ಕೃಷಿಯಲ್ಲಿ ವಿಕಲಾಂಗನ ಹೆಜ್ಜೆ ಗುರುತು..ಕುದುರೆ ಬಳಸಿ ಕೃಷಿ ಮಾಡ್ತಾನೆ ಹಳ್ಳಿ ಹೈದಾ

By Suvarna NewsFirst Published Jul 14, 2022, 10:24 PM IST
Highlights

ಅಂಗವಿಕಲತೆಯಿಂದ ಬಳಲುತ್ತಿರುವ ಅದೆಷ್ಟೋ ಜನ ತಮ್ಮ ವಿಕಲಾಂಗತೆಯ ಬಗ್ಗೆ ದೃತಿಗೆಟ್ಟು ಜೀವನದಲ್ಲಿ ಜುಗುಪ್ಸೆಗೊಂಡು ಬೇಸರ ವ್ಯಕ್ತಪಡಿಸಿದ ಘಟನೆಗಳು ಇವೆ. ಆದ್ರೆ, ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಮಹದೇವಪ್ಪ ಅಂಗವೈಕಲ್ಯ ಮೆಟ್ಟಿ‌ನಿಂತು ಕೃಷಿಯಲ್ಲಿ ಸ್ವಾವಲಂಭಿ ಬದುಕು ಸಾಗಿಸುತ್ತಿದ್ದಾರೆ.

ವರದಿ: ಗುರುರಾಜ್ ಹೂಗಾರ್

ಹುಬ್ಬಳ್ಳಿ, (ಜುಲೈ.14)
: ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ.. ಹೌದು,  ಕೆಲವೊಮ್ಮೆ ನಾವು ಏನೇ ಬಯಸಿದ್ರು ವಿಧಿ ಲಿಖಿತ ಬೇರೆಯದೇ ಆಗಿರುತ್ತೆ. ಆದ್ರೇ ಹುಟ್ಟಿನಿಂದಲೇ ವಿಕಲಚೇತನನಾದ ವ್ಯಕ್ತಿಯೋರ್ವ, ಅಂಗವೈಕಲ್ಯ ಮೆಟ್ಟಿ‌ನಿಂತು ಸ್ವಾವಲಂಭಿ ಬದುಕು ಕಟ್ಟಿಕೊಂಡ ಕಥೆಯಿದು. ಕೃಷಿಯಲ್ಲಿ ಆತ ಮೂಡಿಸಿದ ಹೆಜ್ಜೆ ಗುರುತು ಇತರರಿಗೂ ಮಾದರಿ.

ಹೌದು..ಎತ್ತುಗಳು ಜಾಗದಲ್ಲಿ ಕುದುರೆ ಕಟ್ಟಿ ಉಳುಮೆ ಮಾಡುವ ಈತನ ಹೆಸರು ಮಹದೇವಪ್ಪ ಭಾಗಣ್ಣವರ,ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮ ಈತನ ಹುಟ್ಟೂರು. ಬಿಎ ಪದವೀಧರನಾದ ಮಹದೇವಪ್ಪ ಕುದುರೆ ಬಳಿಸಿ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಾನು ಓಡಲು ಆಗದಿದ್ದರು, ಓಡುವ ಕುದುರೆಗಳನ್ನು ಪಳಗಿಸುವುದ್ರಲ್ಲಿ ನಿಸ್ಸೀಮ. ಹುಟ್ಟಿನಿಂದಲೇ ಕುದುರೆಗಳ ಒಡನಾಡಿಯಾಗಿರುವ ಕಾರಣ ಇಂದಿನ ಕೃಷಿ ಬದುಕಿಗೆ ಕುದುರೆಯೇ ದೊಡ್ಡ ಆಸರೆ. ಸ್ವಂತ ಜಮೀನಿ‌ನ ಜೊತೆಗೆ ಇತರರ ಜಮೀನು ಲಾವಣಿಗೆ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿಯೊಂದಿಗೆ ಟಗರು ಸಾಕಾಣಿಕೆ ಮಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮದ ಯುವ ರೈತರಿಗೆ ಮಾದರಿಯಾಗಿದ್ದಾರೆ.

Karnataka SSLC Results 2022 ಅಡ್ಡಿಯಾಗದ ಅಂಗವೈಕಲ್ಯ , 3,762 ವಿದ್ಯಾರ್ಥಿಗಳ ಸಾಧನೆ!

ಬದುಕು ಕಟ್ಟಿದ ಛಲಗಾರ..!!

"ಕೂತು ತಿಂದರೆ ಕುಡಿಕೆ ಹೊನ್ನು ಸಾಲದು, ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡ  ಮಹದೇವಪ್ಪ ಅವರು ಕಲಿತ ವಿದ್ಯೆಯನ್ನು ವ್ಯರ್ಥವಾಗಲು ಬಿಡಲಿಲ್ಲ, ಗ್ರಾಮದಲ್ಲಿ  ಬ್ಯಾಂಕ್ ಮಿತ್ರ ನಾಗಿ ಕೆಲಸ ಮಾಡುವುದರ ಜೊತೆಗೆ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ‌ಮಾಡುವುದಕ್ಕೂ ಈಗ ದೊಡ್ಡ ಬಂಡವಾಳ ಬೇಕು. ಉಳುಮೆಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಎತ್ತುಗಳನ್ನು ಖರೀದೊಸುವ ಶಕ್ತಿ‌ ಇಲ್ಲ ಅದಕ್ಕೆ ಅವರು ಕುದುರೆಗಳ‌ತ್ತ ಮುಖ ಮಾಡಿದ್ದು. ತಮ್ಮ 3.5 ಎಕರೆ, ಪತ್ನಿಯ 2 ಎಕರೆ ಹಾಗೂ ಗ್ರಾಮಸ್ಥರ 4 ಎಕರೆ ಜಮೀನು ಲಾವಣೆ ಪಡೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಸದ್ಯ 2 ಎಕರೆ ಉದ್ದು, 2 ಎಕರೆ ಹೆಸರು, ಉಳಿದ ಭೂಮಿಯಲ್ಲಿ ಹತ್ತಿ ಬಿತ್ತಿದ್ದಾರೆ.

ಎತ್ತುಗಳ ಬದಲು ಕುದರೆ ಬಳಕೆ..

ತಾವೇ ಕೃಷಿ ಕಾರ್ಯ ಮಾಡಬೇಕು ಎಂದು ಯೋಚಿಸಿದಾಗ ಎತ್ತುಗಳು ಕೊಳ್ಳುವುದು, ಅವುಗಳ ನಿರ್ವಹಣೆ ಖರ್ಚುವೆಚ್ಚಗಳು ಹೆಚ್ಚು. ಮೇಲಾಗಿ ಒಂದು ಕಾಲು ಸ್ವಾದಿನವಿಲ್ಲದ ಕಾರಣ  ಅವುಗಳ ಮೂಲಕ ಕೃಷಿ ಕಾರ್ಯ ಅಸಾಧ್ಯ ಎಂದು ಕುದರೆ ಮೊರೆ ಹೋಗಿದ್ದಾರೆ. ಹುಟ್ಟಿನಿಂದಲೂ ಕುದುರೆಯ ಸ್ವಭಾವ ಅರಿತಿದ್ದ ಮಹಾದೇವ ಅವರು ಕುದುರೆ ಮೂಲಕವೇ ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಬಿತ್ತನೆ ಕಾರ್ಯವೊಂದನ್ನು ಬಿಟ್ಟರೆ ಕುಂಟೆ, ರಂಟೆ, ಸಣ್ಣ ಕುಂಟೆ, ಔಷಧ ಸಿಂಪರಣೆ, ಗೊಬ್ಬರ, ಬೆಳೆ ಸಾಗಾಟ ಹೀಗೆ ಪ್ರತಿಯೊಂದು ಕಾರ್ಯಕ್ಕೂ  ಕುದುರೆಗಳೇ ಆಧಾರ. ಕೃಷಿ ಕಾರ್ಯಕ್ಕಾಗಿ ಒಂದು ಕುದುರೆಯನ್ನು ಬೆಳಗಾವಿ ಕಡೆಯಿಂದ ಬಂದಿದ್ದ ಕುರಿಗಾಹಿಗಳಿಂದ ಒಂದು ಪಡೆದಿದ್ದರು. ಇದೀಗ ಎರಡು ಕುದುರೆಗಳಿದ್ದು, ಎರಡನ್ನು ಕೃಷಿ ಕಾರ್ಯಕ್ಕೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸಿದ್ದಾರೆ.

ಕುದುರೆ ಹೂಡಲು ಬೇಕಾದ ಮಾದರಿಯಲ್ಲಿ ಕೃಷಿ ಪರಿಕರಗಳನ್ನು ಸ್ನೇಹಿತರೊಂದಿಗೆ ಸಿದ್ದಪಡಿಸಿಕೊಂಡು ಯಶಸ್ವಿಯಾಗಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಹೊಲದಲ್ಲಿ ಓಡಾಡಿಕೊಂಡು ಕೆಲಸ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕುಂಟೆ, ರಂಟೆ ಹೀಗೆ ಪ್ರತಿಯೊಂದಕ್ಕೆ ಸಲಕರೆಣೆಗಳಿಗೂ ಚಕ್ಕಡಿ ಮಾದರಿಯಲ್ಲಿ ಸಿದ್ದಪಡಿಸಿಕೊಂಡಿದ್ದಾರೆ. ಇದರಲ್ಲಿ ಕೂತು ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ. ಈ ಚಕ್ಕಡಿ ಕುಂಟೆ, ರಂಟೆ, ಸಣ್ಣ ಕುಂಟೆಗೆ ಹೊಂದಾಣಿಕೆ ಆಗುವಂತಹ ತಂತ್ರಗಳನ್ನು ಅಳವಡಿಸಿದ್ದಾರೆ. ಬೆಳೆ ಸಾಲುಗಳ ಆಧಾರದ ಮೇಲೆ ಗಾಲಿಗಳನ್ನು ಅಗಲ ಹಾಗೂ ಕಿರಿದಾಗಿ ಮಾಡಿಕೊಳ್ಳಬಹುದಾಗಿದೆ.

ಮಹದೇವಪ್ಪನಿಗೆ ಹೆಗಲಾಗಿರುವ ಪತ್ನಿ: 

ಅಂಗವಿಕಲ ಎನ್ನುವ ಬದಲು ದುಡಿದು ಚನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಕೈ ಹಿಡಿಸಿರುವ ಪತ್ನಿ ದೀಪಾ ಪ್ರತಿಯೊಂದು ಕಾರ್ಯಕ್ಕೂ ಆಸರೆಯಾಗಿದ್ದಾರೆ. ಪತಿ ಸಂಪೂರ್ಣವಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಂತೆ ಇವರು ಕೂಡ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ.

click me!