370 ನೇ ವಿಧಿ ರದ್ದು ದಿಟ್ಟಹೆಜ್ಜೆ: ಶಂಕರಮೂರ್ತಿ| ನರೇಂದ್ರ ಮೋದಿ, ಅಮಿತ್ ಶಾ ದಿಟ್ಟನಿರ್ಧಾರದಿಂದ ಜನರಿಗೆ ಸಂತಸ| 370ನೇ ವಿಧಿಯನ್ನು ತೆಗೆದು ಹಾಕುವ ಘೋಷಣೆಯನ್ನು ಜನಸಂಘದ ಕಾಲದಿಂದಲೂ ಮಾಡಲಾಗಿತ್ತು| ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಐತಿಹಾಸಿಕ ನಿರ್ಧಾರ| ದೇಶವಾಸಿಗಳ ಬಹುದಿನದ ಬೇಡಿಕೆ ಈಡೇರಿದೆ|
ಶಿವಮೊಗ್ಗ:(ಸೆ.22) ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಪ್ರತ್ಯೇಕತಾವಾದ ಕೊನೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟಹೆಜ್ಜೆ ಇಡುವುದರ ಜತೆಗೆ, 370ನೇ ವಿಧಿಯನ್ನು ರದ್ದು ಪಡಿಸುವುದರ ಮೂಲಕ ಏಕತೆಯನ್ನು ಸಾರಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.
ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಬಿಜೆಪಿ ವತಿಯಿಂದ ಒಂದು ದೇಶ ಒಂದು ಸಂವಿಧಾನ ಶೀರ್ಷಿಕೆಯಾಡಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಒಂದೇ ಕಾನೂನು, ಒಂದೇ ಧ್ವಜ ಎಂಬ ಸಿದ್ಧಾಂತದಲ್ಲಿ ನಂಬಿಕೆಯನ್ನಿಟ್ಟುಕೊಂಡೆ ಜನ್ಮತಾಳಿರುವ ಪಕ್ಷ ಬಿಜೆಪಿ. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ತೆಗೆದು ಹಾಕುತ್ತೇವೆ ಎಂಬ ಘೋಷಣೆಯನ್ನು ಜನಸಂಘದ ಕಾಲದಿಂದಲೂ ಮಾಡಿದ್ದೆವು. ಆದರದು 2019ರ ಆ. 5 ರಂದು ಸಾಕಾರಗೊಂಡಿತು. ಕೇಂದ್ರದ ಈ ನಿರ್ಧಾರದಿಂದ ದೇಶವಾಸಿಗಳಲ್ಲಿ ಅತೀವ ಸಂತಸ ತಂದಿದೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಂವಿಧಾನ ರಚನೆ ಮತ್ತು ಕಾಯ್ದೆ ರೂಪಿಸುವ ಸಂದರ್ಭದಲ್ಲಿ ಅಧಿವೇಶನದಲ್ಲಿ ಬಹಳ ವಿವರವಾದ ಚರ್ಚೆ ನಡೆದ ನಂತರವೇ ಅಂತಿಮಗೊಳ್ಳುತ್ತಿದ್ದವು. ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು ಹಠ ಹಿಡಿದವರಂತೆ 370ನೇ ವಿಧಿಯನ್ನು ಅವೇಶನದಲ್ಲಿ ಜಾರಿಗೊಳಿಸುವುದರ ಮೂಲಕ ಜಮ್ಮು ಕಾಶ್ಮೀರಕ್ಕೆ ವಿಶೇಷತೆ ನೀಡಿದರು ಎಂದು ಕಾಯ್ದೆಯ ಕುರಿತು ವಿವರಿಸಿದರು.
ನೆಹರು ಅವರು 1954ರಲ್ಲಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರವರ ಮನವೊಲಿಸಿ 35ನೇ (ಎ) ವಿಧಿಯನ್ನು ಜಮ್ಮು ಕಾಶ್ಮೀರಕ್ಕೆ ವಿಶೇಷವಾಗಿ ನೀಡಿದರು. ಇದರ ಪರಿಣಾಮವಾಗಿ ಹೊರ ರಾಜ್ಯದವರು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡುವಾಗ ಕಡ್ಡಾಯವಾಗಿ ಅನುಮತಿ ಪಡೆಯಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಐತಿಹಾಸಿಕ ನಿರ್ಧಾರ ಕೈಗೊಂಡು 370 ಮತ್ತು 35(ಎ) ವಿಧಿ ರದ್ದುಪಡಿಸಿದರು. ದೇಶವಾಸಿಗಳ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮಾಜಿ ಶಾಸಕರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ಧರಾಮಣ್ಣ, ಉಪಮೇಯರ್ ಎಸ್.ಎನ್. ಚನ್ನಬಸಪ್ಪ, ಎಸ್.ದತ್ತಾತ್ರಿ, ಡಿ.ಎಸ್. ಅರುಣ್, ಹೃಷಿಕೇಶ್ ಪೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಗೀತೆಯ ಕುರಿತು ಪ್ರಶ್ನೆಗಳಿವೆ
ಜನಗಣಮನವನ್ನು ನಾವು ರಾಷ್ಟ್ರಗೀತೆಯನ್ನಾಗಿ ಒಪ್ಪಿಕೊಂಡಿದ್ದೇವೆ. ಆದರೂ ಅದರ ಬಗ್ಗೆ ಪ್ರಶ್ನೆಗಳಿವೆ. ರಾಷ್ಟ್ರಗೀತೆ ಜನಗಣಮನದಲ್ಲಿ ಭಾರತ ಭಾಗ್ಯವಿಧಾತ ಎಂಬ ಸಾಲು ಇಂಗ್ಲಂಡ್ ರಾಜ ಆಗಮಿಸಿದ ಸಂದರ್ಭದಲ್ಲಿ ರಚಿಸಲಾಗಿತ್ತು. ಭಾರತ ಭಾಗ್ಯವಿಧಾತ ಎಂಬ ಸಾಲು, ಇಂಗ್ಲಂಡ್ ರಾಜನನ್ನು ಸ್ವಾಗತಿಸಿದ ಸಾಲುಗಳವು ಎಂದು ಅದರ ಭಾವಾರ್ಥವನ್ನು ಡಿ.ಎಚ್.ಶಂಕರಮೂರ್ತಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಇಂಗ್ಲಂಡ್ ರಾಜ ಮುಂಬೈಗೆ ಬಂದಿಳಿದಾಗ ಅವನಿಗೆ ಬಾರಯ್ಯ ಎಂದು ಸ್ವಾಗತಿಸಿದ ಸಾಲುಗಳಾಗಿ ಅದನ್ನು ರಚಿಸಲಾಗಿತ್ತು. ಆಗ ರಾಷ್ಟ್ರಗೀತೆಯನ್ನಾಗಿ ವಂದೇ ಮಾತರಂ ಬದಲಾಗಿ ಜನಗಣಮನವನ್ನು ಒಪ್ಪಿಕೊಂಡಿದ್ದೆವು. ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡುವ ಬಗ್ಗೆ ಹಿಂದೆ ಬಹಳ ಚರ್ಚೆ ನಡೆದಿತ್ತು. ಆದರೆ ಬ್ಯಾಂಡ್ ಬಾರಿಸಲು ಸರಿಯಾಗುವುದಿಲ್ಲ ಎಂದು ಆಗ ರವೀಂದ್ರನಾಥ ಟ್ಯಾಗೂರ್ ಬರೆದ ಜನಗಣಮನವನ್ನು ಒಪ್ಪಿಕೊಳ್ಳಲಾಗಿತ್ತು ಎಂದರು.
ಭಾರತವನ್ನು ಭಾರತ ಎಂದು ಕರೆಯಬೇಕೆಂದು ಚರ್ಚೆಯಾಗುವಾಗಲೂ ನೆಹರು ಅಂಥವರು, ಇಂಡಿಯಾ ಎಂದೆ ಇರಲಿ ಎಂದು ಹೇಳಿದ್ದರು. ಆಗ ಮರು ಮಾತನಾಡದೇ ಇಂಡಿಯಾ ಮತ್ತು ಭಾರತ ಎರಡೂ ಇರಲಿ ಎಂದು ಒಪ್ಪಿಕೊಳ್ಳಲಾಗಿತ್ತು. ಭಾರತೀಯರಾದ ನಮ್ಮಲ್ಲಿ ಹೊಂದಾಣಿಕೆ ಗುಣ ಇರುವುದರಿಂದ ಹೇಳಿದ್ದನ್ನೆಲ್ಲವನ್ನೂ ಒಪ್ಪಿಕೊಳುತ್ತೇವೆ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.