ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾನೂನು ತಂದಿದ್ದನ್ನು ರದ್ದುಪಡಿಸಬೇಕೆಂಬ ಹಠ ಬೇಡ. ಇದನ್ನು ರದ್ದು ಪಡಿಸುವ ದುಡುಕಿನ ನಿರ್ಧಾರ ಕೈಗೊಂಡಲ್ಲಿ ಬರಲಿರುವ ಲೋಕಸಭಾ ಚುನಾವಣೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಬಹಳಷ್ಟಿದೆ ಎಂದ ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು
ಗೋಕಾಕ(ಜೂ.22): ಭಾರತೀಯ ಸಂಸ್ಕೃತಿಯಲ್ಲಿ ಗೋ ಮಾತೆಗೆ ಪೂಜ್ಯ ಸ್ಥಾನವಿದೆ. ಗೋ ಮಾತೆಯ ಶರೀರದಲ್ಲಿ ಸಕಲ ದೇವಾನು ದೇವತೆಗಳು ನೆಲೆಸಿರುವರೆಂಬ ನಂಬಿಕೆಯಿದೆ. ಬಹು ಸಂಖ್ಯಾತ ಹಿಂದೂಗಳ ಮನೋಭಾವನೆಗೆ ಧಕ್ಕೆ ತರುವ ಗೋ ಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾನೂನು ರದ್ದುಪಡಿಸುವ ದುಡುಕಿನ ನಿರ್ಧಾರವನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೈಗೊಳ್ಳಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ನಗರದ ಮುಪ್ಪಯ್ಯಸ್ವಾಮಿ ಹಿರೇಮಠದಲ್ಲಿ ನಿರ್ಮಾಣಗೊಂಡ ಜಗದ್ಗುರು ರೇಣುಕ ಭವನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕೃತಿ ನಮ್ಮದು. ಸಂವಿಧಾನದಲ್ಲಿ ಅವರವರು ತಮ್ಮ ತಮ್ಮ ಧರ್ಮಾಚರಣೆ ಮಾಡಲು ಅವಕಾಶವಿದೆ. ಸ್ವಧರ್ಮದಲ್ಲಿ ನಿಷ್ಠೆ ಶ್ರದ್ಧೆಯಿರಲಿ. ಪರಧರ್ಮದ ಬಗೆಗೆ ಸಹಿಷ್ಣುತಾ ಮನೋಭಾವ ಹೊಂದಿರಬೇಕು. ಜಾತಿ ಧರ್ಮದ ಹೆಸರಿನಲ್ಲಿ ಸಂಘರ್ಷಗಳು ನಡೆಯಬಾರದು. ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾನೂನು ತಂದಿದ್ದನ್ನು ರದ್ದುಪಡಿಸಬೇಕೆಂಬ ಹಠ ಬೇಡ. ಇದನ್ನು ರದ್ದು ಪಡಿಸುವ ದುಡುಕಿನ ನಿರ್ಧಾರ ಕೈಗೊಂಡಲ್ಲಿ ಬರಲಿರುವ ಲೋಕಸಭಾ ಚುನಾವಣೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಬಹಳಷ್ಟಿದೆ ಎಂದರು.
ಬೆಳಗಾವಿ: ವಿಟಿಯುಗೆ ಬಂದಿದ್ದು 35 ಲಕ್ಷ ವಿದ್ಯುತ್ ಬಿಲ್, ಹೌಹಾರಿದ ಕುಲಪತಿ..!
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯದ ನಾಯಕರು ಬಹು ಸಂಖ್ಯಾತ ಹಿಂದೂಗಳ ಮನಸ್ಸಿಗೆ ನೋವು ಉಂಟು ಮಾಡುವ ನಿರ್ಧಾರ ಕೈಗೊಳ್ಳಬಾರದು. ಬಿಜೆಪಿ ನಾಯಕರ ಸ್ವಯಂಕೃತ ಅಪರಾಧ ಮತ್ತು ವೀರಶೈವ ಸಮುದಾಯದ ಮುಖಂಡರನ್ನು ನಿರ್ಲಕ್ಷ್ಯ ಮಾಡಿದ ಕಾರಣ ಕಾಂಗ್ರೆಸ್ಸಿಗೆ ವೀರಶೈವ ಲಿಂಗಾಯತ ಸಮುದಾಯದ ಜನತೆ ಹೆಚ್ಚು ಬೆಂಬಲಿಸಿ ಪಕ್ಷಕ್ಕೆ ಜಯ ತಂದು ಕೊಟ್ಟಿದ್ದಾರೆಂಬುವುದನ್ನು ಮರೆಯಬಾರದು ಎಂದರು.
ರಾಜ್ಯದಲ್ಲಿ ಮಾಡಬೇಕಾದ ಬೇಕಾದಷ್ಟುಕೆಲಸಗಳಿರುವಾಗ ಅದನ್ನು ಬಿಟ್ಟು ಧರ್ಮ ಸಂಸ್ಕೃತಿ ಆಚರಣೆಗೆ ವ್ಯತಿರಿಕ್ತವಾದ ಕಾನೂನು ತಂದು ಗೊಂದಲ ಮಾಡಿಕೊಳ್ಳಬೇಡಿರಿ. ಮತಾಂತರ ನಿಷೇಧ ಕಾನೂನು ರದ್ದುಪಡಿಸುವುದರಿಂದ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಯಾರನ್ನೋ ಮೆಚ್ಚಿಸಲು ತುಷ್ಟೀಕರಿಸುವುದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ ವಿನಾ ಅದರಿಂದ ಒಳ್ಳೆಯದಾಗದು. ಹಲವಾರು ಆಶೆ ಆಮಿಷವೊಡ್ಡಿ ಮತಾಂತರ ಮಾಡುವ ಕೆಲಸ ಯಾವ ಭಯ ಭೀತಿಯಿಲ್ಲದೇ ನಡೆಯುವುದೆಂಬ ಆತಂಕ ಎಲ್ಲರಿಗೂ ಇದೆ. ಸಂಘರ್ಷ ಉಂಟು ಮಾಡುವ ಕಾರ್ಯ ಕೈಗೊಳ್ಳದೇ ಜನಪರವಾದ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಕಟಕೋಳ ಎಂ.ಚಂದರಗಿ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಗುರು ಮುಪ್ಪಯ್ಯನವರ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಸ್ವಾಮಿಗಳು, ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ಆಲಮೇಲ ಹಿರೇಮಠದ ಸಂಗನಬಸವ ಶಿವಾಚಾರ್ಯರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಬನಶಂಕರಿ ದೇವಸ್ಥಾನದಿಂದ ಮಠದವರೆಗೆ ಪೂರ್ಣಕುಂಭ ವಾದ್ಯಮೇಳದೊಂದಿಗೆ ರಂಭಾಪುರಿ ಜಗದ್ಗುರುಗಳವರ ಸಾರೋಟೋತ್ಸವ ಜರುಗಿತು.