮೇಲಿನ ಮಾನವನ ಸಂಪ್ರದಾಯಿಕ ನಂಬಿಕೆ ಇನ್ನೂ ಇದೆ.
ಒಟ್ಟಿನಲ್ಲಿ ಇಂತಹ ಕತ್ತೆಗಳ ವಿಶೇಷಗಳ ಮಧ್ಯೆ ಇಂದು ರಾಂಪೂರ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಕತ್ತೆಗಳಿಗಾಗಿಯೇ ಓಟದ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ಕುದುರೆ, ಎತ್ತಿನಷ್ಟೇ ಕತ್ತೆಗಳಿಗೂ ಪ್ರಾಧಾನ್ಯತೆ ನೀಡಿದ್ದು ವಿಶೇಷವೇ ಸರಿ.