ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ನಲ್ಲಿ ಐದು ಮಶಿನ್‌ಗಳಿವೆ. ಈ ಸೆಂಟರ್‌ನಲ್ಲಿ ದಿನಕ್ಕೆ 15 ಜನಕ್ಕೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಕಳೆದ ಹದಿನೈದು ದಿನಗಳಿಂದ ಈ ಸೆಂಟರ್ ಕೋಮಾಕ್ಕೆ ಹೋಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಿಸ್‌ಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ನೀಡಲು ಆಗದೇ ಪರದಾಡುತ್ತಿದ್ದಾರೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಸೆ.24): ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ. ನಗರದ ನೂರು ಹಾಸಿಗೆ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ನಲ್ಲಿ ಐದು ಮಶಿನ್‌ಗಳಿವೆ. ಈ ಸೆಂಟರ್‌ನಲ್ಲಿ ದಿನಕ್ಕೆ 15 ಜನಕ್ಕೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಕಳೆದ ಹದಿನೈದು ದಿನಗಳಿಂದ ಈ ಸೆಂಟರ್ ಕೋಮಾಕ್ಕೆ ಹೋಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಿಸ್‌ಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ನೀಡಲು ಆಗದೇ ಪರದಾಡುತ್ತಿದ್ದಾರೆ.
undefined
ರೋಗಿಗಳ ಪರದಾಟ:
ವಿಜಯನಗರ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ಎರಡು ಡಯಾಲಿಸಿಸ್‌ನಲ್ಲಿ ಒಂದು ಡಯಾಲಿಸಿಸ್ ಮಶಿನ್ ಮಾತ್ರ ನಡೆಯುತ್ತಿದೆ. ಕೂಡ್ಲಿಗಿಯಲ್ಲೂ ಒಂದು ಮಶಿನ್ ಕೆಟ್ಟಿದೆ. ಹರಪನಹಳ್ಳಿಯಲ್ಲಿರುವ ಒಂದು ಮಶಿನ್ ಕೆಟ್ಟಿದೆ. ಹೂವಿನಹಡಗಲಿಯಲ್ಲಿ ಮಾತ್ರ ಎರಡು ಮಶಿನ್‌ಗಳು ಚಾಲ್ತಿಯಲ್ಲಿವೆ. ಜಿಲ್ಲೆಯಲ್ಲಿ ಡಯಾಲಿಸಿಸ್ ಸೆಂಟರ್‌ಗಳಲ್ಲಿ ಮಶಿನ್‌ಗಳನ್ನು ಹೆಚ್ಚಳ ಮಾಡಲು ಜಿಲ್ಲಾಡಳಿತ ಮುಂದಾಗಿದ್ದರೆ, ಈಗ ಇರುವ ಡಯಾಲಿಸಿಸ್ ಯಂತ್ರಗಳೇ ಕೆಟ್ಟು ನಿಲ್ಲುತ್ತಿವೆ. ಅದರಲ್ಲೂ ಹೊಸಪೇಟೆಯ ಐದು ಮಶಿನ್‌ಗಳು ಸ್ಥಗಿತಗೊಂಡಿವೆ.
ಉರ್ದು ಶಾಲೆಯಲ್ಲಿ ಗಣಪತಿ ಪೂಜೆ;ಭಾವೈಕ್ಯತೆ ಸಾರಿದ ಮುಸಲ್ಮಾನ ವಿದ್ಯಾರ್ಥಿಗಳು!
ಏಕೆ ಡಯಾಲಿಸಿಸ್ ಯಂತ್ರ ಸ್ಥಗಿತ?:
ಪಶ್ಚಿಮ ಬಂಗಾಳ ಮೂಲದ ಸಂಸ್ಥೆಯೊಂದು ಡಯಾಲಿಸಿಸ್ ಯಂತ್ರಗಳಿಗೆ ಬಳಕೆ ಮಾಡುವ ಆ್ಯಸಿಡ್ ಮತ್ತು ಬೈ ಕಾರ್ಬೋನೈಟ್ ರಾಸಾಯನಿಕಗಳನ್ನು ಪೂರೈಕೆ ಮಾಡುತ್ತಿದೆ. ಆದರೆ, ಈ ಬಾರಿ ಕಳಪೆ ಗುಣಮಟ್ಟದ ರಾಸಾಯನಿಕ ಪೂರೈಕೆ ಮಾಡಿರುವುದರಿಂದ ರೋಗಿಗಳಲ್ಲಿ ವಾಂತಿ ಮತ್ತು ವೀಪರೀತ ಶೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊಸಪೇಟೆಯ ಡಯಾಲಿಸಿಸ್ ಸೆಂಟರ್ ಸ್ಥಗಿತಗೊಳಿಸಲಾಗಿದೆ. ನಗರದ ಆಸ್ಪತ್ರೆಗೆ ಸರ್ಕಾರ ಮೂರು ಡಯಾಲಿಸಿಸ್ ಯಂತ್ರಗಳನ್ನು ಖರೀದಿಸಿದರೆ, ಎರಡು ಯಂತ್ರಗಳನ್ನು ಖಾಸಗಿ ಬ್ಯಾಂಕ್‌ಯೊಂದು ನೀಡಿದೆ. ಈಗ ಟೆಂಡರ್‌ನಲ್ಲಿ ರಾಸಾಯನಿಕ ಪೂರೈಸುವ ಸಂಸ್ಥೆ ಕಳಪೆ ಗುಣಮಟ್ಟದ ರಾಸಾಯನಿಕ ಪೂರೈಕೆ ಮಾಡಿರುವುದರಿಂದ ಸೆಂಟರ್ ಸ್ಥಗಿತಗೊಳಿಸಲಾಗಿದೆ.
ರೋಗಿಗಳಿಗೆ ಪ್ರಾಣ ಸಂಕಟ:
ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳು ಪರದಾಡುತ್ತಿದ್ದಾರೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 50ಕ್ಕೂ ಅಧಿಕ ರೋಗಿಗಳು ಡಯಾಲಿಸಿಸ್‌ಗೆ ಬರುತ್ತಾರೆ. ಡಯಾಲಿಸಿಸ್‌ಗೆ ಆಗಮಿಸುವ ರೋಗಿಗಳಲ್ಲಿ ವಯಸ್ಸಿನ ವ್ಯತ್ಯಾಸ ಇಲ್ಲ. ವೃದ್ಧರು, ಬಾಲಕರು, ಯುವಕರು ಕೂಡ ಇದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು, ಒಂದೇ ಕಿಡ್ನಿ ಇದ್ದವರು, ಶೇ. 85ರಷ್ಟು ಕಿಡ್ನಿ ಕಳೆದುಕೊಂಡಿರುವವರು, ಮೇಧುಮೇಹಿಗಳು, ಅಧಿಕ ರಕ್ತದೊತ್ತಡ ಹೊಂದಿರುವವರು ಡಯಾಲಿಸಿಸ್‌ಗೆ ಆಗಮಿಸುತ್ತಿದ್ದಾರೆ. ನಗರದ ಡಯಾಲಿಸಿಸ್ ಸೆಂಟರ್ ಹದಿನೈದು ದಿನಗಳಿಂದ ಸ್ಥಗಿತಗೊಂಡಿರುವುದರಿಂದ ಈ ರೋಗಿಗಳಿಗೆ ದಿಕ್ಕು ತೋಚದಂತಾಗಿದೆ.
ನಗರದ ರೋಗಿಗಳು ದೂರದ ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿಗೆ ತೆರಳುತ್ತಿದ್ದಾರೆ. ಕೆಲವರು ಕೊಪ್ಪಳಕ್ಕೆ ತೆರಳಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಖಾಸಗಿ ಡಯಾಲಿಸಿಸ್ ಸೆಂಟರ್‌ಗಳಲ್ಲಿ ಒಬ್ಬರಿಗೆ ₹3000 ಶುಲ್ಕ ತೆಗೆದುಕೊಳ್ಳುವುದರಿಂದ ರೋಗಿಗಳು ಪರದಾಡುವಂತಾಗಿದೆ. ಕಾರು ಬಾಡಿಗೆ ಮಾಡಿಕೊಂಡು, ಸರ್ಕಾರಿ ಆಸ್ಪತ್ರೆಗಳಿಗೆ ಡಯಾಲಿಸಿಸ್‌ಗಾಗಿ ರೋಗಿಗಳು ಎಡತಾಕುವಂತಾಗಿದೆ.
ಡಿಕೆಶಿ ಮುಖ್ಯಮಂತ್ರಿಯಾಗಲಿ ಎಂಬ ವಿಚಾರವೇ ಅಪ್ರಸ್ತುತ: ಉಗ್ರಪ್ಪ
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಅನ್ನು ಶೀಘ್ರ ಮರು ಆರಂಭಿಸಲಾಗುವುದು. ಕಳಪೆ ಗುಣಮಟ್ಟದ ರಾಸಾಯನಿಕ ಪೂರೈಕೆ ಆಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಈಗ ಪರ್ಯಾಯವಾಗಿ ಹುಬ್ಬಳ್ಳಿಯಿಂದ ರಾಸಾಯಿನಿಕ ತಂದು ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯನಗರ ಡಿಎಚ್‌ಒ ಡಾ. ಶಂಕರ್ ನಾಯ್ಕ ಹೇಳಿದ್ದಾರೆ.
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯ ಐದು ಡಯಾಲಿಸಿಸ್ ಮಶಿನ್‌ಗಳು ಸ್ಥಗಿತಗೊಂಡಿವೆ. ಕೇಂದ್ರವೇ ಸ್ಥಗಿತಗೊಂಡಿರುವುದರಿಂದ ಕಳೆದ ಹದಿನೈದು ದಿನಗಳಿಂದ ಡಯಾಲಿಸಿಸ್ ಮಾಡಿಸಿಲ್ಲ. ನಾವು ಬಡವರು, ದುಬಾರಿ ಶುಲ್ಕ ಕೊಟ್ಟು ಖಾಸಗಿಯಲ್ಲಿ ಡಯಾಲಿಸಿಸ್ ಮಾಡಲು ಆಗುವುದಿಲ್ಲ. ಈ ಡಯಾಲಿಸಿಸ್ ಸೆಂಟರ್ ಶೀಘ್ರ ಮರು ಆರಂಭಿಸಿದರೆ, ನಮ್ಮಂತಹ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ರೋಗಿಗಳು ತಿಳಿಸಿದ್ದಾರೆ.