ವಿಕಲಚೇತನರ ಅನುಕೂಲಕ್ಕಾಗಿ ಆಡಳಿತ ಸರ್ಕಾರಗಳು ಸಾಕಷ್ಟುಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಗಳಿಂದಾಗಿ ಅನೇಕ ಯೋಜನೆಗಳು ಫಲಾನುಭವಿ ತಲುಪುತಿಲ್ಲ. ಈ ಪೈಕಿ ’ನಿರಾಮಯ’ಯೋಜನೆಯೂ ಒಂದು
ಧಾರವಾಡ (ಆ.3) : ವಿಕಲಚೇತನರ ಅನುಕೂಲಕ್ಕಾಗಿ ಆಡಳಿತ ಸರ್ಕಾರಗಳು ಸಾಕಷ್ಟುಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಗಳಿಂದಾಗಿ ಅನೇಕ ಯೋಜನೆಗಳು ಫಲಾನುಭವಿ ತಲುಪುತಿಲ್ಲ. ಈ ಪೈಕಿ ’ನಿರಾಮಯ’ಯೋಜನೆಯೂ ಒಂದು. ವಿಕಲಚೇತನರ ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರವು ‘ನಿರಾಮಯ’ ಹೆಸರಿನ ಆರೋಗ್ಯ ವಿಮೆ ಜಾರಿಗೊಳಿಸಿದೆ. ಬರೀ ಧಾರವಾಡ ಜಿಲ್ಲೆ ಮಾತ್ರವಲ್ಲ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅನವಶ್ಯಕ ಕಾರಣವೊಡ್ಡಿ ಈ ಯೋಜನೆ ಅನುಷ್ಠಾನವಾಗಿಲ್ಲ. ದುರಂತದ ಸಂಗತಿ ಏನೆಂದರೆ, ಈ ಯೋಜನೆ ಬಗ್ಗೆ ಜಾಗೃತಿ ಮೂಡದೇ ಇರುವುದರಿಂದ ಯೋಜನೆ ಕುರಿತು ದಿವ್ಯಾಂಗರಿಗೂ ಮಾಹಿತಿ ಇಲ್ಲ.
ಯೋಜನೆ ಏನಿದು:
ಕೇಂದ್ರ ಸರ್ಕಾರದ 1999ರ ನ್ಯಾಷನಲ್ ಟ್ರಸ್ಟ್ ಕಾಯ್ದೆ ಅಡಿ(National Trust Act)ಯಲ್ಲಿ ಬರುವ ನಾಲ್ಕು ವಿಧದ ಅಂಗವೈಕಲ್ಯ ಹೊಂದಿದ ವಿಶಿಷ್ಟಚೇತರಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೆ ತಂದಿದೆ. ಆರಂಭದಲ್ಲಿ ಬುದ್ಧಿಮಾಂದ್ಯ, ಸೆರಬ್ರಲ್ ಪಾಲ್ಸ, ಆಟಿಸಂ ಮೊದಲು ಈ ನಾಲ್ಕು ದಿವ್ಯಾಂಗರಿಗೆ ಯೋಜನೆಗೆ ಅರ್ಹರಿದ್ದರು. ಆದರೆ, ನಂತರ ಕುಷ್ಠರೋಗ, ಮೂಗರು ಮತ್ತು ದೈಹಿಕ ನ್ಯೂನ್ಯತೆ ಉಳ್ಳವರು ಸೇರಿದಂತೆ ಒಟ್ಟು 21 ಬಗೆಯ ವಿಕಲಚೇತನರಿಗೆ ಈ ಯೋಜನೆ ವಿಸ್ತರಿಸಲಾಯಿತು. ರಾಜ್ಯ ಸರ್ಕಾರ 2014-15ರ ಬಜೆಟ್‌ನಲ್ಲಿ ವಿಶಿಷ್ಟಚೇತನರಿಗೆ ಈ ಆರೋಗ್ಯ ವಿಮೆ ಯೋಜನೆ ಘೋಷಿಸಿತ್ತು.ಯೋಜನೆ ಅನ್ವಯ ನ್ಯಾಷನಲ್ ಟ್ರಸ್ಟ್ ಗುರುತಿಸಿರುವ ಆಸ್ಪತ್ರೆಗಳಲ್ಲಿ ಗರಿಷ್ಠ .1 ಲಕ್ಷದವರೆಗೆ ಎಲ್ಲ ತರಹದ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
Chitradurga: ಅಂಗವಿಕಲ ವ್ಯಕ್ತಿಯ ಕೃಷಿ ಸಾಧನೆಗೆ ಶಹಬ್ಬಾಶ್ ಎಂದ ಜನರು!
ಕಂತು ಎಷ್ಟು?:
ಆರೋಗ್ಯ ವಿಮೆ ಪಡೆಯಲು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ವಿಮೆ ಮೊತ್ತ ಸರ್ಕಾರವೇ ಭರಿಸಲಿದೆ. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್)ವರು .250 ಕಂತು ಪಾವತಿ ಮಾಡಬೇಕಿದೆ. ಈ ಕಾರ್ಡ್‌ಗಳ ನವೀಕರಣಕ್ಕೆ ಯಾವುದೇ ಹಣ ಪಾವತಿಸಬೇಕಿಲ್ಲ. ಚಿಕಿತ್ಸೆಗೆ ಒಳಗಾಗುವವರ ವೈದ್ಯ ತಪಾಸಣೆ, ಆಸ್ಪತ್ರೆ ವೆಚ್ಚ, ಥೆರಪಿ,ಶಸ್ತ್ರ ಚಿಕಿತ್ಸೆ, ಸಾರಿಗೆ ವೆಚ್ಚ ವಿಮೆ ಮೂಲಕ ಭರಿಸಲಿದೆ. ಇಂತಹ ಮಹತ್ವಾಕಾಂಕ್ಷೆ ಯೋಜನೆ ಬಗ್ಗೆ ವಿಕಲಚೇತನರಿಗೆ ಅರಿವು ಇಲ್ಲದಿರುವುದು ಖೇದಕರ ಸಂಗತಿ.
ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿ ಇಲ್ಲವೇ ನ್ಯಾಷನಲ್ ಟ್ರಸ್ಟ್ ಅಡಿಯಲ್ಲಿ ನೋಂದಾಯಿಸಿದ ಸಂಸ್ಥೆಯ ಮೂಲಕ ನಿರಾಮಯ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಗ್ರಾಮೀಣರು ವಾರ್ಷಿಕ .12 ಸಾವಿರ, ನಗರದವರಿಗೆ .17 ಸಾವಿರ ಆದಾಯ ಮಿತಿ ಹೊಂದಿರಬೇಕು.ಯೋಜನೆ ಅನುಷ್ಠಾನ ಐಸಿಐಸಿಐ ಲೊಂಬಾರ್ಡ್ ಸಂಸ್ಥೆಗೆ ನೀಡಿದೆ. ವೈದ್ಯ ವೆಚ್ಚಗಳ ಮರು ಪಾವತಿಗಾಗಿ ದಿವ್ಯಾಂಗರು, ರಸೀದಿ, ಬಿಲ್ ಸೇರಿದಂತೆ ಇತರ ವೆಚ್ಚಗಳನ್ನು ಆಸ್ಪತ್ರೆಯಿಂದ ಬಿಡುಗಡೆಯಾದ 30 ದಿನಗಳ ಒಳಗೆ ಸಲ್ಲಿಸಬೇಕು.
ಅಂಗವಿಕಲನಿಗೆ ಆಧಾರ್ ಕಾರ್ಡ್ ಕೊಡಿಸಿದ ಪ್ರಧಾನಿ ಮೋದಿ: 2 ವರ್ಷದ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ..!
ದಿವ್ಯಾಂಗರು ವಂಚಿತ:
ಯೋಜನೆ ಜಾರಿಗೊಂಡು ಏಳೆಂಟು ವರ್ಷಗಳ ಕಳೆದರೂ ಸಹ ಯೋಜನೆ ಅನುಷ್ಠಾನವಾಗಿಲ್ಲ.ಅಧಿಕಾರಿಗಳ ನಿರ್ಲಕ್ಷ್ಯದಿಂದ ಧಾರವಾಡ ಜಿಲ್ಲೆಯಲ್ಲಿಯೇ ಸುಮಾರು 37 ಸಾವಿರ ಅಂಗವಿಕಲರು ಯೋಜನೆಯಿಂದ ವಂಚಿತರಾಗಿರುವುದು ನೋವಿನ ಸಂಗತಿ.ಇನ್ನಾದರೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ರಾಜ್ಯದ ಅಂಗವಿಕಲರನ್ನು ನಿರಾಮಯ ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೆ ತರುವುದೇ ಎಂಬುದನ್ನು ಕಾದು ನೋಡಬೇಕಿದೆ.
ಅಂಗವಿಕಲರ ಆರೋಗ್ಯ ಕಾಪಾಡಲು ನಿರಾಮಯ ಆರೋಗ್ಯ ವಿಮೆ ಯೋಜನೆ ತಂದಿದ್ದು ಶ್ಲಾಘನೀಯ. ಯೋಜನೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ.
ಕೇಶವ ತೆಲಗು, ಜಿಲ್ಲಾಧ್ಯಕ್ಷರು, ವಿಕಲಚೇತನರ ಒಕ್ಕೂಟ
ಏಜೆನ್ಸಿ ಗುರುತಿಸಿಲ್ಲ:
ಮೊದಲನೆಯದಾಗಿ ಈ ಯೋಜನೆಗೆ ಪ್ರತ್ಯೇಕ ಬಜೆಟ್ ಇಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಸಂಗ್ರಹವಾಗುವ ಶೇ. 5ರಷ್ಟುಅನುದಾನ ಬಳಸಿಕೊಂಡು ಸಂಘ-ಸಂಸ್ಥೆಗಳು ಯೋಜನೆ ಜಾರಿ ಮಾಡಬಹುದು. ರಾಜ್ಯ ಮಟ್ಟದಲ್ಲಿ ಎಪಿಡಿ ಎಂಬ ನೋಡಲ್ ಏಜೆನ್ಸಿ ಇದ್ದು ಧಾರವಾಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತಮ್ಮ ಕೇಂದ್ರ ಸ್ಥಾಪನೆ ಮಾಡಿಲ್ಲ. ಯೋಜನೆ ಈ ಏಜೆನ್ಸಿ ಮೂಲಕವೇ ಜಾರಿಯಾಗಬೇಕು.ಏಜೆನ್ಸಿ ಗುರುತಿಸಿದ ತಕ್ಷಣವೇ ಅರ್ಜಿ ಕರೆದು ಯೋಜನೆ ತಲುಪಿಸಲಾಗುವುದು.
ಡಿ.ಎನ್.ಮೂಲಿಮನಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು